ಪಡಿತರ ವ್ಯವಸ್ಥೆ ಸಮರ್ಪಕವಾಗಲಿ
Team Udayavani, Dec 17, 2024, 6:00 AM IST
ಜನಸಾಮಾನ್ಯರು, ಕಡುಬಡವರಿಗೆ ಆಹಾರ ಸುರಕ್ಷೆಯನ್ನು ಖಾತರಿ ಪಡಿಸುವ ಉದ್ದೇಶ ಹೊಂದಿರುವ ರಾಜ್ಯದ ಪಡಿತರ ಅಥವಾ “ರೇಶನ್’ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಲೋಪದೋಷಗಳು ಇರುವುದನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಗುರುತಿಸಲಾಗಿದೆ.
ಪಡಿತರ ವ್ಯವಸ್ಥೆಯಲ್ಲಿ ನ್ಯಾಯಬೆಲೆಯ ಮೂಲಕ ವಿತರಿಸಲಾಗುವ ಆಹಾರ ಧಾನ್ಯಗಳನ್ನು ರಸಗೊಬ್ಬರಗಳು, ಸಿಮೆಂಟ್, ಕೀಟನಾಶಕಗಳ ಜತೆಗೆ ದಾಸ್ತಾನು ಇರಿಸುವುದು, ಅನಧಿಕೃತ, ನವೀಕರಿಸದ ತೂಕ ಮಾಪನ ಬಳಕೆ ಇತ್ಯಾದಿ ಹಲವು ಕುಂದುಕೊರತೆಗಳ ಬಗ್ಗೆ ಸಿಎಜಿ ವರದಿ ಬೆಟ್ಟು ಮಾಡಿದೆ. ಇದು ನಿಜಕ್ಕೂ ಖೇದಕರ.
ಎಲ್ಲರಿಗೂ ಪೌಷ್ಟಿಕ ಆಹಾರ ಒದಗಬೇಕು ಎನ್ನುವ ಉದ್ದೇಶದ ಈ ವ್ಯವಸ್ಥೆಯೇ ಗಮನಾರ್ಹ ಕುಂದುಕೊರತೆಗಳನ್ನು ಹೊಂದಿರುವುದು ವಿಪರ್ಯಾಸ. ಸಂಬಂಧಪಟ್ಟ ಇಲಾಖೆ, ಸರಕಾರ ಈ ಬಗ್ಗೆ ಮುತುವರ್ಜಿ ವಹಿಸಿ ಈ ವಿಷಯಗಳನ್ನು ಆದಷ್ಟು ಬೇಗನೆ ನೇರ್ಪುಗೊಳಿಸಿಕೊಳ್ಳಬೇಕಾಗಿದೆ.
ಅನೇಕ ಕಡೆಗಳಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳೇ ನ್ಯಾಯ ಬೆಲೆ ಅಂಗಡಿಗಳಾಗಿಯೂ ಕಾರ್ಯನಿರ್ವಹಿಸುತ್ತಿವೆ. ಇಂಥ ಸೊಸೈಟಿಗಳ ದಾಸ್ತಾನು ಕೋಣೆಗಳಲ್ಲಿ ರಸಗೊಬ್ಬರ, ಕೀಟನಾಶಕಗಳ ಜತೆಗೆ ಪಡಿತರ ಆಹಾರ ಧಾನ್ಯಗಳನ್ನು ದಾಸ್ತಾನು ಮಾಡಿಡಲಾಗುತ್ತದೆ. ಇದರಿಂದಾಗಿ ಆಹಾರ ಧಾನ್ಯಗಳ ಗುಣಮಟ್ಟ ಕೆಡುವುದು, ವಿಷಕಾರಿಯಾಗುವುದು ಸಾಧ್ಯ. ಹೀಗಾಗಿ ಈ ಆಹಾರದ ಸುರಕ್ಷೆಯ ಬಗ್ಗೆ ಸಿಎಜಿ ಕಳವಳ ವ್ಯಕ್ತಪಡಿಸಿದೆ. ಅನಧಿಕೃತ ಮತ್ತು ನವೀಕರಿಸದ ತೂಕಮಾಪನ ಯಂತ್ರಗಳ ಬಳಕೆಯಿಂದಾಗಿ ಗ್ರಾಹಕರಿಗೆ ಮೋಸವಾಗುವುದು ಸಾಧ್ಯ ಎಂದು ಸಿಎಜಿ ಗಮನಿಸಿದೆ.
ಕೆಲಸದ ಅವಧಿಯಲ್ಲಿ ನ್ಯಾಯ ಬೆಲೆ ಅಂಗಡಿಗಳು ಮುಚ್ಚಿರುವುದು, ಪಡಿತರ ಸಾಮಗ್ರಿ ಸಾಗಾಟಕ್ಕೆ ಅಧಿಕೃತ ವಾಹನಗಳನ್ನು ಬಳಸದೆ ಇರುವುದು, ಪಡಿತರ ಸಾಗಾಟ ವಾಹನಗಳಿಗೆ ಜಿಪಿಎಸ್ ಉಪಯೋಗಿಸದಿರುವುದು, ನಿಗದಿತ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಪಡಿತರ ವಾಹನ ಸಾಗಾಟ ಇತ್ಯಾದಿಗಳನ್ನು ಕೂಡ ಸಿಎಜಿ 2017ರಿಂದ 2022ರ ವರೆಗಿನ ಅವಧಿಯ ವರದಿಯಲ್ಲಿ ಹೇಳಿದೆ. ಪಡಿತರ ಸಾಗಾಟಕ್ಕೆ ಬಳಸಿದ ಗೋಣಿ ಚೀಲಗಳ ತೂಕವನ್ನು ಒಟ್ಟು ತೂಕದಿಂದ ಕಳೆಯದೆ 11.84 ಕೋ.ರೂ. ನಷ್ಟ ಆಗಿರುವುದನ್ನು ಸಿಎಜಿ ಗುರುತಿಸಿದೆ.
ಈ ಲೋಪದೋಷಗಳನ್ನು ಗುರುತಿಸುವುದರ ಜತೆಗೆ ಸಿಎಜಿ ತನ್ನ ವರದಿಯಲ್ಲಿ ಪರಿಹಾರಾತ್ಮಕ ಕ್ರಮಗಳನ್ನು ಕೂಡ ಶಿಫಾರಸು ಮಾಡಿದೆ. ಆಹಾರ ನಿಗಮದ ಗೋದಾಮಿನ ನಿರ್ವಹಣೆಗೆ ಮಾರ್ಗಸೂಚಿ ರೂಪಿಸುವುದು, ನ್ಯಾಯಬೆಲೆ ಅಂಗಡಿಗಳ ನಿಯಮಿತ ತಪಾಸಣೆ, ತಪ್ಪಿತಸ್ಥ ನ್ಯಾಯಬೆಲೆ ಅಂಗಡಿ ಮಾಲಕರ ಪರವಾನಿಗೆ ರದ್ದು, ತಪ್ಪು ತೂಕ ತಿಳಿಸುವ ಸಾಧನ ಬಳಕೆಗೆ ದಂಡ, ಸಿಬಂದಿಯನ್ನು ಹೊಣೆ ಮಾಡುವುದು ಇತ್ಯಾದಿ ಕ್ರಮಗಳನ್ನು ಸೂಚಿಸಿದೆ.
ನೇರವಾಗಿ ಹೇಳುವುದಾದರೆ ಪಡಿತರ ಎಂಬ ವ್ಯವಸ್ಥೆ ಇರುವುದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಹಾರ ಸುರಕ್ಷೆ ಇರಬೇಕು ಎಂಬ ಉದ್ದೇಶದಿಂದ. ಗುಣಮಟ್ಟದ ಆಹಾರ ಎಲ್ಲರ ಹಕ್ಕು. ಅದು ಮಾರುಕಟ್ಟೆಯ ಪೈಪೋಟಿಯೋ ಇನ್ಯಾವುದೋ ಕಾರಣ ಕ್ಕಾಗಿ ಜನಸಾಮಾನ್ಯರಿಗೆ ದುರ್ಲಭವಾಗಬಾರದು ಎಂಬ ಸಾಮಾಜಿಕ ನ್ಯಾಯವೇ ನ್ಯಾಯ ಬೆಲೆ ವ್ಯವಸ್ಥೆಯ ಉದ್ದೇಶ. ಆದರೆ ಸಿಎಜಿ ಪತ್ತೆಹಚ್ಚಿರುವ ಲೋಪದೋಷಗಳು ಪಡಿತರ ವ್ಯವಸ್ಥೆಯ ಈ ಉದ್ದೇಶ ವ್ಯರ್ಥವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿವೆ.
ಸರಕಾರ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಈ ಬಗ್ಗೆ ತತ್‌ಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು. ಪಡಿತರ ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳನ್ನು ಸಿಎಜಿ ನೀಡಿರುವ ಶಿಫಾರಸುಗಳ ಆಧಾರದಲ್ಲಿ ಸರಿಪಡಿಸಿ ವ್ಯವಸ್ಥೆ ಸಮರ್ಪಕವಾಗುವಂತೆ ನೋಡಿಕೊಳ್ಳಬೇಕು. ಸರಕಾರವೇ ಹೇಳುತ್ತಿರುವ “ಸಾಮಾಜಿಕ ನ್ಯಾಯ’ದ ದೃಷ್ಟಿಯಿಂದ ಇದು ತತ್‌ಕ್ಷಣ ಆಗಬೇಕಾದ ಕಾರ್ಯವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.