ಕರುನಾಡಿಗೊಂದು ಬಾವುಟ ಸ್ಪಷ್ಟ ಉಲ್ಲೇಖ ಇಲ್ಲದಿರುವುದೇ ತೊಡಕು
Team Udayavani, Mar 10, 2018, 6:00 AM IST
ಕನ್ನಡದ ಅಸ್ಮಿತೆ ಎನ್ನುವುದು ಆರು ಕೋಟಿ ಕನ್ನಡಿಗರಿಗೆ ಹೆಮ್ಮೆಯ ವಿಚಾರವೇ ಆಗಿದೆ. ಅದಕ್ಕೆ ಪೂರಕವಾಗಿ ಬಹು ನಿರೀಕ್ಷಿತ ಕನ್ನಡ ಧ್ವಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಂಗೀಕರಿಸಿದೆ. ಹೆಚ್ಚು ಕಡಿಮೆ ಕನ್ನಡದ ಎಲ್ಲಾ ಹೋರಾಟಗಾರರು ಹೊಸ ಬಾವುಟಕ್ಕೆ ಸಮ್ಮತಿಯ ಮುದ್ರೆಯನ್ನು ಒತ್ತಿದ್ದಾರೆ. ಹೀಗಾಗಿ, ಕನ್ನಡಕ್ಕಾಗಿ ಪ್ರತ್ಯೇಕ ಧ್ವಜ ಎಂಬ ಬೇಡಿಕೆ ತಾತ್ವಿಕವಾಗಿಯಂತೂ ಈಡೇರಿದೆ. ಆದರೆ ಅದು ಕಾರ್ಯರೂಪಕ್ಕೆ ಬರುವುದೇ ಎನ್ನುವುದು ಮೂಲಭೂತ ಪ್ರಶ್ನೆ.
ನಮ್ಮ ಸಂವಿಧಾನದಲ್ಲಿ ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದುವ ಬಗ್ಗೆ ಉಲ್ಲೇಖವೇ ಇಲ್ಲ, ಅಲ್ಲದೆ ಹೊಂದಬಾರದು ಎಂದೂ ಅದು ಹೇಳುವುದೂ ಇಲ್ಲ. ಈ ಬಗ್ಗೆ ಎಸ್.ಆರ್. ಬೊಮ್ಮಾಯಿ ಮತ್ತು ಯೂನಿಯನ್ ಆಫ್ ಇಂಡಿಯಾ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ “ರಾಜ್ಯವೊಂದಕ್ಕೆ ತನ್ನದೇ ಧ್ವಜ ಹೊಂದಲು ಅವಕಾಶ ಇದೆಯಾದರೂ ಅದು ರಾಷ್ಟ್ರಧ್ವಜಕ್ಕಿಂತ ಕೆಳಗೆ ಹಾರಬೇಕು, ಅದರಿಂದಾಗಿ ರಾಷ್ಟ್ರಧ್ವಜಕ್ಕೆ ಅವಮಾನ ಆಗಬಾರದು’ ಎಂದು ಸ್ಪಷ್ಟವಾಗಿ ಹೇಳಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಹೊಂದುವ ವ್ಯವಸ್ಥೆ ಇದ್ದರೂ ಆ ಬಗ್ಗೆ ಸಂವಿಧಾನದಲ್ಲಿಯೇ ಉಲ್ಲೇಖವಿದೆ. ಮಾತ್ರವಲ್ಲ ಅದಕ್ಕೆ ಪ್ರತ್ಯೇಕ ಸಂವಿಧಾನವೇ ಇದೆ. ಉಳಿದ ರಾಜ್ಯಗಳಿಗೆ ಅನ್ವಯವಾಗುವ ನಿಯಮ, ಕಾನೂನುಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ. 1965ರಲ್ಲಿ ಕನ್ನಡದ ಕಟ್ಟಾಳು ಮ. ರಾಮಮೂರ್ತಿ ಕನ್ನಡ ಭಾಷೆಗಾಗಿ ಪ್ರತ್ಯೇಕ ಧ್ವಜ ಬೇಕು ಎಂಬುದನ್ನು ಮನಗಂಡು ಹಳದಿ ಮತ್ತು ಕೆಂಪು ಬಣ್ಣದ ಧ್ವಜವನ್ನು ರೂಪಿಸಿದ್ದರು. ಕರ್ನಾಟಕ ಸರಕಾರ ಅಧಿಕೃತವಾಗಿ ಅದನ್ನು ಒಪ್ಪಿಕೊಳ್ಳದಿದ್ದರೂ ಕನ್ನಡಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಿಗೂ ಅದನ್ನೇ ಬಳಕೆ ಮಾಡುತ್ತಾ ಬರಲಾಗುತ್ತಿತ್ತು. 1998ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಧ್ವಜವನ್ನು ರಾಜ್ಯ ಧ್ವಜವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿತ್ತು. ಆದರೆ ಕಾನೂನಿನ ತೊಡಕಿನಿಂದ ಅದು ಸಾಧ್ಯವಾಗಲಿಲ್ಲ.
ಡಿ.ವಿ.ಸದಾನಂದಗೌಡ ಸಿಎಂ ಆಗಿದ್ದಾಗ ಕನ್ನಡ ರಾಜ್ಯೋತ್ಸವ ವೇಳೆ ಸರಕಾರಿ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಕನ್ನಡ ಧ್ವಜ ಹಾರಿಸಲು ಸುತ್ತೋಲೆ ಹೊರಡಿಸಿದ್ದರು. ಆದರೆ ಹೈಕೋರ್ಟ್ ಅದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.
ಕನ್ನಡ ಹೋರಾಟಗಾರ ಡಾ| ಪಾಟೀಲ್ ಪುಟ್ಟಪ್ಪ ಮತ್ತು ಇತರರು ಹಾಲಿ ಧ್ವಜದಲ್ಲಿ ಬದಲಾವಣೆಯಾಗಬೇಕೆಂದು ಒತ್ತಾಯಿಸಿದ್ದರು. ಹೀಗಾಗಿ ರಾಜ್ಯ ಸರಕಾರ 2017ರ ಜೂನ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಹತ್ತು ತಿಂಗಳ ಕಾಲ ಅದು ಸಂವಿಧಾನ, ಕನ್ನಡ ಬಾವುಟದ ಇತಿಹಾಸ, ಕಾನೂನಿನ ಅಂಶಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ ಗುರುವಾರ ಅಂಗೀಕಾರವಾಗಿರುವ ಧ್ವಜದ ವಿನ್ಯಾಸಕ್ಕೆ ಒಪ್ಪಿಗೆ ನೀಡಿದೆ.
ಮೊದಲಿನಿಂದಲೂ ಕನ್ನಡಿಗರು ತಾಳ್ಮೆ, ಶಾಂತಿ, ಧೈರ್ಯ, ಸ್ವಾಭಿಮಾನಕ್ಕೆ ಹೆಸರಾದವರು. ಅದಕ್ಕಾಗಿಯೇ ಸದ್ಯ ಇರುವ ಕೆಂಪು, ಹಳದಿಯ ಜತೆಗೆ ಶಾಂತಿಯ ಸಂಕೇತವಾಗಿರುವ ಬಿಳಿ ಬಣ್ಣವನ್ನು ಸೇರಿಸಲಾಗಿದೆ. ಜತೆಗೆ ರಾಜ್ಯ ಧ್ವಜ ಎನ್ನುವುದು ಎದ್ದು ಕಾಣಲು ನೀಲಿ ಬಣ್ಣದ ಎರಡು ಕೊರಳುಗಳಿರುವ ಗಂಡಭೇರುಂಡ ಸೇರಿಸಲಾಗಿದೆ. ಆದರೆ ಕನ್ನಡ ನಾಡ ಧ್ವಜ ಎಂದಾಗ ಸರಕಾರದ ಲಾಂಛನ ಇರುವುದರ ಬಗ್ಗೆ ಕೆಲವು ಪ್ರಶ್ನಿಸಿದ್ದಾರೆ. ಕರ್ನಾಟಕ ಸರಕಾರದ ಧ್ವಜ ಪ್ರಸ್ತಾಪಕ್ಕೆ ಕೇಂದ್ರದಿಂದ ಒಪ್ಪಿಗೆಯ ಮುದ್ರೆ ದೊರೆತರೂ ಸದ್ಯ ಇರುವ ಹಳದಿ-ಕೆಂಪು ಬಾವುಟ ಬಳಕೆ ಮಾಡುವ ಅಭಿಪ್ರಾಯ ವ್ಯಕ್ತವಾಗಿದೆ. ಇಂಥ ನಿಲುವು ಸರಿಯಲ್ಲ. ದಶಕಗಳ ಬೇಡಿಕೆ ಯಾವುದೇ ಸಮಸ್ಯೆ ಇಲ್ಲದೆ ಬಹುತೇಕ ಸಹಮತದಿಂದ ಧ್ವಜದ ಬಗ್ಗೆ ಕನ್ನಡ ಪರ ಹೋರಾಟಗಾರರೆಲ್ಲರೂ ಒಪ್ಪಿಕೊಂಡಿದ್ದಾರೆ. ಅದಕ್ಕೆ ಸರಕಾರದ ವತಿಯಿಂದಲೂ ಸಮ್ಮತಿ ಸಿಕ್ಕಿದೆ.
ಹೀಗಾಗಿ, ರಾಜ್ಯ ಸರಕಾರ ಹೇಗೆ ಹೊಸ ವಿನ್ಯಾಸದ ಧ್ವಜಕ್ಕೆ ಅಂಗೀಕಾರ ನೀಡಿದೆಯೋ ಅದೇ ರೀತಿ ಕೇಂದ್ರ ಸರಕಾರದ ವತಿಯಿಂದಲೂ ಅನುಮತಿಯನ್ನು ಪಡೆದುಕೊಳ್ಳ ಬೇಕಾಗಿದೆ. ಪ್ರತ್ಯೇಕ ಧ್ವಜ ಸಿಗಬೇಕು ಎಂದ ಮಾತ್ರಕ್ಕೆ ನಾವು ಭಾರತಾಂಬೆೆ ಯನ್ನು ಕಡೆಗಣಿಸುತ್ತಿದ್ದೇವೆ ಎಂದಲ್ಲ, ಹಾಗಾಗಲೂಬಾರದು. ನಾಡಗೀತೆ ಯಲ್ಲಿನ “ಜಯ ಭಾರತ ಜನನಿಯ ತನುಜಾತೆ’ ಎಂಬ ಸದಾಶಯ ಮುಂದುವರಿಸಿಕೊಂಡು ಹೋಗುವುದು ಮುಖ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.