ಎಚ್ಚರಿಕೆಯಾಗಲಿ ಮಂಗಳೂರು ಪ್ರಕರಣ ; ಭದ್ರತೆಯ ಪ್ರಶ್ನೆ
Team Udayavani, Jan 23, 2020, 6:40 AM IST
ಈ ಪ್ರಕರಣ ಸಾರ್ವಜನಿಕ ಸ್ಥಳಗಳ ಭದ್ರತೆಗೆ ಸಂಬಂಧಿಸಿದಂತೆ ಇರುವ ಲೋಪಗಳನ್ನು ಬಯಲುಗೊಳಿಸಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಮಾಲ್‌ಗಳು, ಪಾರ್ಕ್‌ಗಳು, ಪೂಜಾ ತಾಣಗಳು ಹೀಗೆ ಜನ ಸೇರುವ ಸ್ಥಳಗಳಲ್ಲಿ ಭದ್ರತೆ ಇನ್ನಷ್ಟು ಸುಧಾರಿಸುವ ಅಗತ್ಯವಿದೆ ಎನ್ನುವುದನ್ನು ಈ ಘಟನೆ ತೋರಿಸಿಕೊಟ್ಟಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ವ್ಯಕ್ತಿ ಪೊಲೀಸ್ ವಶವಾಗುವುದರೊಂದಿಗೆ ಈ ಪ್ರಕರಣದ ಸುತ್ತ ಹರಡಿದ್ದ ಊಹಾಪೋಹಗಳಿಗೆಲ್ಲ ಸದ್ಯಕ್ಕೆ ತೆರೆ ಬಿದ್ದಿದೆ. ಆದರೆ ಈ ಪ್ರಕರಣ ವಿಮಾನ ನಿಲ್ದಾಣಗಳು ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳ ಭದ್ರತೆಗೆ ಸಂಬಂಧಿಸಿದ ವಿಚಾರದಲ್ಲಿ ಹಲವಾರು ಪ್ರಶ್ನೆಗಳನ್ನೆತ್ತಿದೆ.
ಸೋಮವಾರ ವಿಮಾನ ನಿಲ್ದಾಣದ ಆವರಣದ ಟಿಕೆಟ್ ಕೌಂಟರ್‌ನ ಪಕ್ಕದಲ್ಲಿ ಬಾಂಬ್ ಇದ್ದ ಬ್ಯಾಗ್ ಪತ್ತೆಯಾಗಿತ್ತು. ಕೂಡಲೇ ಬಾಂಬ್ ನಿಷ್ಕ್ರಿಯ ಪಡೆಯವರು ಬಂದು ನಿರ್ಜನ ಸ್ಥಳಕ್ಕೊಯ್ದು ಸ್ಫೋಟಿಸುವ ಮೂಲಕ ಸಂಭಾವ್ಯ ದುರಂತವನ್ನು ತಪ್ಪಿಸಿದರು. ಎರಡೇ ದಿನಗಳಲ್ಲಿ ಆರೋಪಿಯೂ ಪತ್ತೆಯಾಗುವುದರೊಂದಿಗೆ ಒಂದು ಹಂತಕ್ಕೆ ಪ್ರಕರಣ ಬಗೆಹರಿದಂತಾಗಿದೆ. ಆರೋಪಿ ಏಕಾಗಿ ಬಾಂಬ್ ಇಟ್ಟಿದ್ದ? ಅವನ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ? ಸ್ಫೋಟಕ ಸಾಮಾಗ್ರಿಗಳು ಅವನಿಗೆ ಲಭಿಸಿದ್ದು ಹೇಗೆ? ವಿಮಾನ ನಿಲ್ದಾಣದ ತನಕವೂ ಅವನು ಅದನ್ನು ಯಾವುದೇ ತಡೆಯಿಲ್ಲದೆ ಒಯ್ದದ್ದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆಲ್ಲ ಇನ್ನಷ್ಟೇ ಉತ್ತರ ಲಭಿಸಬೇಕು.
ಆದರೆ ಈ ಪ್ರಕರಣ ಸಾರ್ವಜನಿಕ ಸ್ಥಳಗಳ ಭದ್ರತೆಗೆ ಸಂಬಂಧಿಸಿದಂತೆ ಇರುವ ಲೋಪಗಳನ್ನು ಬಯಲುಗೊಳಿಸಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಮಾಲ್‌ಗಳು, ಪಾರ್ಕ್‌ಗಳು, ಪೂಜಾ ತಾಣಗಳು ಹೀಗೆ ಜನ ಸೇರುವ ಸ್ಥಳಗಳಲ್ಲಿ ಭದ್ರತೆ ಇನ್ನಷ್ಟು ಸುಧಾರಿಸುವ ಅಗತ್ಯವಿದೆ ಎನ್ನುವುದನ್ನು ಈ ಘಟನೆ ತೋರಿಸಿಕೊಟ್ಟಿದೆ.
ಸಾಮಾಜಿಕ ಶಾಂತಿ ಮತ್ತು ಸ್ವಾಸ್ಥ್ಯವನ್ನು ಕದಡಲು ಬಯಸುವ ವಿಕೃತಮತಿಯ ಕಿಡಿಗೇಡಿಗಳ ಪಾಲಿಗೆ ಪ್ರಮುಖ ಆಕರ್ಷಣೆ ವಿಮಾನ ನಿಲ್ದಾಣಗಳು. ಅಲ್ಲಿ ಬಾಂಬಿ ಟ್ಟಿದ್ದೇವೆ, ಇಲ್ಲಿ ಬಾಂಬಿಟ್ಟಿದ್ದೇವೆ ಎಂದು ಹುಸಿ ಬೆದರಿಕೆ ಕರೆಗಳನ್ನು ಮಾಡಿ ಭದ್ರತಾ ಸಿಬಂದಿ ಗೋಳು ಹೊಯ್ದುಕೊಳ್ಳುವುದು ಆಗಾಗ ಸಂಭವಿಸುತ್ತಿರುತ್ತದೆ. ಹೀಗೆ ಮಾಡಿದರೆ ಇಡೀ ವ್ಯವಸ್ಥೆಯೇ ಕೆಲವು ತಾಸುಗಳ ಮಟ್ಟಿಗೆ ಪರದಾಡಬೇಕಾಗುತ್ತದೆ. ಇಂಥ ಪ್ರಕರಣಗಳಲ್ಲಿ ಆರೋಪಿಗಳು ಸಿಕ್ಕಿ ಬೀಳುವುದು ಕಡಿಮೆ. ಹಾಗೊಂದು ವೇಳೆ ಸೆರೆಯಾದರೂ ಅವರಿಗೆ ಕಠಿನ ಶಿಕ್ಷೆಯಾಗುವುದಿಲ್ಲ. ಹೀಗಾಗಿ ವಿಘ್ನ ಸಂತೋಷಿಗಳು ಆಗಾಗ ಇಂಥ ಹುಸಿ ಬೆದರಿಕೆಗಳನ್ನು ಒಡ್ಡಿ ವಿಕೃತ ಸಂತೋಷ ಅನುಭವಿಸುತ್ತಿರುತ್ತಾರೆ.
ಹಾಗೆ ನೋಡಿದರೆ ನಮ್ಮ ವಿಮಾನ ನಿಲ್ದಾಣಗಳ ಒಳಗಿನ ಭದ್ರತೆ ಸಾಕಷ್ಟು ಬಿಗುವಾಗಿಯೇ ಇದೆ. ಭದ್ರತಾ ಸಿಬಂದಿ ಕಣ್ಣುತಪ್ಪಿಸಿ ಒಂದು ಚಿಕ್ಕ ಬ್ಲೇಡ್ ಕೂಡ ಒಯ್ಯಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದಿನಿಂದ ಇಲೆಕ್ಟ್ರಾನಿಕ್ ವಸ್ತುಗಳನ್ನು ಪ್ರತ್ಯೇಕವಾಗಿಯೇ ತಪಾಸಣೆಗೊಳಪಡಿಸುವ ವ್ಯವಸ್ಥೆಯೂ ಕೆಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿವೆ. ಇಡೀ ವಿಮಾನ ನಿಲ್ದಾಣದ ಭದ್ರತೆಯನ್ನು ನೋಡಿಕೊಳ್ಳುವುದು ಕೇಂದ್ರೀಯ ಔದ್ಯೋಗಿಕ ಭದ್ರತಾ ಪಡೆ (ಸಿಐಎಸ್‌ಎಫ್) ಎಂಬ ವಿಶೇಷವಾಗಿ ತರಬೇತಿ ಹೊಂದಿರುವ ಯೋಧರ ಪಡೆ. ಆದರೆ ಚಿಂತೆಯಿರುವುದು ವಿಮಾನ ನಿಲ್ದಾಣಗಳ ಹೊರಗಿನ ಭದ್ರತೆ ಕುರಿತು. ಮಂಗಳೂರು ಪ್ರಕರಣದಲ್ಲಾಗಿರುವಂತೆ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ತನಕ ತಪಾಸಣೆಯಿಲ್ಲದೆ ಹೋಗಬಹುದು. ಸಾಮಾನ್ಯವಾಗಿ ವಿಮಾನ ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಹೋಗುವವರನ್ನು ಬೀಳ್ಕೊಡಲು, ಬರುವವರನ್ನು ಸ್ವಾಗತಿಸಲು ಬಂದವರಿಂದ ತುಂಬಿರುತ್ತದೆ. ಇಂಥ ಸಂದರ್ಭದಲ್ಲಿ ಸ್ಫೋಟವೇನಾದರೂ ಸಂಭವಿಸಿದರೆ ಸಾಕಷ್ಟು ಹಾನಿಯಾಗುವುದು ನಿಶ್ಚಿತ.
ಒಟ್ಟಾರೆಯಾಗಿ ವಿಮಾನ ನಿಲ್ದಾಣಗಳ ಭದ್ರತೆಯನ್ನು ಸಮಗ್ರವಾಗಿ ಸುಧಾರಿಸಬೇಕಾದ ಅಗತ್ಯವನ್ನು
ಮಂಗಳೂರು ಪ್ರಕರಣ ಒತ್ತಿ ಹೇಳಿದೆ. ವಿಮಾನ ನಿಲ್ದಾಣಗಳಲ್ಲಿ ಇಷ್ಟೆಲ್ಲ ಬಿಗು ಭದ್ರತೆ ಇದ್ದರೂ ಅಂತಾರಾಷ್ಟ್ರೀಯ ನಾಗರಿಕ ವಾಯುಯಾನ ಸಂಸ್ಥೆ (ಐಸಿಎಒ) ಸುಮಾರು ಎರಡು ವರ್ಷಗಳ ಹಿಂದೆಯಷ್ಟೇ ಭಾರತದ ವಿಮಾನ ನಿಲ್ದಾಣಗಳ ಭದ್ರತೆ ಬೆಳೆಯುತ್ತಿರುವ ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಮೇಲ್ದರ್ಜೆಗೇರುತ್ತಿಲ್ಲ ಎಂಬ ವರದಿಯನ್ನು ನೀಡಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಸಾರ್ವಜನಿಕ ಸ್ಥಳಗಳ ಭದ್ರತೆ ಎಂದರೆ ಅದು ಸರಕಾರ ಅಥವಾ ವ್ಯವಸ್ಥೆಯ ಜವಾಬ್ದಾರಿ ಮಾತ್ರ ಅಲ್ಲ. ಸಾರ್ವಜನಿಕರ ಸಹಕಾರ ಮತ್ತು ಸಕ್ರಿಯ ಸಹಭಾಗಿತ್ವವೂ ಅಗತ್ಯ. ನಮ್ಮ ದೇಶದಲ್ಲಿ ಭದ್ರತಾ ತಪಾಸಣೆಗಳನ್ನು ಅನಗತ್ಯ ಕಿರಿಕಿರಿ ಎಂದು ಭಾವಿಸುವವರೇ ಅಧಿಕ. ವಾಹನ ತಪಾಸಣೆಗಾಗಿ ಐದು ನಿಮಿಷ ನಿಲ್ಲಿಸಿದರೂ ರೇಗುವವರಿದ್ದಾರೆ. ಜನರ ಈ ಮನೋಭಾವ ಬದಲಾಗಬೇಕು. ಅಂತಿಮವಾಗಿ ಇಂಥ ಭದ್ರತೆ ಇರುವುದು ನಮ್ಮ ಸುರಕ್ಷತೆಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.