ಜಗತ್ತಿನ ಒಳಿತಿಗಾಗಿ ಸ್ವಯಂ ಪ್ರತಿಷ್ಠೆ ಬಿಟ್ಟು ಮಾತುಕತೆ ನಡೆಸಲಿ
Team Udayavani, Feb 28, 2022, 6:00 AM IST
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಈಗಾಗಲೇ ನಾಲ್ಕು ದಿನ ಪೂರೈಸಿದೆ. ಬೆಲಾರಸ್‌ನಿಂದ ಹೊರಟು, ಚೆರ್ನೋಬಿಲ್ ವಶಪಡಿಸಿಕೊಂಡು, ಕೀವ್ ನಗರಕ್ಕೆ ತಲುಪಿರುವ ರಷ್ಯಾ ಪಡೆಗಳು, ಅಪಾರ ಹಾನಿ ಮಾಡಿವೆ. ಅಲ್ಲದೆ ಉಕ್ರೇನ್‌ನ ಎರಡನೇ ದೊಡ್ಡ ನಗರವಾದ ಖಾರ್ಕಿವ್‌ನೊಳಗೂ ರಷ್ಯಾ ಪಡೆಗಳು ನುಗ್ಗಿವೆ.
ಯುದ್ಧವೆಂಬುದು ಯಾರಿಗೂ ಬೇಕಾಗಿಲ್ಲದ ವಿಚಾರ. ಯುದ್ಧದಿಂದ ಯಾವ ಪರಿಣಾಮವಾಗುತ್ತವೆ ಎಂಬುದನ್ನು ನಾವು ಇತಿಹಾಸ ನೋಡಿ ತಿಳಿದಿದ್ದೇವೆ. ಅದರಲ್ಲೂ ಎರಡನೇ ಮಹಾಯುದ್ಧವಂತೂ ಮಾನವತೆಯ ಮೇಲೆ ಭೀಕರ ಪರಿಣಾಮ ಉಂಟು ಮಾಡಿರು ವಂಥದ್ದು. ಆಗ ಅಮೆರಿಕದ ಯುದ್ಧ ವಿಮಾನಗಳು, ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ಅಣು ಬಾಂಬ್‌ಗಳನ್ನು ಹಾಕಿ, ಜನರನ್ನು ಇರುವೆಗಳನ್ನು ಹಿಸುಕಿದಂತೆ ಕೊಂದು ಹಾಕಿದ್ದವು. ಈಗ ಇಂಥದ್ದೇ ಪರಿಸ್ಥಿತಿ ಉಂಟಾಗುವುದು ಬೇಡ.
ಉಕ್ರೇನ್‌ನ ಸ್ವಾಭಿಮಾನ ಮತ್ತು ರಷ್ಯಾದ ಹಠಮಾರಿ ಧೋರಣೆಯಿಂದಾಗಿ ಈ ಯುದ್ಧ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಲ್ಲೋ ಒಂದು ಕಡೆ ರಷ್ಯಾ ಕೇವಲ ಡಾನ್‌ಬಾಸ್ ಪ್ರದೇಶವಷ್ಟೇ ಅಲ್ಲ ಇಡೀ ಉಕ್ರೇನಿನ ಮೇಲೆ ಕಣ್ಣು ಹಾಕಿದೆ ಎಂಬ ಅನುಮಾನಗಳೂ ಮೂಡುತ್ತಿವೆ. ಇದಕ್ಕೆ ಪೂರಕವೆಂಬಂತೆ, ಉಕ್ರೇನ್‌ನ ಒಂದೊಂದೇ ನಗರಗಳನ್ನು ರಷ್ಯಾ ವಶಪಡಿಸಿಕೊಳ್ಳುತ್ತಾ ಸಾಗಿದೆ.
ಅತ್ತ ಉಕ್ರೇನ್ ಕೂಡ ತಾನು ಯಾರಿಗೂ ಬಗ್ಗುವುದಿಲ್ಲ ಎಂಬ ಧೋರಣೆಯಿಂದ ರಷ್ಯಾ ಸೈನಿಕರನ್ನು ಸಮರ್ಥವಾಗಿಯೇ ಎದುರಿಸುತ್ತಿದೆ. ಕೀವ್, ಖಾರ್ಕಿವ್ ನಗರದಲ್ಲಿ ಎಲ್ಲೆಂದರಲ್ಲಿ ರಷ್ಯಾ ಬಾಂಬ್‌ಗಳು ಬೀಳುತ್ತಿವೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ ತನ್ನ ನಾಗರಿಕರಿಗೂ ಎ.ಕೆ.47ನಂಥ ಬಂದೂಕುಗಳನ್ನು ಕೊಟ್ಟು ರಷ್ಯಾ ಸೈನಿಕರನ್ನು ಎದುರಿಸುವಂತೆ ಸೂಚಿಸಿದೆ. ಒಟ್ಟಾರೆಯಾಗಿ ಉಕ್ರೇನ್‌ನ ನಗರಗಳು ಯುದ್ಧಭೂಮಿಯಾಗಿ ಮಾರ್ಪಟ್ಟಿವೆ.ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಮೇಲೆ,ಅಮೆರಿಕ ಆದಿಯಾಗಿ ಬಹುತೇಕ ದೊಡ್ಡ ದೇಶಗಳು ದಿಗ್ಬಂಧನದ ಹಾದಿ ಮೂಲಕವೇ ರಷ್ಯಾವನ್ನು ಹಣಿಯಲು ಯತ್ನಿಸುತ್ತಿವೆ. ಆದರೆ ಇದ್ಯಾವುದೂ ಫಲಿಸುತ್ತಿಲ್ಲ. ಈ ಎಲ್ಲ ಜಂಜಾಟದಲ್ಲಿ ನಲುಗುತ್ತಿರುವುದು ಮಾತ್ರ ಉಕ್ರೇನ್ ಪ್ರಜೆಗಳು. ಅಷ್ಟೇ ಅಲ್ಲ ರಷ್ಯಾ ಅಣ್ವಸ್ತ್ರದ ಬಗ್ಗೆ ಮಾತನಾಡಿರುವುದು ತೀರಾ ಕಳವಳಕಾರಿ ವಿದ್ಯಮಾನವಾಗಿದೆ.
ಶಸ್ತ್ರ ಕೆಳಗಿಟ್ಟರೆ ಮಾತುಕತೆಗೆ ಸಿದ್ಧ ಎಂಬ ರಷ್ಯಾದ ಮಾತನ್ನು ಮೊದಲು ತಿರಸ್ಕರಿಸಿದ್ದ ಉಕ್ರೇನ್, ಈಗ ಮಾತುಕತೆಗೆ ಮುಂದಾಗಿದೆ. ಬೆಲಾರಸ್ ಗಡಿಯಲ್ಲಿ ಎರಡು ದೇಶಗಳು ಸಂಧಾನಕ್ಕೆ ಕುಳಿತುಕೊಳ್ಳುವುದಾಗಿ ಹೇಳಿವೆ. ಈಗಿನ ಪರಿಸ್ಥಿತಿಯಲ್ಲಿ ಸಂಧಾನ ಮಾತುಕತೆ ಆಶಾದಾಯಕವಾಗಿದೆ. ಇದಕ್ಕಿಂತ ಹೆಚ್ಚಾಗಿ ಉಭಯ ದೇಶಗಳು ತಮ್ಮ ಪಟ್ಟುಗಳನ್ನು ಪಕ್ಕಕ್ಕಿಟ್ಟು ಯುದ್ಧವನ್ನು ಕೊನೆಗಾಣಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿ. ಯಾವುದೇ ಕಾರಣಕ್ಕೂ ಈ ಯುದ್ಧ ಮುಂದುವರಿಯದಂತೆ ನೋಡಿಕೊಳ್ಳಲಿ. ಇಲ್ಲದಿದ್ದರೆ ಕೊರೊನಾ ಅನಂತರದಲ್ಲಿ ಹಾಳಾಗಿರುವ ಜಗತ್ತಿನ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಮತ್ತಷ್ಟು ಹದಗೆಡುವುದರಲ್ಲಿ ಯಾವುದೇ ಸಂದೇಹವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.