ರಾಜಕೀಯ ಬದಿಗಿಟ್ಟು ಮೇಕೆದಾಟು ಸಾಕಾರಕ್ಕೆ ಯತ್ನಿಸಲಿ
Team Udayavani, Mar 19, 2022, 6:00 AM IST
ಮೇಕೆದಾಟು ಆಣೆಕಟ್ಟು ವಿವಾದ ಸಂಬಂಧ ರಾಜ್ಯದ ಎಲ್ಲ ಪಕ್ಷಗಳು ಒಟ್ಟಾಗಿ ಸಭೆ ನಡೆಸಿರುವುದು ಉತ್ತಮವಾದ ಬೆಳವಣಿಗೆ. ಕರ್ನಾಟಕದ ಪಾಲಿನ ನೀರಿಗಾಗಿ ಕಳೆದ ಒಂಬತ್ತು ವರ್ಷಗಳಿಂದಲೂ ರಾಜ್ಯ ಸರಕಾರ ಹೆಣಗಾಡುತ್ತಲೇ ಇದೆ. ನಮ್ಮಲ್ಲಿ ಅಣೆಕಟ್ಟು ನಿರ್ಮಿಸುವಾಗ ಕೆಳ ರಾಜ್ಯಗಳ ಅಂಗೀಕಾರ ಬೇಕಾಗಿಲ್ಲ ಎಂದು ಸ್ವತಃ ಸುಪ್ರೀಂ ಕೋರ್ಟ್ ಹೇಳಿದೆ. ಆದರೂ, ತಮಿಳುನಾಡು ಮಾತ್ರ ಮೇಕೆದಾಟು ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ.
ಕರ್ನಾಟಕದಲ್ಲಿ ಆಗಲಿ ಅಥವಾ ತಮಿಳುನಾಡು ಆಗಲಿ, ಯಾವುದೇ ಸರಕಾರಗಳು ಬಂದರೂ ಮೇಕೆದಾಟು ಸೇರಿದಂತೆ ಜಲ ವಿವಾದಗಳ ವಿಚಾರದಲ್ಲಿ ಅಡಕತ್ತರಿಗೆ ಸಿಲುಕಿಕೊಂಡಂತೆ ವರ್ತಿಸುತ್ತವೆ. ಇದಕ್ಕೆ ಕಾರಣವೂ ಇದೆ. ಪ್ರತೀ ಬಾರಿಯೂ ಕರ್ನಾಟಕ ಅಥವಾ ತಮಿಳುನಾಡು ಸರಕಾರಗಳು ಈ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದರಿಂದ ಈ ರೀತಿ ಆಗುತ್ತಿದೆ. ತಮಿಳುನಾಡಿನಲ್ಲಿ ಕಾವೇರಿ ವಿಚಾರವನ್ನೇ ಮುನ್ನೆಲೆಗೆ ತಂದುಕೊಂಡು ರಾಜಕೀಯ ಮಾಡುತ್ತವೆ. ಆದರೆ ಈ ರಾಜಕೀಯ ಗುದ್ದಾಟದಲ್ಲಿ ಇದುವರೆಗೆ ಹೆಚ್ಚು ನೊಂದಿರುವುದು ಕರ್ನಾಟಕವೇ.
ಇದಕ್ಕೆ ಕಾರಣ, ಕೇಂದ್ರ ಸರಕಾರಗಳ ನಡೆ. ಹಿಂದಿನಿಂದಲೂ ತಮಿಳುನಾಡು ವಿಚಾರದಲ್ಲಿ ಕೇಂದ್ರ ಸರಕಾರಗಳು ಎಚ್ಚರಿಕೆಯ ನಡೆ ಇಡುತ್ತವೆ. ಯುಪಿಎ ಸರಕಾರದ ಅವಧಿಯಲ್ಲಿ, ಸರಕಾರದ ರಚನೆಗೆ ಕೊಟ್ಟ ಬೆಂಬಲವನ್ನೇ ಬಳಸಿಕೊಂಡು ಕರ್ನಾಟಕದ ಯಾವುದೇ ಜಲ ಯೋಜನೆಗಳಿಗೆ ಒಪ್ಪಿಗೆ ಸಿಗದಂತೆ ಮಾಡುವಲ್ಲಿ ಅಲ್ಲಿನ ಡಿಎಂಕೆ ಪಕ್ಷ ಮಾಡುತ್ತಿತ್ತು. ಇನ್ನು ಎನ್‌ಡಿಎ ಅವಧಿಯಲ್ಲಿ ಎಐಎಡಿಎಂಕೆ ಇದೇ ಸೂತ್ರ ಅಳವಡಿಸಿ ರಾಜ್ಯದ ಯೋಜನೆಗಳಿಗೆ ಕೊಕ್ಕೆ ಇಡುತ್ತಲೇ ಬಂದಿದೆ. ಹೀಗಾಗಿ ತಮಿಳುನಾಡಿನಲ್ಲಿ ಯಾವುದೇ ಸರಕಾರಗಳು ಬಂದರೂ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗುತ್ತವೆ.
ಹೀಗಾಗಿಯೇ ಪ್ರತೀ ಬಾರಿಯೂ ಕರ್ನಾಟಕಕ್ಕೆ ಅನ್ಯಾಯವಾಗುವುದು ಮಾತ್ರ ತಪ್ಪಿಲ್ಲ. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ ಮೇಕೆದಾಟುವಿಗೆ ಪರಿಸರ ಇಲಾಖೆಯ ಅನುಮತಿ ಪಡೆಯಲು ಸಾಧ್ಯವಾಗಿಲ್ಲ ಎಂಬುದು ವಿಷಾದದ ಸಂಗತಿ.
ಈ ಬೆಳವಣಿಗೆಯ ನಡುವೆ ಶುಕ್ರವಾರ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆದಿದೆ. ಇದರಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಪಾಲ್ಗೊಂಡು ತಮ್ಮದೇ ಆದ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅದರಲ್ಲಿಯೂ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕರೆದೊಯ್ಯುವ ಸ್ಥಿತಿ ಎದುರಾದರೆ ನಾವೂ ಬರುತ್ತೇವೆ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರು ಸರಕಾರಕ್ಕೆ ಅಭಯ ನೀಡಿದ್ದು, ಇದು ಉತ್ತಮ ಬೆಳವಣಿಗೆ.
ಅಲ್ಲದೆ ಸಿಎಂ ಬೊಮ್ಮಾಯಿ ಅವರ ಪ್ರಕಾರ, ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಸೋಮವಾರ ಅಥವಾ ಮಂಗಳವಾರ ದಿಲ್ಲಿಗೆ ಹೋಗಲಿದ್ದಾರೆ. ಸಾಧ್ಯವಾದಷ್ಟು ಮಟ್ಟಿಗೆ ಸಚಿವರು ಕೇಂದ್ರದ ಮುಂದೆ ಯೋಜನೆಯ ಅಷ್ಟೂ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿ ಹೇಳಬೇಕು. ಸದ್ಯ ಕೇಂದ್ರದ ಕಡೆಯಿಂದ ಬೇಕಾಗಿರುವುದು ಪರಿಸರಾತ್ಮಕ ಒಪ್ಪಿಗೆ. ಇದನ್ನು ಆದಷ್ಟು ಬೇಗ ಪಡೆಯಬೇಕು. ಆಗಲೂ ಸಾಧ್ಯವಾಗದೇ ಹೋದರೆ ಸರ್ವಪಕ್ಷಗಳ ನಿಯೋಗ ತೆರಳಿ ಮನವೊಲಿಕೆ ಮಾಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.