ವೇಗ, ಉತ್ಸಾಹ ನಿರಂತರವಾಗಿರಲಿ
100 ದಿನ ಪೂರೈಸಿದ ಎನ್‌ಡಿಎ 2.0 ಸರ್ಕಾರ
Team Udayavani, Sep 7, 2019, 5:32 AM IST
ನರೇಂದ್ರ ಮೋದಿ ನೇತೃತ್ವದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಎನ್‌ಡಿಎ ಸರಕಾರ 100 ದಿನಗಳನ್ನು ಪೂರೈಸಿದೆ. ಸರಕಾರದ ನಿರ್ವಹಣೆ ಯನ್ನು ಮೌಲ್ಯಮಾಪನ ಮಾಡಲು 100 ದಿನಗಳ ಸಾಧನೆ ಸರಿಯಾದ ಮಾನದಂಡ ಅಲ್ಲದಿದ್ದರೂ ಇಷ್ಟು ದಿನಗಳಲ್ಲಿ ಸರಕಾರ ಯಾವ ರೀತಿ ಆಡಳಿತ ನಡೆಸಿದೆ ಎಂಬ ಅಂಶ ಅದರ ಭವಿಷ್ಯದ ನಡೆಗೆ ಅಡಿಪಾಯವಾಗಬಲ್ಲದು. 100 ದಿನಗಳಲ್ಲಿ ವೈಫಲ್ಯಗಳಿಗಿಂತ ಸಾಧನೆಗಳ ತೂಕವೇ ಹೆಚ್ಚು ಇದೆ ಎನ್ನುವುದು ಮೋದಿ ಸರಕಾರದ ಗುಣಾತ್ಮಕ ಅಂಶ.
ರಾಜಕೀಯವಾಗಿ ಸರಕಾರ ಈಗ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠವಾಗಿದೆ. ಚುನಾವಣೆಯಲ್ಲಿ ಗಳಿಸಿದ ಅಭೂತಪೂರ್ವ ಗೆಲುವು ಹಲವು ದಿಟ್ಟ ನಿರ್ಧಾರ ಗಳನ್ನು ಕೈಗೊಳ್ಳಲು ಅನುಕೂಲ ಕಲ್ಪಿಸಿಕೊಟ್ಟಿದೆ. ರಾಜಕೀಯ ಸ್ಥಿರತೆಯಿಂದಾಗಿ ಸುಧಾರಣೆಗಳನ್ನು ಕ್ಷಿಪ್ರವಾಗಿ ಮತ್ತು ಅಡಚಣೆ ರಹಿತವಾಗಿ ಜಾರಿಗೆ ತರಲು ಸಾಧ್ಯವಾಗಿದೆ. ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮೋದಿ ಭವಿಷ್ಯದ ದಿಕ್ಸೂಚಿಯನ್ನು ನೀಡಿದ್ದು, ಇದರ ಅನುಷ್ಠಾನಕ್ಕೆ ಅವರ ತಂಡ ಬದ್ಧತೆಯಿಂದ ಕೆಲಸ ಮಾಡುತ್ತಿದೆ.
ಸಂಸತ್ತಿನ ಮೊದಲ ಅಧಿವೇಶನವೇ ಮೋದಿ ಸರಕಾರದ ಯಶೋಗಾಥೆಗೆ ನಾಂದಿ ಹಾಡಿದೆ. ಹಲವು ವರ್ಷಗಳ ಬಳಿಕ ಶೇ. 100ಕ್ಕೂ ಹೆಚ್ಚು ಉತ್ಪಾದಕತೆಯನ್ನು ದಾಖಲಿಸಿದ ಅಧಿವೇಶನ ಎಂಬ ಹಿರಿಮೆಗೂ ಇದು ಪಾತ್ರವಾಗಿದೆ. ತ್ರಿವಳಿ ತಲಾಖ್ ನಿಷೇಧ ಸೇರಿದಂತೆ ಹಲವು ಮಹತ್ವದ ಮಸೂದೆಗಳನ್ನು ಈ ಅಧಿವೇಶನದಲ್ಲಿ ಮಂಜೂರು ಮಾಡಿಕೊಳ್ಳಲಾಗಿದೆ.
ಇದಕ್ಕೂ ಮಿಗಿಲಾಗಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ 370ನೇ ವಿಧಿಯನ್ನು ನಿಷ್ಕ್ರಿಯಗೊಳಿಸಿದ ಕಾರಣಕ್ಕೆ ಈ ಅಧಿವೇಶನ ಹೆಚ್ಚು ಸ್ಮರಣೀಯವಾಗಿರಲಿದೆ. ಆ.5ರಂದು ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ 370ನೇ ವಿಧಿಯನ್ನು ನಿಷ್ಕ್ರಿಯಗೊಳಿಸುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ನಿರ್ಣಯವನ್ನು ಮಂಡಿಸಿದ್ದರು. ಈ ದಿನ ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ದಿನವಾಗಿ ದಾಖಲಾಗಿದೆ. ಆದರೆ ಕಾಶ್ಮೀರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಸರಕಾರದ ಸತ್ವಪರೀಕ್ಷೆ ಇನ್ನೂ ಮುಗಿದಿಲ್ಲ.
ಸದ್ಯ ಸೇನೆಯ ಬಿಗು ಕಣ್ಗಾವಲಿನಲ್ಲಿ ಕಣಿವೆ ರಾಜ್ಯ
ಇರುವುದರಿಂದ ದೊಡ್ಡ ಮಟ್ಟದ ಹಿಂಸಾಚಾರ ನಡೆದಿಲ್ಲ. ಆದರೆ ಗೃಹ ಬಂಧನದಲ್ಲಿರುವ ನಾಯಕರನ್ನು ಬಿಡುಗಡೆಗೊಳಿಸಿದ ಬಳಿಕ ಉದ್ಭವವಾಗಬಹುದಾದ ಬಿಗುವಿನ ಪರಿಸ್ಥಿತಿಯನ್ನು ಸರಕಾರ ಯಾವ ರೀತಿ ನಿಭಾಯಿಸಲಿದೆ ಎನ್ನುವುದರ ಮೇಲೆ ಈ ಮಹತ್ವದ ನಿರ್ಧಾರದ ಸಾಧಕಬಾಧಕ ತಿಳಿಯಲಿದೆ.
ವಿದೇಶಾಂಗ ಸಂಬಂಧಗಳನ್ನು ಬಲಗೊಳಿಸುವ ವಿಚಾರಗಳಿಗೆ ಸಂಬಂಧಪಟ್ಟಂತೆ ಮೋದಿಯೇ ಮುಂಚೂಣಿಯಲ್ಲಿ ನಿಂತು ವ್ಯವಹರಿಸು ತ್ತಿದ್ದಾರೆ. ಕಾಶ್ಮೀರ ನಿರ್ಧಾರಕ್ಕೆ ಸಂಬಂಧಪಟ್ಟು ಅಂತಾರಾಷ್ಟ್ರೀಯ ಸಮುದಾಯದ, ಅದರಲ್ಲೂ ನಿರ್ದಿಷ್ಟವಾಗಿ ಮುಸ್ಲಿಂ ದೇಶಗಳ ಬೆಂಬಲವನ್ನು ಪಡೆದುಕೊಳ್ಳಲು ಸಾಧ್ಯವಾಗಿರುವುದು ಸರಕಾರದ ರಾಜತಾಂತ್ರಿಕ ನೈಪುಣ್ಯಕ್ಕೆ ಸಿಕ್ಕಿರುವ ಗೆಲುವು. ಅಮೆರಿಕ, ರಷ್ಯಾ ಸೇರಿ ಕೆಲವು ದೇಶಗಳಿಗೆ ಸ್ವತಃ ಮೋದಿಯೇ ಕಾಶ್ಮೀರ ವಿಚಾರವನ್ನು ಮನವರಿಕೆ ಮಾಡಿಕೊಟ್ಟಿದ್ದರು.
ಉಗ್ರ ವಿರೋಧಿ ಕಾಯಿದೆಯನ್ನು ಇನ್ನಷ್ಟು ಕಠಿಣವಾಗಿಸಿದ್ದು, ಹಣಕಾಸು ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಬಲಿಷ್ಠ ಕಾನೂನು ತಂದಿರುವುದು, ಮಕ್ಕಳ ಮೇಲೆ ಲೈಂಗಿಕ ಆಕ್ರಮಣ ಎಸಗುವವರಿಗೆ ಮರಣ ದಂಡನೆ ವಿಧಿಸುವ ಕಾನೂನು ಜಾರಿಗೆ ಬಂದಿರುವುದು, ಕಾರ್ಮಿಕ ಕಾನೂನು ಪರಿಷ್ಕರಿಸಿರುವುದೆಲ್ಲ 100 ದಿನಗಳಲ್ಲಿ ಆಗಿರುವ ಉತ್ತಮ ಕೆಲಸಗಳು. ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆಯೊಡ್ಡಿರುವುದನ್ನು ಕೂಡ ಸರಕಾರದ ಸಾಧನೆಯ ಪಟ್ಟಿಗೆ ಸೇರಿಸಿಕೊಳ್ಳಬಹುದು.
ಇದೇ ವೇಳೆ ದೇಶದ ಆರ್ಥಿಕತೆ ಕುಸಿಯುತ್ತಿರುವುದು ಮಾತ್ರ ಸರಕಾರಕ್ಕೆ ತೀವ್ರ ಸಂಕಟ ಉಂಟು ಮಾಡಿದೆ. ವಾಹನ ಉದ್ಯಮ, ರಿಯಲ್ ಎಸ್ಟೇಟ್, ಉತ್ಪಾದನೆ, ರಫ್ತು ಸೇರಿ ಆರ್ಥಿಕತೆಯ ಜೀವಾಳ ಎಂದು ಪರಿಗಣಿಸಲ್ಪಡುವ ಹಲವು ಕ್ಷೇತ್ರಗಳು ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿ ನಲುಗುತ್ತಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕತೆಗೆ ಪುನಶ್ಚೇತನ ನೀಡುವ ಸಲುವಾಗಿ ಹಲವು ಸುಧಾರಣಾ ಕ್ರಮಗಳನ್ನು ಘೋಷಿಸಿದ್ದರೂ ಇವೆಲ್ಲ ದೀರ್ಘಾವಧಿಯಲ್ಲಿ ಪರಿಣಾಮ ಬೀರುವ ಕ್ರಮಗಳು. ತತ್‌ಕ್ಷಣಕ್ಕೆ ಆರ್ಥಿಕತೆಯ ಚೇತರಿಕೆಗೆ ಅಗತ್ಯವಿರುವ ಸುಧಾರಣಾ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವುದು ಸರಕಾರದ ಮುಂದಿರುವ ದೊಡ್ಡ ಸವಾಲು. ಕೃಷಿ ಕ್ಷೇತ್ರದ ಸುಧಾರಣೆಗಾಗಿ ರೈತರಿಗೆ ವಾರ್ಷಿಕ 6000 ರೂ. ಸಹಾಯಧನ, ಜಲಸಂರಕ್ಷಣೆಯ ಅರಿವು ಮೂಡಿಸಲು ಪ್ರತ್ಯೇಕ ಜಲಶಕ್ತಿ ಸಚಿವಾಲಯ ಸ್ಥಾಪಿಸಿ ಅದರ ಮೂಲಕ ಜಲಶಕ್ತಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇಂಥ ಜನೋಪಯೋಗಿ ಕಾರ್ಯಕ್ರಮಗಳ ಯಶಸ್ಸು ಸರಕಾರದ ಭವಿಷ್ಯ ನಿರ್ಧರಿಸಲಿವೆ. ಚಂದ್ರಯಾನ-2 ವೈಜ್ಞಾನಿಕ ಕ್ಷೇತ್ರದ ಮಹತ್ವದ ಸಾಧನೆಯಾಗಿ ದಾಖಲೆಯಾಗಲಿದೆ. ಒಟ್ಟಾರೆಯಾಗಿ ಮೊದಲ 100 ದಿನಗಳು ಆಶಾದಾಯಕ ವಾಗಿದ್ದು, ಇದೇ ವೇಗ ಮತ್ತು ಉತ್ಸಾಹವನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯ ಮತ್ತು ಅನಿವಾರ್ಯ ಸರಕಾರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.