ಇನ್ನಷ್ಟು ವಿದ್ಯಾರ್ಥಿಗಳು ಕನ್ನಡದಲ್ಲೇ ನೀಟ್ ಬರೆಯುವಂತಾಗಲಿ
Team Udayavani, Sep 10, 2022, 6:00 AM IST
ಇತ್ತೀಚೆಗಷ್ಟೇ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್)ಯ ಫಲಿತಾಂಶ ಹೊರಬಿದ್ದಿದ್ದು, 1,193 ಮಂದಿ ವಿದ್ಯಾರ್ಥಿಗಳು ಕನ್ನಡದಲ್ಲಿ ಪರೀಕ್ಷೆ ಬರೆದಿರುವುದು ಗೊತ್ತಾಗಿದೆ. ನೀಟ್‌ನಂಥ ಪ್ರವೇಶ ಪರೀಕ್ಷೆಗಳಲ್ಲಿ ಮಾತೃಭಾಷೆಗೆ ಪ್ರಾತಿನಿಧ್ಯ ನೀಡಬೇಕು ಎಂಬ ಒತ್ತಡದಿಂದಾಗಿ ಕೇಂದ್ರ ಸರಕಾರ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು.
ವಿಚಿತ್ರವೆಂದರೆ ಬೇರೆ ಭಾಷೆಗಳಿಗೆ ಹೋಲಿಸಿದರೆ ಪರೀಕ್ಷೆ ಬರೆದ ಕನ್ನಡಿಗರ ಸಂಖ್ಯೆ ಕಡಿಮೆ. ಹಾಗೆಯೇ ಇತರ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆದ ಲೆಕ್ಕಾಚಾರಕ್ಕೆ ಹೋಲಿಸಿದರೆ ಈ ವರ್ಷ ಕೊಂಚ ಹೆಚ್ಚಾಗಿದೆ ಎಂಬುದೇ ಸಮಾಧಾನಕರ ಅಂಶ.
ಪ್ರಸಕ್ತ ವರ್ಷ 18.7 ಲಕ್ಷ ವಿದ್ಯಾರ್ಥಿಗಳು ನೀಟ್‌ಗಾಗಿ ನೋಂದಣಿ ಮಾಡಿಸಿಕೊಂಡಿದ್ದು, ಇದರಲ್ಲಿ 17.64 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅಲ್ಲದೆ ರ್‍ಯಾಂಕ್ ಬಂದವರಲ್ಲಿ ಈ ಬಾರಿ ವಿದ್ಯಾರ್ಥಿ ನಿಯರೇ ಹೆಚ್ಚಾಗಿದ್ದಾರೆ. ಒಟ್ಟು 4,29,160 ಬಾಲಕರು ರ್‍ಯಾಂಕ್ ಗಳಿಸಿದ್ದರೆ, 5,63,902 ವಿದ್ಯಾರ್ಥಿನಿಯರು ರ್‍ಯಾಂಕ್ ಪಡೆದುಕೊಂಡಿದ್ದಾರೆ.
ಈ ಮೊದಲೇ ಹೇಳಿದ ಹಾಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಾದೇಶಿಕ ಭಾಷೆಗಳನ್ನು ಆರಿಸಿಕೊಂಡವರ ಸಂಖ್ಯೆ ಹೆಚ್ಚಾಗಿಯೇ ಇದೆ. ಪರೀಕ್ಷೆ ಬರೆದವರಲ್ಲಿ ಒಟ್ಟು 14,76,024 ವಿದ್ಯಾರ್ಥಿಗಳು ಇಂಗ್ಲಿಷ್ ಆರಿಸಿಕೊಂಡಿದ್ದಾರೆ. ಇನ್ನು 2,58,827 ವಿದ್ಯಾರ್ಥಿಗಳು ಹಿಂದಿಯಲ್ಲಿ ಪರೀಕ್ಷೆ ಬರೆದಿದ್ದಾರೆ. ಹಾಗೆಯೇ ಇತರ ಪ್ರಾದೇಶಿಕ ಭಾಷೆಗಳಲ್ಲಿ 1,37,492 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 2019ರಲ್ಲಿ 1,34,550, 2020ರಲ್ಲಿ 1,29,763, 2021ರಲ್ಲಿ 1,20,616 ವಿದ್ಯಾರ್ಥಿಗಳು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆದಿದ್ದರು.
ಭಾಷೆಗಳ ವಿಚಾರವಾಗಿ ಗಮನಿಸುವುದಾದರೆ ಗುಜರಾತಿಯಲ್ಲಿ 49,638, ಬಂಗಾಲಿ 42,663, ತಮಿಳು 31,965, ಕನ್ನಡ 1,193, ಮರಾಠಿ 2,368, ಉರ್ದು 1,910, ಅಸ್ಸಾಮಿ 4,063, ತೆಲುಗು ಭಾಷೆಯಲ್ಲಿ 1,264 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ವಿಚಿತ್ರವೆಂದರೆ ಆರಂಭದಿಂದಲೂ ಕನ್ನಡ ಸಹಿತ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಆಯಾ ರಾಜ್ಯಗಳಲ್ಲಿ ಭಾರೀ ಒತ್ತಡ ಹೇರಲಾಗಿತ್ತು. ಕನ್ನಡ ಮಾಧ್ಯಮದಲ್ಲಿ ಅಥವಾ ಇತರ ಪ್ರಾದೇಶಿಕ ಭಾಷಾ ಮಾಧ್ಯಮಗಳಲ್ಲಿ ಶಿಕ್ಷಣ ಪಡೆದವ ರಿಗೆ ಇಂಗ್ಲಿಷ್ ಕಷ್ಟ. ಹೀಗಾಗಿ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂಬ ಆಗ್ರಹ ಕೇಳಿಬಂದಿತ್ತು. ಹೀಗಾಗಿ ಕೇಂದ್ರ ಸರಕಾರ ಒಟ್ಟು 13 ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು. ಆದರೆ ಹಿಂದಿ, ಗುಜರಾತಿ, ಬೆಂಗಾಲಿ ಮತ್ತು ತಮಿಳು ಭಾಷೆಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರಾದೇಶಿಕ ಭಾಷೆಗಳನ್ನು ಏಕೆ ಆಯ್ಕೆ ಮಾಡಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ. ಯಾಕೆ ಹೀಗೆ ಎಂದು ಪರಿಶೀಲಿಸಿದರೆ, ಕನ್ನಡದಲ್ಲಿ ಅಧ್ಯಯನ ಮಾಡುವುದಕ್ಕೆ ವಿದ್ಯಾರ್ಥಿಗಳಿಗೆ ಸರಿಯಾದ ಅಧ್ಯಯನ ಸಾಮಗ್ರಿಗಳು ಸಿಗದೆ ಇರುವುದು, ಕನ್ನಡದಲ್ಲಿ ಪಾಠ ನಡೆಯದೆ ಇರುವುದು ಮಕ್ಕಳ ಹಿಂಜರಿಕೆಗೆ ಕಾರಣ ಎಂಬುದೂ ಗೊತ್ತಾಗಿದೆ.
ಹೀಗಾಗಿ ಸರಕಾರಗಳು ಇತ್ತ ಗಮನಹರಿಸಬೇಕು. ಪ್ರಾದೇಶಿಕ ಭಾಷೆಗಳಲ್ಲಿ ಇಂಥ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹೆಚ್ಚು ಒತ್ತು ನೀಡಬೇಕು. ಇದಕ್ಕೆ ಬೇಕಾದ ಅಧ್ಯಯನ ಸಾಮಗ್ರಿಗಳನ್ನು ಒದಗಿಸುವ ಕೆಲಸ ಮಾಡಬೇಕು. ಆಗಷ್ಟೇ ಪ್ರಾದೇಶಿಕತೆಗೆ ಅರ್ಥ ಬರುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.