ವಿಧಾನಮಂಡಲ ಕಲಾಪ: ಶಾಸಕರ ಅನುಪಸ್ಥಿತಿ ಖಂಡನೀಯ
Team Udayavani, Sep 20, 2022, 6:00 AM IST
ಕ್ಷೇತ್ರದ ಜನರ ಕಷ್ಟಕಾರ್ಪಣ್ಯಗಳನ್ನು ಸರಕಾರದ ಗಮನಕ್ಕೆ ತರಲು ಇರುವ ಮುಖ್ಯ ವೇದಿಕೆಯೇ ವಿಧಾನಮಂಡಲ ಕಲಾಪ. ಇಲ್ಲಿ ದನಿ ಎತ್ತಿದರೆ ಆ ಕ್ಷೇತ್ರದ ಸಮಸ್ಯೆಗಳು ಇಡೀ ರಾಜ್ಯದ ಗಮನ ಸೆಳೆಯುತ್ತವೆ. ಆದರೆ ಕಲಾಪಕ್ಕೆ ಶಾಸಕರು ಗೈರಾಗುತ್ತಿರುವುದು ಮಾತ್ರ ಅತ್ಯಂತ ಖೇದಕರ ಸಂಗತಿ.
ವಿಧಾನಮಂಡಲ ಅಧಿವೇಶನ ಆರಂಭವಾಗಿ ಈಗಾಗಲೇ ವಾರ ಕಳೆದಿದೆೆ. ಸೋಮವಾರ ಎರಡನೇ ವಾರದ ಮೊದಲ ದಿನ. ಬೆಳಗ್ಗೆ ಕಲಾಪ ಆರಂಭವಾದರೂ ಶಾಸಕರೇ ಇರಲಿಲ್ಲ. ಅಲ್ಲದೆ ಪ್ರಶ್ನೆಗಳನ್ನು ಕೇಳುವ ಸಲುವಾಗಿ ಹೆಸರು ನೀಡಿದ್ದವರೂ ಬರದೇ ಹೋಗಿದ್ದುದು ಮಾತ್ರ ದುರಂತ. ವಿಧಾನಸಭೆಯಲ್ಲಿ ಸೋಮವಾರ ಬೆಳಗ್ಗೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡಿದ್ದರು. 15 ಮಂದಿ ಶಾಸಕರು ಪ್ರಶ್ನೋತ್ತರ ಕಲಾಪದಲ್ಲಿ ಭಾಗಿಯಾಗುವ ಸಂಬಂಧ ಹೆಸರು ನೀಡಿದ್ದರು. ಇದರಲ್ಲಿ ಅರ್ಧಕ್ಕರ್ಧ ಶಾಸಕರು ಬಂದೇ ಇರಲಿಲ್ಲ. ಇದು ಸ್ಪೀಕರ್ ಕಾಗೇರಿ ಅವರ ಸಿಟ್ಟಿಗೂ ಕಾರಣವಾಯಿತು. ಅಲ್ಲದೆ 11.10ಕ್ಕೆ ಆರಂಭವಾದ ಪ್ರಶ್ನೋತ್ತರ ಕಲಾಪ ಕೇವಲ ಅರ್ಧ ಗಂಟೆಯಲ್ಲಿ ಮುಗಿದು ಹೋಗಿದೆ.
ಎರಡು ದಿನ ರಜೆ ಬಳಿಕ ಕಲಾಪ ಆರಂಭವಾಗಿದ್ದು, ಸದನದಲ್ಲಿ ಶಾಸಕರು ಗೈರಾಗಿದ್ದು ಏಕೆ ಎಂಬುದು ಸ್ಪೀಕರ್ ಅವರ ಪ್ರಶ್ನೆಯಾಗಿತ್ತು. ರಾಜ್ಯದ ಸಮಸ್ಯೆಗಳು, ವಿಚಾರಗಳ ಬಗ್ಗೆ ಚರ್ಚೆಯಾಗಲಿ ಎಂಬ ಉದ್ದೇಶದಿಂದಲೇ ವಿಧಾನಸಭೆ ಅಧಿವೇಶನ ನಡೆಯುತ್ತದೆ. ಇದರಲ್ಲಿ ಕ್ಷೇತ್ರದ ಸಮಸ್ಯೆಗಳಷ್ಟೇ ಅಲ್ಲ, ಸರಕಾರದ ವೈಫಲ್ಯಗಳ ಬಗ್ಗೆಯೂ ಗಮನಾರ್ಹ ಚರ್ಚೆಯಾಗುತ್ತದೆ. ಜತೆಗೆ ಮುಂದೇನು ಮಾಡಬೇಕು ಎಂಬ ಕುರಿತಾಗಿಯೂ ಸುದೀರ್ಘ ಚರ್ಚೆ ನಡೆಯುತ್ತದೆ.
ಅಲ್ಲದೆ ಪ್ರತಿಯೊಂದು ಅಧಿವೇಶನ ನಡೆಸುವಾಗಲೂ ಜನರ ಕೋಟ್ಯಂತರ ರೂ. ತೆರಿಗೆ ಹಣ ವೆಚ್ಚವಾಗುತ್ತದೆ. ಶಾಸಕರೂ ವಿಶೇಷ ಭತ್ತೆ ಪಡೆಯುತ್ತಾರೆ. ಆದರೆ ಸರಿಯಾಗಿ ಅಧಿವೇಶನ ನಡೆಯದೇ ಹೋದರೆ ಈ ಎಲ್ಲ ಹಣ ನೀರಿನಲ್ಲಿ ಹುಣಸೆಹಣ್ಣು ತೊಳೆದಂತೆ ಆಗುವುದಿಲ್ಲವೇ ಎಂಬ ಪ್ರಶ್ನೆ ಜನರದ್ದು.
ಪ್ರತೀ ಬಾರಿ ಅಧಿವೇಶನ ಆರಂಭದ ಹೊತ್ತಲ್ಲಿ, ಈ ಬಾರಿಯಾದರೂ ರಚನಾತ್ಮಕವಾಗಿ ಅಧಿವೇಶನ ನಡೆಯಲಿ ಎಂಬ ಒಂದು ನಿರೀಕ್ಷೆ ಇರುತ್ತದೆ. ಎಷ್ಟೋ ಬಾರಿ ಗದ್ದಲಗಳಿಂದಲೇ ಅಧಿವೇಶನ ಮುಗಿದಿರುವುದು ಉಂಟು. ಈ ಬಾರಿ ಮೊದಲ ವಾರ ಸರಕಾರದ ಕೆಲವು ವೈಫಲ್ಯಗಳತ್ತ ವಿಪಕ್ಷಗಳ ನಾಯಕರು ಬೆಟ್ಟು ಮಾಡಿದ್ದು, ಉತ್ಪಾದಕತೆ ಉತ್ತಮವಾಗಿಯೇ ಇದೆ. ಆದರೆ ಎರಡನೇ ವಾರ ಶಾಸಕರಲ್ಲಿ ತೀವ್ರ ನಿರುತ್ಸಾಹ ಕಂಡು ಬಂದಿರುವುದು ಸರಿಯಾದ ವರ್ತನೆಯಲ್ಲ.
ಸದ್ಯ ರಾಜ್ಯ ಪ್ರವಾಹದಂಥ ಭೀಕರ ಸಮಸ್ಯೆ ಎದುರಿಸುತ್ತಿದೆ. ಸಿಲಿಕಾನ್ ಸಿಟಿ ಎಂದೇ ಖ್ಯಾತವಾಗಿರುವ ಬೆಂಗಳೂರಿನ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಮಳೆಯಿಂದಾಗಿ ರೈತರು ಬೆಳೆದ ಬೆಳೆ ನೀರಿನಲ್ಲಿ ಕೊಳೆತು ಹೋಗಿದೆ. ಬಹುತೇಕ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಇಂಥ ಹೊತ್ತಲ್ಲಿ ಸರಕಾರ ಮತ್ತು ವಿಪಕ್ಷಗಳು ಒಟ್ಟಾಗಿ, ಕೇಂದ್ರದಿಂದ ಪ್ರವಾಹ ಪರಿಹಾರ ಪಡೆಯುವ ಸಲುವಾಗಿ ಒತ್ತಡ ಹೇರಬೇಕು. ಆದರೆ ಸರಿಯಾಗಿ ಅಧಿವೇಶನಕ್ಕೇ ಬರದೇ ಹೋದರೆ ಸಮಸ್ಯೆ ಕೇಳುವವರು ಯಾರು ಎಂಬ ಪ್ರಶ್ನೆ ಎದುರಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.