ನ್ಯಾಯಾಂಗದ ಮೇಲಿನ ನಂಬಿಕೆ ಉಳಿಸಿದ ತೀರ್ಪುಗಳು
Team Udayavani, Dec 19, 2019, 5:57 AM IST
ಉತ್ತರ ಪ್ರದೇಶದ ಅತ್ಯಾಚಾರ ಪ್ರಕರಣ, ನಿರ್ಭಯಾ ಪ್ರಕರಣದ ವಿಚಾರದಲ್ಲಿನ ತೀರ್ಪುಗಳು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಉಳಿಸಿವೆ.
ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಲಯಗಳು ಇತ್ತೀಚೆಗೆ ನೀಡಿದ ಮಾತ್ರವಲ್ಲದೆ ತೆಲಂಗಾಣದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಅಲ್ಲಿನ ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ ಕ್ರಮದ ಬಗ್ಗೆ ಪರ ಮತ್ತು ವಿರೋಧವಾದ ವಾದಗಳು ತೀವ್ರವಾಗಿರು ವಾಗಲೇ ಈ ಎರಡು ತೀರ್ಪುಗಳು ಬಂದಿರುವುದು ಕೂಡ ಮುಖ್ಯವಾಗುತ್ತದೆ.
ಅಂತಿಮವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಾಗಿರುವುದು ನ್ಯಾಯಾಂಗವೇ ಹೊರತು ಪೊಲೀಸರಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ದಿಢೀರ್ ನ್ಯಾಯದಾನ ಎಂಬ ಪರಿಕಲ್ಪನೆಗೆ ಅವಕಾಶವಿಲ್ಲ ಎನ್ನುವ ವಾದಕ್ಕೆ ಸಮರ್ಥನೆಯಾಗುವಂತೆ ಈ ತೀರ್ಪುಗಳು ಬಂದಿವೆ.
ಉತ್ತರ ಪ್ರದೇಶದ ಉಚ್ಛಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ಆರೋಪಿಯಾಗಿರುವುದು ಮೊದಲ ಪ್ರಕರಣ. ನೌಕರಿ ಕೇಳಿಕೊಂಡು ಬಂದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಈ ಶಾಸಕನ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅವನನ್ನು ದೋಷಿ ಎಂದು ತೀರ್ಮಾನಿಸಲಾಗಿದೆ. ಆರೋಪಿ ಶಾಸಕ ಎಂಬ ಕಾರಣಕ್ಕೆ ಮಾತ್ರವಲ್ಲ ಈ ಪ್ರಕರಣ ಪಡೆದುಕೊಂಡ ಹಲವು ತಿರುವುಗಳಿಂದಲೂ ದೇಶವ್ಯಾಪಿಯಾಗಿ ಕುತೂಹಲ ಕೆರಳಿಸಿತ್ತು. ನ್ಯಾಯಕ್ಕಾಗಿ ಸಂತ್ರಸ್ತ ಯುವತಿ ನಡೆಸಿದ ಹೋರಾಟ ನಿಜಕ್ಕೂ ಇಂಥ ಅನೇಕ ಸಂತ್ರಸ್ತರಿಗೆ ಸ್ಫೂರ್ತಿದಾಯಕ. ಒಂದು ಹಂತದಲ್ಲಿ ಯುವತಿಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ಆಕೆಯ ತಂದೆ ಲಾಕಪ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಇಷ್ಟೇ ನಿಗೂಢವಾಗಿ ಸಂಭವಿಸಿದ ಅಪಘಾತದಲ್ಲಿ ಹೋರಾಟಕ್ಕೆ ಬೆಂಗಾವಲಾಗಿ ನಿಂತಿದ್ದ ಆಕೆಯ ಸಂಬಂಧಿಕ ಮಹಿಳೆ ಸಾವನ್ನಪ್ಪಿದ್ದರು. ಯುವತಿ ಮತ್ತು ಆಕೆಯ ವಕೀಲ ಗಾಯಗೊಂಡು ಈಗಲೂ ಆಸ್ಪತ್ರೆಯಲ್ಲಿದ್ದಾರೆ. ಇಷ್ಟೆಲ್ಲ ಆದರೂ ಛಲ ಬಿಡದ ಆಕೆ ನ್ಯಾಯಕ್ಕಾಗಿ ಹೋರಾಡುತ್ತಲೇ ಇದ್ದರು. ಅಂತಿಮವಾಗಿ ಆರೋಪಿಗೆ ಕಾನೂನಿನ ಕುಣಿಕೆ ಬಿಗಿಯುವಲ್ಲಿ ಆಕೆ ಸಫಲಳಾಗಿದ್ದಾಳೆ. ಆರೋಪಿ ಎಷ್ಟೇ ಪ್ರಭಾವಿಯಾಗಿದ್ದರೂ, ಯಾವುದೇ ಸ್ಥಾನದಲ್ಲಿದ್ದರೂ ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ.
ಜೊತೆಗೆ ಕ್ರಿಮಿನಲ್ ಹಿನ್ನೆಲೆಯಿರುವ ಅದರಲ್ಲೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದಂಥ ಹೀನ ಕೃತ್ಯ ಎಸಗಿರುವ ನಾಯಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ನೀಡುವಾಗ ಎರಡೆರಡು ಬಾರಿ ಯೋಚಿಸಬೇಕೆಂಬ ಎಚ್ಚರಿಕೆಯನ್ನೂ ಈ ತೀರ್ಪು ರಾಜಕೀಯ ಪಕ್ಷಗಳಿಗೆ ನೀಡಿದೆ.
ಇನ್ನೊಂದು ದೇಶವನ್ನೇ ತಲ್ಲಣಗೊಳಿಸಿದ್ದ 2012ರ ನಿರ್ಭಯಾ ಪ್ರಕರಣದ ಆರೋಪಿ ಅಕ್ಷಯ್ ಕುಮಾರ್ ಸಿಂಗ್ ಪ್ರಾಣಭಿಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು. ಮಹಿಳೆಯ ಮೇಲೆ ಎಸಗಿದ ಅತ್ಯಂತ ಬರ್ಬರ ಲೈಂಗಿಕ ಹಲ್ಲೆಯ ಪ್ರಕರಣ ಇದಾಗಿದ್ದು, ನಾಲ್ವರು ಆರೋಪಿಗಳಿಗೆ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.ನೇಣಿಗೇರಲು ದಿನಗಣನೆ ಪ್ರಾರಂಭವಾಗಿರುವಂತೆ ಪಾರಾಗುವ ಕೊನೆಯ ಪ್ರಯತ್ನ ಎಂಬಂತೆ ಆರೋಪಿಗಳು ಇಂಥ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಅಕ್ಷಯ್ ಕುಮಾರ್ ಸಿಂಗ್ ಪ್ರಾಣಭಿಕ್ಷೆ ಕೋರಿಕೆಗೆ ನೀಡಿರುವ ಕಾರಣ ಹಾಸ್ಯಾಸ್ಪದವಾಗಿದೆ. ದಿಲ್ಲಿಯ ಕೆಟ್ಟ ಹವಾಮಾನ ದಿಂದಾಗಿ ನಿತ್ಯವೂ ಸಾಯುತ್ತಿರುವಾಗ ಗಲ್ಲಿಗೇರಿಸಿ ಸಾಯಿಸುವ ಅಗತ್ಯವೇನಿದೆ ಎಂಬ ದಾಟಿಯಲ್ಲಿ ವಾದಿಸಿದ್ದಾರೆ ಅವನ ವಕೀಲರು.
ತ್ರಿಸದಸ್ಯ ನ್ಯಾಯಪೀಠ ಈ ವಾದವನ್ನು ತಿರಸ್ಕರಿಸಿ ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸುವ ಮೂಲಕ ಕುಂಟು ನೆಪಗಳನ್ನು ಹೇಳಿಕೊಂಡು ನ್ಯಾಯದ ಕುಣಿಕೆಯಿಂದ ಪಾರಾಗಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ರಕ್ತಕ್ಕೆ ಪ್ರತಿಯಾಗಿ ರಕ್ತವನ್ನು ಬಯಸುವುದು ನಾಗರಿಕ ಸಮಾಜ ಒಪ್ಪುವುದಿಲ್ಲವಾದರೂ ಈ ಅಪರಾಧಿಗಳು ಎಸಗಿರುವ ಕೃತ್ಯ ಮಾತ್ರ ಎಂಥ ಕಲ್ಲೆದೆಯನ್ನು ಕರಗಿಸುವಂಥದ್ದು. ಮಾನವೀಯತೆಯೇ ತಲೆತಗ್ಗಿಸುವಂತೆ ಮಾಡಿದ, ಈ ಹುಡುಗಿಯನ್ನು ಬದುಕಿಸಲು ಸಾಧ್ಯವಾಗುತ್ತಿಲ್ಲ ಎಂದು ದೇವರೇ ಕಣ್ಣೀರಿಡುವಂತೆ ಮಾಡಿದ ರಕ್ಕಸರಿಗೆ ಕ್ಷಮೆ ಕೊಟ್ಟರೆ ಅದು ಜನ ಸಮೂಹದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆಯಿತ್ತು.
ನಿತ್ಯ ಎಂಬಂತೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಸಂದರ್ಭದಲ್ಲಿ ಇಂಥ ಕಠಿನ ತೀರ್ಪುಗಳು ಘಾತುಕರಿಗೆ ಒಂದು ಎಚ್ಚರಿಕೆಯಾಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.