ಕೇಜ್ರಿವಾಲ್ ಮುಂದಿದೆ ಬೆಟ್ಟದಷ್ಟು ಸವಾಲು
Team Udayavani, Feb 17, 2020, 6:40 AM IST
ದಿಲ್ಲಿಯ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಅಧಿಕಾರ ಸ್ವೀಕರಿಸಿದ್ದಾರೆ. ಸತತ ಎರಡನೇ ಸಲ ಕ್ಲೀನ್‌ಸ್ವೀಪ್ ಆಗಿ ಅಧಿಕಾರಕ್ಕೇರಿದ್ದರೂ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ದೆಹಲಿಯನ್ನು ಕಟ್ಟಲು ನೆರವಾದ 50 ಮಂದಿಗೆ ಕೃತಜ್ಞತೆ ಹೇಳುವ ನಿಟ್ಟಿನಲ್ಲಿ ಮಾಡಿದ್ದಾರೆ. ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಕೇಜ್ರಿವಾಲ್ ಎದುರು ಇರುವ ಸವಾಲುಗಳು ಅನೇಕ.
ದಿಲ್ಲಿಯಲ್ಲಿ ವಿದ್ಯುತ್, ನೀರು, ಶಿಕ್ಷಣ ಇತ್ಯಾದಿ ಮೂಲ ಸೌಲಭ್ಯಗಳೆಲ್ಲ ಉಚಿತ. ಹೀಗೆ ಪುಕ್ಕಟೆ ಕೊಡುಗೆಗಳನ್ನು ನೀಡಿರುವುದರಿಂದಲೇ ಜನರು ಮರಳಿ ಆಪ್ ಅನ್ನು ಆರಿಸಿದ್ದಾರೆ ಎಂಬ ಅಪವಾದವೂ ಇದೆ. ಇದನ್ನು ಸುಳ್ಳು ಮಾಡಿ, ತನ್ನದು ನಿಜವಾದ ಕಾಮ್ ಕಿ ಸರಕಾರ್ ಎಂದು ಸಾಧಿಸಿ ತೋರಿಸುವುದು ಕೇಜ್ರಿವಾಲ್ ಸರಕಾರದ ಮುಂದಿರುವ ಮೊದಲ ಸವಾಲು.
ಶಿಕ್ಷಣ, ಆಹಾರ, ನೀರು, ವೈದ್ಯಕೀಯ ಶುಶ್ರೂಷೆ ಈ ಮುಂತಾದ ಕನಿಷ್ಠ ನಾಗರಿಕ ಸೌಲಭ್ಯಗಳು ಪ್ರತಿಯೊಬ್ಬರಿಗೂ ಸಮಾನವಾಗಿ ಸಿಗುವಂತಾಗಬೇಕು. ಇದಕ್ಕೂ ಜನರಿಂದ ಹಣ ಪಡೆಯುವುದು ಸರಿಯೇ ಎಂಬ ಪ್ರಶ್ನೆಯೂ ಇದೆ. ಜನರಿಗೆ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸುವುದು ಆಳುವವರ ಕರ್ತವ್ಯ ಮಾತ್ರವಲ್ಲದೆ ಹೊಣೆಯೂ ಹೌದು. ಹೀಗಾಗಿ ದಿಲ್ಲಿ ಸರಕಾರದ ಕೊಡುಗೆಗಳನ್ನು ಪುಕ್ಕಟೆ ಎಂದು ಲೇವಡಿ ಮಾಡುವುದು ಸರಿಯಲ್ಲ.ಬದಲಾಗಿ ಇದನ್ನು ಒಂದು ಮೇಲ್ಪಂಕ್ತಿ ಎಂದು ಪರಿಗಣಿಸಿ ಉಳಿದ ರಾಜ್ಯಗಳೂ ಪ್ರಯೋಗಿಸಿ ನೋಡಬಹುದು.
ದಿಲ್ಲಿ ಉಳಿದ ರಾಜ್ಯಗಳಂತಲ್ಲ. ಇಲ್ಲಿನ ಕೆಲವು ಅಧಿಕಾರಗಳು ಕೇಂದ್ರದ ಬಳಿಯೂ ಇದೆ. ಕೇಂದ್ರದ ಜೊತೆಗೆ ಸಮನ್ವಯ ಸಾಧಿಸಿದರೆ ಮಾತ್ರ ರಾಜ್ಯದಲ್ಲಿ ಸುಗಮ ಆಡಳಿತ ನೀಡಬಹುದು. ಆರಂಭದ ದಿನಗಳಲ್ಲಿ ಸದಾ ಕೇಂದ್ರದ ಜೊತೆಗೆ ಗುದ್ದಾಡುತ್ತಿದ್ದ ಕೇಜ್ರಿವಾಲ್ ಹಾಗೂ ಅವರ ಪಕ್ಷದ ನಾಯಕರಿಗೆ ಈಗ ಇದು ಅರ್ಥವಾದಂತಿದೆ. ಹಿಂದಿನ ಅವಧಿಯ ಕೊನೆಯ ಎರಡು ವರ್ಷಗಳಲ್ಲಿ ಆಪ್ ಹಿಂದಿನಂತೆ ಅನವಶ್ಯಕವಾಗಿ ಕೇಂದ್ರದ ಜೊತೆಗೆ ಜಂಗಿ ಕುಸ್ತಿಗಿಳಿದಿರಲಿಲ್ಲ.ಇದೀಗ ಪ್ರಮಾಣ ವಚನ ಸಮಾರಂಭದಲ್ಲೂ ಕೇಜ್ರಿವಾಲ್ ಕೇಂದ್ರದ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಳ್ಳುವ ವಾಗ್ಧಾನ ನೀಡಿದ್ದು, ಇದರಿಂದ ದಿಲ್ಲಿಗೆ ಒಳಿತಾಗಲಿದೆ.
ದಿಲ್ಲಿಯ ಮಾಲಿನ್ಯ ನಿಯಂತ್ರಿಸುವುದು ಕೇಜ್ರಿವಾಲ್ ಸರಕಾರದ ಆದ್ಯತೆಯ ಕಾರ್ಯಕ್ರಮವಾಗಬೇಕು. ಮಳೆಗಾಲ ಮುಗಿದ ಕೂಡಲೇ ದಿಲ್ಲಿ ಗ್ಯಾಸ್ ಚೇಂಬರ್‌ನಂತಾಗುವುದು ಪ್ರತಿವರ್ಷದ ಮಾಮೂಲು ಘಟನೆ ಎಂಬಂತಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯವಾಗಿಯೂ ರಾಷ್ಟ್ರ ರಾಜಧಾನಿ ಮುಜುಗರವನ್ನು ಅನುಭವಿಸುತ್ತಿದೆ. ಸಮ-ಬೆಸ ಸಂಖ್ಯೆಯೊಂದೇ ಮಾಲಿನ್ಯ ನಿಯಂತ್ರಣಕ್ಕೆ ಪರಿಹಾರವಲ್ಲ. ದಿಲ್ಲಿಯ ವಾತಾವರಣ ತಿಳಿಯಾಗಲು ಶಾಶ್ವತವಾದ ಯೋಜನೆಗಳನ್ನು ರೂಪಿಸಿಜಾರಿಗೊಳಿಸುವುದು ಅಗತ್ಯ. ಕೇಂದ್ರದ ಸಹಕಾರದೊಂದಿಗೆ ಈ ಕಾರ್ಯವನ್ನು ಮಾಡಬೇಕಾಗಿದೆ.
ಅಂತೆಯೇ ದಿಲ್ಲಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಗ್ಗೆಯೂ ಉತ್ತಮ ಅಭಿಪ್ರಾಯವಿಲ್ಲ. ದುಡಿಯುವ ಮಹಿಳೆಯರಿಗೆ ಪುಕ್ಕಟೆ ಪ್ರಯಾಣ ಸೌಲಭ್ಯ ಇದೆಯಾದರೂ ದಿಲ್ಲಿಯ ಸರಕಾರಿ ಬಸ್ಸುಗಳು ತೀರಾ ಹದಗೆಟ್ಟ ಸ್ಥಿತಿಯಲ್ಲಿವೆ. ಅಂತಾರಾಷ್ಟ್ರೀಯವಾಗಿ ಪ್ರಮುಖವಾಗಿರುವ, ನಿತ್ಯ ಸಾವಿರಾರು ವಿದೇಶಿ ಪ್ರವಾಸಿಗರು ಬರುವ ನಗರದ ಸಾರಿಗೆ ವ್ಯವಸ್ಥೆ ಈ ರೀತಿ ಹದಗೆಟ್ಟ ಸ್ಥಿತಿಯಲ್ಲಿರುವುದು ಭೂಷಣವಲ್ಲ.
2015ರಲ್ಲಿ ಆಪ್ 70ರ ಪೈಕಿ 67 ಸ್ಥಾನಗಳನ್ನು ಗೆದ್ದಾಗ ಇದು “ಒಂದು ಸಲ ಮಾತ್ರ ನಡೆಯುವ ಪವಾಡ’ ಎಂದು ಹಗುರವಾಗಿ ಮಾತನಾಡಿದ್ದವರಿಗೆ 2020ರ ದಿಲ್ಲಿ ಫಲಿತಾಂಶ ವಾಸ್ತವ ದರ್ಶನ ಮಾಡಿರಬಹುದು. ಇಡೀ ಚುನಾವಣೆಯಲ್ಲಿ ಆಪ್ ನಾಯಕರು ಮಾತನಾಡಿದ್ದು ಜನಪರವಾದ ಆಡಳಿತದ ಕುರಿತು. ಆಪ್‌ನ ಕಾಮ್ ಕಿ ಬಾತ್‌ನ ಎದುರು ಬಿಜೆಪಿಯ ರಾಷ್ಟ್ರೀಯತೆ, ಹಿಂದುತ್ವ, ದೇಶ ಭಕ್ತಿಯ ಅಜೆಂಡಾಗಳೆಲ್ಲ ಠುಸ್ ಆದದ್ದು ಅಧ್ಯಯನಯೋಗ್ಯ ವಿಚಾರ. ಹಾಗೆಂದು ಈ ಒಂದು ಗೆಲುವಿನಿಂದ ಬಿಜೆಪಿಗೆ ರಾಷ್ಟ್ರೀಯ ನೆಲೆಯಲ್ಲಿ ಆಪ್ ಪರ್ಯಾಯವಾಗಬಲ್ಲುದು ಎಂದು ತೀರ್ಮಾನಿಸಬಾರದು. ಆರಂಭದ ದಿನಗಳಲ್ಲಿ ಸ್ವತಹ ಆಪ್ ನಾಯಕರಿಗೂ ಇಂಥ ಭ್ರಮೆಯೊಂದಿತ್ತು. ದಿಲ್ಲಿ ಮತ್ತು ಪಂಜಾಬ್ ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲಿ ಅಸ್ತಿತ್ವ ಕಂಡುಕೊಳ್ಳಲು ಆಪ್‌ಗೆ ಇನ್ನೂ ಸಾಧ್ಯವಾಗಿಲ್ಲ. ಪಂಜಾಬ್‌ನಲ್ಲೂ ಆಂತರಿಕ ಕಚ್ಚಾಟ ತೀವ್ರಗೊಂಡು ದುರ್ಬಲವಾಗಿದೆ. ಈಗಾಗಲೇ ಕೆಲವರು ಮುಂದಿನ ದಿನಗಳಲ್ಲಿ ಆಪ್ ಅನ್ನು ರಾಷ್ಟ್ರೀಯ ನೆಲೆಯಲ್ಲಿ ಬೆಳೆಸಿ ಬಿಜೆಪಿಗೆ ಪರ್ಯಾಯವಾಗಿ ಅರ್ಥಾತ್ ನರೇಂದ್ರ ಮೋದಿಗೆ ಪರ್ಯಾಯವಾಗಿ ಕೇಜ್ರಿವಾಲ್ ಅವರನ್ನು ರಂಗಕ್ಕಿಳಿಸುವ ಬಗ್ಗೆ ಮಾತನಾಡಲು ತೊಡಗಿದ್ದಾರೆ.ಕೇಜ್ರಿವಾಲ್ ಇಂಥ ದಿಕ್ಕುತಪ್ಪಿಸುವ ಸಲಹೆಗಾರರಿಂದ ದೂರವಿದ್ದಷ್ಟು ಒಳ್ಳೆಯದು. ಏಕೆಂದರೆ ರಾಷ್ಟ್ರೀಯ ನಾಯಕರಾಗಲು ಪ್ರಯತ್ನಿಸಿದ ಅನುಭವ ಅವರಿಗೆ ಈಗಾಗಲೇ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.