ಮತ್ತೆ ಹದಗೆಟ್ಟ ಕಾಶ್ಮೀರ
Team Udayavani, Feb 7, 2018, 3:45 PM IST
ಚಳಿಗಾಲದಲ್ಲಿ ಪಾಕ್ ಸೇನೆಯ ನೆರವಿನಿಂದ ಗಡಿ ನುಸುಳಿ ಬರುವುದು ಮಾಮೂಲಾಗಿತ್ತು. ಆದರೆ ಯೋಧರು ಕಟ್ಟೆಚ್ಚರದಲ್ಲಿದ್ದು, ಯಾವುದೇ ಮುಲಾಜಿಲ್ಲದೆ ಸದೆ ಬಡಿಯುತ್ತಿರುವ ಕಾರಣ ಗಡಿ ನುಸುಳುವ ಪ್ರಯತ್ನಗಳು ವಿಫಲವಾಗುತ್ತಿವೆ. ಹೀಗಾಗಿ ಉಗ್ರರು ಈಗ ಬೇರೆ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.
ಕಾಶ್ಮೀರದಲ್ಲಿ ಮತ್ತೆ ಪರಿಸ್ಥಿತಿ ಹದಗೆಟ್ಟಿದೆ. ನಾಲ್ಕು ದಿನಗಳ ಹಿಂದೆಯಷ್ಟೆ ಪಾಕಿಸ್ಥಾನದ ಸೈನಿಕರು ಗಡಿ ನಿಯಂತ್ರಣ ರೇಖೆಯಿಂದಾಚೆಗೆ ಮಾಡಿದ ದಾಳಿಯಲ್ಲಿ ಕ್ಯಾಪ್ಟನ್ ದರ್ಜೆಯ ಓರ್ವ ಅಧಿಕಾರಿ ಸೇರಿ ನಾಲ್ವರು ಸೈನಿಕರು ಹುತಾತ್ಮರಾಗಿದ್ದಾರೆ. ಅದರ ಬೆನ್ನಿಗೆ ಮಂಗಳವಾರ ಹಾಡುಹಗಲೇ ಉಗ್ರರು ಶ್ರೀನಗರದಲ್ಲಿರುವ ಮಹಾರಾಜ ಹರಿಸಿಂಗ್ ಆಸ್ಪತ್ರೆಗೆ ನುಗ್ಗಿ ಇಬ್ಬರು ಪೊಲೀಸರನ್ನು ಗುಂಡಿಕ್ಕಿ ಸಾಯಿಸಿ ನವೀದ್ ಜಾಟ್ ಎಂಬ ಉಗ್ರನನ್ನು ಬಿಡಿಸಿಕೊಂಡು ಹೋಗಿದ್ದಾರೆ. ಪಾಕಿನ ಮುಲ್ತಾನ್ ನಿವಾಸಿಯಾಗಿದ್ದ ಲಷ್ಕರ್ ಉಗ್ರ ಜಾಟ್‌ನನ್ನು 2014ರಲ್ಲಿ ಬಂಧಿಸಿ ಶ್ರೀನಗರದ ರೈನ್‌ವಾರಿ ಜೈಲಿನಲ್ಲಿಡಲಾಗಿತ್ತು. ಅಲ್ಲಿಂದ ಇಂದು ಇತರ ಆರು ಆರೋಪಿಗಳ ಜತೆಗೆ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆತಂದಾಗ ಉಗ್ರರು ಹೊಂಚು ಹಾಕಿ ದಾಳಿ ಮಾಡಿದ್ದಾರೆ. ಪೊಲೀಸ್ ವಾಹನ ಬರುವ ಮೊದಲೇ ಉಗ್ರರು ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶ ತಲುಪಿದ್ದರು. ಪೊಲೀಸರು ಬರುತ್ತಿದ್ದಂತೆಯೇ ಅವರ ಮೇಲೆ ದಾಳಿ ಮಾಡಲಾಗಿದೆ.
ಇದೊಂದು ಪೂರ್ವ ಯೋಜಿತ ಕೃತ್ಯ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಜಾಟ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವ ವಿಷಯ ಉಗ್ರರಿಗೆ ಮೊದಲೇ ತಿಳಿದಿತ್ತು ಎಂದಾಯಿತು. ಆದರೆ ತಿಳಿಸಿದವರ್ಯಾರು? ಹಲವು ಪೊಲೀಸರನ್ನು, ಅಮಾಯಕ ಜನರನ್ನು ಮತ್ತು ಓರ್ವ ಶಿಕ್ಷಕನನ್ನು ಕೊಂದಿರುವ ಇಂತಹ ಕಡು ಪಾತಕಿಯನ್ನು ಜೈಲಿನಿಂದ ಹೊರಗೆ ಕರೆತರುವಾಗ ಪೊಲೀಸರು ಏಕೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಿಲ್ಲ? ಇಷ್ಟಕ್ಕೂ ಜಾಟ್‌ನಂತಹ ನರರಕ್ಷಾಸರಿಗೆ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಮಾಡುವಂತಹ ಸೌಲಭ್ಯಗಳನ್ನೆಲ್ಲ ನೀಡುವ ಅಗತ್ಯವಿದೆಯೇ?
ಕಾಶ್ಮೀರವೊಂದರಲ್ಲೇ 2015ರಿಂದ 2017ರ ನಡುವೆ 201 ಭದ್ರತಾ ಸಿಬಂದಿಗಳು ಉಗ್ರರಿಗೆ ಬಲಿಯಾಗಿದ್ದಾರೆ ಎನ್ನುವ ಅಂಕಿಅಂಶವನ್ನು ಸರಕಾರವೇ ನೀಡಿದೆ. 2017ರಲ್ಲಿ 342 ಹಿಂಸಾ ಘಟನೆಗಳು ಸಂಭವಿಸಿವೆ. ಇದೇ ವೇಳೆ 213 ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಈ ವರ್ಷ ಈಗಾಗಲೇ 28 ಹಿಂಸಾ ಘಟನೆಗಳು ಸಂಭವಿಸಿದ್ದು, ನಾಲ್ವರು ಭದ್ರತಾ ಸಿಬಂದಿಗಳು ಹುತಾತ್ಮರಾಗಿದ್ದರೆ ಎಂಟು ಉಗ್ರರನ್ನು ಸದೆಬಡಿಯಲಾಗಿದೆ. ಸದ್ಯ ನಮ್ಮ ಸೈನಿಕರು ಪಾಕ್ ಸೈನಿಕರು ಮತ್ತು ಉಗ್ರರ ದಾಳಿಗೆ ಪ್ರತಿಯಾಗಿ ಅಷ್ಟೇ ಸಶಕ್ತವಾಗಿ ಪ್ರತಿದಾಳಿ ಮಾಡುತ್ತಿದ್ದಾರೆ. ಉಗ್ರರನ್ನು ಹುಡುಕಿ ತೆಗೆದು ಸಾಯಿಸುತ್ತಿದ್ದಾರೆ ಎನ್ನುವುದು ಸಮಾಧಾನ ಕೊಡುವ ಸಂಗತಿ. ಆದರೆ ಹೀಗೆ ನಿರಂತರವಾಗಿ ಎಷ್ಟು ಸಮಯ ರಕ್ತ ಚೆಲ್ಲುತ್ತಿರಬಹುದು? ಇದಕ್ಕೊಂದು ಅಂತ್ಯ ಎಂಬುದಿಲ್ಲವೆ ಎನ್ನುವುದು ಕಾಡುವ ಪ್ರಶ್ನೆ. ಪಾಕ್ ಸೇನೆ ಮತ್ತು ಉಗ್ರರು ನಿರಂತರವಾಗಿ ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಸುತ್ತಿದ್ದಾರೆ. ಚಳಿಗಾಲದಲ್ಲಿ ಪಾಕ್ ಸೇನೆಯ ನೆರವಿನಿಂದ ಗಡಿ ನುಸುಳಿ ಬರುವುದು ಮಾಮೂಲಾಗಿತ್ತು. ಆದರೆ ಈಗ ಗಡಿ ಭದ್ರತಾ ಪಡೆಯ ಯೋಧರು ಕಟ್ಟೆಚ್ಚರದಲ್ಲಿದ್ದು, ಯಾವುದೇ ಮುಲಾಜಿಲ್ಲದೆ ಸದೆ ಬಡಿಯುತ್ತಿರುವ ಕಾರಣ ಗಡಿ ನುಸುಳುವ ಪ್ರಯತ್ನಗಳು ವಿಫಲವಾಗುತ್ತಿವೆ. ಹೀಗಾಗಿ ಉಗ್ರರು ಈಗ ಬೇರೆ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಅವರಿಗೆ ಪಾಕ್ ಸೇನೆ ಮತ್ತು ಗುಪ್ತಚರ ಪಡೆ ಐಎಸ್‌ಐ ಸರ್ವ ನೆರವು ನೀಡುತ್ತಿರುವುದು ಜಗತ್ತಿಗೆ ತಿಳಿದಿರುವ ವಿಷಯ. ಧೂರ್ತ ಪಾಕಿಗೆ ರಾಜತಾಂತ್ರಿಕ ಭಾಷೆಯಲ್ಲಿ ಮಾತ್ರವಲ್ಲ ಮಿಲಿಟರಿ ಭಾಷೆಯಲ್ಲಿ ಬುದ್ಧಿ ಹೇಳಿದರೂ ಅರ್ಥವಾಗುತ್ತಿಲ್ಲ. ಹಾಗೊಂದು ವೇಳೆ ಅರ್ಥವಾಗುತ್ತಿದ್ದರೆ ಸರ್ಜಿಕಲ್ ಸ್ಟ್ರೈಕ್ ಬಳಿಕ ಸುಮ್ಮನಿರಬೇಕಿತ್ತು. ಆದರೆ ಪದೇ ಪದೇ ಭಾರತವನ್ನು ಘಾಸಿಗೊಳಿಸಿ ವಿಕೃತನಾಂದ ಪಡೆಯುವುದೇ ಅದರ ಪರಮ ಗುರಿಯಾಗಿರುವಂತೆ ಕಾಣಿಸುತ್ತದೆ. ಹೀಗಾಗಿ ಉಗ್ರರಿಗೆ ಛೂ ಬಿಡುವ ಹಳೇ ಚಾಳಿಯನ್ನು ಅಬಾಧಿತವಾಗಿ ಮುಂದುವರಿಸಿಕೊಂಡು ಬಂದಿದೆ.
ಕಾಶ್ಮೀರದೊಳಗೂ ಉಗ್ರರಿಗೆ ಅಗತ್ಯವಿರುವ ನೆರವುಗಳು ಸಿಗುತ್ತಿವೆ. ಅವರನ್ನು ಬೆಂಬಲಿಸುವ ದೇಶದ್ರೋಹಿ, ಪ್ರತ್ಯೇಕತಾವಾದಿ ಮನಃಸ್ಥಿತಿಯ ಜನರು ಇರುವುದರಿಂದ ಶಾಂತಿ ಸ್ಥಾಪನೆಗೆ ನಡೆಸುತ್ತಿರುವ ಪ್ರಯತ್ನಗಳೆಲ್ಲ ವಿಫಲವಾಗುತ್ತಿವೆ. ಇಂಥವರ ಕುಮ್ಮಕ್ಕಿನಿಂದಲೇ ಭದ್ರತಾ ಪಡೆಗಳ ಮೇಲೆ ಕಲ್ಲು ತೂರುವುದು, ಹಲ್ಲೆ ಮಾಡುವಂತಹ ಕೃತ್ಯಗಳಿಗೆ ಜನರು ಮುಂದಾಗುತ್ತಿದ್ದಾರೆ. ಇದೇ ವೇಳೆ ಉಗ್ರ ಸಂಘಟನೆಗಳಿಗೆ ಸೇರುವ ಯುವಕರ ಸಂಖ್ಯೆಯೂ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ರಾಜತಾಂತ್ರಿಕ ಸಂವಹನ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಎರಡೂ ದೇಶಗಳು ಈಗ ಪರಸ್ಪರ ಸೇನೆಯ ಮೂಲಕವೇ ಮಾತನಾಡುತ್ತಿವೆ. ಕಾಶ್ಮೀರದ ಸದ್ಯದ ಸ್ಥಿತಿ ಬಹಳ ಚಿಂತಾಜನಕವಾಗಿದೆ. ಉಗ್ರರಿಗೆ ಬೆಂಬಲ ನೀಡುವವರನ್ನು ಮಟ್ಟ ಹಾಕುವ ತನಕ ಅಲ್ಲಿ ಸಹಜ ಸ್ಥಿತಿ ನೆಲೆಸುವುದು ಅಸಾಧ್ಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.