ರಾಜ್ಯೋತ್ಸವ ಪುರಸ್ಕಾರ: ಮೌಲ್ಯ ಹೆಚ್ಚಿಸಿದ ಆಯ್ಕೆ
Team Udayavani, Nov 30, 2018, 6:00 AM IST
ಈ ಇತಿಹಾಸವನ್ನು ಹಿಂತಿರುಗಿ ನೋಡುವಾಗ ಈ ವರ್ಷದ ಪುರಸ್ಕೃತರ ಪಟ್ಟಿಯಲ್ಲಿ ಶತಾಯುಷಿಗಳು, ಸಾಕಷ್ಟು ಸಾಧಕರು ಕಾಣಸಿಗುತ್ತಿದ್ದಾರೆ. ಬಹಳಷ್ಟು ಕಾಳುಗಳಿರುವುದು ಸಂತಸದ ಸಂಗತಿ. ಈ ಬಾರಿಯೂ ಎಲ್ಲ ನಡೆದಂತೆಯೇ ನಡೆದಿದ್ದರೂ ಒಂದಿಷ್ಟು ಸರಕಾರೀ ಆಸ್ಥಾನ ವಿದ್ವಾಂಸರ ಕೈವಾಡ ನಡೆಯದಿರುವುದು ಸ್ಪಷ್ಟ.
ಹಲವು ಕಾರಣಗಳಿಂದ ಮುಂದಕ್ಕೆ ಹೋಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕೊನೆಗೂ ನವೆಂಬರ್ ಮಾಸದಲ್ಲೇ ನಡೆದಿರುವುದು ಒಂದು ಒಳ್ಳೆಯ ಬೆಳವಣಿಗೆ. ಪ್ರತಿ ವರ್ಷವೂ ಗಜಪ್ರಸವದಂತೆ ಕೊನೆ ಹೊತ್ತಿಗೆ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡುವ ಕ್ರಮ ಈ ವರ್ಷವೂ ತಪ್ಪಲಿಲ್ಲ ಎಂಬುದು ಸ್ಪಷ್ಟ. ಆದರೆ ಪ್ರತಿ ವರ್ಷವೂ ಕೊನೆ ಗಳಿಗೆಯ ಪ್ರಹಸನದಂತೆ ನಡೆಯುವ ಈ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟವಾದ ಬಳಿಕ ಹಲವರ ಅಸಮಾಧಾನ, ಆಕ್ರೋಶ, ಟೀಕೆ ಎಲ್ಲವೂ ಸ್ಫೋಟಗೊಳ್ಳುತ್ತಿತ್ತು. ಈ ಬಾರಿ ಅಂಥ ಪ್ರಸಂಗಗಳಿಗೆ ದಾರಿ ಮಾಡಿಕೊಡದಷ್ಟು ಎಚ್ಚರವನ್ನು ರಾಜ್ಯ ಸರಕಾರ ಕಾದುಕೊಂಡದ್ದು ಅಭಿನಂದನೀಯ.
ರಾಜ್ಯ ರೂಪುಗೊಂಡ ಸಂಭ್ರಮದ ನೆನಪಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಮಹೋನ್ನತ ಸಾಧಕರಿಗೆ 1966ರಿಂದ ನೀಡಲಾಗುತ್ತಿದೆ. ಇದುವರೆಗೂ ಸಾವಿರಾರು ಮಂದಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಗಿದೆ. ಕರ್ನಾಟಕ ರತ್ನದ ತರುವಾಯ ಎರಡನೇ ಅತ್ಯುನ್ನತ ಪ್ರಶಸ್ತಿ ಎಂದೇ ಇದು ಪರಿಗಣಿತ. ಇಲ್ಲಿ ನಗದಿಗಿಂತ ಪ್ರಶಸ್ತಿಗೇ ಮೌಲ್ಯ.
ಒಂದು ವರ್ಷ ಮಾತ್ರ ಆಯ್ಕೆ ಸಮಿತಿ ಎಂಬುದು ರಚಿತವಾಗಿತ್ತು. ಸಮಿತಿ ಆಯ್ಕೆ ಮಾಡಿದ ಹೆಸರುಗಳನ್ನು ಆಳುವವರು ಬದಲಿಸಿದ್ದು ಅವಾಂತರಕ್ಕೆ ಕಾರಣವಾಯಿತು. ಕೆಲವರು ಕೋರ್ಟ್ ಮೆಟ್ಟಿಲನ್ನೂ ಏರಿದರು. ಆದರೆ ನ್ಯಾಯಾಲಯ ಅದು ಸರಕಾರದ ನಿರ್ಧಾರಕ್ಕೆ ಸಂಬಂಧಿಸಿದ್ದು ಎಂದು ಅಭಿಪ್ರಾಯಪಟ್ಟಿತು. ಈ ಬೆಳವಣಿಗೆಯಿಂದ ಆಯ್ಕೆ ಸಮಿತಿಯಲ್ಲಿದ್ದ ಪರಿಣಿತರು ಕ್ಷಣಕ್ಕೆ ಸೋತರು. ಆದರೆ ಪ್ರಶಸ್ತಿಯ ಮೌಲ್ಯದ ನಿಷ್ಕರ್ಷೆಗೆ ದಾರಿ ಮಾಡಿಕೊಟ್ಟರು. ಸರಕಾರದ ರಾಜಕಾರಣದ ಅನಿವಾರ್ಯತೆಯನ್ನೂ ಬಯಲಾಗಿಸಿದರು. ಸರಕಾರವೂ ಇಂಥ ಪ್ರಸಂಗಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಲುವಾಗಿ ಆಯ್ಕೆ ಸಮಿತಿ ಬದಲು ಸಲಹಾ ಸಮಿತಿಯ ದಾರಿ ಹಿಡಿಯಿತು.ಕ್ರಮೇಣ ಸಮಿತಿ ಆಯ್ಕೆ ಮಾಡಿದ ಹೆಸರುಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಹಲವಾರು ಪಟ್ಟಿಗಳಾಗಿ ಸರಕಾರವೇ ಅದರ ಮೌಲ್ಯವನ್ನು ಕಳೆದದ್ದೂ ಇತಿಹಾಸವೇ.
ಮೊದಲ ವರ್ಷ ಪ್ರಶಸ್ತಿಗೆ ಆಯ್ಕೆಯಾದವರು 10 ಮಂದಿ. 1973 ರಲ್ಲಿ ಈ ಸಂಖ್ಯೆ 21 ಕ್ಕೆ ಏರಿತು. ಆದರೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 175 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂಕಿ ಎಂಬುದಕ್ಕೆ ಲೆಕ್ಕವೇ ಇರಲಿಲ್ಲ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲೇ ಹೆಸರು ಪ್ರಕಟಿಸಿದ ಆರೋಪಕ್ಕೂ ಗುರಿಯಾಗಬೇಕಾಯಿತು. ಆಗ ಮಾಧ್ಯಮಗಳು “ಅರ್ಹರಿಗೆ ಮುಂದಿನ ಬಾರಿ’ ಎಂದು ಬರೆದು ಸರಕಾರದ ಕ್ರಮವನ್ನು ಟೀಕಿಸಿದ್ದು ಉಲ್ಲೇಖನೀಯ. ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರಕಾರ ಎಲ್ಲರನ್ನೂ ಸಂತೃಪ್ತಿ ಪಡಿಸುವ ಸಾಧನ ವನ್ನಾಗಿಸಿಕೊಂಡಿತು. ಬಂಗಾರ ಪ್ಪನವರನ್ನೂ ಮೀರಿ 176 ಮಂದಿಗೆ ಪ್ರಶಸ್ತಿ ಕೊಟ್ಟರು. ಈ ಪ್ರಹಸನ ಹೇಗಿತ್ತೆಂದರೆ, ಪ್ರಶಸ್ತಿ ಪ್ರದಾನಕ್ಕೆ ಕೆಲವೇ ಗಂಟೆ ಇರುವಾಗಲೂ ಪಟ್ಟಿ ಪರಿಷ್ಕೃತಗೊಳ್ಳುತ್ತಲೇ ಇತ್ತು.
ಬಿ.ಎಸ್. ಯಡಿಯೂ ರಪ್ಪನವರು ಮುಖ್ಯ ಮಂತ್ರಿಯಾಗಿದ್ದಾಗಲೂ 162 ಅಂಕಿ ತಲುಪಿದ್ದರು. ಇಡೀ ಪ್ರಶಸ್ತಿಯ ಆಯ್ಕೆ ಹಲವು ಶಿಫಾರಸುಗಳ ಮೇಲೆ ನಡೆಯುತ್ತದೆ ಎಂದಾದ ಮೇಲೆ ಜನರೂ ಅರ್ಜಿ ಹಾಕಲಾರಂಭಿಸಿದರು. 2017 ರಲ್ಲಿ 1 ಸಾವಿರ ಅರ್ಜಿ ಬಂದಿದ್ದವು. ಜನಪ್ರತಿನಿಧಿಗಳ ಶಿಫಾರಸು ಪತ್ರಗಳೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಚಿವರ ಕಚೇರಿಗಳಲ್ಲಿ ರಾಶಿ ಬಿದ್ದದ್ದೂ ಸುಳ್ಳಲ್ಲ. ಮುಖ್ಯಮಂತ್ರಿಗಳು, ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೆಲವು ಪ್ರಭಾವಿ ಸಚಿವರ ಅಡುಗೆಮನೆಯ ಸದಸ್ಯರ ಮೆದುಳೆಲ್ಲಾ ಈ ಪುರಸ್ಕೃತರ ಪಟ್ಟಿಯ ಆಯ್ಕೆಯಲ್ಲಿ ಮುಳುಗುತ್ತಿದ್ದರ ಅಪಸವ್ಯವಿದು. ಈ ಇತಿಹಾಸವನ್ನು ಹಿಂತಿರುಗಿ ನೋಡುವಾಗ ಈ ವರ್ಷದ ಪುರಸ್ಕೃತರ ಪಟ್ಟಿಯಲ್ಲಿ ಶತಾಯುಷಿಗಳು, ಸಾಕಷ್ಟು ಸಾಧಕರು ಕಾಣಸಿಗುತ್ತಿದ್ದಾರೆ. ಬಹಳಷ್ಟು ಕಾಳುಗಳಿರುವುದು ಸಂತಸದ ಸಂಗತಿ.
ಈ ಬಾರಿಯೂ ಎಲ್ಲ ನಡೆದಂತೆಯೇ ನಡೆದಿದ್ದರೂ ಒಂದಿಷ್ಟು ಸರಕಾರೀ ಆಸ್ಥಾನ ವಿದ್ವಾಂಸರ ಕೈವಾಡ ನಡೆಯದಿರುವುದು ಸ್ಪಷ್ಟ. ಸರಕಾರವೂ ಇಂಥವರ ಲೆಕ್ಕಾಚಾರದ ಮೋಹಕ್ಕೆ ಒಳಗಾಗದಿರುವುದೂ ವಾಸ್ತವವಾಗಿ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದೆ. ಅರ್ಹರು ಮೊದಲಿಗೆ ಎನ್ನುವ ಪರಂಪರೆಯನ್ನು ಸರಕಾರ ಮತ್ತು ಜನಪ್ರತಿನಿಧಿಗಳು ತಮ್ಮ ಆದ್ಯ ಕರ್ತವ್ಯವಾಗಿ ಪಾಲಿಸಬೇಕಾದದ್ದು ಕಡ್ಡಾಯ. ಆ ಸಂಪ್ರದಾಯವಷ್ಟೇ ಪ್ರಶಸ್ತಿಯ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸೀತೇ ಹೊರತು, ನಗದು ಹಣವಲ್ಲ ಎಂಬುದನ್ನು ಆಳುವವರು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.