Karnataka; ಶಾಲಾ ಆಸ್ತಿ ಸಂರಕ್ಷಣೆ ಅಭಿಯಾನ ಎಲ್ಲ ಇಲಾಖೆಗಳಿಗೂ ಮಾದರಿ
Team Udayavani, Nov 12, 2024, 6:23 AM IST
ರಾಜ್ಯದಲ್ಲಿ ಸರಕಾರಿ ಜಾಗ, ಆಸ್ತಿಯ ಕಬಳಿಕೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಶಾಲೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಆಸ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆ ಕಳೆದ ಮೂರು ವರ್ಷಗಳಿಂದ ನಡೆಸುತ್ತ ಬಂದಿರುವ ಶಾಲಾ ಆಸ್ತಿ ಸಂರಕ್ಷಣ ಅಭಿಯಾನವನ್ನು ಈ ಬಾರಿ ವಿಶೇಷ ಆದ್ಯತೆಯೊಂದಿಗೆ ನಡೆಸಲು ತೀರ್ಮಾನಿಸಿದೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಮೂರು ತಿಂಗಳ ಕಾಲ ಈ ಅಭಿಯಾನ ನಡೆಯುತ್ತಿದ್ದು, ಬಾಕಿ ಉಳಿದಿರುವ ಒಂದೂವರೆ ತಿಂಗಳ ಅವಧಿಯಲ್ಲಿ ಈ ಅಭಿಯಾನಕ್ಕೆ ಮತ್ತಷ್ಟು ಚುರುಕು ನೀಡಲು ಇಲಾಖೆ ಮುಂದಾಗಿದೆ.
ಈ ಅಭಿಯಾನದ ಮೂಲಕ ಶಾಲೆ ನಿರ್ಮಾಣಕ್ಕಾಗಿ ಸರಕಾರದಿಂದ ಮಂಜೂರಾದ ಜಾಗ ಅಥವಾ ದಾನಿಗಳು ನೀಡಿದ ಜಾಗದ ಒತ್ತುವರಿಯನ್ನು ತಡೆಯುವ ಉದ್ದೇಶದಿಂದ ಈ ಜಾಗಗಳಿಗೆ ಖಾತೆಯನ್ನು ಮಾಡುವ ಮೂಲಕ ಸರಕಾರಿ ಆಸ್ತಿಯನ್ನು ಸಂರಕ್ಷಿಸಲಾಗುತ್ತಿದೆ. ಅದರಂತೆ ಈವರೆಗೆ ಸರಿಸುಮಾರು ಶೇ. 60ರಷ್ಟು ಸರಕಾರಿ ಶಾಲೆಗಳ ಆಸ್ತಿಗೆ ಖಾತೆಯನ್ನು ಮಾಡಲಾಗಿದೆ. ಈ ಬಾರಿ ಬಾಕಿ ಉಳಿದಿರುವ ಶೇ. 40ರಷ್ಟು ಸರಕಾರಿ ಶಾಲಾ ಆಸ್ತಿಯನ್ನು ನೋಂದಣಿ ಮಾಡಿಕೊಂಡು ಶಾಲೆಯ ಹೆಸರಿನಲ್ಲಿ ಖಾತೆ ಮಾಡುವ ಗುರಿಯನ್ನು ಇಲಾಖೆ ಹಾಕಿಕೊಂಡಿದೆ.
ಶಿಕ್ಷಣ ಇಲಾಖೆಯ ಈ ಸದುದ್ದೇಶದ ಕಾರ್ಯಕ್ಕೆ ಕೆಲವು ಕಾನೂನು ತೊಡಕು ಗಳು ಅಡಚಣೆಯಾಗಿ ಪರಿಣಮಿಸಿದೆ. ಶಾಲಾ ಜಾಗದ ಒತ್ತುವರಿದಾರರು ಮತ್ತು ದಾನಿಗಳು ಕೋರ್ಟ್ ಮೆಟ್ಟಲೇರಿರುವುದು ಶಾಲಾ ಆಸ್ತಿಗೆ ಖಾತೆ ಮಾಡುವ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಎಲ್ಲ ಜಿಲ್ಲಾಡಳಿತಗಳಿಗೆ ನಿರ್ದೇಶನವೊಂದನ್ನು ನೀಡಿ ಇಂತಹ ಪ್ರಕರಣಗಳ ತ್ವರಿತ ವಿಲೇವಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದೆ. ಇನ್ನೂ ಮುಖ್ಯವಾಗಿ ಈಗಾಗಲೇ ಮುಚ್ಚಲ್ಪಟ್ಟಿರುವ ಅಥವಾ ಪಾಳುಬಿದ್ದಿರುವ ಮತ್ತು ವಿಲೀನಗೊಂಡಿರುವ ಶಾಲೆಗಳ ಜಾಗದ ಆಸ್ತಿಯನ್ನು ಸಂರಕ್ಷಿಸಿ ಖಾತೆ ಮಾಡಿಸಿ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಿಕೊಳ್ಳಲು ಸಲಹೆ ನೀಡಿದೆ.
ಶಿಕ್ಷಣ ಇಲಾಖೆ ಈ ಅಭಿಯಾನ ಸ್ವಾಗತಾರ್ಹ ನಡೆಯಾಗಿದ್ದು ಸರಕಾರಿ ಶಾಲೆ ಗಳನ್ನು ಉಳಿಸುವ ದಿಸೆಯಲ್ಲಿಯೂ ಮಹತ್ವದ ಪಾತ್ರ ವಹಿಸಲಿದೆ. ಇಲಾಖೆಯ ಈ ಅಭಿಯಾನದಲ್ಲಿ ಎಲ್ಲ ಜಿಲ್ಲಾಡಳಿತಗಳು, ಕಂದಾಯ ಇಲಾಖೆ ಮತ್ತು ಸ್ಥಳೀಯಾಡಳಿತ ಅಥವಾ ಪಂಚಾಯತ್‌ರಾಜ್ ಸಂಸ್ಥೆಗಳು ಕೈಜೋಡಿಸಬೇಕು. ಸರಕಾರಿ ಶಾಲೆಗಳ ಜಾಗ ಸಂರಕ್ಷಣೆಯಲ್ಲಿ ಸ್ಥಳೀಯ ಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಜಾಗದ ಮಾಲಕತ್ವ ವಿಷಯವಾಗಿ ಯಾವುದೇ ವ್ಯಾಜ್ಯ, ತಕರಾರು ಇದ್ದಲ್ಲಿ ತಮ್ಮಲ್ಲಿರುವ ಸಾಕ್ಷ್ಯಾಧಾರಗಳನ್ನು ಇಲಾಖೆಗೆ ನೀಡಿ ಸಹಕಾರ ನೀಡಬೇಕು. ಇನ್ನು ಈ ವಿಷಯದಲ್ಲಿ ದಾನಿಗಳು ಮತ್ತು ಒತ್ತುವರಿದಾರರು ಕೂಡ “ಕೊಡು-ಕೊಳ್ಳುವಿಕೆ’ ನೀತಿಯನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಶಾಲಾ ಜಾಗದ ಸಂರಕ್ಷಣೆಯ ಕಾರ್ಯದಲ್ಲಿ ಒಂದಿಷ್ಟು ಹೃದಯ ವೈಶಾಲ್ಯತೆಯನ್ನು ಮೆರೆಯಬೇಕು.
ಶಿಕ್ಷಣ ಇಲಾಖೆಯ ಈ ಅಭಿಯಾನ ಸರಕಾರದ ಇತರ ಇಲಾಖೆಗಳಿಗೂ ಮಾದರಿಯಾಗಿದ್ದು, ಸರಕಾರಿ ಜಾಗವನ್ನು ಸಂರಕ್ಷಿಸುವ ಜತೆಯಲ್ಲಿ ನಿರ್ದಿಷ್ಟ ಉದ್ದೇಶಗಳಿಗಾಗಿಯೇ ಆ ಜಾಗಗಳು ಬಳಕೆಯಾಗುವುದನ್ನು ಖಾತರಿಪಡಿಸಿ ಕೊಳ್ಳಲು ಸಾಧ್ಯ. ಪ್ರತಿಯೊಂದು ಸರಕಾರಿ ಜಾಗವನ್ನೂ ಆಯಾಯ ಇಲಾಖೆ ಅಥವಾ ಸರಕಾರಿ ಸಂಸ್ಥೆಯ ಹೆಸರಿನಲ್ಲಿ ನೋಂದಣಿ ಮಾಡಿಸಿ, ಖಾತೆ ಮಾಡಿಸಿದಲ್ಲಿ ಭವಿಷ್ಯದಲ್ಲಿ ಈ ಜಾಗಗಳ ಕುರಿತಂತೆ ಯಾವುದೇ ಕಾನೂನು ತಕರಾರುಗಳು ಉದ್ಭವಿಸುವ ಪ್ರಶ್ನೆ ಎದುರಾಗದು. ಅಷ್ಟು ಮಾತ್ರವಲ್ಲದೆ ಸರಕಾರಿ ಜಾಗದ ಲಭ್ಯತೆಯ ಬಗೆಗೆ ಸ್ಪಷ್ಟ ಚಿತ್ರಣ ಲಭಿಸುವುದರ ಜತೆಯಲ್ಲಿ ಅಗತ್ಯಬಿದ್ದಾಗ ಈ ಜಾಗಗಳನ್ನು ಸಾರ್ವಜನಿಕ ಹಿತದೃಷ್ಟಿಯ ಯೋಜನೆಗಳಿಗೆ ಬಳಸಿಕೊಳ್ಳಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.