ಮಾಧ್ಯಮಗಳ ಹತ್ತಿಕ್ಕುತ್ತಿದ್ದಾರಾ ಮೋದಿ?
Team Udayavani, Aug 16, 2018, 6:00 AM IST
ಇಂದಿಗೂ ನಿತ್ಯ ಟಿ.ವಿ. ಚರ್ಚೆಗಳಲ್ಲಿ ಮತ್ತು ಪತ್ರಿಕೆಗಳ ಸಂಪಾದಕೀಯ ಲೇಖನಗಳಲ್ಲಿ ಮೋದಿಯವರನ್ನು ಕಟು ವಿಮರ್ಶೆ ಮಾಡಲಾಗುತ್ತದೆ. ನೋಟ್‌ಬ್ಯಾನ್ ಬಗ್ಗೆ ತೀವ್ರ ಚರ್ಚೆಗಳಾಗುತ್ತವೆ, ಜಿಎಸ್‌ಟಿ ಜಾರಿಗೆ ಬಂದ ರೀತಿಯ ಬಗ್ಗೆ ಟೀಕೆಗಳು ಬಂದವು-ಬರುತ್ತಲೇ ಇವೆ, ಮೋದಿಯವರ ನೀತಿಗಳನ್ನೂ ನಿರಂತರ ಪ್ರಶ್ನಿಸಲಾಗುತ್ತಿದೆ, ಟೀಕಿಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಒಂದು ಸುದ್ದಿ ಹೆಚ್ಚು ಕಾವು ಪಡೆದು ರೆಕ್ಕೆಪುಕ್ಕಗಳೊಂದಿಗೆ ಎಲ್ಲೆಡೆ ಸುತ್ತುಹೊಡೆಯುತ್ತಿದೆ. “ನರೇಂದ್ರ ಮೋದಿ ಎಂಥ ಸರ್ವಾಧಿಕಾರಿಯೆಂದರೆ, ಅವರ ಟೀಕಾಕಾರರೆಂದು ಗುರುತಿಸಿಕೊಂಡಿರುವ ಪತ್ರಕರ್ತರನ್ನೆಲ್ಲ ನ್ಯೂಸ್ ಚಾನೆಲ್‌ಗಳಿಂದ ಮತ್ತು ಪತ್ರಿಕೆಗಳಿಂದ ಹೊರಹಾಕಲಾಗುತ್ತಿದೆ’ ಎನ್ನುವ ಸುದ್ದಿಯದು. ಹಿಂದಿಯ ಹಿರಿಯ ಪತ್ರಕರ್ತ ಪುಣ್ಯ ಪ್ರಸೂನ್ ವಾಜಪೇಯಿ ಯವರಂತೂ, ತಾವು ನರೇಂದ್ರ ಮೋದಿಯನ್ನು ಪ್ರಶ್ನಿಸುವ ಧೈರ್ಯ ತೋರಿಸಿದ್ದಕ್ಕಾಗಿಯೇ ಎಬಿಪಿ ನ್ಯೂಸ್ ಚಾನೆಲ್‌ನಿಂದ ಹೊರಬೀಳಬೇಕಾಯಿತು ಎಂದು ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ, ಆನಂದ ಬಜಾರ್ ಪತ್ರಿಕೆಯ ಮಾಲೀಕರು ತಮ್ಮನ್ನು ಕರೆದು “ಮೋದಿಯವರನ್ನು ಪ್ರಶ್ನಿಸುವ ಗುಣವನ್ನು ಬಿಟ್ಟುಬಿಡಿ’ ಎಂದು ಎಚ್ಚರಿಸಿದ್ದಾರೆ ಎಂದೂ ಪ್ರಸೂನ್ ಹೇಳಿದ್ದಾರೆ. ಇದೇ ಕಾರಣಕ್ಕಾಗಿಯೋ ಏನೋ ಕೆಲ ದಿನಗಳ ಹಿಂದೆ “ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎನ್ನುವ ಧಾಟಿಯಲ್ಲಿ ಲಿಖೀತ ಹೇಳಿಕೆಯನ್ನು ಪ್ರಕಟಿಸಿತು.
ಮೋದಿಯವರ ಆಡಳಿತದಲ್ಲಿ ಒಂದು ಭಯಾನಕ, ಅಘೋಷಿತ ಸೆನ್ಸಾರ್‌ಷಿಪ್ ಜಾರಿಯಲ್ಲಿದೆ ಎನ್ನುವ ಮಾತನ್ನು ನಾನೂ ಬಹಳ ದಿನಗಳಿಂದ ಕೇಳುತ್ತಲೇ ಇದ್ದೇನೆ. ಪ್ರಸಿದ್ಧ ಟಿ.ವಿ. ಆ್ಯಂಕರ್ ಬರ್ಖಾ ದತ್ ಕೂಡ, ತಾವು ಮೋದಿ ಸರ್ಕಾರದ ಟೀಕಾ ಕಾರರಾಗಿರುವುದರಿಂದಲೇ ತಮಗೆ ಹೊಸ ನ್ಯೂಸ್ ಚಾನೆಲ್ ತೆರೆಯಲು ಲೈಸೆನ್ಸ್ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ದ್ದಾರೆ. ಇನ್ನು, ನನ್ನ ಹಳೆಯ ಗೆಳೆಯ ಕರಣ್ ಥಾಪರ್ ತಮ್ಮ ಪುಸ್ತಕದಲ್ಲಿ “ಮೋದಿ ಸರಕಾರದ ಸಚಿವರಿಗೆಲ್ಲ ಕರಣ್ ಥಾಪರ್ ಶೋನಲ್ಲಿ ಭಾಗವಹಿಸಬೇಡಿ ಎಂದು ಆದೇಶ ಹೊಗಿದೆ’ ಎಂದೇ ಬರೆದಿದ್ದಾರೆ. ಈ ರೀತಿಯ ಕಥೆಗಳು ಇನ್ನಷ್ಟು ಸಿಗುತ್ತವೆ.
ಸತ್ಯವೇನೆಂದರೆ, ಸ್ಮತಿ ಇರಾನಿಯವರ ನಡೆಯೊಂದು ಇಂಥ ಕಥೆಗಳಿಗೆಲ್ಲ ಇನ್ನಷ್ಟು ತೂಕ ದಯಪಾಲಿಸಿಬಿಟ್ಟಿತು. ಸ್ಮತಿ ಇರಾನಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದಾಗ “ಫೇಕ್ ನ್ಯೂಸ್ ಹರಡುವ ಪತ್ರಕರ್ತರ ಪ್ರಸ್ ಕಾರ್ಡ್‌ಗಳನ್ನು ವಾಪಸ್ ತೆಗೆದುಕೊಳ್ಳಲಾಗುವುದು’ ಎಂಬ ಆದೇಶ ನೀಡಿ ಬಿಟ್ಟರು. ಆದರೆ, ಕೂಡಲೇ ಈ ವಿಷಯದಲ್ಲಿ ಖುದ್ದು ಪ್ರಧಾನಮಂತ್ರಿಗಳೇ ಮಧ್ಯಪ್ರವೇಶ ಮಾಡಿ ಈ ಆದೇಶವನ್ನು ರದ್ದು ಮಾಡಿದರು. ಸ್ಮತಿ ಇರಾನಿಯವರ ಆದೇಶ ಅನುಷ್ಠಾನಕ್ಕೆ ಬರಲಿಲ್ಲವಾದರೂ ಅದು ಮಾಡಬೇಕಾದ ಹಾನಿಯನ್ನಂತೂ ಮಾಡಿಬಿಟ್ಟಿತ್ತು. ಮೋದಿ ಸರ್ಕಾರ ಪತ್ರಕರ್ತರ ಮೇಲೆ ಒತ್ತಡ ಹೇರುತ್ತಿದೆಯೇ ಎಂದು ಅನುಮಾನ ಪಡುತ್ತಿದ್ದವರಿಗೆ ಈ ಘಟನೆಯೊಂದೇ “ಸಾಕ್ಷಿಯಾಗಿ’ ಸಾಕಾಯಿತು.
ಇದೆಲ್ಲದರ ಹೊರತಾಗಿಯೂ ಒಂದು ವಿಷಯವನ್ನು ಹೇಳುವ ಅಗತ್ಯವಿದೆ. ಇಂದಿಗೂ ನಿತ್ಯ ಟಿ.ವಿ. ಚರ್ಚೆಗಳಲ್ಲಿ ಮತ್ತು ಪತ್ರಿಕೆಗಳ ಸಂಪಾದಕೀಯ ಲೇಖನಗಳಲ್ಲಿ ಮೋದಿಯವರನ್ನು ಕಟು ವಿಮರ್ಶೆ ಮಾಡಲಾಗುತ್ತದೆ. ನೋಟ್‌ಬ್ಯಾನ್ ಬಗ್ಗೆ ತೀವ್ರ ಚರ್ಚೆಗಳಾಗುತ್ತವೆ, ಜಿಎಸ್‌ಟಿ ಜಾರಿಗೆ ಬಂದ ರೀತಿಯ ಬಗ್ಗೆ ಟೀಕೆಗಳು ಬಂದವು-ಬರುತ್ತಲೇ ಇವೆ, ಮೋದಿಯವರ ನೀತಿಗಳನ್ನೂ ನಿರಂತರ ಪ್ರಶ್ನಿಸಲಾಗುತ್ತಿದೆ-ಟೀಕಿಸಲಾಗುತ್ತಿದೆ. ಎಲ್ಲಿಯವರೆಗೂ ಎಂದರೆ, ಕೆಲವು ಪತ್ರಕರ್ತರಂತೂ ಪಾಕಿಸ್ತಾನದ ಮೇಲೆ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿಯೇ ಇಲ್ಲ ಎಂದು ವಾದಿಸುತ್ತಾರೆ. ಮೋದಿಯವರ ಕಾಶ್ಮೀರ ಕುರಿತ ನೀತಿಗಳನ್ನು ಟೀಕಿಸಲಾಗುತ್ತಿದೆ, ಅಲ್ಲದೇ ಉಗ್ರ ಹಿಂದುತ್ವವಾದಿಗಳಿಂದ ಹಿಂಸಾ ಘಟನೆಗಳು ಜರುಗಿದಾಗೆಲ್ಲ ದೇಶ ಮುರಿದು ಬೀಳುವ ಹಂತದಲ್ಲಿದೆ ಎಂದೂ ಜೋರು ಗದ್ದಲವೆಬ್ಬಿಸಲಾಗುತ್ತದೆ.
ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಮೋದಿಯವರ ಮೇಲೆ ನಿರಂತರ ದಾಳಿ ಮಾಡಲಾಗುತ್ತಿದೆ. ಯಾವ ಮಟ್ಟಕ್ಕೆಂದರೆ, ಅವರು ಪ್ರಧಾನಿಯಾಗಿ ಕೆಲವೇ ದಿನಗಳಾಗಿದ್ದ ಸಮಯದಲ್ಲಿ ಪುಣೆಯಲ್ಲಿ ಒಬ್ಬ ಮುಸ್ಲಿಂ ಹುಡುಗನ ಮೇಲೆ ದಾಳಿಯಾದಾಗ, ಇದಕ್ಕೆಲ್ಲ ಮೋದಿಯೇ ಕಾರಣ ಎನ್ನಲಾಯಿತು. ಪ್ರತಿ ಬಾರಿಯೂ ಒಬ್ಬ ಮುಸಲ್ಮಾನನ ಮೇಲೆ ಅಥವಾ ದಲಿತನ ಮೇಲೆ ದಾಳಿಗಳಾದಾಗ ನನ್ನನ್ನೂ ಒಳಗೊಂಡು ಅನೇಕ ಪತ್ರಕರ್ತರು “ಪ್ರಧಾನಿಗಳೇ ಮಾತನಾಡಿ’ ಎಂದು ಆಗ್ರಹಿಸಿದ್ದೇವೆ.(ಅವರು ಮಾತನಾಡಲೇಬೇಕು). ಆದಾಗ್ಯೂ ಮೋದಿಯವರು ಇದು ವರೆಗೂ ಒಂದೇ ಒಂದು ಪ್ರಸ್ ಕಾನ್ಫರೆನ್ಸ್ ನಡೆಸದಿರುವುದು ಪ್ರಜಾಪ್ರಭುತ್ವದ ನೀತಿ-ನಿಯಮಾವಳಿಗೆ ವಿರುದ್ಧವಾದದ್ದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಮಾಧ್ಯಮಗಳನ್ನು ಅತಿ ಹೆಚ್ಚು ದ್ವೇಷಿಸುವ ಡೊನಾಲ್ಡ್ ಟ್ರಂಪ್ ಕೂಡ ಆಗಾಗ ಪತ್ರಿಕಾಗೋಷ್ಠಿ ನಡೆಸುತ್ತಲೇ ಇರುತ್ತಾರೆ.
ಆದರೆ ಅದೇಕೋ ಈ ಮಾತುಗಳೆಲ್ಲ ಸೋನಿಯಾ ಗಾಂಧಿಯವರಿಗೆ ಅನ್ವಯವಾಗಲೇ ಇಲ್ಲ. ಸೋನಿಯಾ, ಮಾಧ್ಯಮಗಳಿಗೆ ಸಂದರ್ಶನಕೊಟ್ಟದ್ದೇ ಅಪರೂಪ, ಪತ್ರಿಕಾಗೋಷ್ಠಿ ನಡೆಸಿರುವುದು ದೂರದ ಮಾತಾಯಿತು. ಭಾರತದ ನಿಜವಾದ ಪ್ರಧಾನಿ ಸೋನಿಯಾ ಗಾಂಧಿ ಎಂದು ಅಂದು “ಲೂಟೆನ್ಸ್’ನ ಪ್ರತಿಯೊಬ್ಬ ಪತ್ರಕರ್ತನಿಗೂ ತಿಳಿದಿತ್ತು.
ಈಗ ಒಮ್ಮೆ ಸೋನಿಯಾ-ಮನಮೋಹನ್ ಸಿಂಗ್ ಆಡಳಿತಾವಧಿಯನ್ನು ನೆನಪು ಮಾಡಿಕೊಳ್ಳಿ. ಆ ಸಮಯದಲ್ಲಿ ಪತ್ರಕರ್ತರೆಲ್ಲ ಸೋನಿಯಾ ಗಾಂಧಿಯವರ ಒಂದೇ ಒಂದು ಕಾರ್ಯವನ್ನು, ಅವರ ಒಂದೇ ಒಂದು ಆಲೋಚನೆಯನ್ನು- ನೀತಿಯನ್ನು ಪ್ರಶ್ನಿಸಿದ್ದ ನೆನಪು ನಿಮಗಿದೆಯೇ? ರಾಜೀವ್ ಗಾಂಧಿ ಹತ್ಯೆಯಾದ ನಂತರದಿಂದ ಕಾಂಗ್ರೆಸ್ ಯಾವಾಗೆಲ್ಲ ಆಡಳಿತ ನಡೆಸಿತೋ ಆಗ ಸೋನಿಯಾ ಗಾಂಧಿಯವರೇ ನಿಜವಾದ ಪ್ರಧಾನಮಂತ್ರಿಯಾಗಿದ್ದರು. ಪಿ.ವಿ. ನರಸಿಂಹ ರಾವ್ ಅವರು ಎಂದಿಗೂ 10 ಜನಪಥ್‌ಗೆ ತಲೆ ಬಾಗಲಿಲ್ಲ. ಈ ಕಾರಣಕ್ಕಾಗಿಯೇ ಅವರ ಅಂತಿಮಯಾತ್ರೆಯು ಕಾಂಗ್ರೆಸ್‌ನ ಮುಖ್ಯ ಕಾರ್ಯಾಲಯದಲ್ಲಿ ಜಾಗ ಸಿಗಲಿಲ್ಲ. ಅಲ್ಲದೇ ನರಸಿಂಹ ರಾವ್ ಅವರ ಸಮಾಧಿ, ಇತರೆ ಪ್ರಧಾನಿಗಳಂತೆ ದಿಲ್ಲಿಯ ಯಮುನಾ ಕಿನಾರೆಯಲ್ಲಿ ನಿರ್ಮಾಣವಾಗುವುದಕ್ಕೂ ಸೋನಿಯಾ ಬಿಡಲಿಲ್ಲ.
ಮನಮೋಹನ್ ಸಿಂಗ್ ಅವರು ಅಧಿಕಾರಕ್ಕೆ ಬರುವ ವೇಳೆಗಾ ಗಲೇ ಕಾಂಗ್ರೆಸ್‌ನ ಚಿಕ್ಕಪುಟ್ಟ ನಾಯಕರಿಗೂ ಸ್ಪಷ್ಟವಾಗಿ ಅರ್ಥವಾಗಿ ಹೋಗಿತ್ತು, ಕಾಂಗ್ರೆಸ್‌ನಲ್ಲಿ ಅಧ್ಯಕ್ಷರ ಸ್ಥಾನವೇ ಸರ್ವೋಚ್ಚವೆಂದು! ನಮ್ಮ ಪ್ರೀತಿಯ ಡಾಕ್ಟರ್ ಸಾಹೇಬ್ ಮನಮೋಹನ್ ಸಿಂಗ್ ಅವರು ಬಹಳ ವರ್ಷಗಳವರೆಗೆ ಅಧಿಕಾರದಲ್ಲಿದ್ದರು, ಅದೂ ಸೋನಿಯಾ ಗಾಂಧಿಯವರ ಮರ್ಜಿಯಿಂದಾಗಿ. ಅವರ ಮರ್ಜಿಯಿಂದಾಗಿಯೇ ಹಳೆಯ ಗೆಳೆಯ ಒಟ್ಟಾವಿಯೋ ಕ್ವಟ್ರೋಚಿಗೆ ಲಂಡನ್‌ನ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಯಿತು.
ಮನಮೋಹನ್ ಸಿಂಗ್ ಅವರ ಪ್ರತಿಯೊಬ್ಬ ಸಚಿವರೂ 10 ಜನಪಥ್‌ನಲ್ಲಿ ಹಣೆ ಹಚ್ಚಿ ನಮಸ್ಕರಿಸುವುದಕ್ಕೆ ಹೋಗುತ್ತಿದ್ದರು. ದೆಹಲಿಯ ಪ್ರತಿಯೊಬ್ಬ ರಾಜಕೀಯ ಪತ್ರಕರ್ತರಿಗೂ ಈ ವಿಷಯ ತಿಳಿದಿದೆ. ಇದಷ್ಟೇ ಅಲ್ಲ, ಸೋನಿಯಾ ಅವರ ಎನ್‌ಎಸಿ(ರಾಷ್ಟ್ರೀಯ ಸಲಹಾ ಸಮಿತಿ) ಪ್ರಧಾನಮಂತ್ರಿಯವರ ಮಂತ್ರಿಮಂಡಲಕ್ಕಿಂತಲೂ ಹೆಚ್ಚು ಮಹತ್ವಪೂರ್ಣವಾದದ್ದು ಎನ್ನುವುದೂ ನಮಗೆಲ್ಲ ಗೊತ್ತಿತ್ತು. ಎನ್‌ಎಸಿಯಲ್ಲಿ ಸೋನಿಯಾ ಅವರ ಸಲಹೆಗಳನ್ನು ಕೇಳಿಯೇ ನೀತಿಗಳನ್ನು ರೂಪಿಸಲಾಗುತ್ತಿತ್ತು, ಅವಕ್ಕೆಲ್ಲ ಕಣ್ಣುಮುಚ್ಚಿಕೊಂಡು ಸಹಮತಿ ಕೊಡುತ್ತಿತ್ತು ಮನಮೋಹನ್ ಸರ್ಕಾರ. ಸೋನಿಯಾ ಅವರ ಈ ಅಸಾಂವಿಧಾನಿಕ ಕಾರ್ಯಗಳನ್ನು ವಿರೋಧಿಸುವ ಧೈರ್ಯವನ್ನು ನನ್ನಂಥ ಅನೇಕ ಪತ್ರಕರ್ತರು ತೋರಿಸುತ್ತಿದ್ದರು. ಆಗೆಲ್ಲ ಸ್ಪಷ್ಟ ಶಬ್ದಗಳಲ್ಲಿ ನಮಗೆ “ಬಾಯಿಮುಚ್ಚಿಕೊಂಡು’ ಇರಲು ಹೇಳಲಾಗುತ್ತಿತ್ತು. ಇಷ್ಟಾದಮೇಲೂ ನಾನು ಸೋನಿಯಾ ಗಾಂಧಿಯವರ ನಡೆಗಳನ್ನು ಪ್ರಶ್ನಿಸುತ್ತಲೇ ಹೋದೆ. ಹೀಗಾಗಿ ನನ್ನ ವಿರುದ್ಧ ಕೆಲವು ಗಂಭೀರ ಕ್ರಮಗಳನ್ನು ಕೈಗೊಳ್ಳಲಾಯಿತು. ಇದೆಲ್ಲದರ ಬಗ್ಗೆ ನಾನು ನನ್ನ ಪುಸ್ತಕ “ಇಂಡಿಯಾಸ್ ಬ್ರೋಕನ್ ಟ್ರಿಸ್ಟ್’ನಲ್ಲಿ ವಿಸ್ತಾರವಾಗಿ ಬರೆದಿದ್ದೇನೆ.
ನಾನು ಇಲ್ಲಿ ಹೇಳಲು ಹೊರಟಿರುವುದು ಇಷ್ಟೇ: ಇದುವರೆಗೂ ಭಾರತದಲ್ಲಿ ಸೋನಿಯಾ ಗಾಂಧಿಯವರ ವಿರುದ್ಧ ಬರೆಯುವ ಧೈರ್ಯವನ್ನು ಬಹಳ ಕಡಿಮೆ ಪತ್ರಕರ್ತರು ತೋರಿಸಿದ್ದಾರೆ. ಯಾಕೆ ಹೀಗೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಒಂದಂತೂ ಗೊತ್ತಿದೆ. ನಮ್ಮ ಪತ್ರಕರ್ತ ಬಂಧುಗಳು ಯಾವ ಉಮೇದಿನಿಂದ ಮೋದಿಯವರನ್ನು ಟೀಕಿಸಲು-ಪ್ರಶ್ನಿಸಲು ಮುಂದಾಗು ತ್ತಾರೋ, ಅದೇ ಧೈರ್ಯದಿಂದ ಅವರು ಎಂದೂ ಸೋನಿಯಾ ಅವರನ್ನು ಪ್ರಶ್ನಿಸಿಲ್ಲ. ಹೀಗಾಗಿ ಇವರೆಲ್ಲ, “ನರೇಂದ್ರ ಮೋದಿ ಒಬ್ಬ ಸರ್ವಾಧಿಕಾರಿ ಮತ್ತು ಅವರ ಪಕ್ಷವು ಪತ್ರಕರ್ತರ ಮೇಲೆ ಒತ್ತಡ ಹೇರುತ್ತಿದೆ’ ಎಂದಾಗಲೆಲ್ಲ ನನಗೆ ವಿಚಿತ್ರವೆನಿಸುತ್ತದೆ. ಇದೇ ರೀತಿಯ ಮಾತನ್ನು ಯುಪಿಎ ಆಡಳಿತಾವಧಿಯಲ್ಲಿ ನಾವೆಲ್ಲ ಏಕೆ ಹೇಳಲಿಲ್ಲ? ಭಾರತದ ರಾಜಪರಿವಾರದ ವಿರುದ್ಧ ಮಾತನಾಡಿದರೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಗೊತ್ತಿರುವ ಕಾರಣಕ್ಕಾಗಿಯೇ? ನಾವು ಪತ್ರಕರ್ತರೆಲ್ಲ ನೆಹರು-ಗಾಂಧಿ ಪರಿವಾರದ ಚೇಲಾಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ನಿತ್ಯವೂ ಎದುರಾಗುವ ಆರೋಪವು ನಿಜವೆನ್ನುವ ಕಾರಣಕ್ಕಾ ಗಿಯೇ? ಈ ಪ್ರಶ್ನೆಗಳಿಗೆ ನನ್ನ ಬಳಿಯಂತೂ ಉತ್ತರವಿಲ್ಲ. ಆದರೆ ಒಂದಂತೂ ಗೊತ್ತಿದೆ: ನೆಹರೂ-ಗಾಂಧಿ ಪರಿವಾರದ ಯಾವು ದಾದರೂ ಸದಸ್ಯರು ಅಧಿಕಾರದಲ್ಲಿದ್ದಾಗಲೆಲ್ಲ ನಾವು ಪತ್ರಕರ್ತರು ಎಷ್ಟು ಪುಕ್ಕಲರಾಗಿಬಿಡುತ್ತೇವೆಂದರೆ ನಮ್ಮಿಂದ ಮಾತೇ ಹೊರಡುವುದಿಲ್ಲ. ನಮಗೆ ಬಹಳಷ್ಟು ರಹಸ್ಯಗಳು ಗೊತ್ತಿವೆ. ಆದರೆ ಅವನ್ನೆಲ್ಲ ಹೊರಹಾಕುವ ಧೈರ್ಯವನ್ನು ನಾವು ತೋರಿಸುವುದಿಲ್ಲ. ನಮ್ಮ ಕಣ್ಣೆದುರೇ ಅನೇಕ ಹಗರಣಗಳು ನಡೆದಿವೆ…ಈ ಕಾರಣಕ್ಕಾಗಿಯೇ ಯಾವಾಗಲೂ ಕಣ್ಣುಮುಚ್ಚಿಕೊಂಡಿರುವುದೇ ಒಳ್ಳೆಯದು ಎಂದು ನಾವು ಭಾವಿಸಿಬಿಟ್ಟಿದ್ದೇವೆ!
(ಮೂಲ: ಜನಸತ್ತಾ ಹಿಂದಿ)
ತಾವಲಿನ್ ಸಿಂಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Editorial: ನೈಜ ಕ್ರೀಡಾ ಸಾಧಕರಿಗೆ ಸಂದ ದೇಶದ ಅತ್ಯುನ್ನತ ಕ್ರೀಡಾ ಗೌರವ
Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.