ಸೆಲೆಬ್ರಿಟಿಗಳಿಗೆ ಪಾಠವಾಗಲಿ ; ಹಾರ್ದಿಕ್-ರಾಹುಲ್ ಹಗುರ ಹೇಳಿಕೆ
Team Udayavani, Jan 12, 2019, 12:30 AM IST
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿದ್ ಕರಣ್ ಎಂಬ ರಿಯಾಲಿಟಿ ಶೋದಲ್ಲಿ ಯುವ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ. ಎಲ್. ರಾಹುಲ್ ಮಹಿಳೆಯರ ಕುರಿತಾಗಿ ನೀಡಿರುವ ಅಸಭ್ಯ ಹೇಳಿಕೆಗಳು ಈಗ ಭಾರೀ ವಿವಾದಕ್ಕೊಳಗಾಗಿದೆ. ಸ್ವತಃ ಬಿಸಿಸಿಐ ಮತ್ತು ಕ್ರಿಕೆಟ್ ತಂಡ ಇವರ ಹೇಳಿಕೆಗಳಿಂದ ಮುಜುಗರಕ್ಕೀಡಾಗಿವೆ. ನಾಯಕ ವಿರಾಟ್ ಕೊಹ್ಲಿ ಕ್ರಿಕೆಟಿಗರ ಹೇಳಿಕೆ ತಂಡದ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿ ಈ ವಿವಾದದಿಂದ ಮೆಲ್ಲನೆ ಜಾರಿಕೊಂಡಿದ್ದಾರೆ. ಹಾರ್ದಿಕ್ ಮತ್ತು ರಾಹುಲ್ ಅಮಾನತಿನ ಶಿಕ್ಷೆಗೂ ಗುರಿಯಾಗಿದ್ದಾರೆ. ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳ ನಡವಳಿಕೆಯೂ ಉನ್ನತವಾಗಿರಬೇಕೆಂಬುದನ್ನು ಈ ಕ್ರಿಕೆಟಿಗರು ಮರೆತದ್ದೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣ.
ಕ್ರಿಕೆಟಿಗರನ್ನು , ಸಿನೇಮಾದವರನ್ನು ನಮ್ಮ ಸಮಾಜ ತುಸು ಹೆಚ್ಚೇ ಅನುಕರಿಸುತ್ತದೆ. ಅವರಿಗೆ ಅಪಾರ ಅಭಿಮಾನಿಗಳಿರುತ್ತಾರೆ. ಅದರಲ್ಲೂ ಯುವಜನತೆ ಅವರನ್ನು ಮಾದರಿ ಎಂದು ಒಪ್ಪಿಕೊಂಡಿರುತ್ತದೆ. ಇಂಥ ವ್ಯಕ್ತಿಗಳು ತಮ್ಮ ಮಾತು ಮತ್ತು ಕೃತಿಗಳಲ್ಲಿ ಮಾದರಿಯಾಗಿದ್ದರೆ ಅವರನ್ನು ಆರಾಧಿಸುವವರಿಗೆ ಉತ್ತಮ ಸಂದೇಶ ನೀಡಿದಂತಾಗುತ್ತದೆ. ಆದರೆ ಸೆಲೆಬ್ರಿಟಿಗಳ ವಿಚಾರದಲ್ಲಿ ಎಲ್ಲ ಸಂದರ್ಭದಲ್ಲೂ ಈ ಮಾತನ್ನು ಹೇಳುವಂತಿಲ್ಲ. ಅನೇಕ ಸೆಲೆಬ್ರಿಟಿಗಳು ತುಂಬ ಕ್ಷುಲ್ಲಕವಾಗಿ ವರ್ತಿಸಿ ಟೀಕೆಗಳಿಗೂ, ನಗೆಪಾಟಲಿಗೂ ಈಡಾಗುತ್ತಿರುವುದನ್ನು ಆಗಾಗ ನೋಡುತ್ತಿರುತ್ತೇವೆ. ಇದೀಗ ರಾಹುಲ್ ಮತ್ತು ಹಾರ್ದಿಕ್ ಕೂಡಾ ದೇಶ ತಮ್ಮ ಮೇಲಿಟ್ಟ ಅಭಿಮಾನವನ್ನು ಬರೀ ಒಂದು ಹೇಳಿಕೆಯಿಂದಾಗಿ ಕಳೆದುಕೊಂಡಿದ್ದಾರೆ.
ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವುದೇನೂ ಬಹಳ ದೊಡ್ಡ ಸಾಧನೆಯಲ್ಲ. ಅದರಲ್ಲಾಡಿದ ಮಾತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವೂ ಇಲ್ಲ ಎನ್ನುವ ವಾದ ಸರಿ. ರಿಯಾಲಿಟಿ ಶೋಗಳ ಹಿಂದಿನ ವಾಸ್ತವ ಏನು ಎಂದು ತಿಳಿದಿರುವವರು ಅವುಗಳನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ಅದರಲ್ಲೂ ಕಾಫಿ ವಿದ್ ಕರಣ್‌ನಂಥ ಕೆಲವು ಶೋಗಳು ಟಿಆರ್‌ಪಿ ಏರಿಸಿಕೊಳ್ಳುವ ಉದ್ದೇಶದಿಂದ ತೀರಾ ವೈಯಕ್ತಿಕ ವಿಚಾರಗಳನ್ನು ಕೆದಕುತ್ತವೆ. ದುರದೃಷ್ಟವೆಂದರೆ ಒಂದು ವರ್ಗದ ಪ್ರೇಕ್ಷಕರಿಗೆ ಇಂಥ ವಿಚಾರಗಳೇ ಹೆಚ್ಚು ಇಷ್ಟವಾಗುತ್ತವೆ. ದೇಶದಲ್ಲಿ ಇಂಥ ಪ್ರೇಕ್ಷಕರ ಸಂಖ್ಯೆಯೂ ಬಹಳ ದೊಡ್ಡದಿದೆ. ಅಗ್ಗದ ಮನರಂಜನೆಯಿಂದ ಬೇಗನೆ ಜನಪ್ರಿಯತೆ ಸಿಗುತ್ತದೆ ಎನ್ನುವ ಸೂತ್ರವೇ ಈ ಮಾದರಿಯ ರಿಯಾಲಿಟಿ ಶೋಗಳ ಯಶಸ್ಸಿನ ಮರ್ಮ.
ಕಾಫಿ ವಿದ್ ಕರಣ್ ಈ ಸೂತ್ರವನ್ನು ತುಸು ಹೆಚ್ಚೇ ಅವಲಂಬಿಸಿದೆ. ಕರಣ್ ಜೋಹರ್ ಕೇಳುವ ಹೆಚ್ಚಿನ ಪ್ರಶ್ನೆಗಳು ಖಾಸಗಿ ವಿಚಾರಗಳಿಗೆ ಸಂಬಂಧಿಸಿರುತ್ತವೆ. ಅದರಲ್ಲೂ ಲೈಂಗಿಕ ಸಂಬಂಧದಂಥ ನಾಲ್ಕು ಗೋಡೆಗಳ ನಡುವಿನ ತೀರಾ ಖಾಸಗಿ ವಿಷಯಗಳನ್ನು ಟಿವಿ ಪರದೆಯ ಮೇಲೆ ಬಹಿರಂಗವಾಗಿ ಹೇಳಿಕೊಳ್ಳಲು ಪ್ರಚೋದಿಸುವುದು ಆರೋಗ್ಯಕರ ಕಾರ್ಯಕ್ರಮವಲ್ಲ. ಸೆಲೆಬ್ರಿಟಿಗಳ ಖಾಸಗಿ ವಿಚಾರಗಳನ್ನು ತಿಳಿದುಕೊಂಡು ವೀಕ್ಷಕರಿಗಾಗುವ ಲಾಭವಾದರೂ ಏನು? ಇಷ್ಟರ ತನಕ ಯಾರೂ ಈ ರಿಯಾಲಿಟಿ ಶೋ ವಿರುದ್ಧ ಕೇಸ್ ದಾಖಲಿಸದಿರುವುದೇ ಆಶ್ಚರ್ಯವುಂಟು ಮಾಡುತ್ತಿದೆ.
ರಾಹುಲ್ ಮತ್ತು ಹಾರ್ದಿಕ್ ಪ್ರತಿಭಾವಂತ ಕ್ರಿಕೆಟಿಗರು ಎನ್ನುವುದರಲ್ಲಿ ಸಂಶಯವಿಲ್ಲ. ಇಬ್ಬರೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ತೋರಿಸಿದ್ದಾರೆ. ಇಬ್ಬರೂ ಲಕ್ಷಗಟ್ಟಲೆ ಅಭಿಮಾನಿಗಳನ್ನೂ ಹೊಂದಿದ್ದಾರೆ. ಇನ್ನೂ ಹುಡುಗು ಬುದ್ಧಿ , ತಿಳಿಯದೆ ಏನೋ ಮಾತನಾಡಿ ಬಿಟ್ಟಿದ್ದಾರೆ ಎಂದು ಅವರ ಪರವಾಗಿ ಅನುಕಂಪ ವ್ಯಕ್ತಪಡಿಸುವವರೂ ಸಾಕಷ್ಟು ಮಂದಿ ಇದ್ದಾರೆ. ಇದು ನಿಜವಾಗಿರಲೂಬಹುದು. ಆದರೆ ಸೆಕ್ಸ್ ನಂಥ ಖಾಸಗಿ ಪ್ರಶ್ನೆಗಳು ಎದುರಾದಾಗ ಅವುಗಳಿಗೆ ಉತ್ತರಿಸದೇ ಇರುವ ಅಥವಾ ಈ ರೀತಿಯ ಪ್ರಶ್ನೆಗಳನ್ನು ಕೇಳಬೇಡಿ ಎನ್ನುವಷ್ಟು ಬುದ್ಧಿವಂತಿಕೆಯನ್ನು ಅವರು ತೋರಿಸಬಹುದಿತ್ತು. ಇದರ ಬದಲಾಗಿ ಈ ಪ್ರಶ್ನೆಗಳಿಗೆ ಹೆಮ್ಮೆಯಿಂದ ಉತ್ತರ ನೀಡಿದ್ದನ್ನು ಅಮಾಯಕತೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಹಾಗೆಂದು ಈ ಒಂದು ಘಟನೆಯಿಂದ ಈ ಇಬ್ಬರ ಕ್ರಿಕೆಟ್ ಬದುಕಿಗೆ ಹಾನಿಯಾಗಬಾರದು. ಈ ನೆಲೆಯಲ್ಲೇ ಬಿಸಿಸಿಐ ಲಘು ಶಿಕ್ಷೆ ವಿಧಿಸಿದೆ ಎನ್ನುವುದನ್ನು ಗಮನಿಸಬೇಕು. ಹೀಗಾಗಿ, ಶಿಕ್ಷೆ ಪ್ರಮಾಣ ಲಘುವಾಯಿತೆಂಬ ಕಾರಣಕ್ಕೆ, ತಪ್ಪು ಕೂಡ ಚಿಕ್ಕದ್ದು ಎಂದು ಭಾವಿಸಬೇಕಿಲ್ಲ. ರಾಜಕಾರಣಿಗಳು, ಸಿನೆಮಾ ತಾರೆಯರು, ಕ್ರೀಡಾಪಟುಗಳಿಗೆ ಅವರ ಪ್ರತಿ ನಡೆ-ನುಡಿಯನ್ನು ಗಂಭೀರವಾಗಿ ಗಮನಿಸುವ ಲಕ್ಷಾಂತರ ಅಭಿಮಾನಿಗಳಿರುತ್ತಾರೆ. ಹೀಗಾಗಿ ಪ್ರೌಢಿಮೆಯಿಂದ ವರ್ತಿಸುವ ಜವಾಬ್ದಾರಿ ಅವರ ಮೇಲಿರುತ್ತದೆ. ಆದರೂ ಪದೇ ಪದೆ ಇಂಥ ತಪ್ಪುಗಳು ಆಗುತ್ತಲೇ ಇರುತ್ತವೆ. ಇನ್ನು ಮುಂದಾದರೂ ಸಾರ್ವಜನಿಕವಾಗಿ ಮಾತನಾಡುವಾಗ ತುಸು ಎಚ್ಚರಿಕೆ ವಹಿಸಬೇಕು ಎಂಬ ಪಾಠವನ್ನು ಕ್ರೀಡಾಪಟುಗಳೂ ಸೇರಿದಂತೆ ಉಳಿದ ಸೆಲೆಬ್ರಿಟಿಗಳು ಕಲಿತುಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.