millets; ಬಿಸಿಯೂಟದಲ್ಲಿ ಸಿರಿಧಾನ್ಯ ಪೌಷ್ಟಿಕ ನಾಡಿಗೆ ಮುನ್ನುಡಿಯಾಗಲಿ
Team Udayavani, Jan 8, 2024, 5:05 AM IST
ಸಮಾಜದ ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರ ಕಲ್ಪಿಸುವ ಉದ್ದೇಶದಿಂದ ಅಂಗನವಾಡಿ, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಇಂದಿರಾ ಕ್ಯಾಂಟೀನ್, ಪಡಿತರ ವಿತರಣೆಯಲ್ಲಿ ಶೀಘ್ರ ಸಿರಿಧಾನ್ಯ ಆಹಾರ ಪರಿಚಯಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಸ್ವಾಗತಾರ್ಹ.
ಮುಖ್ಯಮಂತ್ರಿಯರ ಈ ಘೋಷಣೆ ಆದಷ್ಟು ಶೀಘ್ರ ಜಾರಿಗೆ ಬರಬೇಕು. ಆ ಮೂಲಕ ರಾಜ್ಯದಲ್ಲಿ ಅಪೌಷ್ಟಿಕತೆ ನಿವಾರಣೆಯ ಹೋರಾಟಕ್ಕೆ ಒಂದು ಮೈಲಿಗಲ್ಲು ಸಿಗುವಂತಾಗಬೇಕು. ಮಧ್ಯಾಹ್ನದ ಬಿಸಿಯೂಟ, ಇಂದಿರಾ ಕ್ಯಾಂಟೀನ್ ಹಾಗೂ ಪಡಿತರ ವಿತರಣೆಯಲ್ಲಿ ಸಿರಿಧಾನ್ಯ ಪರಿಚಯಿಸುವುದು ಕೇವಲ ಒಂದು ಕಲ್ಯಾಣ ಕಾರ್ಯಕ್ರಮ ಇಲ್ಲವೇ ಹಸಿವು ನೀಗಿಸುವ ಅಥವಾ ಬಡತನ ನಿವಾರಣೆಯ ಕಾರ್ಯಕ್ರಮವಾಗದೇ ಸಿರಿಧಾನ್ಯದಲ್ಲಿ ಕರ್ನಾಟಕ ಹೊಂದಿರುವ ಸಿರಿವಂತಿಕೆ ಮತ್ತು ಪರಂಪರೆಯ ಮುಂದುವರಿದ ಧಾರೆಯಾಗಬೇಕು. ಆ ಮೂಲಕ ಪೌಷ್ಟಿಕ ನಾಡು ಕಟ್ಟುವ ಸಮಾಜ ಹಾಗೂ ಸರಕಾರದ ಸದಾಶಯ ಸಾಕಾರಗೊಳ್ಳಬೇಕು.
ಪ್ರಧಾನಿ ನರೇಂದ್ರ ಮೋದಿಯ ವರು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿದ್ದರು. ತಿಂಗಳುಗಳ ಹಿಂದೆ ನಡೆದ ಜಿ20 ಶೃಂಗ ದಲ್ಲೂ ಸಿರಿಧಾನ್ಯವನ್ನು ಪರಿಚಯಿಸಲಾಗಿತ್ತು. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಅವಧಿಯ ಕೊನೆಯ ಬಜೆಟ್‌ನಲ್ಲಿ ಸಿರಿಧಾನ್ಯಕ್ಕೆ ವಿಶೇಷ ಒತ್ತುಕೊಟ್ಟು ರೈತಸಿರಿ ಯೋಜನೆ ಘೋಷಿಸಿದ್ದರು. ಅದಕ್ಕೆ ಪೂರಕವಾಗಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಜ್ಜೆ ಇಟ್ಟಿದ್ದು, ಅಂಗನವಾಡಿ, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಇಂದಿರಾ ಕ್ಯಾಂಟೀನ್, ಪಡಿತರ ವಿತರಣೆಯಲ್ಲಿ ಸಿರಿಧಾನ್ಯ ಆಹಾರ ಪರಿಚಯಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸದ್ಯ 2 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಬಹು ಆಯಾಮ ಬಡತನ ಜಿಲ್ಲೆಗಳ ಪಟ್ಟಿಯಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳು ಮುಂದಿವೆ. ಸಾರಜನಕ, ಲವಣ, ನಾರಿನಾಂಶ ಸೇರಿದಂತೆ ಹಲವು ಪೌಷ್ಟಿಕಾಂ ಶಗಳನ್ನು ಈ ಸಿರಿಧಾನ್ಯಗಳು ಹೊಂದಿವೆ. ರಾಜ್ಯದ ಜನ ಮತ್ತು ಶಾಲಾ ಮಕ್ಕಳಿಗೆ ಇದು ಸಮರ್ಪಕವಾಗಿ ದೊರೆಯುವಂತಾಗಬೇಕು. ಆಗ ಆರೋಗ್ಯ ಸಮಾಜ ನಿರ್ಮಾಣ ಸಾಧ್ಯ. ಈ ಹಿನ್ನೆಲೆಯಲ್ಲಿ ಎಲ್ಲ ಇಂದಿರಾ ಕ್ಯಾಂಟೀನ್‌ಗಳು, ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸುವ ಪಡಿತರ, ಅಂಗನವಾಡಿ ಮತ್ತು ಶಾಲೆ ಗಳಲ್ಲಿ ವಿತರಿಸುವ ಮಧ್ಯಾಹ್ನದ ಬಿಸಿಯೂಟಕ್ಕೆ ಸಿರಿಧಾನ್ಯ ಪರಿಚಯಿಸುವ ಸದುದ್ದೇಶವನ್ನು ಸರಕಾರ ಹೊಂದಿದೆ.
ಕರ್ನಾಟಕ ಸಿರಿಧಾನ್ಯಗಳನ್ನು ಬೆಳೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸಿರಿಧಾನ್ಯ ವಲಯದಲ್ಲಿ ನವೋದ್ಯಮಗಳಿಗೂ ಸಹ ಹೆಚ್ಚಿನ ಅವಕಾಶಗಳಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಲು ಸರಕಾರ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದು, ಸರಕಾರದ ಈಗಿನ ತೀರ್ಮಾನ ಅವುಗಳಿಗೆ ಸೇರ್ಪಡೆಯಾಗಿದೆ. ಸಿರಿಧಾನ್ಯಗಳ ಉತ್ಪಾದನೆ ಮತ್ತು ಸೇವನೆಯಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ರಾಜ್ಯದ ಒಟ್ಟಾರೆ 16.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಿರಿ ಧಾನ್ಯ ಬೆಳೆಯಲಾಗುತ್ತಿದೆ. ಇದರಲ್ಲಿ 8.46 ಲಕ್ಷ ಹೆಕ್ಟೇರ್‌ನಲ್ಲಿ ರಾಗಿ, 6.16 ಲಕ್ಷ ಹೆಕ್ಟೇರ್‌ನಲ್ಲಿ ಜೋಳ, 1.48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ, 0.29 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಕಿರು ಧಾನ್ಯ, ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದು, ಒಟ್ಟಾರೆ 20.55 ಲಕ್ಷ ಟನ್ ಸಿರಿ ಧಾನ್ಯ ಉತ್ಪಾದನೆಯಾಗುತ್ತಿದೆ. ಸರಕಾರದ ಈ ನಿರ್ಧಾರದಿಂದ ರಾಜ್ಯದಲ್ಲಿ ಸಿರಿಧಾನ್ಯಕ್ಕೆ ಬೇಡಿಕೆ ಇನ್ನೂ ಹೆಚ್ಚಾಗುವುದರ ಜತೆಗೆ, ಅಪೌಷ್ಟಿಕತೆ ಕಡಿಮೆಯಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.