ಮಮತಾ-ಮೋದಿ ಭೇಟಿ ಆರೋಗ್ಯಕರ ರಾಜಕೀಯ
Team Udayavani, Sep 20, 2019, 5:05 AM IST
ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪರಸ್ಪರರ ಮೇಲೆ ಗೌರವ ಮತ್ತು ಆತ್ಮೀಯ ಭಾವನೆ ಇರುವುದು ಆರೋಗ್ಯಕರ ರಾಜಕೀಯದ ಲಕ್ಷಣ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಯೊಬ್ಬರು ಪ್ರಧಾನಿಯನ್ನು ಭೇಟಿಯಾಗುವುದರಲ್ಲಿ ವಿಶೇಷವೇನಿಲ್ಲ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳು ಈ ರೀತಿ ಪ್ರಧಾನಿಯನ್ನು ಅಥವಾ ಕೇಂದ್ರದ ಇತರ ಸಚಿವರನ್ನು ಭೇಟಿಯಾಗುವುದು ಒಕ್ಕೂಟ ವ್ಯವಸ್ಥೆಯ ಒಂದು ಸಹ ಜ ಪ್ರಕ್ರಿಯೆಯಷ್ಟೆ. ಆದರೆ ಮಮತಾ ಬ್ಯಾನರ್ಜಿಯ ಭೇಟಿಗೆ ಮಾತ್ರ ಒಂದಿಷ್ಟು ವಿಶೇಷತೆಯನ್ನು ಕಲ್ಪಿಸಲಾಗಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಮತ್ತು ದೀದಿ ನಡುವಿನ ಕಾದಾಟ ತಾರಕಕ್ಕೇರಿತ್ತು. ಮೋದಿಯ ಪ್ರತಿಯೊಂದು ನಡೆ – ನುಡಿಯನ್ನು ಮಮತಾ ಟೀಕಿಸುತ್ತಿದ್ದರು. ಮೋದಿಗೆ ಪರ್ಯಾಯ ರಾಷ್ಟ್ರೀಯ ನಾಯಕಿ ಎಂದು ಬಿಂಬಿಸಿಕೊಳ್ಳುವ ಯಾವ ಪ್ರಯತ್ನವನ್ನೂ ಮಮತಾ ಬಿಟ್ಟುಕೊಡಲಿಲ್ಲ. ದೀದಿಯನ್ನು ಮೋದಿ ಅಭಿವೃದ್ಧಿಗೆ ಎದುರಾಗಿರುವ ವೇಗತಡೆ ಎಂದು ಬಣ್ಣಿಸಿದರೆ ಅವಧಿ ಮುಗಿದ ಪ್ರಧಾನಿ ಎಂಬ ಲೇವಡಿಯೊಂದಿಗೆ ಮಮತಾ ಇದಕ್ಕೆ ತಿರುಗೇಟು ನೀಡಿದರು.
ಈ ಕಚ್ಚಾಟದ ನಡುವೆಯೇ ನಟ ಅಕ್ಷಯ್ ಕುಮಾರ್‌ಗೆ ನೀಡಿದ ಖಾಸಗಿ ಸಂದರ್ಶನವೊಂದರಲ್ಲಿ ಮೋದಿ ತನ್ನ ಮತ್ತು ಮಮತಾ ನಡುವೆ ಇರುವ ಆತ್ಮೀಯ ಸಂಬಂಧವೊಂದನ್ನು ಬಹಿರಂಗಪಡಿಸಿದರು. ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ತಾವೇ ಸ್ವತಃ ಆಯ್ಕೆ ಮಾಡಿದ ಕುರ್ತಾ, ಬಂಗಾಳಿ ಸಿಹಿತಿಂಡಿಗಳು ಹಾಗೂ ಹಣ್ಣುಗಳನ್ನು ಮೋದಿಗೆ ಉಡುಗೊರೆಯಾಗಿ ಕಳುಹಿಸಿ ಕೊಡುತ್ತಾರಂತೆ. ಮೋದಿ ಇದನ್ನು ಸಾಮಾನ್ಯ ವಿಷಯ ಎಂಬಂತೆ ಹೇಳಿದ್ದರೂ ಅನಂತರ ಇದು ರಾಜಕೀಯ ಆಯಾಮ ಪಡೆದು ಕೊಂಡದ್ದು ಹಳೆ ವಿಚಾರ. ರಾಜಕೀಯದಲ್ಲಿ ಹಾವು ಮುಂಗುಸಿಗಳಂತೆ ಕಾದಾಡುತ್ತಿರುವ ಮೋದಿ ಮತ್ತು ದೀದಿ ನಡುವೆ ಹೀಗೊಂದು ಆತ್ಮೀಯ ಸಹೋದರ ಭಾವದ ಸಂಬಂಧ ಇರಬಹುದು ಎಂಬ ವಿಚಾರ ಜನರ ನಡುವೆಯೂ ಭಾರೀ ಚರ್ಚೆಗೀಡಾಗಿತ್ತು. ಇದೀಗ ಎರಡು ದಿನಗಳ ಹಿಂದಿನ ಭೇಟಿಯಲ್ಲೂ ಮಮತಾ ಉಡುಗೊರೆ ಕೊಡುವ ಸಂಪ್ರದಾಯವನ್ನು ಪಾಲಿಸಿದ್ದಾರೆ ಮಾತ್ರವಲ್ಲದೆ ತನ್ನ ರಾಜ್ಯದ ದುರ್ಗಾ ಪೂಜೆಗೆ ಅತಿಥಿಯಾಗಿ ಬರುವಂತೆ ಆಹ್ವಾನ ನೀಡಿದ್ದಾರೆ.
ಬಿಭುìಮ್‌ನಲ್ಲಿರುವ ಜಗತ್ತಿನ ಎರಡನೇ ಅತಿ ದೊಡ್ಡ ಕಲ್ಲಿದ್ದಲು ಗಣಿಯ ಲೋಕಾರ್ಪಣೆಗೆ ಆಹ್ವಾನ ಮತ್ತು ರಾಜ್ಯದ ಹೆಸರು ಬದಲಾವಣೆ ಪ್ರಸ್ತಾಪವನ್ನು ಶೀಘ್ರವಾಗಿ ಪರಿಗಣಿಸುವಂಥ ಇತರ ಕೆಲವು ವಿಚಾರಗಳ ಬಗ್ಗೆಯೂ ಅವರ ನಡುವೆ ಮಾತುಕತೆ ನಡೆದಿದೆ. ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶಾಶ್ವತ ಶತ್ರುಗಳೂ ಇಲ್ಲ ಎನ್ನುವುದು ಹಳೆ ಮಾತಾದರೂ ಆಗಾಗ ಇದು ಸಾಬೀತಾಗುತ್ತಿರುತ್ತದೆ. ರಾಜ್ಯದ ಅಭಿವೃದ್ಧಿ ವಿಚಾರ ಬಂದಾಗ ಮೋದಿ ಮತ್ತು ದೀದಿ ಲೋಕಸಭಾ ಚುನಾವಣೆಯ ಕಹಿಗಳನ್ನೆಲ್ಲ ಮರೆತಿದ್ದಾರೆ ಎನ್ನುವುದು ಒಂದು ಉತ್ತಮ ಸಂದೇಶವನ್ನು ರವಾನಿಸುತ್ತದೆ. ರಾಜಕೀಯದ ವೈಷಮ್ಯವೇ ಬೇರೆ ಖಾಸಗಿಯಾದ ಸಂಬಂಧಗಳೇ ಬೇರೆ ಎನ್ನುವುದನ್ನು ಈ ಇಬ್ಬರು ನಾಯಕರು ತೋರಿಸಿಕೊಟ್ಟಿದ್ದಾರೆ. ಈ ಕಾರಣಕ್ಕೆ ಈ ಸಲದ ಮೋದಿ-ದೀದಿ ಭೇಟಿ ತುಸು ವಿಶೇಷ ಎಂದೆನಿಸಿದೆ. ರಾಜಕೀಯ ವೈಷಮ್ಯ ಸಿದ್ಧಾಂತಗಳ ನಡುವಿನ ಸಂಘರ್ಷವಾಗಬೇಕೆ ಹೊರತು ರಾಜಕೀಯ ಅಸ್ಪೃಶ್ಯತನವಾಗಬಾರದು. ಚುನಾವಣಾ ಕಣದಲ್ಲಿ ನಡೆದ ಕೆಸರೆರಚಾಟ ಆಡಳಿತಕ್ಕೂ ವಿಸ್ತರಿಸದಂತೆ ನೋಡಿಕೊಳ್ಳಬೇಕಾದದ್ದು ಕೇಂದ್ರ ಮತ್ತು ರಾಜ್ಯಗಳ ಜವಾಬ್ದಾರಿ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪರಸ್ಪರರ ಮೇಲೆ ಗೌರವ ಮತ್ತು ಆತ್ಮೀಯ ಭಾವನೆ ಇರುವುದು ಆರೋಗ್ಯಕರ ರಾಜಕೀಯದ ಲಕ್ಷಣ. ಈ ನೆಲೆಯಲ್ಲಿ ಮೋದಿ ಮತ್ತು ದೀದಿ ನಡುವಿನ ಸ್ನೇಹವನ್ನು ಮೇಲ್ಪಂಕ್ತಿಯಾಗಿ ಒಪ್ಪಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.