ಕಲಾಂ ಒಬ್ಬ ಧರ್ಮ ನಿರಪೇಕ್ಷ ಮುತ್ಸದ್ದಿ ಸ್ಮಾರಕ ವಿವಾದ ಅನಗತ್ಯ
Team Udayavani, Aug 1, 2017, 1:30 PM IST
ಸ್ವಾರ್ಥಿ ರಾಜಕಾರಣಿಗಳು ಮತ್ತು ವಿವೇಕರಹಿತ ಧಾರ್ಮಿಕ ಮುಖಂಡರಿಗೆ ಇಂತಹ ಶ್ರೇಷ್ಠ ವ್ಯಕ್ತಿಯ ಸ್ಮಾರಕದಲ್ಲೂ ಧರ್ಮ ಮತ್ತು ರಾಜಕೀಯದ ಬೇಧಭಾವ ಕಾಣಿಸಿರುವುದು ದುರದೃಷ್ಟಕರ.
ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ರಾಮೇಶ್ವರದಲ್ಲಿ ಉದ್ಘಾಟಿಸಿದ ಮಾಜಿ ರಾಷ್ಟ್ರಪತಿ ಡಾ| ಅಬ್ದುಲ್ ಕಲಾಂ ಸ್ಮಾರಕ ಈಗ ಅನಗತ್ಯ ಕಾರಣದಿಂದಾಗಿ ವಿವಾದಕ್ಕೊಳಗಾಗಿದೆ. ರಾಮೇಶ್ವರದ ಪೈಕರಂಬುವಿನಲ್ಲಿ ಡಾ| ಕಲಾಂ ಅವರ ನೆನಪಿಗಾಗಿ ಡಿಆರ್‌ಡಿಒ ಸುಮಾರು 15 ಕೋ. ರೂ. ವೆಚ್ಚದಲ್ಲಿ ಈ ಸ್ಮಾರಕವನ್ನು ನಿರ್ಮಿಸಿದೆ. ಸ್ಮಾರಕದ ಪ್ರವೇಶ ದ್ವಾರದಲ್ಲೇ ಕಲಾಂ ವೀಣೆ ನುಡಿಸುತ್ತಿರುವ ಪ್ರತಿಮೆಯಿದೆ. ಈ ಪ್ರತಿಮೆಯ ಜತೆಗೆ ಮರದಿಂದ ಪುಸ್ತಕದ ರೂಪವೊಂದನ್ನು ಕೆತ್ತಿ ಅದರಲ್ಲಿ ಭಗವದ್ಗೀತೆ ಎಂದು ಬರೆಯಲಾಗಿದೆ. ಈಗ ವಿವಾದಕ್ಕೊಳಗಾಗಿರುವುದು ಈ ಭಗವದ್ಗೀತೆ. ಎಂಡಿಎಂಕೆ ಸ್ಥಾಪಕ ವೈಕೊಗೆ ಕಲಾಂ ಪ್ರತಿಮೆ ಜತೆಗೆ ಭಗವದ್ಗೀತೆ ಇರುವುದು ಮೋದಿ ಹಿಂದುತ್ವ ಅಜೆಂಡಾವನ್ನು ಹೇರುತ್ತಿರುವಂತೆ ಕಂಡಿದೆ. ವೈಕೊ ಮತ್ತು ಅವರ ಪಕ್ಷದ ವಕ್ತಾರ ಈ ಕುರಿತು ಹೇಳಿಕೆ ನೀಡಿ ಭಗವದ್ಗೀತೆಯನ್ನು ತೆಗೆಯುವ ತನಕ ಹೋರಾಡುವುದಾಗಿ ಎಚ್ಚರಿಸಿದ್ದಾರೆ. ಅನಂತರ ಕಾಂಗ್ರೆಸ್ ಕೂಡ ಎಚ್ಚೆತ್ತುಕೊಂಡು ಜನರ ರಾಷ್ಟ್ರಪತಿಯಾಗಿದ್ದ ಕಲಾಂ ಸ್ಮಾರಕದಲ್ಲೂ ಮೋದಿ ಹಿಂದುತ್ವ ಅಜೆಂಡಾವನ್ನು ಹರಡುವ ಮೂಲಕ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಆರೋಪಿಸಿದೆ. ಕಲಾಂ ಎಂದೂ ಭಗವದ್ಗೀತೆಯನ್ನು ಉಲ್ಲೇಖೀಸುತ್ತಿರಲಿಲ್ಲ. ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಅವರು ತಿರುಕ್ಕುರಳ್‌ನ್ನು ಮಾತ್ರ ಉಲ್ಲೇಖೀಸುತ್ತಿದ್ದರು ಎನ್ನುವುದು ವೈಕೊ ವಾದ. ಇಷ್ಟಾದ ಬಳಿಕ ವಿವಾದಗಳಿಗೆಲ್ಲ ಭಗವದ್ಗೀತೆಯ ಕಾರಣ ಎಂದು ಭಾವಿಸಿದ ಕಲಾಂ ಕುಟುಂಬದವರು ಪ್ರತಿಮೆಯ ಬಳಿ ಕುರಾನ್ ಮತ್ತು ಬೈಬಲ್ ಪುಸ್ತಕಗಳನ್ನಿಟ್ಟಿದ್ದಾರೆ. ಇಷ್ಟಕ್ಕೆ ವಿವಾದ ಮುಗಿಯಬೇಕಿತ್ತು. ಆದರೆ ಹಾಗಾಗಿಲ್ಲ, ಕುರಾನ್ ಮತ್ತು ಬೈಬಲ್‌ಗಳಿಗೆ ಹಿಂದೂ ಸಂಘಟನೆ ಹಿಂದೂ ಮಕ್ಕಳ್ ಕಚ್ಚಿ ಆಕ್ಷೇಪ ಎತ್ತಿದೆ. ಸಂಬಂಧಿಸಿದವರಿಂದ ಅನುಮತಿ ಪಡೆದುಕೊಳ್ಳದೆ ಪ್ರತಿಮೆಯ ಬಳಿ ಬೈಬಲ್ ಮತ್ತು ಕುರಾನ್ ಇಟ್ಟಿರುವುದು ಸರಿಯಲ್ಲ ಎನ್ನುವುದು ಈ ಸಂಘಟನೆಯ ಮುಖಂಡ ಕೆ. ಪ್ರಭಾಕರನ್ ವಾದ. ಈ ಕುರಿತು ಅದು ಪೊಲೀಸರಿಗೆ ದೂರು ನೀಡಿದೆ.
ಇಷ್ಟೆಲ್ಲ ಆಗುವಾಗ ಮುಸ್ಲಿಂ ಸಂಘಟನೆಗಳು ಕೂಡ ರಂಗಕ್ಕಿಳಿದಿವೆ. ತಮಿಳುನಾಡು ತವ್ವಿàದ್ ಜಮಾತ್ ಎಂಬ ಸಂಘಟನೆಯ ಮುಖಂಡ ಜೈನುಲಾಬುದ್ದೀನ್ ಅವರು ಮೂರ್ತಿ ಪೂಜೆ ಮಾಡುತ್ತಿದ್ದ, ಹಿಂದೂ ಸಂತರ ಆಶೀರ್ವಾದ ಪಡೆಯುತ್ತಿದ್ದ ಕಲಾಂ ಮುಸ್ಲಿಂ ಆಗಿರಲಿಲ್ಲ. ಹೀಗಾಗಿ ಅವರ ಪ್ರತಿಮೆಯ ಬಳಿ ಕುರಾನ್ ಇಟ್ಟಿರುವುದರಿಂದ ಮುಸ್ಲಿಮರ ಭಾವನೆಗಳಿಗೆ ಹಾನಿಯಾಗಿದೆ ಎಂದಿದ್ದಾರೆ. ಹೀಗೆ ಸರ್ವಧರ್ಮಗಳನ್ನು ಸಮಭಾವದಿಂದ ನೋಡಿದ್ದ ಜನರ ರಾಷ್ಟ್ರಪತಿ ತೀರಿಕೊಂಡು ಎರಡು ವರ್ಷವಾದ ಬಳಿಕ ಕೀಳು ಮಟ್ಟದ ಧಾರ್ಮಿಕ ಮತ್ತು ರಾಜಕೀಯ ವಿವಾದಕ್ಕೊಳಗಾಗಿದ್ದಾರೆ. ಕಲಾಂ ದೇಶದ 11ನೇ ರಾಷ್ಟ್ರಪತಿಯಾಗಿರುವುದು ಅವರು ಮುಸ್ಲಿಂ ಆಗಿದ್ದರು ಅಥವಾ ಯಾವುದೇ ರಾಜಕೀಯ ಸಿದ್ಧಾಂತದ ಪ್ರತಿಪಾದಕರಾಗಿದ್ದರು ಎಂಬ ಅರ್ಹತೆಯಿಂದ ಅಲ್ಲ, ಬದಲಾಗಿ ಕ್ಷಿಪಣಿ ವಿಜ್ಞಾನಿಯಾಗಿ ದೇಶಕ್ಕೆ ನೀಡಿರುವ ಅಗಣಿತ ಕೊಡುಗೆಗಳ ಕಾರಣದಿಂದಾಗಿ. ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆರಿಸುವಾಗ ಅಂದಿನ ಎನ್‌ಡಿಎ ಸರಕಾರಕ್ಕೆ ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಉದ್ದೇಶವಿದ್ದದ್ದು ನಿಜವಾಗಿದ್ದರೂ, ರಾಷ್ಟ್ರಪತಿಯಾಗಿ ಕಲಾಂ ಎಂದೂ ತನ್ನ ಧರ್ಮದ ನೆರಳು ಹುದ್ದೆಯ ಮೇಲೆ ಬೀಳಲು ಅವಕಾಶ ಕೊಟ್ಟವರಲ್ಲ.
ಅವರು ಭಗವದ್ಗೀತೆ, ಕುರಾನ್, ಬೈಬಲ್ ಸೇರಿದಂತೆ ಎಲ್ಲ ಧಾರ್ಮಿಕ ಗ್ರಂಥಗಳನ್ನು ಸಮಾನವಾಗಿ ಗೌರವಿಸುತ್ತಿದ್ದರು. ಭಗವದ್ಗೀತೆ ನನ್ನ ಬದುಕಿನಲ್ಲಿ ಬಹಳ ಪ್ರಭಾವ ಬೀರಿದೆ ಎಂದು ಅವರು ಅನೇಕ ಸಲ ಹೇಳಿಕೊಂಡಿದ್ದರು. ಸಂಗೀತ ಅವರ ಇನ್ನೊಂದು ಅಭಿರುಚಿಯಾಗಿತ್ತು. ಇವುಗಳನ್ನು ಎಂದೂ ಅವರು ಧರ್ಮದ ದೃಷ್ಟಿಯಲ್ಲಿ ನೋಡುತ್ತಿರಲಿಲ್ಲ. ಇಂತಹ ನಿಷ್ಕಳಂಕ ಮತ್ತು ನಿಚ್ಚಳ ದೃಷ್ಟಿಕೋನ ಇದ್ದ ಕಾರಣವೇ ಕಲಾಂ ಜನರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹೀಗಾಗಿ ಎರಡು ವರ್ಷದ ಹಿಂದೆ ಅವರು ತೀರಿಕೊಂಡಾಗ ದೇಶವೇ ಕಣ್ಣೀರುಗರೆದಿತ್ತು.
ಸ್ವಾರ್ಥಿ ರಾಜಕಾರಣಿಗಳು ಮತ್ತು ವಿವೇಕರಹಿತ ಧಾರ್ಮಿಕ ಮುಖಂಡರಿಗೆ ಇಂತಹ ಶ್ರೇಷ್ಠ ವ್ಯಕ್ತಿಯ ಸ್ಮಾರಕದಲ್ಲೂ ಧರ್ಮ ಮತ್ತು ರಾಜಕೀಯದ ಭೇದ ಭಾವ ಕಾಣಿಸಿರುವುದು ದುರದೃಷ್ಟಕರ. ಕಲಾಂ ಅವರಂತಹ ಮಾದರಿ ವ್ಯಕ್ತಿಗಳು ಇಂದಿನ ಕಾಲದಲ್ಲಿ ಸಿಗುವುದು ದುರ್ಲಭ. ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಇಂತಹ ಶ್ರೇಷ್ಠ ಪರಂಪರೆಯೊಂದನ್ನು ವಿವಾದಕ್ಕೊಳಪಡಿಸುವುದು ಲಜ್ಜೆಗೇಡಿ ವರ್ತನೆ. ಪ್ರಜ್ಞಾವಂತ ಜನರೇ ಇಂತಹ ಕೀಳು ವರ್ತನೆಗಳನ್ನು ವಿಫಲಗೊಳಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Editorial: ನೈಜ ಕ್ರೀಡಾ ಸಾಧಕರಿಗೆ ಸಂದ ದೇಶದ ಅತ್ಯುನ್ನತ ಕ್ರೀಡಾ ಗೌರವ
Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.