ಭಯೋತ್ಪಾದನೆಯ ಮೂಲೋತ್ಪಾಟನೆಗೆ ಮೊಳಗೀತೇ ರಣಕಹಳೆ?
Team Udayavani, Sep 23, 2021, 6:00 AM IST
ಪ್ರಧಾನಿ ನರೇಂದ್ರ ಮೋದಿ ಅವರ ಐದು ದಿನಗಳ ಅಮೆರಿಕ ಪ್ರವಾಸ ಬುಧವಾರ ಆರಂಭಗೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಸುದೀರ್ಘ ವಿರಾಮದ ಬಳಿಕ ವಿದೇಶ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ಮೋದಿ ಅವರು ಈ ವೇಳೆ ಅಮೆರಿಕ ಮಾತ್ರವಲ್ಲದೆ ಜಗತ್ತಿನ ಪ್ರಮುಖ ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಅಲ್ಲದೆ ಸೆ.25ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಐದು ದಿನಗಳ ಅಮೆರಿಕ ಪ್ರವಾಸದ ವೇಳೆ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗ ವಹಿಸಲಿರುವ ಮೋದಿ ಅವರು ಜಾಗತಿಕ ಸಮುದಾಯ ಎದುರಿ ಸುತ್ತಿರುವ ಹಲವಾರು ಸಮಸ್ಯೆಗಳು ಮತ್ತು ವಿವಿಧ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ಸಂಬಂಧ ವೃದ್ಧಿಯ ನಿಟ್ಟಿನಲ್ಲಿ ಅಲ್ಲಿನ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಮೋದಿ ಅವರ ಅಮೆರಿಕ ಪ್ರವಾಸ, ಕೇವಲ ಈ ಎರಡು ದೇಶಗಳ ಜನರಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಮೂಡಿಸಿದೆ. ಅಮೆರಿಕದ ಅಧ್ಯಕ್ಷ, ಉಪಾಧ್ಯಕ್ಷರು, ಆಸ್ಟ್ರೇಲಿಯಾ ಮತ್ತು ಜಪಾನ್ ಪ್ರಧಾನಿಗಳ ಭೇಟಿ ವೇಳೆ ಮೋದಿ ಅವರು ದ್ವಿಪಕ್ಷೀಯ ಸಂಬಂಧ ವೃದ್ಧಿ ಮತ್ತು ಜಾಗತಿಕ ಕಾರ್ಯತಂತ್ರಗಳಲ್ಲಿ ಸಹಭಾಗಿತ್ವದ ಕುರಿತಂತೆ ಚರ್ಚೆ ನಡೆಸಲಿರುವರು. ವಿಶ್ವ ಮಟ್ಟದಲ್ಲಿ ಭಾರತ ಪ್ರಬಲ ರಾಷ್ಟ್ರವಾಗಿ ಗುರುತಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಜಗತ್ತಿನ ಪ್ರಮುಖ ರಾಷ್ಟ್ರಗಳ ನಡುವಣ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ವಿಶ್ವ ಸಮುದಾಯ ಎದುರಿಸುತ್ತಿರುವ ಸವಾಲುಗಳಾದ ಕೊರೊನಾ ಸಾಂಕ್ರಾಮಿಕ, ಹವಾಮಾನ ಬದಲಾವಣೆ, ಭಯೋತ್ಪಾದನೆ, ಅಫ್ಘಾನಿಸ್ಥಾನ ದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾ ಮತ್ತು ಜಪಾನ್ ಪ್ರಧಾನಿ ಗಳೊಂದಿಗಿನ ಭೇಟಿ ಹಾಗೂ ಕ್ವಾಡ್ ರಾಷ್ಟ್ರಗಳ ಶೃಂಗಸಭೆ, ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪ್ರಸ್ತಾವಿಸಲಿರುವುದು ಬಹುತೇಕ ಖಚಿತವಾಗಿದೆ. ಇದರಲ್ಲಿ ಬಲುಮುಖ್ಯವಾಗಿ ಭಯೋತ್ಪಾದನೆಯ ವಿಚಾರವಾಗಿ ಪ್ರಧಾನಿ ಅವರು ಜಾಗತಿಕ ನಾಯಕರೊಂದಿಗೆ ಗಹನ ಚರ್ಚೆ ನಡೆಸುವ ಜತೆಯಲ್ಲಿ ಈ ಹಿಂದಿನಿಂದಲೂ ಭಾರತ ಪ್ರತಿಪಾದಿಸುತ್ತಲೇ ಬಂದಿರುವ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಜಾಗತಿಕ ಸಮುದಾಯ ಕೈಜೋಡಿಸುವುದು ಅನಿವಾರ್ಯ ಎಂಬುದನ್ನು ವಿಶ್ವಸಂಸ್ಥೆಯ ಅಧಿವೇಶನದಲ್ಲೂ ಪುನರುಚ್ಚರಿಸುವ ಸಾಧ್ಯತೆ ಇದೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರೊಂದಿಗಿನ ಮಾತುಕತೆ ವೇಳೆ ವಾಣಿಜ್ಯ, ರಕ್ಷಣೆ, ಭದ್ರತೆ, ವಿಜ್ಞಾನ-ತಂತ್ರಜ್ಞಾನ ವಿಚಾರವಾಗಿ ದ್ವಿಪಕ್ಷೀಯ ಮಾತುಕತೆ ನಡೆಸುವ ಜತೆಯಲ್ಲಿ ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಬಗೆಗೆ ಸಮಾಲೋಚನೆ ನಡೆಸಲಿರುವರು.
ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳು ಆಡಳಿತವನ್ನು ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿರುವುದು, ಚೀನದ ಆಕ್ರಮಣಶೀಲತೆ, ತೀವ್ರಗಾಮಿತನ, ಗಡಿಯಾಚೆಗಿನ ಭಯೋತ್ಪಾದನೆ ಮತ್ತಿತರ ವಿಚಾರಗಳನ್ನು ಅಮೆರಿಕ ಅಧ್ಯಕ್ಷರು ಹಾಗೂ ಆಸ್ಟ್ರೇಲಿಯಾ ಮತ್ತು ಜಪಾನ್ ಪ್ರಧಾನಿಗಳೊಂದಿಗಿನ ಮಾತುಕತೆ ವೇಳೆ ಮೋದಿ ಪ್ರಸ್ತಾವಿಸಲಿದ್ದು ಈ ವಿಚಾರಗಳಲ್ಲಿ ಭಾರತದ ನಿಲುವೇನು ಎಂಬುದನ್ನು ಆ ನಾಯಕರಿಗೆ ಮನವರಿಕೆ ಮಾಡಿಕೊಡಲಿ ದ್ದಾರೆ. ಮೋದಿ ಅವರು ಅಮೆರಿಕದ ಪ್ರಮುಖ ಕಂಪೆನಿಗಳ ಮುಖ್ಯಸ್ಥ ರೊಂದಿಗೆ ಮಾತುಕತೆ ನಡೆಸಲಿದ್ದು ಈ ವೇಳೆ ಹೂಡಿಕೆ, ವಾಣಿಜ್ಯ ವಿಚಾರಗಳಿಗೆ ಸಂಬಂಧಿಸಿದಂತೆ ಮಹತ್ತರ ಒಪ್ಪಂದಗಳಿಗೆ ಅಂಕಿತ ಹಾಕುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.