ಮಹಾಘಟಬಂಧನ್ ಕನಸಿಗೆ ಪೆಟ್ಟು: ಕುತೂಹಲಕಾರಿ ಬೆಳವಣಿಗೆ
Team Udayavani, Oct 13, 2018, 6:00 AM IST
ಜೆಡಿಎಸ್ ನೇತೃತ್ವದ ಸರ್ಕಾರಕ್ಕೆ ನಮ್ಮ ಬೆಂಬಲ, ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ನಮ್ಮ ಬೆಂಬಲ ಎಂದು ಖುದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹೇಶ್ ಹೇಳಿದ್ದಾರೆ. ಹೀಗಾಗಿ, ಮುಂದಿನ ಬೆಳವಣಿಗೆಗಳು ಯಾವ ಸ್ವರೂಪ ಪಡೆಯಲಿವೆ ಎಂದು ನೋಡಬೇಕು
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ವಿಧಾನಸೌಧ ಮುಂಭಾಗ ಪ್ರಮಾಣವಚನ ಸ್ವೀಕರಿಸಿದ ದಿನ ಬಿಜೆಪಿ ವಿರೋಧಿ ಅಥವಾ ಬಿಜೆಪಿಗೆ ಪರ್ಯಾಯವಾಗಿ ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನ್ ರಚನೆ ಮಾಡುವ ಸಂದೇಶ ಬೆಂಗಳೂರಿನಿಂದಲೇ ರವಾನೆಯಾಯಿತು. ಬಿಎಸ್‌ಪಿ ನಾಯಕಿ ಮಾಯಾವತಿ, ಸಮಾಜವಾದಿ ಪಕ್ಷದ ಅಖೀಲೇಶ್, ತೃಣಮೂಲ ಕಾಂಗ್ರೆಸ್‌ನ ಮಮತಾ ಆ ದಿನದ ಕಾರ್ಯಕ್ರಮದಲ್ಲಿ ಕೇಂದ್ರಬಿಂದು ಆಗಿದ್ದರು.
ಇದಾದ ನಂತರ ದೆಹಲಿಗೆ ಕುಮಾರಸ್ವಾಮಿ ಭೇಟಿ ನೀಡಿದ್ದಾಗ ತೆಲುಗುದೇಶಂನ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಜತೆಯೂ ಮಹಾಘಟಬಂಧನ್ ವಿಚಾರವಾಗಿಯೇ ಮಾತುಕತೆ ಸಹ ನಡೆಸಿದ್ದರು. ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿಯೇತರ ಶಕ್ತಿಗಳನ್ನು ಒಟ್ಟುಗೂಡಿಸುವಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಂಚೂಣಿಯಲ್ಲಿದ್ದರು. ಈ ಎಲ್ಲ ಬೆಳವಣಿಗೆಗಳು ಬಿಜೆಪಿಯಲ್ಲಿ ಸ್ವಲ್ಪ ಮಟ್ಟಿಗೆ ಆತಂಕ ಮೂಡಿಸಿದ್ದು ಹೌದು. ಅತಿ ಹೆಚ್ಚು ಲೋಕಸಭೆ ಕ್ಷೇತ್ರ ಹೊಂದಿರುವ ಉತ್ತರಪ್ರದೇಶ ಹಾಗೂ ಬಿಹಾರ, ಕರ್ನಾಟಕ, ಪಶ್ಚಿಮ ಬಂಗಾಳ ರಾಜ್ಯಗಳ ನಾಯಕರು, ಎಡಪಕ್ಷಗಳ ಮುಖಂಡರು ಒಟ್ಟುಗೂಡಿರುವ ಬಗ್ಗೆ ರಾಷ್ಟ್ರಮಟ್ಟದ ಚರ್ಚೆಯೂ ಆಗಿತ್ತು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲೂ ಇದೇ ರೀತಿಯ ಮಹಾಮೈತ್ರಿಯ ರಚನೆ ಮಾಡಿಕೊಂಡು ಚುನಾವಣೆ ಎದುರಿಸುವ ಪ್ರಸ್ತಾವನೆ ಮಾತುಕತೆಗಳೂ ನಡೆದಿದ್ದವು. ಆದರೆ, ಇದರ ನಡುವೆ ಮೊದಲಿಗೆ ತೆಲಂಗಾಣದ ಟಿಆರ್‌ಎಸ್ ಮಹಾಘಟಬಂಧನ್‌ನಿಂದ ಅಂತರ ಕಾಯ್ದುಕೊಂಡು ವಿಧಾನಸಭೆ ವಿಸರ್ಜನೆ ಮಾಡಿ ತನ್ನದೇ ದಾರಿ ನೋಡಿಕೊಂಡಿತು. ಇದಾದ ನಂತರ ಎನ್‌ಸಿಪಿ ಸಹ ಮಹಾಘಟಬಂಧನ್ ಬಗ್ಗೆ ಆಸಕ್ತಿ ತೋರಲಿಲ್ಲ.
ಎಲ್ಲದಕ್ಕಿಂತ ಹೆಚ್ಚಾಗಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಬಿಎಸ್‌ಪಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳದೆ ಶಾಕ್ ನೀಡಿದ್ದು ಈ ಮಹಾಮೈತ್ರಿಯ ಕನಸು ಭಗ್ನಕ್ಕೆ ಕಾರಣವಾಗಿದೆ. ಬಿಎಸ್‌ಪಿ ನಂತರ ಎಸ್‌ಪಿ ಹಾಗೂ ಎಡ ಪಕ್ಷಗಳು ಸಹ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳದಿರುವ ತೀರ್ಮಾನ ಮಾಡಿರುವುದು ಮತ್ತಷ್ಟು ಆಘಾತ ಸಹ ಮೂಡಿಸಿದೆ. ಈ ಹಿಂದಿನ ಎರಡು ಲೋಕಸಭೆ ಚುನಾವಣೆ ಸಂದರ್ಭಗಳಲ್ಲಿ ತೃತೀಯ ರಂಗ ರಚನೆ ಪ್ರಸ್ತಾಪವಾಗಿ ಒಂದಷ್ಟು ಪ್ರಯತ್ನವಾಗಿ ಚುನಾವಣೆ ವೇಳೆಗೆ ಅದು ವಿಫಲವಾದ ಉದಾಹರಣೆ ಇದ್ದರೂ ಮಹಾಘಟಬಂಧನ್ ರಚನೆಯ ಸಾಹಸಕ್ಕೆ ಕಾಂಗ್ರೆಸ್ ಕೈ ಹಾಕಿತ್ತು. ಇದಕ್ಕೆ ಪೂರಕವಾಗಿ ಬಿಎಸ್‌ಪಿ, ಜೆಡಿಎಸ್, ಟಿಎಂಸಿ, ಎಎಪಿ, ಎನ್‌ಸಿಪಿ ಸಹ ಜತೆಗೂಡುವ ಮುನ್ಸೂಚನೆ ನೀಡಿದವು. ಹೀಗಾಗಿ, ಮಹಾಘಟಬಂಧನ್ ಬಗ್ಗೆ ಕಾಂಗ್ರೆಸ್‌ಗೆ ಆಶಾಭಾವನೆ ಉಂಟಾಯಿತು. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚನೆಗೆ ಅದರಲ್ಲೂ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪಿಕೊಂಡಿತು. ಆದರೆ, ಇತ್ತೀಚೆಗಿನ ಬೆಳವಣಿಗೆಗಳಿಂದ ಮಹಾಘಟಬಂಧನ್ ರಚನೆಗೆ ಮುನ್ನವೇ ಛಿದ್ರಗೊಂಡಂತಾಗಿದೆ. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಸಮ್ಮಿಶ್ರ ಸರ್ಕಾರದ ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗಿ ನಾವೆಲ್ಲಾ ಒಂದು ಎಂದು ಸಂದೇಶ ಸಾರಿದ್ದ ಮಾಯಾವತಿ ಅದೇ ಸಮ್ಮಿಶ್ರ ಸರ್ಕಾರದಲ್ಲಿದ್ದ ಬಿಎಸ್‌ಪಿ ಸಚಿವ ಮಹೇಶ್ ಅವರಿಂದ ರಾಜೀನಾಮೆ ಕೊಡಿಸಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಅಷ್ಟೇ ಅಲ್ಲ ಕರ್ನಾಟಕದಲ್ಲೂ ಕಾಂಗ್ರೆಸ್ ಸಹವಾಸ ನಮಗೆ ಬೇಡ ಎಂಬ ಸಂದೇಶ ಸಾರಿದ್ದಾರೆ.
ಆದರೆ, ಜೆಡಿಎಸ್ ನೇತೃತ್ವದ ಸರ್ಕಾರಕ್ಕೆ ನಮ್ಮ ಬೆಂ ಬಲ, ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ನಮ್ಮ ಬೆಂಬಲ ಎಂದು ಖುದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹೇಶ್ ಹೇಳಿದ್ದಾರೆ. ಹೀಗಾಗಿ, ಮುಂದಿನ ರಾಜಕೀಯ ಬೆಳವಣಿಗೆಗಳು ಯಾವ ಸ್ವರೂಪ ಪಡೆಯಲಿವೆ ಎಂಬುದು ಕಾದು ನೋಡಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.