ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ
Team Udayavani, Apr 17, 2024, 6:00 AM IST
ದಶಕಗಳ ಹಿಂದೆ ಯುದ್ಧ ಎಂದರೆ ಎರಡು ರಾಷ್ಟ್ರಗಳ ನಡುವೆ ಅಥವಾ ಅವುಗಳ ಮಿತ್ರರಾಷ್ಟ್ರಗಳ ನಡುವಿನ ಸಮರ ಎಂದು ನಿಟ್ಟುಸಿರು ಬಿಡಬಹುದಾಗಿತ್ತು. ಇತ್ತೀ ಚಿನ ದಶಕಗಳಲ್ಲಂತೂ ಇಡೀ ಜಗತ್ತೇ ಒಂದು ರಾಷ್ಟ್ರವಾಗಿ ಪರಿಗಣಿಸಲ್ಪಡುವಾಗ ವಿಶ್ವದ ಯಾವುದೇ ಮೂಲೆಯಲ್ಲಿ ಯುದ್ಧ ನಡೆದರೂ ಅದರ ಪ್ರತ್ಯಕ್ಷ ಅಥವಾ ಪರೋಕ್ಷ ಪರಿಣಾಮವನ್ನು ಜಾಗತಿಕ ಸಮುದಾಯ ಎದುರಿಸಬೇಕಾಗುತ್ತದೆ. ವ್ಯಾಪಾರ, ವಾಣಿಜ್ಯ ಕ್ಷೇತ್ರದಲ್ಲಿ ವಿಶ್ವರಾಷ್ಟ್ರಗಳು ಪರಸ್ಪರ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿರುವಾಗ ವಿಶ್ವದಲ್ಲಿನ ಪ್ರತಿಯೊಂದೂ ಆಗುಹೋಗುಗಳ ಮೇಲೆ ಯುದ್ಧದಂತಹ ಬೆಳವಣಿಗೆಗಳು ಪರಿಣಾಮ ಬೀರುತ್ತದೆ. ಇದಕ್ಕೆ ಕಳೆ ದೆರಡು ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ನಡುವಣ ಕದನ ಮತ್ತು ಕಳೆದ ಏಳು ತಿಂಗಳುಗಳಿಂದ ಇಸ್ರೇಲ್-ಹಮಾಸ್ ಉಗ್ರರ ನಡುವೆ ನಡೆ ಯುತ್ತಿರುವ ಯುದ್ಧವೇ ಸಾಕ್ಷಿ. ಇದೇ ವೇಳೆ ಈ ಎರಡೂ ಯುದ್ಧಗಳ ಸಂದರ್ಭ ದಲ್ಲಿ ಪದೇಪದೆ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಸಾಧ್ಯತೆಗಳ ಕುರಿತಂತೆ ಜಾಗತಿಕವಾಗಿ ಆತಂಕ ಎದುರಾಗುತ್ತಲೇ ಇದೆ. ಈಗ ಇರಾನ್ ಮತ್ತು ಇಸ್ರೇಲ್ ನಡುವಣ ಸಂಘರ್ಷ ಈ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ಇಸ್ರೇಲ್-ಇರಾನ್ ನಡುವೆ ಸದ್ಯ ಪ್ರಕ್ಷುಬ್ಧ ಪರಿಸ್ಥಿತಿ ನೆಲೆಸಿದೆ. ವಿಶ್ವಸಂಸ್ಥೆ, ವಿಶ್ವದ ಬಲಾಡ್ಯ ದೇಶಗಳ ಮನವಿ, ಒತ್ತಡಗಳ ಹಿನ್ನೆಲೆಯಲ್ಲಿ ಸದ್ಯಕ್ಕಂತೂ ಎರಡೂ ರಾಷ್ಟ್ರ ಗಳು ಒಂದಿಷ್ಟು ತಾಳ್ಮೆಗೆ ಶರಣಾಗಿವೆ. ಇದರ ಹೊರತಾಗಿಯೂ ಇಸ್ರೇಲ್, ಇರಾನ್ ನಡೆಸಿರುವ ದಾಳಿಗೆ ತೀಕ್ಷ್ಣ ಪ್ರತ್ಯುತ್ತರ ನೀಡುವುದಾಗಿ ಸಾರಿದೆ. ಇಸ್ರೇಲ್‌ನ ಈ ಹೇಳಿಕೆ ಜಾಗತಿಕವಾಗಿ ಆತಂಕಕ್ಕೆ ಕಾರಣವಾಗಿದ್ದು, ವಿಶ್ವ ರಾಷ್ಟ್ರಗಳು ಮಧ್ಯ ಪ್ರಾಚ್ಯದಲ್ಲಿನ ಬೆಳವಣಿಗೆಗಳತ್ತ ಆತಂಕದ ನೋಟ ಬೀರಿವೆ.
ಒಂದು ವೇಳೆ ಯಾವುದೇ ರಾಷ್ಟ್ರದ ನಾಯಕ ಮತಿಹೀನನಾಗಿ ಅಣ್ವಸ್ತ್ರಗಳನ್ನು ಶತ್ರು ರಾಷ್ಟ್ರದ ಮೇಲೆ ಪ್ರಯೋಗಿಸಿದ್ದೇ ಆದಲ್ಲಿ ಅದು ಘನಘೋರ ದುರಂತವಾಗಿ ಮಾರ್ಪಡಲಿದೆ. ಈಗಾಗಲೇ ವಿಶ್ವ ಎರಡು ಬಾರಿ ಈ ಪರಮಾಣು ಶಸ್ತ್ರಾಸ್ತ್ರಗಳ ಕರಾಳತೆಯನ್ನು ಕಂಡಿದೆ. ಇಂದಿಗೂ ಸಂತ್ರಸ್ತ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಜನರು ಇದರ ಭಯಾನಕ ಪರಿಣಾಮಗಳನ್ನು ಅನುಭವಿಸುತ್ತಲೇ ಇದ್ದಾರೆ. ಅಣ್ವ ಸ್ತ್ರವನ್ನು ಪ್ರಯೋಗಿಸಿದ್ದೇ ಆದಲ್ಲಿ ಕ್ಷಣಮಾತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಸಾವು- ನೋವು, ಆಸ್ತಿ ನಷ್ಟ ಉಂಟು ಮಾಡಲಿವೆ. ಇದರ ದೀರ್ಘಕಾಲೀನ ಪರಿಣಾ ಮಗಳಂತೂ ಇನ್ನೂ ಭಯಂಕರ. ಪರಮಾಣು ದಾಳಿ ನಡೆದ ದೇಶ ಮಾತ್ರವಲ್ಲದೆ ಸುತ್ತಮುತ್ತಲಿನ ದೇಶಗಳ ಜನರು ತಮ್ಮ ಜೀವನಪರ್ಯಂತ ಇನ್ನಿಲ್ಲದ ಆರೋಗ್ಯ ಸಮಸ್ಯೆಗಳಿಂದ ಬಳಲುವುದರ ಜತೆಯಲ್ಲಿ ಮುಂದಿನ ಪೀಳಿಗೆಗಳೂ ಇದರ ಭೀಕರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಅಣ್ವಸ್ತ್ರಗಳನ್ನು ಪ್ರಯೋಗಿಸಿದ ಸಂದರ್ಭದಲ್ಲಿ ಹೊರಸೂಸುವ ವಿಕಿರಣಗಳು ಇಡೀ ಜೀವಸಂಕುಲವನ್ನು ಕಾಡಿ ದರೆ, ಪರಿಸರ ವ್ಯವಸ್ಥೆಯನ್ನು ಸಂಪೂರ್ಣ ಹದಗೆಡಿಸಲಿದೆ. ಹೀಗೆ ಅಣ್ವಸ್ತ್ರಗಳ ಬಳಕೆ ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಸಹಿತ ಸರ್ವನಾಶಕ್ಕೆ ಕಾರಣವಾಗಲಿದೆ.
ಈ ಎಲ್ಲ ಕರಾಳ ಪರಿಣಾಮಗಳ ಅರಿವಿದ್ದೂ ಯಾವುದೇ ರಾಷ್ಟ್ರ ಪರಮಾಣು ಶಸ್ತ್ರಾಸ್ತ್ರಗಳನ್ನು ತನ್ನ ಶತ್ರು ರಾಷ್ಟ್ರದ ಮೇಲೆ ಪ್ರಯೋಗಿಸಲು ಮುಂದಾದಲ್ಲಿ ಅದಕ್ಕಿಂತ ದೊಡ್ಡ ಪ್ರಮಾದ ಮತ್ತೂಂದಿರಲಾರದು. ಇಂತಹ ಅವಿವೇಕದ ಕೃತ್ಯಗಳು ಕೇವಲ ಶತ್ರು ಪಾಳಯದ ನಾಶಕ್ಕೆ ಕಾರಣವಾಗುವುದರ ಜತೆಯಲ್ಲಿ ತನ್ನ ಬುಡಕ್ಕೆ ಕೊಳ್ಳಿ ಇಟ್ಟಂತೆ ಎಂಬುದನ್ನು ಯಾವೊಂದು ರಾಷ್ಟ್ರವೂ ಮರೆಯಬಾರದು. ಈ ಹಿನ್ನೆಲೆಯಲ್ಲಿ ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ಒಂದಿಷ್ಟು ವಿವೇಕಯುತವಾಗಿ ವರ್ತಿ ಸಬೇಕು. ಹಾದಿ ತಪ್ಪುತ್ತಿರುವ ರಾಷ್ಟ್ರಗಳು, ಮತ್ತವುಗಳ ನಾಯಕರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಮತ್ತು ವಿಶ್ವಸಂಸ್ಥೆ ಕಾರ್ಯೋನ್ಮುಖವಾಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.