ಸ್ಪಷ್ಟನೆ ನೀಡಲಿ ಕೇಂದ್ರ: ಏರ್ ಶೋ ಸ್ಥಳಾಂತರ ಬೇಡ
Team Udayavani, Aug 14, 2018, 6:00 AM IST
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಬೆಂಗಳೂರು ವೈಮಾನಿಕ ಪ್ರದರ್ಶನವನ್ನು ಲಕ್ನೋಗೆ ಸ್ಥಳಾಂತರ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. 1996ರಿಂದಲೂ ಪ್ರತಿ 2 ವರ್ಷಕ್ಕೊಮ್ಮೆ ಅಂತಾರಾಷ್ಟ್ರೀಯ ಮಟ್ಟದ ವೈಮಾನಿಕ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಬೆಂಗಳೂರು ಈ ವಿಚಾರದಲ್ಲಿ ತನ್ನದೇ ಆದ ಖ್ಯಾತಿಯನ್ನೂ ಹೊಂದಿದೆ. ಭಾರತದ ವೈಮಾನಿಕ ಸಾಮಗ್ರಿಗಳ ತಯಾರಿಕೆ ವಿಷಯದಲ್ಲೂ ಬೆಂಗಳೂರು ರಾಜಧಾನಿಯಾಗಿ ಗುರುತಿಸಿಕೊಂಡಿದ್ದು, ಒಂದೊಮ್ಮೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋಗೆ ಸ್ಥಳಾಂತರವಾದರೆ ವೈಮಾನಿಕ ವಸ್ತುಗಳ ತಯಾರಿಕಾ ಸಂಸ್ಥೆಗಳಿಗೆ ಹೊಡೆತ ಬೀಳುವುದು ಖಂಡಿತ.
“ಬೆಂಗಳೂರು ವೈಮಾನಿಕ ಪ್ರದರ್ಶನ’ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ನೇಮ್ ಪಡೆದುಕೊಂಡಿದೆ. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಈ ಬ್ರಾಂಡ್ ನೇಮ್ ಅನ್ನು ಕಿತ್ತುಕೊಳ್ಳಬಾರದು. ಇದಕ್ಕೆ ಬದಲಾಗಿ ಉತ್ತರ ಪ್ರದೇಶದ ಲಕ್ನೋದಲ್ಲೂ ಪ್ರತ್ಯೇಕವಾಗಿ ವೈಮಾನಿಕ ಪ್ರದರ್ಶನ ಮಾಡಬಹುದು. ಸದ್ಯ ಬೆಂಗಳೂರಿನ ಏರ್‌ಶೋಗೆ ಪರ್ಯಾಯವಾಗಿ ಲಕ್ನೋದಲ್ಲೂ ಮತ್ತೂಂದು ವೈಮಾನಿಕ ಪ್ರದರ್ಶನ ನಡೆಸಬಹುದು. ಇ¨ನ್ನು ಬಿಟ್ಟು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿ ರುವ ಕಾರ್ಯಕ್ರಮವೊಂದನ್ನು ಕಿತ್ತು ಬೇರೊಂದು ರಾಜ್ಯಕ್ಕೆ ನೀಡುವ ಸಂಸ್ಕೃತಿಗೆ ನಾಂದಿ ಹಾಡಬಾರದು. ಏರ್ ಶೋ ಸ್ಥಳಾಂತರ ವಿಚಾರದಲ್ಲಿ ರಾಜ್ಯದ ಹೋರಾಟ ಇದೇ ಮೊದಲೇನಲ್ಲ. ಈ ಹಿಂದೆಯೂ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಬೆಂಗಳೂರಿನಿಂದ ಎತ್ತಂಗಡಿ ಮಾಡಲು ನೋಡಿದ್ದರು. ಆದರೆ, ಆಗಿರಲಿಲ್ಲವಷ್ಟೇ.
ವೈಮಾನಿಕ ಪ್ರದರ್ಶನ ವಿಚಾರದಲ್ಲಿ ಕೇಂದ್ರ ಸರ್ಕಾರವೂ ಎಚ್ಚರಿಕೆಯ ಹೆಜ್ಜೆ ಇಡಬೇಕಾದದ್ದು ಅನಿವಾರ್ಯ. ಒಂದೊಮ್ಮೆ ಈ ಪ್ರದರ್ಶನವನ್ನು ಬೆಂಗಳೂರಿನಿಂದ ಲಕ್ನೋಗೆ ವರ್ಗಾಯಿಸಿಬಿಟ್ಟರೆ ಇಲ್ಲಿನವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಅದೂ ಅಲ್ಲದೇ ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಒಂದೇ ಪಕ್ಷದ ಸರ್ಕಾರಗಳಿದ್ದು ಸ್ವಹಿತಾಸಕ್ತಿಯ ಅಡ್ಡಪರಿ ಣಾಮವನ್ನೂ ಎದುರಿಸಬೇಕಾಗುತ್ತದೆ. ಇಂಥ ವಿಚಾರದಲ್ಲಿ ಒಕ್ಕೂಟ ವ್ಯವಸ್ಥೆಗೆ ಗೌರವ ನೀಡಿ ಪ್ರತಿಯೊಂದು ರಾಜ್ಯಗಳ ಆಚರಣೆ, ಕಾರ್ಯ ಕ್ರಮಗಳಿಗೆ ಕಡ್ಡಾಯವಾಗಿ ಮನ್ನಣೆ ನೀಡಲೇಬೇಕಾಗುತ್ತದೆ.
ಸದ್ಯ ರಕ್ಷಣಾ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದಲೇ ರಾಜ್ಯಸಭೆಗೆ ಆರಿಸಿಹೋಗಿದ್ದಾರೆ. ಇಂಥ ವೇಳೆಯಲ್ಲಿ ಮೊದಲಿಗೆ ರಾಜ್ಯದ ಹಿತ ಕಾಯಬೇಕಾದದ್ದು ಅವರ ಕರ್ತವ್ಯ. ಒಂದು ವೇಳೆ ಲಕ್ನೋಗೆ ವರ್ಗಾವಣೆಯಾದದ್ದೇ ಆದರೆ ಸೀತಾರಾಮನ್ ಕೂಡ ಸ್ಥಳೀಯರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಜತೆಗೆ ಇಲ್ಲಿರುವ ವಿರೋಧ ಪಕ್ಷ ಬಿಜೆಪಿ ಕೂಡ ಇದಕ್ಕೆ ಹೊಣೆಯಾಗಬೇಕಾದ ಅನಿವಾರ್ಯತೆ ಸೃಷ್ಟಿ ಯಾಗುತ್ತದೆ. ಈಗಾಗಲೇ ವರ್ಗಾವಣೆ ವಿಚಾರ ರಾಜಕೀಯಗೊಂಡಿರು ವುದರಿಂದ ಕೇಂದ್ರ ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಲೇಬೇಕು.
ಕರ್ನಾಟಕ ಸರ್ಕಾರ ಕೂಡ ಬೆಂಗಳೂರು ವೈಮಾನಿಕ ಪ್ರದರ್ಶನ ರಾಜ್ಯದ ಕೈತಪ್ಪಿ ಹೋಗದಂತೆ ಎಲ್ಲ ಯತ್ನಗಳನ್ನು ನಡೆಸಬೇಕು. ಯುದ್ಧ ವಿಮಾನಗಳೂ ಸೇರಿದಂತೆ ವೈಮಾನಿಕ ಬಿಡಿಭಾಗಗಳ ಉತ್ಪಾದನೆ ವಿಚಾರದಲ್ಲಿ ಬೆಂಗಳೂರು ತನ್ನದೇ ಆದ ಸ್ಥಾನ ಹೊಂದಿರುವುದರಿಂದ ವಿದೇಶಿ ಬಂಡವಾಳ ಸೆಳೆಯುವುದೂ ಸುಲಭ. ಈಗಾಗಲೇ ಬೆಂಗಳೂರಿನಲ್ಲಿ ಎಚ್‌ಎಎಲ್, ಎನ್‌ಎಎಲ್, ಡಿಆರ್‌ಡಿಓನಂಥ ಸರ್ಕಾರಿ ಕಂಪನಿಗಳಿವೆ. ಜತೆಯಲ್ಲಿ 50ಕ್ಕೂ ಹೆಚ್ಚು ಖಾಸಗಿ ಕಂಪನಿಗೂ ನೆಲೆಯೂರಿವೆ. ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಬಿಡಿಭಾಗಗಳನ್ನು ಖರೀದಿ ಮಾಡಬೇಕಾದರೂ ಬೆಂಗಳೂರಿಗೇ ಬರಬೇಕು. ಆದರೆ, ಉತ್ತರ ಪ್ರದೇಶದಲ್ಲಿ ಇನ್ನೂ ವೈಮಾನಿಕ ವಲಯದ ಕಂಪನಿಗಳು ಆರಂಭ ವಾಗಬೇಕಿದೆ. ಮೂಲಸೌಕರ್ಯಗಳೂ ಈಗಷ್ಟೇ ಶುರುವಾಗಬೇಕಿದೆ. ಬೆಂಗಳೂರಿನಲ್ಲಿ ಎಲ್ಲಾ ಮೂಲಸೌಕರ್ಯಗಳಿದ್ದೂ, ಕಂಪನಿಗಳಿಗೆ ಹೂಡಿ ಕೆಗೂ ಅವಕಾಶವಿರುವುದರಿಂದ ಇಲ್ಲಿಂದ ಸ್ಥಳಾಂತರ ಏಕೆ ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯದಿಂದ ಕೇಂದ್ರ ಪ್ರತಿನಿಧಿಸುವ ಸಚಿವರು, ರಾಜ್ಯ ಸಂಸದರ ಕಡೆಯಿಂದ ಒತ್ತಡ ಹಾಕಿಸಿ ವೈಮಾನಿಕ ಪ್ರದರ್ಶನವನ್ನು ಇಲ್ಲೇ ಉಳಿಸಿಕೊಳ್ಳಬೇಕು. ಕೇವಲ ಸ್ಥಳದ ವಿಚಾರದಲ್ಲಿ ಕಿತ್ತಾಟ ನಡೆಸಲಾಗುತ್ತಿದೆ ಎಂಬುದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಬಾರದು.
ಈ ಎಲ್ಲವುಗಳ ಮಧ್ಯೆ ಕೇಂದ್ರ ಸರ್ಕಾರ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಿಂದ ಲಕ್ನೋಗೆ ವರ್ಗಾಯಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಇಂಥ ಸುದ್ದಿಯೇ ಹೆಚ್ಚಿನ ಸಂಚಲನ ಸೃಷ್ಟಿಸಿದೆ. ಆದರೆ ಇಂಥ ಸುದ್ದಿಗಳು ಹೆಚ್ಚಾಗಿದ್ದರೂ ರಕ್ಷಣಾ ಇಲಾಖೆ ಅಥವಾ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಧಿಕೃತವಾಗಿ ಏನನ್ನೂ ಹೇಳುತ್ತಿಲ್ಲ. ಇದು ಏರ್‌ಶೋ ವರ್ಗಾವಣೆಯಾಗಬಹುದಾದ ಸುದ್ದಿಗಳಿಗೆ ಹೆಚ್ಚಿನ ಇಂಬು ನೀಡುತ್ತಿದೆ. ಈ ಕೂಡಲೇ ನಿರ್ಮಲಾ ಸೀತಾರಾಮನ್ ಅವರು ಏರ್‌ಶೋ ಸ್ಥಳಾಂತರದ ಬಗ್ಗೆ ಸ್ಪಷ್ಟನೆ ನೀಡಬೇಕು. ಬೆಂಗಳೂರಿನಲ್ಲೇ ನಡೆಯುವಂತೆ ನೋಡಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.