Kannada; ಕನ್ನಡಿಗರ ಸಹನೆ ಪರೀಕ್ಷಿಸುವ ದುಸ್ಸಾಹಸಕ್ಕೆ ಅವಕಾಶ ನೀಡದಿರಿ
Team Udayavani, Dec 28, 2023, 5:30 AM IST
ರಾಜ್ಯದಲ್ಲಿ ಮತ್ತೆ ಕನ್ನಡ ಉಳಿಸಿ ಅಭಿಯಾನ ಆರಂಭಗೊಂಡಿದೆ. ಬುಧವಾರ ರಾಜ್ಯ ರಾಜಧಾನಿಯಲ್ಲಿ ಕನ್ನಡ ರಕ್ಷಣ ವೇದಿಕೆಯ ಹೋರಾಟಗಾರರು ಬೀದಿಗಿಳಿದು ವಿವಿಧ ಮಳಿಗೆ, ಅಂಗಡಿಗಳಲ್ಲಿನ ಕನ್ನಡೇತರ ಭಾಷೆಯ ನಾಮ ಫಲಕಗಳನ್ನು ತೆರವುಗೊಳಿಸುವ ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ಮತ್ತೆ ಕನ್ನಡದ ಪರ ಹೋರಾಟದ ಕಹಳೆ ಊದಿದ್ದಾರೆ. ಬೆಳಗಾವಿ, ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ ಸಹಿತ ರಾಜ್ಯದ ಹಲವೆಡೆಯೂ ರಕ್ಷಣ ವೇದಿಕೆ ಕಾರ್ಯ ಕರ್ತರು ಇದೇ ತೆರನಾದ ಪ್ರತಿಭಟನೆ ನಡೆಸಿ, ಕನ್ನಡೇತರ ಭಾಷೆಗಳಲ್ಲಿ ನಾಮಫಲಕಗಳನ್ನು ಅಳವಡಿಸಿರುವ ವಾಣಿಜ್ಯ ಮಳಿಗೆಗಳು ಮತ್ತು ಅಂಗಡಿಗಳ ಮಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ನಾಡಭಾಷೆಯಾದ ಕನ್ನಡವನ್ನು ಆಡಳಿತದಲ್ಲಿ ಕಡ್ಡಾಯಗೊಳಿಸಿ ಸರಕಾರ ಆದೇಶ ಹೊರಡಿಸಿ ದಶಕಗಳೇ ಕಳೆದಿವೆ. ಅಷ್ಟು ಮಾತ್ರವಲ್ಲದೆ ರಾಜ್ಯದ ಎಲ್ಲ ಸರಕಾರಿ ಕಚೇರಿಗಳು, ಸಂಘ, ಸಂಸ್ಥೆಗಳು, ಉದ್ಯಮಗಳು, ವಾಣಿಜ್ಯ ಮಳಿಗೆಗಳ ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕು ಎಂಬ ಆದೇಶವೂ ಜಾರಿಯಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ನಗರಾಡಳಿತ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಕಾಲಕಾಲಕ್ಕೆ ಸೂಚನೆಗಳನ್ನು ನೀಡುತ್ತಲೇ ಬರುತ್ತಿವೆ. ಇಷ್ಟಾದರೂ ರಾಜ್ಯದೆಲ್ಲೆಡೆ ನಾಮಫಲಕಗಳು, ಜಾಹೀರಾತು ಫಲಕಗಳಲ್ಲಿ ಇಂಗ್ಲಿಷ್, ಹಿಂದಿ ಸಹಿತ ವಿವಿಧ ಪರಭಾಷೆಗಳನ್ನು ಬಳಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದವರ ಮಾಲಕತ್ವದ ಮಳಿಗೆಗಳ ನಾಮಫಲಕಗಳಲ್ಲಿ ಹೆಚ್ಚಾಗಿ ಇಂಗ್ಲಿಷ್, ಹಿಂದಿ ಭಾಷೆಗಳನ್ನೇ ಬಳಸುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.
ಹಲವು ವರ್ಷಗಳಿಂದ ಸರಕಾರ ಮತ್ತು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡುತ್ತಲೇ ಬಂದಿದ್ದರೂ ಇದನ್ನು ನಿರ್ಲಕ್ಷಿಸಲಾಗುತ್ತಿದೆ. ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಥವಾ ವ್ಯಾಪಾರ ನಡೆಸುತ್ತಿರುವ ಹೊರ ರಾಜ್ಯದವರ ಈ ಧೋರಣೆ ನಿಜವಾಗಿಯೂ ಖಂಡನೀಯ. ಹಾಗೆಂದು ನಾಮಫಲಕದಲ್ಲಿ ಬೇರೆ ಭಾಷೆಗಳನ್ನು ಬಳಸಬೇಡಿ ಎಂದು ಸರಕಾರವಾಗಲೀ, ಕನ್ನಡ ಪರ ಸಂಘಟನೆಗಳಾಗಲೀ ಬಲವಂತ ಮಾಡಿಲ್ಲ. ಆದರೆ ನಾಮಫಲಕ, ಜಾಹೀರಾತು ಫಲಕ ಸಹಿತ ವಿವಿಧ ಫಲಕಗಳಲ್ಲಿ ಶೇ.60ರಷ್ಟು ಭಾಗದಲ್ಲಿ ಕನ್ನಡವನ್ನೇ ಆದ್ಯತೆಯ ಮೇಲೆ ಬಳಸುವಂತೆ ಸೂಚಿಸಲಾಗಿದೆ. ಇಷ್ಟಿದ್ದರೂ ಕೂಡ ಹೊರ ರಾಜ್ಯಗಳ ವ್ಯಾಪಾರಸ್ಥರು ಮತ್ತು ಮಳಿಗೆಗಳ ಮಾಲಕರು ಸರಕಾರದ ಆದೇಶವನ್ನು ಸಂಪೂರ್ಣವಾಗಿ ಅಲಕ್ಷಿಸುತ್ತಲೇ ಬಂದಿರುವುದು ಸಹಜವಾಗಿ ಕನ್ನಡಾಭಿಮಾನಿಗಳನ್ನು ಕೆರಳಿಸಿದೆ.
ನಿರಂತರ ಎಚ್ಚರಿಕೆಯ ಬಳಿಕ ಕನ್ನಡ ಪರ ಹೋರಾಟಗಾರರು ಹೊರ ರಾಜ್ಯದ ವ್ಯಾಪಾರಸ್ಥರು ಮತ್ತು ಮಳಿಗೆಗಳ ಮಾಲಕರಿಗೆ ಒಂದಿಷ್ಟು ಜೋರಾಗಿಯೇ ಬಿಸಿ ಮುಟ್ಟಿಸಿದ್ದಾರೆ. ಕೆಲವೆಡೆ ಕನ್ನಡ ಪರ ಹೋರಾಟಗಾರರ ವರ್ತನೆ ಅತಿರೇಕಕ್ಕೆ ತಲುಪಿದ್ದೂ ಸಹ್ಯವಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವುದೂ ಅಕ್ಷಮ್ಯ. ಯಾವುದೇ ಹೋರಾಟದ ಹೆಸರಲ್ಲಿ ಅಮಾಯಕರಿಗೆ ತೊಂದರೆಯಾಗುವುದನ್ನು ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗೆ ಧಕ್ಕೆಯಾಗುವುದನ್ನು ಸಹಿಸಲು ಅಸಾಧ್ಯ. ಸ್ಥಿತಿ ಪ್ರಕೋಪಕ್ಕೆ ಹೋಗದಂತೆ ನೋಡಿಕೊಳ್ಳಬೇಕಿರುವುದು ಸರಕಾರದ ಹೊಣೆ.
ಇನ್ನು ಸರಕಾರ ಮತ್ತು ನಗರಾಡಳಿತ ಸಂಸ್ಥೆಗಳು ಕೂಡ ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯವನ್ನು ಕೇವಲ ಆದೇಶಕ್ಕಷ್ಟೇ ಸೀಮಿತಗೊಳಿಸದೆ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಬೇಕು. ಈ ವಿಚಾರದಲ್ಲಿ ಯಾವುದೇ ಮರ್ಜಿಗೆ ಒಳಗಾಗದೆ ಆದೇಶವನ್ನು ಪಾಲಿಸದವರಿಗೆ ಭಾರೀ ಪ್ರಮಾಣದ ದಂಡ ಅಥವಾ ಕ್ರಮಗಳನ್ನು ಕೈಗೊಳ್ಳಬೇಕು. ಕನ್ನಡಾಭಿಮಾನಿಗಳ ತಾಳ್ಮೆಯ ಕಟ್ಟೆ ಒಡೆ ಯುವವರೆಗೆ ಕಾಯದೆ ಸರಕಾರ ಈ ದಿಸೆಯಲ್ಲಿ ತುರ್ತಾಗಿ ಕಾರ್ಯೋ ನ್ಮುಖವಾಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.