ತೈಲ ದರ ಇಳಿಯಲಿ
Team Udayavani, Oct 16, 2018, 6:00 AM IST
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಏರುತ್ತಲೇ ಇದ್ದು, ಇದರ ಜತೆಗೆ ಅಮೆರಿಕದ ಡಾಲರ್ ಮೌಲ್ಯವೂ ಏರಿಕೆಯಾಗುತ್ತಿರುವುದು ಭಾರತದಲ್ಲಿನ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ದರ ಏರಿಕೆಗೆ ಕಾರಣವಾಗಿದೆ. 10 ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ 2.50 ರೂ.ನಷ್ಟು ದರ ಇಳಿಕೆ ಮಾಡಿದ್ದರೂ, ಮತ್ತೆ ದರ ಏರಿದ ಹಿನ್ನೆಲೆಯಲ್ಲಿ ಗ್ರಾಹಕ ಜೇಬಿಗೆ ಹೊರೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿದದ್ದಕ್ಕಿಂತ ಏರಿಕೆಯಾಗಿದ್ದೇ ಹೆಚ್ಚು.
ತೈಲ ದರ ಹೆಚ್ಚಳದಿಂದಾಗಿ ಹಣದುಬ್ಬರವೂ ಏರಿಕೆಯಾಗಿದ್ದು, ಗ್ರಾಹಕ ಮತ್ತಷ್ಟು ಕಂಗಾಲಾಗಿದ್ದಾನೆ. ಈ ಹಿನ್ನೆಲೆಯಲ್ಲಿಯೇ ಸೋಮವಾರ ನಡೆದ ತೈಲೋತ್ಪನ್ನ ಉತ್ಪಾದನೆ ಮಾಡುವಂಥ 40 ದೇಶಗಳ ಪ್ರತಿನಿಧಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಮಾತುಕತೆ ನಡೆಸಿರುವುದು ಉತ್ತಮ ನಡೆ. ಅಲ್ಲದೆ ಈ ಸಂದರ್ಭದಲ್ಲಿ ಅವರು ಹೇಳಿರುವ ಮಾತುಗಳೂ ಅಷ್ಟೇ ಪ್ರಸ್ತುತವಾಗಿವೆ ಕೂಡ. ಸದ್ಯ ತೈಲ ಖರೀದಿ ವಿಚಾರದಲ್ಲಿ ಭಾರತ ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿದೆ. ಉತ್ಪಾದಕ ದೇಶಗಳು, ಗ್ರಾಹಕರ ಹಿತಾಸಕ್ತಿ ಕಾಯುವುದು ಅತೀ ಮುಖ್ಯ. ಏಕೆಂದರೆ, ಗ್ರಾಹಕರು ಎಂದಿಗೂ ಉತ್ಪಾದಕರ ಪಾಲಿಗೆ ಬಂಗಾರದ ಮೊಟ್ಟೆಗಳೇ. ಹಾಗಂತ ದಿನದಿಂದ ದಿನಕ್ಕೆ ಕಚ್ಚಾ ತೈಲ ದರ ಏರಿಕೆ ಮಾಡಿಕೊಂಡು ಹೋದರೆ, ಗ್ರಾಹಕನ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂದಿದ್ದಾರೆ. ಜತಗೆ ಈ ಏರಿಕೆಯಿಂದಾಗಿ ಭಾರತದಂಥ ಆರ್ಥಿಕತೆ ಹೊಂದಿರುವ ದೇಶಗಳ ಮಾರುಕಟ್ಟೆಗೂ ಹೊಡೆತ ಬೀಳುತ್ತದೆ ಎಂಬ ಅರಿವನ್ನೂ ಈ ದೇಶಗಳಿಗೆ ಮಾಡಿಸಿದ್ದಾರೆ.
ಸೋಮವಾರದ ಸಭೆಯ ಇನ್ನೊಂದು ಪ್ರಮುಖಾಂಶವೆಂದರೆ, ಪಾವತಿ ವ್ಯವಸ್ಥೆಯನ್ನು ಪುನರ್‌ಪರಿಶೀಲನೆ ಮಾಡಬೇಕು ಎಂಬ ಭಾರತದ ಆಗ್ರಹ. ಒಂದು ಲೆಕ್ಕಾಚಾರದಲ್ಲಿ ಇದು ಉತ್ತಮವಾದದ್ದು, ಸದ್ಯ ಜಾಗತಿಕ ಆರ್ಥಿಕ ಗೊಂದಲಗಳಿಂದಾಗಿ ಅಮೆರಿಕದ ಡಾಲರ್ ಮೌಲ್ಯ ಹೆಚ್ಚುತ್ತಲೇ ಇದೆ. ಹೀಗಾಗಿ ಡಾಲರ್‌ನಲ್ಲೇ ವ್ಯವಹಾರ ಮಾಡುವ ಭಾರತದಂಥ ದೇಶಗಳಿಗೆ ಹೆಚ್ಚಿನ ನಷ್ಟ ಖಂಡಿತ. ಒಂದು ವೇಳೆ ಸ್ಥಳೀಯ ಕರೆನ್ಸಿ ಆಧರಿತವಾಗಿ ವ್ಯವಹಾರ ಮಾಡಿದಲ್ಲಿ ನಷ್ಟ ಕಡಿಮೆಯಾಗಬಹುದು ಎಂಬುದು ಭಾರತದ ಚಿಂತನೆ. ಈ ಹಿಂದೆಯೇ ಕೇಂದ್ರ ಸರ್ಕಾರ ತೈಲೋತ್ಪನ್ನ ದೇಶಗಳ ಮುಂದೆ ಈ ಪ್ರಸ್ತಾಪ ಇಟ್ಟಿತ್ತು. ಅಮೆರಿಕದ ದಿಗ್ಬಂಧನ ಎದುರಿಸುತ್ತಿರುವ ಇರಾನ್, ರಷ್ಯಾ, ವೆನೆಜುವೆಲಾ ದೇಶಗಳ ಜತೆಯಲ್ಲೂ ರೂಪಾಯಿ ಲೆಕ್ಕಾಚಾರದಲ್ಲೇ ವಹಿವಾಟು ಮಾಡುವ ಬಗ್ಗೆಯೂ ಗಂಭೀರ ಚಿಂತನೆ ನಡೆಸುತ್ತಿದೆ. ಹೀಗಾದಾಗಲೂ ತೈಲ ದರ ಇಳಿಕೆಯಾಗುವ ಸಂಭವವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು ತೈಲ ದರ ಹೆಚ್ಚಳದ ಹಿಂದೆ ಅಮೆರಿಕದ ಪಾತ್ರ ಗಣನೀಯವಾಗಿದೆ. ಸದ್ಯ ಅಮೆರಿಕ, ಪಾಶ್ಚಿಮಾತ್ಯ ದೇಶಗಳು, ಸೌದಿ ಅರೆಬಿಯಾ ವಿರುದ್ಧ ನಿಂತಿವೆ. ಟರ್ಕಿಯ ಇಸ್ತಾಂಬುಲ್‌ನಲ್ಲಿ ಅಮೆರಿಕದ ಪತ್ರಕರ್ತರೊಬ್ಬರು ಹತ್ಯೆಗೀಡಾಗಿದ್ದು, ಇದು ಈ ದೇಶಗಳ ನಡುವೆ ವೈಮನಸ್ಸು ಉಂಟಾಗಲು ಕಾರಣವಾಗಿದೆ. ಒಂದು ವೇಳೆ ಅಮೆರಿಕವಾಗಲಿ ಅಥವಾ ಪಾಶ್ಚಿಮಾತ್ಯ ದೇಶಗಳಾಗಲಿ ಸೌದಿ ಅರೆಬಿಯಾ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾದರೂ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ಮತ್ತು ಜಾಗತಿಕ ಆರ್ಥಿಕ ಮಾರುಕಟ್ಟೆಗೆ ಇದರ ಬಿಸಿ ತಾಗುವ ಎಲ್ಲ ಲಕ್ಷಣಗಳಿವೆ. ದಶಕಗಳ ಹಿಂದೆಯೇ ತೈಲವನ್ನು ಗುರಾಣಿಯಾಗಿ ಇಟ್ಟುಕೊಂಡು ಯುದ್ಧ ಮಾಡುವುದಿಲ್ಲ ಎಂದಿದ್ದ ಸೌದಿ ಅರೆಬಿಯಾ ಈ ನೀತಿಯಿಂದ ಹೊರಬರಬಹುದೇ ಎಂಬ ಆತಂಕವೂ ಗೋಚರಿಸಿದೆ. ಈ ಬಗ್ಗೆ ಸ್ವತಃ ಸೌದಿ ಅರೆಬಿಯಾವೇ ಎಚ್ಚರಿಕೆ ನೀಡಿದ್ದು, ಅಮೆರಿಕವೇನಾದರೂ ದಿಗ್ಬಂದನ ಹೇರಿದರೆ ಮುಂದಿನ ಪರಿಣಾಮ ಊಹಿಸಲೂ ಅಸಾಧ್ಯವಾಗುತ್ತದೆ ಎಂದಿದೆ.
ಈ ಜಗಳದಿಂದ ನಷ್ಟವಾಗುವುದು ಭಾರತದಂಥ ಅಭಿವೃದ್ಧಿಶೀಲ ದೇಶಗಳಿಗೆ. ಸದ್ಯ ಭಾರತ ತನಗೆ ಬೇಕಾದ ಶೇ.80 ರಷ್ಟು ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಅಲ್ಲದೆ ಪಾವತಿಗೂ ಬಳಕೆ ಮಾಡಿಕೊಳ್ಳುತ್ತಿರುವುದು ಅಮೆರಿಕದ ಡಾಲರ್. ಮೊದಲೇ ಡಾಲರ್ ಮೌಲ್ಯ ಹೆಚ್ಚಿ ತೈಲ ಆಮದಿನಲ್ಲಿ ನಷ್ಟ ಅನುಭವಿಸುತ್ತಿರುವ ಭಾರತಕ್ಕೆ ಈ ಬೆಳವಣಿಗೆ ದೊಡ್ಡ ಶಾಕ್ ನೀಡುವ ಸಂಭವವೇ ಇದೆ. ಈ ಎಲ್ಲ ಅಡೆತಡೆಗಳನ್ನು ದಾಟಿ ಭಾರತದ ರೂಪಾಯಿಯ ಮೌಲ್ಯವೂ ಸ್ಥಿರವಾಗಿ, ತೈಲ ದರ ಇಳಿಯಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜಾಣ ನಡೆ ಇಡುವ ಅಗತ್ಯತೆಯೂ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.