ಸುಗಮ ಕಲಾಪ ನಡೆಯಲಿ
ಸಂಸತ್ ಅಧಿವೇಶನ
Team Udayavani, Jun 18, 2019, 5:10 AM IST
ಅಭೂತಪೂರ್ವ ಬಹುಮತದೊಂದಿಗೆ ಎರಡನೇ ಅವಧಿಗೆ ಅಧಿಕಾರಕ್ಕೇರಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಮೊದಲ ಅಧಿವೇಶನ ಪ್ರಾರಂಭವಾಗಿದೆ. ಮೊದಲ ದಿನ ಪ್ರತಿಜ್ಞಾ ವಿಧಿ ಬೋಧನೆಯಂಥ ಸಾಂಪ್ರದಾಯಿಕ ಕಲಾಪಗಳಿಗೆ ಸೀಮಿತವಾಗಿತ್ತು. ನಿಜವಾದ ಅಧಿವೇಶನ ಪ್ರಾರಂಭವಾಗುವುದು ಎರಡನೇ ದಿನದಿಂದ. ಈ ಬಾರಿ ಹಿಂದಿನ ಸಲಕ್ಕಿಂತಲೂ ಹೆಚ್ಚಿನ ಸಂಖ್ಯಾಬಲ ಎನ್‌ಡಿಎಗಿದೆ. ಬಿಜೆಪಿಯೇ 303 ಸಂಸದರನ್ನು ಹೊಂದಿದೆ. ಮಿತ್ರಪಕ್ಷಗಳು ಸೇರಿ 353 ಸದಸ್ಯರನ್ನು ಎನ್‌ಡಿಎ ಹೊಂದಿದ್ದು, ಲೋಕಸಭೆಯಲ್ಲಿ ಮಸೂದೆಗಳ ಅಂಗೀಕಾರಕ್ಕೆ ಯಾವ ಅಡ್ಡಿಯೂ ಇಲ್ಲ. ಆದರೆ ರಾಜ್ಯಸಭೆಯಲ್ಲಿ ಇನ್ನೂ ಎನ್‌ಡಿಎ ಬಹುಮತದಿಂದ ತುಸು ದೂರವಿದೆ.
ಹಿಂದಿನ ಅವಧಿಯಲ್ಲಿ ಅಧಿವೇಶನ ಭಂಗ ಎನ್ನುವುದು ಮಾಮೂಲು ವಿಷಯವಾಗಿತ್ತು. ಯಾವ ಅಧಿವೇಶನವೂ ಪರಿಪೂರ್ಣವಾಗಿ ನಡೆದ ಉದಾಹರಣೆಯಿಲ್ಲ. ಅದರಲ್ಲೂ ಉತ್ತರಾರ್ಧದ ಅಧಿವೇಶನಗಳೆಲ್ಲ ಬಹುಪಾಲು ಗದ್ದಲದಲ್ಲೇ ಕಳೆದುಹೋಗಿವೆ. ಪ್ರಧಾನ ವಿಪಕ್ಷವಾಗಿರುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳೆಲ್ಲ ಸಂಸತ್ತಿನಲ್ಲಿ ಗದ್ದಲ ಎಬ್ಬಿಸುವುದೇ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಎಂಬ ತಪ್ಪು ತಿಳಿವಳಿಕೆ ಹೊಂದಿರುವಂತೆ ವರ್ತಿಸಿದ್ದವು. ಸರಕಾರವನ್ನು ಎದುರಿಸುವುದೆಂದರೆ ಸಂಸತ್ ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿ ಯಾವ ಮಸೂದೆ ಮಂಜೂರು ಆಗದಂತೆ ನೋಡಿಕೊಳ್ಳುವುದು ಎಂಬುದು ಪ್ರತಿಪಕ್ಷಗಳು ಅಳವಡಿಸಿಕೊಂಡ ಕಾರ್ಯಸೂಚಿಯಾಗಿತ್ತು. ಈ ಕಾರಣಕ್ಕಾಗಿಯೇ ತ್ರಿವಳಿ ತಲಾಕ್ ಸೇರಿದಂತೆ ಹಲವು ಮಹತ್ವದ ಮಸೂದೆಗಳ ಜಾರಿಗೆ ಸುಗ್ರೀವಾಜ್ಞೆಯ ದಾರಿ ಹಿಡಿಯಬೇಕಾಯಿತು. ಸಂಸತ್ ಕಲಾಪಗಳನ್ನು ಅಡ್ಡಿಪಡಿಸುವ ಸಂಪ್ರದಾಯ ಹಿಂದೆಯೂ ಇತ್ತು. ಆದರೆ ಆ ದಿನಗಳಲ್ಲಿ ಇದೊಂದು ಬಹಳ ಅಪರೂಪದ ವಿದ್ಯಮಾನವಾಗಿತ್ತು. ತೀರಾ ಅನಿವಾರ್ಯ ಎಂಬ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದ ಸದಸ್ಯರು ಧ್ವನಿ ಎತ್ತರಿಸುತ್ತಿದ್ದರು. ಅನಂತರ ಇದು ಸಂಸದರು ಘೋಷಣೆ ಕೂಗುವುದು, ಕಾಗದ ಪತ್ರಗಳನ್ನು ತೂರುವುದು, ಪೆಪ್ಪರ್ ಸ್ಪ್ರೆàಯಂಥ ವಸ್ತುಗಳನ್ನು ತರುವುದೆಲ್ಲ ಪ್ರತಿಭಟನೆಯ ಅಂಗವಾಯಿತು. ಓರ್ವ ಸಂಸದನಂತೂ ಮಾಜಿ ಮುಖ್ಯಮಂತ್ರಿಯ ರೀತಿಯಲ್ಲಿ ವೇಷ ಧರಿಸಿ ಸಂಸತ್ತಿಗೆ ಬಂದದ್ದು, ಕಲಾಪದ ವೇಳೆಯೇ ಸಂಗೀತ ನುಡಿಸಿದ್ದಕ್ಕೂ ನಮ್ಮ ಸಂಸತ್ತು ಸಾಕ್ಷಿಯಾಗಿದೆ. ಸಂಸತ್ತಿನಲ್ಲಿ ವಿಪಕ್ಷದ ಸಂಸದ ಪ್ರಧಾನಿಯನ್ನು ತಬ್ಬಿ ಕೊಂಡದ್ದು, ಬಳಿಕ ಕಣ್ಣು ಮಿಟುಕಿಸಿದ್ದನ್ನು ಈ ದೇಶದ ಜನತೆ ಹೇವರಿಕೆಯಿಂದ ನೋಡಿದ್ದಾರೆ. ಒಟ್ಟಾರೆಯಾಗಿ ಸಂಸತ್ತಿನಲ್ಲಿ ಏನೇನೆಲ್ಲ ಆಗಬಾರದೋ ಅವೆಲ್ಲವೂ ನೋಡಲು ಸಿಕ್ಕಿದೆ ಎನ್ನುವುದೊಂದು ದುರಂತ.
ಈ ಹಿನ್ನೆಲೆಯಲ್ಲಿ ಈ ಸಲದ ಅಧಿವೇಶನಗಳು ಆ ರೀತಿ ಆಗಬಾರದು ಎಂಬ ಆಶಯವಿದೆ. ಹಿಂದೆ ಸಂಸದರು ತಮಗೆ ಮಾತನಾಡಲು ಅವಕಾಶ ಸಿಗಲಿಲ್ಲ ಎಂಬ ಹತಾಶೆಯಲ್ಲಿ ಗಲಾಟೆ ಎಬ್ಬಿಸುತ್ತಿದ್ದರು ಅಥವಾ ಜನರ ಪರವಾಗಿ ಧ್ವನಿ ಎತ್ತಲು ಸಾಧ್ಯವಾಗಲಿಲ್ಲ ಎಂಬ ನಿರಾಶೆ ಅವರನ್ನು ಕೂಗಾಡುವಂತೆ ಮಾಡುತ್ತಿತ್ತು. ಇಂಥ ಸನ್ನಿವೇಶಗಳನ್ನು ನಿಭಾಯಿಸುವುದು ಸುಲಭ. ಆದರೆ ಪ್ರಚಾರಕ್ಕಾಗಿ ಅಥವಾ ರಾಜಕೀಯ ಲಾಭದ ದುರುದ್ದೇಶ ಇಟ್ಟುಕೊಂಡು ಪೂರ್ವಯೋಜಿತ ತಯಾರಿ ಮಾಡಿಕೊಂಡು ಬಂದು ಕಲಾಪ ಭಂಗ ಮಾಡುವುದನ್ನು ತಡೆಯುವುದು ಬಹಳ ಕಷ್ಟದ ಕೆಲಸ ಎಂದು 1992-97ರವರಗೆ ರಾಜ್ಯಸಭೆಯ ಸಭಾಪತಿಯಾಗಿದ್ದ ಕೆ.ಆರ್. ನಾರಾಯಣನ್ ಉದ್ಗರಿಸಿದ ಮಾತು. ದುರದೃಷ್ಟವೆಂದರೆ ಹಿಂದಿನ ಅವಧಿಯಲ್ಲಿ ನಡೆದಿದ್ದೆಲ್ಲವೂ ನಾರಾಯಣನ್ ಹೇಳಿರುವ ಪೂರ್ವ ಯೋಜಿತ ಕಲಾಪ ಭಂಗಗಳು.
ಆದರೆ ಈ ರೀತಿ ಕಲಾಪ ಭಂಗ ಮಾಡುವುದರಿಂದ ರಾಜಕೀಯವಾಗಿ ಯಾವ ಲಾಭವೂ ಆಗುವುದಿಲ್ಲ ಎನ್ನುವುದನ್ನು ಲೋಕಸಭೆ ಚುನಾವಣೆ ಅಗತ್ಯಕ್ಕಿಂತಲೂ ಹೆಚ್ಚು ಸ್ಪಷ್ಟಪಡಿಸಿದೆ. ವಿರೋಧಿಸಬೇಕೆಂಬ ಏಕೈಕ ಕಾರಣಕ್ಕೆ ವಿರೋಧಿಸಬೇಕೆಂದು ಭಾವಿಸಿದ್ದ ಘಟಾನುಘಟಿ ನಾಯಕರನ್ನೆಲ್ಲ ಮತದಾರರು ಸೋಲಿಸಿ ಮನೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್‌ಗೆ ಸತತ ಎರಡನೇ ಸಲವೂ ಅಧಿಕೃತ ವಿರೋಧ ಪಕ್ಷವಾಗುವ ಅವಕಾಶ ಲಭಿಸಿಲ್ಲ. ಇದನ್ನು ನೋಡಿಕೊಂಡಾದರೂ ಎಲ್ಲ ಪಕ್ಷಗಳು ಸಂಸತ್ ಅಧಿವೇಶನವನ್ನು ಗಂಭೀರವಾಗಿ ಪರಿಗಣಿಸಬೇಕು. ಚುನಾವಣಾ ರ್ಯಾಲಿ ಬೇರೆ, ಸಂಸತ್ ಕಲಾಪ ಬೇರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
ಕಲಾಪದಲ್ಲಿ ಸುಸಂಸ್ಕೃತ ರೀತಿಯಲ್ಲಿ ಚರ್ಚೆಗಳಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಸಂಸತ್ ಸದಸ್ಯನ ಕರ್ತವ್ಯ. ಇನ್ನೊಬ್ಬರ ಮಾತನ್ನು ತಾಳ್ಮೆಯಿಂದ ಕೇಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಸಂಸತ್ತಿನ ಪ್ರತಿ ನಿಮಿಷದ ಕಲಾಪಕ್ಕೆ 29,000 ರೂ. ಖರ್ಚಾಗುತ್ತದೆ. ಈ ಲೆಕ್ಕದಲ್ಲಿ ಕನಿಷ್ಠ ಒಂದು ತಾಸು ಕಲಾಪ ಭಂಗವಾದರೆ ಆಗುವ ನಷ್ಟವೆಷ್ಟು? ಇದು ಈ ದೇಶದ ಪ್ರಜೆಗಳ ಶ್ರಮದ ಹಣ. ಈ ಹಣವನ್ನು ವ್ಯರ್ಥಗೊಳಿಸುವುದು ನೈತಿಕತೆಯಲ್ಲ ಎನ್ನುವ ಅರಿವನ್ನು ಪ್ರತಿಯೊಬ್ಬ ಸಂಸದ ಹೊಂದಿರಬೇಕು. ಸರಕಾರದಲ್ಲಿ ಆಡಳಿತ ಪಕ್ಷಕ್ಕಿರುವಷ್ಟೇ ಮಹತ್ವ ವಿಪಕ್ಷಕ್ಕೂ ಇದೆ. ಸದ್ಯ ವಿಪಕ್ಷ ಸಂಖ್ಯಾಬಲದಲ್ಲಿ ತೀರಾ ದುರ್ಬಲವಾಗಿದೆ ಎನ್ನುವುದು ನಿಜ. ಆದರೆ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಕ್ರಿಯಾಶೀಲ, ರಚನಾತ್ಮಕ ವಿಪಕ್ಷವಾಗಲು ಸಂಖ್ಯಾಬಲವೊಂದೇ ಮುಖ್ಯವಲ್ಲ. ಈ ಮಾತನ್ನು ಸ್ವತಃ ಪ್ರಧಾನಿಯೇ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.