ಮೋಟಾರ್ ವಾಹನ ತಿದ್ದುಪಡಿ ಬಿಲ್ : ರಸ್ತೆ ಸುರಕ್ಷತೆಯ ಸವಾಲು:
Team Udayavani, Jul 18, 2019, 5:21 AM IST
ದೇಶದಲ್ಲಿನ ರಸ್ತೆ ಅಪಘಾತಗಳ ಗ್ರಾಫ್ ಮೇಲೇರುತ್ತಿರುವುದನ್ನು ನೋಡಿದರೆ, ರಸ್ತೆ ಸುರಕ್ಷತೆಯ ಬಗ್ಗೆ ನಮ್ಮ ಒಟ್ಟಾರೆ ವ್ಯವಸ್ಥೆ ಎಷ್ಟು ನಿಷ್ಕಾಳಜಿಯಿಂದಿದೆ ಎನ್ನುವುದು ಅರ್ಥವಾಗುತ್ತದೆ. ಪ್ರತಿ ನಿತ್ಯವೂ ತೀವ್ರತರ ರಸ್ತೆ ಅಪಘಾತಗಳ ಸುದ್ದಿ ಒಂದಲ್ಲ ಒಂದು ಕಡೆಯಿಂದ ಕೇಳಿಬರುತ್ತಲೇ ಇರುತ್ತದೆ. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಚಾಲಕನ ನಿರ್ಲಕ್ಷ್ಯದಿಂದಾಗಿ ಪಾಂಡವಪುರ ಸಮೀಪದ ವಿ.ಸಿ. ನಾಲೆಗೆ ಖಾಸಗಿ ಬಸ್ಸೊಂದು ಉರುಳಿ ಮೂವತ್ತು ಜನ ಮೃತಪಟ್ಟ ಹೃದಯವಿದ್ರಾವಕ ಘಟನೆಗೆ ನಮ್ಮ ರಾಜ್ಯ ಸಾಕ್ಷಿಯಾಯಿತು. ನಮ್ಮಲ್ಲಿ ಅಂತಲ್ಲ, ಪ್ರತಿ ರಾಜ್ಯದಲ್ಲೂ ಈ ರೀತಿಯ ಅವಗಢಗಳು ವರದಿಯಾಗುತ್ತಲೇ ಇರುತ್ತವೆ. ಕಳೆದ ತಿಂಗಳಷ್ಟೇ ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ನಡೆದ ಬಸ್ ಅಪಘಾತಗಳಲ್ಲೂ ಬಹಳ ಸಂಖ್ಯೆಯಲ್ಲಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಎರಡೂ ದುರ್ಘಟನೆಗಳಲ್ಲಿದ್ದ ಒಂದು ಸಾಮ್ಯತೆಯೇನೆಂದರೆ, ಎರಡರಲ್ಲೂ ಪೂರ್ವನಿರ್ಧರಿತ ಕ್ಷಮತೆಗಿಂತ ಮೂರು ಪಟ್ಟು ಹೆಚ್ಚು ಜನ ಪಯಣಿಸುತ್ತಿದ್ದರು ಎನ್ನುವುದು.
ಬಹುತೇಕ ಅಪಘಾತಗಳು ಚಾಲಕನ ನಿರ್ಲಕ್ಷ್ಯದಿಂದಾಗಿಯೇ ಆಗುತ್ತಿವೆ. ಈ ಸಮಸ್ಯೆಯನ್ನು ಹೇಗೆ ತಗ್ಗಿಸುವುದು ಎನ್ನುವುದೇ ಈಗ ಇರುವ ಸವಾಲು. ಭಾರತದಲ್ಲಿ ರಸ್ಥೆ ಸುರಕ್ಷತೆ ಮತ್ತು ಪರಿವಾಹನ ಸಂಬಂಧಿತ ಕಾಯ್ದೆ-ಕಾನೂನುಗಳು ಹಳೆಯವೇ ಇವೆ. ಇದಕ್ಕಿಂತಲೂ ಗಂಭೀರ ಸಂಗತಿಯೆಂದರೆ, ಈ ಕಾನೂನುಗಳನ್ನೂ ಜನ ಅನಾಯಾಸವಾಗಿ ಉಲ್ಲಂಘಿಸುತ್ತಲೇ ಇದ್ದಾರೆ ಎನ್ನುವುದು. ಕಾನೂನಿನ ಬಗ್ಗೆ ಯಾರಿಗೂ ಭಯವೇ ಉಳಿದಿಲ್ಲ. ಹೀಗಾಗಿ ಎಲ್ಲಿಯವರೆಗೂ ಕಾನೂನಿನ ಪುನರ್ ರಚನೆ ಆಗುವುದಿಲ್ಲವೋ, ನವ ಕಾನೂನುಗಳು ಕಟ್ಟು ನಿಟ್ಟಾಗಿ ಜಾರಿಯಾಗುವುದಿಲ್ಲವೋ ಅಲ್ಲಿಯವರೆಗೂ ಅವಘಡಗಳ ಪ್ರಮಾಣವೇನೂ ತಗ್ಗುವುದಿಲ್ಲ.
ಈ ಹಿನ್ನೆಲೆಯಲ್ಲಿ ಸೋಮವಾರ ಲೋಕಸಭೆಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಮಂಡಿಸಿದ ಮೋಟಾರ್ ವಾಹನ ತಿದ್ದುಪಡಿ ವಿಧೇಯಕ 2019 ಶ್ಲಾಘನೀಯ. ವಾಹನ, ರಸ್ತೆ ಮತ್ತು ಚಾಲಕರಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮಗಳ ಪ್ರಸ್ತಾಪಗಳು ಇದರಲ್ಲಿವೆ. ವಿಶೇಷ ಸಂಗತಿಯೆಂದರೆ, ಈ ವಿಧೇಯಕದಲ್ಲಿ ಚಾಲನಾ ಪರವಾನಗಿ ಸಂಬಂಧಿ ನಿಯಮಗಳನ್ನು ಮತ್ತಷ್ಟು ಬಲಿಷ್ಠಗೊಳಿಸುವ ಪ್ರಸ್ತಾಪವಿದೆ. ದೇಶದಲ್ಲಿನ 30 ಪ್ರತಿಶತಕ್ಕೂ ಹೆಚ್ಚು ಡ್ರೈವಿಂಗ್ ಲೈಸೆನ್ಸ್‌ಗಳು ನಕಲಿ ಎಂದು ಖುದ್ದು ಸಚಿವರೇ ಒಪ್ಪಿಕೊಂಡಿದ್ದಾರೆ. ವಾಸ್ತವದಲ್ಲಿ ಈ ಪ್ರಮಾಣ ಇನ್ನೂ ಅಧಿಕವೇ ಇರುವ ಸಾಧ್ಯತೆ ಇದೆ. ತಿದ್ದುಪಡಿ ವಿಧೇಯಕದಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ಲಾಗೂ ಮಾಡುವ ಪ್ರಸ್ತಾಪವಿದೆ. ಅಲ್ಲದೇ ಈ ವಿಧೇಯಕವು: ವಾಹನಗಳಲ್ಲಿ ತಾಂತ್ರಿಕ ದೋಷವಿದ್ದರೆ ಸಂಬಂಧಿತ ನಿರ್ಮಾತೃ ಕಂಪನಿಯು ಅದನ್ನು ವಾಪಸ್ ಪಡೆಯಬೇಕಾಗುತ್ತದೆ ಎಂದೂ, ಹೊಸ ವಾಹನಗಳ ಪರೀಕ್ಷಣಾ ಪ್ರಕ್ರಿಯೆಯನ್ನು ಬದಲಿಸಿ, ಅದನ್ನು ಇನ್ನಷ್ಟು ಬಿಗಿಗೋಳಿಸಲಾಗುತ್ತದೆಂದೂ ಹೇಳುತ್ತದೆ. ಇನ್ನು ಟಯರ್ ಕಂಪನಿಗಳನ್ನೂ ಉತ್ತರಾದಿಯನ್ನಾಗಿಸುವ ಪ್ರಸ್ತಾಪವಿದೆ. ಒಂದು ವೇಳೆ ವಾಹನ ಅಥವಾ ಟಯರ್‌ನಲ್ಲಿನ ದೋಷದಿಂದಾಗಿ ಅವಘಡ ನಡೆದರೆ, ಸಂಬಂಧಿಸಿದ ಕಂಪನಿಗಳೇ ಕಾರಣೀಕರ್ತವಾಗುತ್ತವೆ. ಇದೇ ರೀತಿಯಲ್ಲೇ ಹೆದ್ದಾರಿ ನಿರ್ಮಾಣ ಕಂಪನಿಗಳ ಸುತ್ತಲೂ ಬಿಗಿ ನಿಯಮಗಳನ್ನು ರಚಿಸಲಾಗಿದೆ.
ನಕಲಿ ಲೈಸೆನ್ಸ್ ಮಾಡಿಸುವ ದಂಧೆಯ ಬೆನ್ನು ಹತ್ತಿದರೆ ದೇಶದ ಲಕ್ಷಾಂತರ ಆರ್‌ಟಿಒ ಕಚೇರಿಗಳಲ್ಲಿನ ತಿಮಿಂಗಲಗಳು ಸಿಕ್ಕಿ ಬೀಳುವುದು ನಿಶ್ಚಿತ. ಇನ್ನು, ಅವಘಡದ ಸಮಯದಲ್ಲಿ ತಪ್ಪೆಸಗಿದ ಜನರಿಗೆ/ ಕಂಪನಿಗಳಿಗೆ ವಿಧಿಸಲು ಪ್ರಸ್ತಾಪಿಸಲಾಗಿರುವ ಭಾರೀ ಮೊತ್ತದ ದಂಡದ ಪ್ರಮಾಣವೇ ಸಾಕು, ಜನರಲ್ಲಿ ಎಚ್ಚರಿಕೆ- ಭಯ ಹುಟ್ಟಿಸಲು. ಆದರೆ, ಇದಕ್ಕಿಂತಲೂ ಮುಖ್ಯವಾಗಿ ಕಾನೂನಿನ ಪ್ರಾಮಾಣಿಕ ಅನುಷ್ಠಾನವೂ ಮುಖ್ಯವಾಗುತ್ತದೆ. ದುರಂತವೆಂದರೆ, ರಸ್ತೆ ಸುರಕ್ಷತೆಯಂಥ ಮಹತ್ತರ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ತಾಳಮೇಳವೇ ಇಲ್ಲದಂತಾಗಿದೆ. ಈ ಕಾರಣಕ್ಕಾಗಿಯೇ ಮೋಟಾರ್ ವಾಹನ ವಿಧೇಯಕಕ್ಕೆ ವಿರೋಧ ಎದುರಾಗಿದೆ. ಈ ಕಾನೂನು ತಮ್ಮ ಅಧಿಕಾರ ಕಸಿದುಕೊಳ್ಳಲಿದೆ ಎನ್ನುವುದು ರಾಜ್ಯಗಳ ವಾದ. ಕಳೆದ ಬಾರಿಯೂ ಲೋಕಸಭೆಯಲ್ಲಿ ಈ ವಿಧೇಯಕ ಅನುಮೋದನೆಗೊಂಡಿತ್ತು, ಆದರೆ ರಾಜ್ಯಸಭೆಯಲ್ಲಿ ಪೆಟ್ಟು ತಿಂದಿತು. ಆದಾಗ್ಯೂ ಇದರ ಅನುಷ್ಠಾನ ರಾಜ್ಯಗಳಿಗೆ ಬಿಟ್ಟ ವಿಷಯ ಕೇಂದ್ರ ಸಾರಿಗೆ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಅನುಷ್ಠಾನದ ವಿಷಯದಲ್ಲೇ ಭಿನ್ನಾಭಿಪ್ರಾಯ ಇದ್ದಾಗ, ರಸ್ತೆ ಸುರಕ್ಷತೆಯ ವಿಚಾರದಲ್ಲಿ ಬಲಿಷ್ಠ ಕಾನೂನುಗಳು ರೂಪುಗೊಳ್ಳುವುದಾದರೂ ಹೇಗೆ, ಅವು ಅನುಷ್ಠಾನವಾಗುವುದಾದರೂ ಹೇಗೆ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.