ಸನ್ನದ್ಧತೆ, ಧೀಮಂತಿಕೆ ಪ್ರದರ್ಶಿಸೋಣ
Team Udayavani, May 3, 2017, 12:03 PM IST
ಪುರಾವೆ ಕೇಳಿದ ಪಾಕ್, ಚೀನ ರಂಗಪ್ರವೇಶ
ಭಾರತೀಯ ಸೈನಿಕರ ಶಿರಚ್ಛೇದದಂತಹ ಸಮರ ನೀತಿ-ನಿಯಮಗಳನ್ನು ಧಿಕ್ಕರಿಸಿದ ಕೃತ್ಯಕ್ಕೆ ಪಾಕಿಸ್ಥಾನ ಪುರಾವೆಗಳನ್ನು ಕೇಳಿದೆ. ಇನ್ನೊಂದೆಡೆ ಚೀನವು ಕಾಶ್ಮೀರ ವಿವಾದ ತನಗೆ ಮುಖ್ಯ ಎಂದಿರುವುದು ನಮ್ಮ ಸಾರ್ವಭೌಮತೆಗೆ ಬಹಿರಂಗ ಸವಾಲಿನಂತೆ. ಮುಂದೆ ಉದ್ಭವಿಸಬಹುದಾದ ಸನ್ನಿವೇಶಗಳನ್ನು ಎದುರಿಸುವ ಸನ್ನದ್ಧತೆ ಮತ್ತು ಧೀಮಂತಿಕೆ ಸರಕಾರಕ್ಕಿರಲಿ.
ಗಡಿಯ ಆಚೆಗಿನಿಂದ ಕದನ ವಿರಾಮ ಉಲ್ಲಂಘನೆ ನಡೆಸುತ್ತಾ ಸತತ ಗುಂಡು ಹಾರಾಟದ ಮರೆಯಲ್ಲಿ ಭಾರತದ ಗಡಿಯೊಳಕ್ಕೆ ನುಗ್ಗಿ ಇಬ್ಬರು ಭಾರತೀಯ ಸೈನಿಕರ ಹತ್ಯೆ ಮತ್ತು ಶಿರಚ್ಛೇದನ ನಡೆಸಿದ ಪಾಕಿಸ್ಥಾನ ಈಗ ತನ್ನ ಕೃತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ. ಎರಡೂ ದೇಶಗಳ ಡಿಜಿಎಂಒಗಳ ಹಾಟ್‌ಲೆçನ್ ಸಂಭಾಷಣೆಯ ವೇಳೆ ಅದು ತನ್ನ ಮಿಲಿಟರಿ ವೃತ್ತಿಪರವಾದದ್ದು ಮತ್ತು ಇಂತಹ ಕೃತ್ಯಗಳನ್ನು ಎಸಗಲು ಸಾಧ್ಯವಿಲ್ಲ ಎಂದಿದೆಯಲ್ಲದೆ, ಕೃತ್ಯಕ್ಕೆ ಪುರಾವೆಗಳನ್ನು ಕೇಳಿದೆ.
ಇದೇವೇಳೆ ಕಾಶ್ಮೀರ ವಿವಾದ ತನಗೆ ಮುಖ್ಯ ಎಂಬುದಾಗಿ ಹೇಳಿಕೊಳ್ಳುವ ಮೂಲಕ ಇದುವರೆಗೆ ಪಾಕ್ ಹಿಂದೆ ನಿಂತು ಕುಮ್ಮಕ್ಕು ನೀಡುತ್ತಿದ್ದ ಚೀನ ಈಗ ಬಹಿರಂಗವಾಗಿ ರಂಗ ಪ್ರವೇಶ ಮಾಡುವ ಲಕ್ಷಣಗಳನ್ನು ತೋರ್ಪಡಿಸಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತ ಕಟ್ಟೆಚ್ಚರದಿಂದ ಇರುವುದು, ತನ್ನ ಸಾರ್ವಭೌಮತೆಯ ರಕ್ಷಣೆಗಾಗಿ ಸರ್ವಸನ್ನದ್ಧತೆಯನ್ನು ಮಾಡಿಕೊಳ್ಳುವುದು ಮತ್ತು ಉದ್ಭವಿಸಬಹುದಾದ ಯಾವುದೇ ಸನ್ನಿವೇಶವನ್ನು ಎದುರಿಸಲು ತಯಾರಿ ನಡೆಸುವುದು ಅತ್ಯಂತ ಆವಶ್ಯಕ.
26/11ರ ಮುಂಬಯಿ ಭೀತಿವಾದಿ ದಾಳಿ, ಅದಕ್ಕೂ ಹಿಂದಿನ ಕೃತ್ಯಗಳು ಮತ್ತು ಆ ಬಳಿಕ ಪಾಕಿಸ್ಥಾನದಲ್ಲಿ ಜನಿಸಿ ಭಾರತದಲ್ಲಿ ಜಾರಿಗೊಂಡ ವಿಧ್ವಂಸಕ ಕೃತ್ಯಗಳೆಲ್ಲವುಗಳ ಬಳಿಕವೂ ಪಾಕಿಸ್ಥಾನ ಈಗಿನಂತೆಯೇ “ಗಟ್ಟಿಯಾದ’ “ಕ್ರಮ ಕೈಗೊಳ್ಳಲು ತಕ್ಕುದಾದ’ ಸಾಕ್ಷ್ಯಗಳಿಗಾಗಿ ಮತ್ತೆ ಮತ್ತೆ ಆಗ್ರಹಿಸಿತ್ತು. ಈಗ ಪಾಕಿಸ್ಥಾನದ ವಶದಲ್ಲಿರುವ ಕುಲಭೂಷಣ್ ಯಾದವ್ ನಿರಪರಾಧಿತ್ವದ ವಿಚಾರದಲ್ಲಿಯೂ ಪಾಕ್ ಇದೇ ಜಾಯಮಾನವನ್ನು ಪ್ರದರ್ಶಿಸಿದೆ.
26/11ರ ದಾಳಿಯಲ್ಲಿ ತನ್ನ ಪಾತ್ರವನ್ನು ನಿರಾಕರಿಸುತ್ತಲೇ ಬಂದಿದ್ದ ಪಾಕ್‌ನ ಬಣ್ಣ ಕೊಟ್ಟಕೊನೆಗೆ ಹೇಗೆ ಬಯಲಾಗಿದೆ ಎಂಬುದು ಜಗತ್ತಿಗೇ ತಿಳಿದಿರುವ ಸತ್ಯ. ಇನ್ನೊಂದೆಡೆ ಬಲೂಚಿಸ್ಥಾನದಲ್ಲಿ ಭಾರತ ಉಗ್ರವಾದಿ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂಬುದಾಗಿ ಅದು ವಟಗುಡುತ್ತಿದ್ದರೂ ಇದುವರೆಗೆ ಯಾವುದೇ ಆಧಾರಗಳನ್ನು ನೀಡಲು ಶಕ್ತವಾಗಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಅದರ ನಡವಳಿಕೆ ಒಂದಕ್ಕೊಂದು ತಾಳೆಯಿಲ್ಲದಂಥದ್ದು. ಈಗ ಭಾರತೀಯ ಸೈನಿಕರ ಶಿರಚ್ಛೇದದಂತಹ ಹಗಲು ಬೆಳಕಿನಷ್ಟು ನೈಜ ವಿಚಾರದಲ್ಲಿಯೂ ಅದು ಪುರಾವೆಗಳನ್ನು ಕೇಳುತ್ತಿದೆ. ಇದುವರೆಗೆ ಪಾಕ್ ನಡೆಸುವ ಭೀತಿವಾದ ಕೃತ್ಯಗಳಿಗೆ ಚೀನ ಪ್ರೋತ್ಸಾಹ ನೀಡುತ್ತಿತ್ತು, ಶಸ್ತ್ರಾಸ್ತ್ರ ಪೂರೈಕೆಯಂತಹ ಸಹಾಯವನ್ನು ಮಾಡುತ್ತಿತ್ತು, ಮಸೂದ್ ಅಜರ್‌ನಂತಹ ದುಷ್ಟನನ್ನು ಉಗ್ರವಾದಿಯೆಂದು ಘೋಷಿಸುವ ಭಾರತದ ಪ್ರಯತ್ನಕ್ಕೆ ತಡೆಯೊಡ್ಡಿ ಪಾಕ್‌ಗೆ ಪರೋಕ್ಷ ಬೆಂಬಲವನ್ನು ಪದೇಪದೇ ವ್ಯಕ್ತಪಡಿಸಿತ್ತು. ಆದರೆ ಈಗ ಅದು ಚೀನ-ಪಾಕ್ ಕಾರಿಡಾರ್‌ನಲ್ಲಿ ತಾನು 50 ಸಾವಿರ ಕೋಟಿ ಹೂಡಿಕೆ ಮಾಡಿರುವುದರಿಂದ ಕಾಶ್ಮೀರ ವಿವಾದ ತನಗೆ ಮುಖ್ಯವೆಂದು ಬಹಿರಂಗವಾಗಿ ರಂಗಪ್ರವೇಶ ಮಾಡುವ ಲಕ್ಷಣ ತೋರಿಸಿದೆ. ಈಗಾಗಲೇ ಟಿಬೆಟ್ ಆಕ್ರಮಣ, ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸ್ಥಾಪನೆಯ ಮೂಲಕ ಮುಷ್ಠಿ ಎತ್ತಿಕಟ್ಟಿರುವ ಅದರ ಈಗಿನ ಕಾಶ್ಮೀರ ವಿಷಯ ಪ್ರತಿಪಾದನೆ ತೀರಾ ಉದ್ಧಟತನದ್ದು, ಭಾರತದ ಸಾರ್ವಭೌಮತ್ವಕ್ಕೆ ನೇರ ಸವಾಲು ಎಂದು ಪರಿಭಾವಿಸಲು ತಕ್ಕುದು. ತಾನು ಪಾಕಿಸ್ಥಾನದ ಬೆನ್ನಿಗೆ ಇದ್ದೇನೆ ಎಂಬುದಾಗಿ ಚೀನ ಸಾರಲು ಹೊರಟಿರುವಂತಿದೆ. ಭಾರತಕ್ಕೆ ಎಚ್ಚರಿಕೆ ನೀಡುವ ವರ್ತನೆಯಾಗಿಯೂ ಇದನ್ನು ಭಾವಿಸಬಹುದು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾವು ಯಾವುದೇ ಸಂಭಾವ್ಯ ಸನ್ನಿವೇಶವನ್ನು ಎದುರಿಸುವ ಮಾನಸಿಕಧಿ-ವಾಸ್ತವಿಕ ಸಿದ್ಧತೆಗಳನ್ನು ರೂಪಿಸಿಕೊಳ್ಳುವುದು ಆವಶ್ಯಕ. ವಿಪಕ್ಷಗಳು ರಕ್ಷಣೆ ಮತ್ತು ಮಿಲಿಟರಿಗೆ ಸಂಬಂಧಿಸಿದ ಬೆಳವಣಿಗೆಗಳಲ್ಲಿ ಸರಕಾರವನ್ನು ದೂಷಿಸುವ ಪ್ರಯತ್ನ ಮಾಡದೆ ಬೆಂಬಲಿಸುವ ಮೂಲಕ ಒಡಕಿಲ್ಲದ ವಾತಾವರಣವನ್ನು ನಿರ್ಮಿಸಬೇಕು. ಆಗ ಸರಕಾರ, ಜನರು ಮತ್ತು ರಕ್ಷಣಾ ಪಡೆಗಳ ಮಾನಸಿಕ ಬಲವೂ ವೃದ್ಧಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಎದುರಿನ ಸನ್ನಿವೇಶವನ್ನು ಕಡಿಮೆಯಾಗಿ ಅಂದಾಜಿಸದೆ ಸರ್ವಸನ್ನದ್ಧತೆಯಲ್ಲಿರುವ, ದೇಶದ ಸಾರ್ವಭೌಮತೆಯ ರಕ್ಷಣೆಯ ವಿಚಾರದಲ್ಲಿ ಕೆಚ್ಚೆದೆಯನ್ನು ಪ್ರದರ್ಶಿಸುವ ಧೀಮಂತಿಕೆ ನಮ್ಮ ಸರಕಾರದ್ದಾಗಿರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.