ಮಹದಾಯಿಗೆ ಬೇಕಿದೆ ಸಂಘಟಿತ ಯತ್ನ
Team Udayavani, Dec 20, 2019, 6:06 AM IST
ರಾಜಕೀಯ ಪ್ರತಿಷ್ಠೆ, ಲಾಭ-ನಷ್ಟದ ಲೆಕ್ಕಾಚಾರಕ್ಕೆ ಸಿಲುಕಿದ ಮಹದಾಯಿ ಹಲವು ದಶಕಗಳಿಂದ ನರಳುತ್ತಲೇ ಇದೆ.
ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ವಿಚಾರದಲ್ಲಿ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ. ರಾಜಕೀಯ ಪ್ರತಿಷ್ಠೆ, ಲಾಭ-ನಷ್ಟದ ಲೆಕ್ಕಾಚಾರದ ಸುಳಿಗೆ ಸಿಲುಕಿ ನಲುಗುವಂತಾಗಿದೆ. ಚುನಾವಣೆಗಳು ಬಂದಾಗಲೊಮ್ಮೆ ಆಸೆ ಗರಿಗೆದರುತ್ತಿದೆಯಾದರೂ, ಯೋಜನೆಯಡಿ ಹನಿ ನೀರು ದೊರೆಯದೆ ಜನ ಕಣ್ಣೀರಿಡುವಂತಾಗಿದೆ.
ಬಹುತೇಕ ಬಳಕೆ ಇಲ್ಲದೆ ಸುಮಾರು 200 ಟಿಎಂಸಿ ಅಡಿಯಷ್ಟು ಮಹದಾಯಿ ನದಿ ನೀರು ಸಮುದ್ರ ಪಾಲಾಗುತ್ತಿದೆ. ನಮ್ಮದೇ ಹಳ್ಳಗಳಾದ ಕಳಸಾ-ಬಂಡೂರಿ ನಾಲಾಗಳಿಂದ ಕುಡಿಯುವ ನೀರಿನ ಉದ್ದೇಶಕ್ಕೆಂದು ಕೈಗೊಂಡ ಯೋಜನೆಗೂ ಬಿಡದೆ ಗೋವಾ ಹೆಜ್ಜೆ, ಹೆಜ್ಜೆಗೂ ಅಡ್ಡಿಪಡಿಸುತ್ತಿದೆ. ಗೋವಾದ ಕುಣಿತಕ್ಕೆ ತಾಳ ಹಾಕುವಂತೆ ಕೇಂದ್ರ ಸರಕಾರ ವರ್ತಿಸುವ ಮೂಲಕ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ಅಳಲು ಕನ್ನಡಿಗರದ್ದಾಗಿದೆ.
1976ರ ಸುಮಾರಿಗೆ ಅವಿಭಜಿತ ವಿಜಯಪುರ ಜಿಲ್ಲೆ ಗುಳೇದಗುಡ್ಡ ಶಾಸಕರಾಗಿದ್ದ ಬಿ.ಎಂ.ಹೊರಕೇರಿಯವರು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಖ್ಯಾತ ಇಂಜಿನಿಯರ್ ಎಸ್.ಜಿ.ಬಾಳೇಕುಂದ್ರಿ ಅವರಿಂದ ಮಹದಾಯಿ ನದಿ ನೀರು ಬಳಕೆ ಕುರಿತಾದ ಯೋಜನೆ ರೂಪಿಸಿದ್ದರು. 1980ರ ಸುಮಾರಿಗೆ ರಾಜ್ಯ ಸರಕಾರ ಎಸ್.ಆರ್.ಬೊಮ್ಮಾಯಿ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಮಹದಾಯಿ ನದಿ ನೀರು ಬಳಕೆಯ ಶಿಫಾರಸನ್ನು ಸಮಿತಿ ಮಾಡಿತ್ತು. ಮುಂದೆ ಎಸ್.ಆರ್.ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿದ್ದಾಗ, ಗೋವಾದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರಾದರೂ ನಂತರ ಉಲ್ಟಾ ಹೊಡೆದಿದ್ದ ಗೋವಾ ಊಸರವಳ್ಳಿತನ ಪ್ರದರ್ಶಿಸಿತ್ತು.
1999-2000ರಲ್ಲಿ ಅಂದಿನ ಜಲಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲರು ಕುಡಿಯುವ ನೀರಿಗೆಂದು ಕಳಸಾ- ಬಂಡೂರಿ ನಾಲಾಗಳಿಂದ 7.56 ಟಿಎಂಸಿ ಅಡಿ ನೀರು ಬಳಕೆ ಯೋಜನೆ ರೂಪಿಸಿದ್ದರು. 2002ರಲ್ಲಿ ಕೇಂದ್ರದ ಎನ್‌ಡಿಎ ಸರಕಾರ ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಿತ್ತಾದರೂ ಗೋವಾದ ಲಾಬಿಗೆ ಮಣಿದು ಒಪ್ಪಿಗೆ ಅಮಾನತ್ತಿನಲ್ಲಿಟ್ಟಿತ್ತು.
ಮಹದಾಯಿ ನೀರು ಹಂಚಿಕೆ ನ್ಯಾಯಾಧಿಕರಣದಿಂದಲೇ ಇತ್ಯರ್ಥವಾಗಲಿ ಎಂಬ ಗೋವಾದ ಪಟ್ಟಿನಿಂದ, ಕೇಂದ್ರ ಸರಕಾರ 2010ರಲ್ಲಿ ನ್ಯಾ|ಜೆ.ಎಂ.ಪಾಂಚಾಲ ನೇತೃತ್ವದಲ್ಲಿ ಮಹದಾಯಿ ನ್ಯಾಯಾಧಿಕರಣ ರಚಿಸಿತ್ತು. ಈ ನ್ಯಾಯಾ ಧಿಕರಣ 2018ರ ಆಗಸ್ಟ್ 14ರಂದು ತೀರ್ಪು ನೀಡಿ, ಕರ್ನಾಟಕಕ್ಕೆ ಒಟ್ಟಾರೆ 13.07 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿತ್ತು. ಗೋವಾ ಅದಕ್ಕೂ ಕೊಂಕು ತೆಗೆದಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ ಜಾವಡೇಕರ್ ಅವರು 2019ರ ಅಕ್ಟೋಬರ್ 17ರಂದು ಕಳಸಾ-ಬಂಡೂರಿ ನಾಲಾ ಯೋಜನೆ ಕುಡಿಯುವ ನೀರಿನ ಉದ್ದೇಶದ್ದಾಗಿದ್ದು, ಇದಕ್ಕೆ ಪರಿಸರ ಇಲಾಖೆ ಅನುಮತಿ ಅಗತ್ಯವಿಲ್ಲ ಎಂಬ ಪತ್ರ ನೀಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ತೋರಿದ ಗೋವಾ, ಕೇಂದ್ರದ ಮೇಲೆ ಒತ್ತಡ ತಂದು ಬುಧವಾರ (ಡಿ.18) ಒಪ್ಪಿಗೆ ತಡೆಯೊಡ್ಡುವಂತೆ ಮಾಡಿದೆ.
ಮಹದಾಯಿ ವಿಚಾರದಲ್ಲಿ ಎನ್‌ಡಿಎ ಸರಕಾರ ಎರಡು ಬಾರಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದರೆ, ಈ ಹಿಂದೆ ಗೋವಾದಲ್ಲಿನ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಕರ್ನಾಟಕಕ್ಕೆ ಮಹದಾಯಿ ಹನಿ ನೀರು ನೀಡುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ರಾಜಕೀಯ ಪ್ರತಿಷ್ಠೆ, ಲಾಭ-ನಷ್ಟಕ್ಕೆ ಸಿಲುಕಿದ ಮಹದಾಯಿ ಹಲವು ದಶಕಗಳಿಂದ ನರಳುತ್ತಿದೆ. ಮಹದಾಯಿ, ಕಳಸಾ ಬಂಡೂರಿ ಹೋರಾಟ ಮಾಡಿದವರಲ್ಲಿ ಅನೇಕರು ಅಧಿಕಾರದಲ್ಲಿದ್ದಾರೆ. ಆದರೆ ಸತತ ಮೂರ್‍ನಾಲ್ಕು ವರ್ಷಗಳಿಂದ ಹೋರಾಟ ಮಾಡಿ, ಲಾಠಿ ಏಟು ತಿಂದು, ಜೈಲು ಸೇರಿ, ಕೋರ್ಟ್‌ಗೆ ಅಲೆದಾಡುತ್ತಿರುವ ರೈತರು, ಹೋರಾಟಗಾರರು ರಾಜಕೀಯ ಚದುರಂಗದಾಟದಿಂದ ಭ್ರಮನಿರಸನಗೊಂಡಿದ್ದಾರೆ.
ರಾಜಕೀಯ ಪ್ರತಿಷ್ಠೆ, ಲಾಭ-ನಷ್ಟ ಬದಿಗಿರಿಸಿ, ರಾಜ್ಯದ ಹಿತ, ಕುಡಿಯುಲು ಹಾಗೂ ಕೃಷಿಗೆ ನೀರೊದಗಿಸಲು ಸಂಘಟಿತ ಯತ್ನ ತೋರಬೇಕಿದೆ.
ಕೇಂದ್ರದಿಂದ ಅಧಿಸೂಚನೆ ಹೊರಡಿಸಲು, ಕೇಂದ್ರ ನೀಡಿದ ಒಪ್ಪಿಗೆ ಮುಂದುವರಿಸಲು ಒತ್ತಡದ ಮೂಲಕ, ರಾಜ್ಯದ ರೈತರು ಹಾಗೂ ಜನರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
Surathkal: ಬೇಕು ವ್ಯವಸ್ಥಿತ ಒಳಚರಂಡಿ; ಸೋರುತ್ತಿರುವ ವೆಟ್‌ವೆಲ್‌ಗಳಿಂದ ಮಾಲಿನ್ಯ
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.