ವಿಶ್ವಸಂಸ್ಥೆಯಲ್ಲಿ ಜಮ್ಮು-ಕಾಶ್ಮೀರ ವಿಚಾರ ಚೀನಕ್ಕೆ ಮುಖಭಂಗ
Team Udayavani, Jan 17, 2020, 7:55 AM IST
ಸಾಂದರ್ಭಿಕ ಚಿತ್ರ
ಜಮ್ಮು-ಕಾಶ್ಮೀರದ ವಿಚಾರದಲ್ಲಿ ಫ್ರಾನ್ಸ್ ಜತೆಗೆ ಅಮೆರಿಕ, ಯುಕೆ ಮತ್ತು ರಷ್ಯಾ ದೇಶಗಳು ಭಾರತದ ನಿಲುವಿನೊಂದಿಗೆ ಸಹಮತ ಹೊಂದಿರುವುದರಿಂದ ವಿಶ್ವಸಂಸ್ಥೆಯಲ್ಲಿ ಚೀನದ ಬೇಳೆ ಬೇಯುತ್ತಿಲ್ಲ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿಚಾರವನ್ನು ಎತ್ತುವ ಮೂಲಕ ಈ ವಿವಾದವನ್ನು ಅಂತಾರಾಷ್ಟ್ರೀಯ ವೇದಿಕೆಗೆ ಒಯ್ಯುವ ಪ್ರಯತ್ನದಲ್ಲಿ ಚೀನ ಮತ್ತೂಮ್ಮೆ ಮುಖಭಂಗ ಅನುಭವಿಸಿದೆ. ತನ್ನ ಸರ್ವಋತು ಮಿತ್ರ ಪಾಕಿಸ್ಥಾನದ ಪರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನ ಈ ವಿಚಾರವನ್ನು ಎತ್ತುವ ಸಿದ್ಧತೆಯಲ್ಲಿತ್ತು. ಆದರೆ ಭಾರತದ ಮಿತ್ರ ರಾಷ್ಟ್ರವಾದ ಫ್ರಾನ್ಸ್‌ನ ಅಚಲ ನಿಲುವಿನಿಂದಾಗಿ ಚೀನದ ಪ್ರಯತ್ನ ವಿಫಲಗೊಂಡಿದೆ. ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳು ಕಾಶ್ಮೀರ ವಿಚಾರ ಭಾರತ ಮತ್ತು ಪಾಕಿಸ್ಥಾನದ ನಡುವಿನ ದ್ವಿಪಕ್ಷೀಯ ವಿವಾದ ಎಂಬ ಹಿಂದಿನ ನಿಲುವನ್ನು ಪುನರುಚ್ಚರಿಸಿವೆ. ಹೀಗಾಗಿ ಈ ವಿಚಾರದ ಕುರಿತು ಹೆಚ್ಚೇನೂ ಚರ್ಚೆ ನಡೆದಿಲ್ಲ. ಇದು ನಮ್ಮ ರಾಜತಾಂತ್ರಿಕ ನೈಪುಣ್ಯಕ್ಕೆ ಸಂದಿರುವ ದೊಡ್ಡ ಗೆಲುವು ಎನ್ನಬಹುದು.
ಕೇಂದ್ರ ಸರಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಗಳನ್ನು ನೀಡಿದ್ದ 370ನೇ ವಿಧಿಯನ್ನು ಕಳೆದ ಆ.5ರಂದು ರದ್ದುಪಡಿಸಿದ ಬಳಿಕ ಹತಾಶೆಗೊಂಡಿರುವ ಪಾಕಿಸ್ಥಾನ ಹೇಗಾದರೂ ಮಾಡಿ ಇದನ್ನೊಂದು ಅಂತಾರಾಷ್ಟ್ರೀಯ ವಿವಾದವನ್ನಾಗಿಸಬೇಕೆಂದು ಪ್ರಯತ್ನಿಸುತ್ತಿದೆ. ಅದರ ಈ ಪ್ರಯತ್ನಕ್ಕೆ ಬೆಂಗಾವಲಾಗಿ ನಿಂತು ಚೀನ ಎಲ್ಲ ನೆರವುಗಳನ್ನು ನೀಡುತ್ತಿದೆ. ಈ ಹಿಂದೆ ಎರಡು ಬಾರಿ ಚೀನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿವಾದವನ್ನೆತ್ತಿತ್ತು. ಎರಡೂ ಸಲವೂ ಭಾರತದ ಮಿತ್ರ ರಾಷ್ಟ್ರಗಳ ನಿಲುವುನಿಂದಾಗಿ ಮುಖಭಂಗ ಅನುಭವಿಸಿದೆ. ಆದರೂ ಪಾಠ ಕಲಿಯದೆ ತನ್ನ ಪ್ರಯತ್ನವನ್ನು ಮುಂದುವರಿಸುತ್ತಿರುವುದು ಮಾತ್ರ ದುರದೃಷ್ಟಕರ. ಫ್ರಾನ್ಸ್ ಜೊತೆಗೆ ಅಮೆರಿಕ, ಯುಕೆ ಮತ್ತು ರಷ್ಯಾ ದೇಶಗಳು ಭಾರತದ ನಿಲುವಿನೊಂದಿಗೆ ಸಹಮತ ಹೊಂದಿರುವುದರಿಂದ ವಿಶ್ವಸಂಸ್ಥೆಯಲ್ಲಿ ಚೀನದ ಬೇಳೆ ಬೇಯುತ್ತಿಲ್ಲ.
ವಿಶೇಷ ಸ್ಥಾನಮಾನ ರದ್ದಾದ ಬಳಿಕ ಕಾಶ್ಮೀರವಾಗಲಿ ದೇಶದ ಇತರೆಡೆಯಾಗಲಿ ಪಾಕ್ ನಿರೀಕ್ಷಿಸಿದಂಥ ಘಟನೆಗಳು ಸಂಭವಿಸಿಲ್ಲ. ಕಾಶ್ಮೀರದ ಜನ ರೊಚ್ಚಿಗೆದ್ದು ಭಾರೀ ಪ್ರತಿಭಟನೆ ನಡೆಸಬಹುದು. ಈ ನಡುವೆ ಉಗ್ರರನ್ನು ಛೂ ಬಿಟ್ಟು ರಕ್ತಪಾತ ನಡೆಸಬಹುದು ಎಂದೆಲ್ಲ ಪಾಕಿಸ್ಥಾನ ಭಾವಿಸಿತ್ತು. ಆದರೆ ಸರಕಾರ ಕೈಗೊಂಡ ಕ್ರಮಗಳಿಂದಾಗಿ ಇಂಥ ಯಾವ ಅನಾಹುತಗಳು ಸಂಭವಿಸಲಿಲ್ಲ. ಕ್ರಮೇಣ ಕಾಶ್ಮೀರ ಸಹಜ ಸ್ಥಿತಿಗೆ ಬರುತ್ತಿದೆ. ನಿರ್ಬಂಧಗಳನ್ನೆಲ್ಲ ಸಡಿಲಿಸಲಾಗುತ್ತಿದೆ. ಅಂತರ್‌ಜಾಲ ಸೇವೆಯೂ ಬಹುತೇಕ ಮರು ಸ್ಥಾಪನೆಗೊಂಡಿದೆ. ಇತ್ತೀಚೆಗೆ ಕಾಶ್ಮೀರಕ್ಕೆ ಭೇಟಿ ನೀಡಿದ ಅಂತಾರಾಷ್ಟ್ರೀಯ ನಿಯೋಗವೂ ಇಲ್ಲಿನ ಪರಿಸ್ಥಿತಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ. ಐದು ತಿಂಗಳಲ್ಲಿ ಕೇಂದ್ರ ಸರಕಾರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿರುವುದನ್ನು ಅಂತಾರಾಷ್ಟ್ರೀಯ ಸಮುದಾಯ ಗಮನಿಸಿದೆ. ಹೀಗಾಗಿ ಭಾರತಕ್ಕೆ ಮಸಿ ಬಳಿಯಲು ಯಾವ ಅಸ್ತ್ರವೂ ಪಾಕ್ ಮತ್ತು ಚೀನಕ್ಕೆ ಸಿಕ್ಕಿಲ್ಲ.
ಚೀನ ಯಾವ ಕಾಲಕ್ಕೂ ಭಾರತದ ಮಿತ್ರನಾಗಲು ಸಾಧ್ಯವಿಲ್ಲ ಅದರ ಈ ನಡೆಗಳಿಂದ ಸ್ಪಷ್ಟವಾಗುತ್ತದೆ. ಭಾರತವನ್ನು ವಿರೋಧಿಸಲು ಸಿಗುವ ಎಲ್ಲ ಅವಕಾಶಗಳನ್ನು ಅದು ಬಳಸಿಕೊಳ್ಳುತ್ತಿದೆ. ಇಂಥ ದೇಶಕ್ಕೆ ಅದೇ ಧಾಟಿಯಲ್ಲಿ ತಿರುಗೇಟು ನೀಡುವ ಅಗತ್ಯವಿದೆ. ಟಿಬೆಟ್ ವಿಚಾರವನ್ನು ಅಂತಾರಾಷ್ಟ್ರೀಯ ವೇದಿಕೆಗೆ ಒಯ್ಯುವ ಮೂಲಕ ಚೀನಕ್ಕೆ ತಕ್ಕ ಪಾಠ ಕಲಿಸುವ ಅವಕಾಶ ನಮಗಿದೆ. ಚೀನದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಮಾನವ ಹಕ್ಕುಗಳ ದಮನದ ವಿರುದ್ಧ ಧ್ವನಿ ಎತ್ತುವ ಮೂಲಕ ಎದಿರೇಟು ನೀಡಬೇಕು.
ಇದೇ ವೇಳೆ ಕಾಶ್ಮೀರದ ಸ್ಥಿತಿ ಸಂಪೂರ್ಣ ಸಹಜವಾಗಲು ಇನ್ನಷ್ಟು ಪ್ರಯತ್ನಗಳನ್ನು ಮಾಡಬೇಕಿದೆ. ವಿಶೇಷ ಸ್ಥಾನಮಾನ ರದ್ದಾಗಿರುವುದರಿಂದ ರಾಜ್ಯದ ಜನರಿಗೆ ಯಾವ ಸಮಸ್ಯೆಯೂ ಆಗುವುದಿಲ್ಲ. ಬದಲಾಗಿ ಆ ರಾಜ್ಯ ದೇಶದ ಮುಖ್ಯವಾಹಿನಿಯೊಳಗೆ ಸೇರಿಕೊಂಡು ಅಭಿವೃದ್ಧಿಯನ್ನು ಕಾಣಬಹುದು ಎಂಬುದನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಗೃಹ ಬಂಧನದಲ್ಲಿರುವ ರಾಜಕೀಯ ನಾಯಕರನ್ನು ಬಿಡುಗಡೆಗೊಳಿಸಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. 370ನೇ ವಿಧಿ ರದ್ದಾಗಿರುವುದು ವಾಸ್ತವ ಎನ್ನುವುದನ್ನು ಉಮರ್ ಅಬ್ದುಲ್ಲ, ಮುಫ್ತಿ ಮೆಹಬೂಬ ಸಯೀದ್ ಮುಂತಾದವರಿಗೆ ಮನವರಿಕೆ ಮಾಡಿಕೊಟ್ಟು ಇದನ್ನು ಒಪ್ಪಿಕೊಳ್ಳುವಂತೆ ಮಾಡಬೇಕು. ಇಷ್ಟು ಮಾಡಿದರೆ ಕಾಶ್ಮೀರದಲ್ಲಿ ಪ್ರಜಾತಾಂತ್ರಿಕ ಪ್ರಕ್ರಿಯೆಗಳು ಮರಳಿ ಶುರುವಾಗಲು ಹಾದಿ ಸುಗಮವಾಗಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.