politics ಆಕಾಂಕ್ಷೆಗಿಂತ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ
Team Udayavani, Aug 8, 2023, 6:00 AM IST
ತನ್ನ ಪರ ನಿಲುವುಗಳನ್ನು ಭಾರತದಲ್ಲಿ ಪ್ರಚುರ ಪಡಿಸುವ ದುರುದ್ದೇಶದಿಂದ ಅಮೆರಿಕದ ಉದ್ಯಮಿಯೊಬ್ಬರ ಮೂಲಕ ಚೀನಾವು ಭಾರತದಲ್ಲಿನ ನ್ಯೂಸ್‌ಕ್ಲಿಕ್ ವೆಬ್‌ಸೈಟ್‌ಗೆ ಹಣ ಹೂಡಿಕೆ ಮಾಡಿದೆ ಎಂಬ ಸ್ಫೋಟಕ ವರದಿಯನ್ನು ಅಮೆರಿಕದ ದೈನಿಕ ನ್ಯೂಯಾರ್ಕ್ ಟೈಮ್ಸ್ ಮಾಡಿರುವ ವರದಿ, ಇದೀಗ ದೇಶದೆಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಪರಸ್ಪರ ಕೆಸರೆರಚಾಟ ಆರಂಭಗೊಂಡಿದೆ. ಸೋಮವಾರ ಲೋಕಸಭೆಯಲ್ಲಿಯೂ ಈ ವಿಷಯ ಪ್ರಸ್ತಾವವಾಗಿ ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.
ನ್ಯೂಯಾರ್ಕ್ ಟೈಮ್ಸ್‌ನ ವರದಿಯ ಪ್ರಕಾರ, ಅಮೆರಿಕದ ಕೋಟ್ಯಧೀಶನಾಗಿರುವ ಎಡಪಂಥೀಯರ ಪರ ಒಲವುಳ್ಳ ನೆವಿಲ್ಲೆ ರಾಯ್ ಸಿಂಘಂ ರಾಜಕೀಯವಾಗಿಯೂ ಸಕ್ರಿಯನಾಗಿದ್ದಾನೆ. ಈತ ಚೀನಾದ ಪರವಾಗಿ ವಿದೇಶಗಳಲ್ಲಿ ಕಾರ್ಯನಿರ್ವಹಿಸುವ ಮಾಧ್ಯಮಗಳಿಗೆ ಹಣ ಹೂಡಿಕೆ ಮಾಡುತ್ತಲೇ ಬಂದಿದ್ದಾನೆ. ಈ ಹೂಡಿಕೆಗಳಿಗೆ ಚೀನಾವು ಸಿಂಘಂಗೆ ಹಣಕಾಸಿನ ನೆರವು ನೀಡುತ್ತಿದೆ. ಈತ ವಿದೇಶಗಳಲ್ಲಿನ ಹಲವಾರು ಮಾಧ್ಯಮಗಳಿಗೆ ಮಾತ್ರವಲ್ಲದೆ ರಾಜಕೀಯ ಪಕ್ಷಗಳಿಗೂ ಫಂಡಿಂಗ್ ಮಾಡಿದ್ದಾನೆ. ಭಾರತ ಮಾತ್ರವಲ್ಲದೆ ಬ್ರೆಜಿಲ್‌ನಲ್ಲೂ ಸುದ್ದಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವುದಾಗಿ ವರದಿ ತಿಳಿಸಿದೆ.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ “ನ್ಯೂಸ್‌ಕ್ಲಿಕ್’ ಎಂಬ ಇಂಗ್ಲಿಷ್ ವೆಬ್‌ಸೈಟ್‌ಗೆ ವಿದೇಶಿ ವ್ಯಕ್ತಿಗಳು ಹಣ ಹೂಡಿಕೆ ಮಾಡಿರುವ ಆರೋಪ ಎರಡು ವರ್ಷಗಳ ಹಿಂದೆಯೇ ಕೇಳಿ ಬಂದಿತ್ತು. ಸಂಸ್ಥೆಯ ವಿರುದ್ಧ 38 ಕೋ.ರೂ. ಗಳ ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ 2021ರಲ್ಲಿ ಸಂಸ್ಥೆಯ ಕಚೇರಿ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಕಾಂಗ್ರೆಸ್, ಇ.ಡಿ. ಮತ್ತು ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಆದರೆ ಇ.ಡಿ. ವೆಬ್‌ಸೈಟ್‌ನ ಕಾರ್ಯಚಟುವಟಿಕೆಗಳ ಮೇಲೆ ಹದ್ದುಗಣ್ಣು ಇರಿಸಿದೆಯಲ್ಲದೆ ತನಿಖಾ ಪ್ರಕ್ರಿಯೆಯನ್ನು ಮುಂದುವರಿಸಿತ್ತು.
ಇದೀಗ ನ್ಯೂಸ್ ಕ್ಲಿಕ್ ವೆಬ್‌ಸೈಟ್‌ಗೆ ಸಿಂಘಂ ಮೂಲಕ ಚೀನಾ ಹೂಡಿಕೆ ಮಾಡಿರುವ ಅಂಶ ನ್ಯೂಯಾರ್ಕ್ ಟೈಮ್ಸ್ ವರದಿಯಿಂದ ಮತ್ತೂಮ್ಮೆ ಬಯಲಾಗಿದೆ. ಅಷ್ಟು ಮಾತ್ರವಲ್ಲದೆ ನ್ಯೂಸ್‌ಕ್ಲಿಕ್ ವಿರುದ್ಧದ ಆರೋಪಗಳಿಗೆ ಪೂರಕವಾದ ಸಾಕ್ಷ್ಯಾಧಾರಗಳು ತನ್ನಲ್ಲಿವೆ ಎಂದು ಪತ್ರಿಕೆ ಹೇಳಿಕೊಂಡಿದೆ. ಅಚ್ಚರಿಯ ವಿಷಯ ಎಂದರೆ ನ್ಯೂಯಾರ್ಕ್ ಟೈಮ್ಸ್ ನ ಆರೋಪಗಳನ್ನು ಪುಷ್ಟೀಕರಿಸುವ ವಿಡಿಯೋ ಸಹಿತ ವರದಿಗಳನ್ನು ನ್ಯೂಸ್‌ಕ್ಲಿಕ್ ವೆಬ್‌ಸೈಟ್ ಇತ್ತೀಚೆಗೆ ಪ್ರಕಟಿಸಿತ್ತು.
ನ್ಯೂಯಾರ್ಕ್ ಟೈಮ್ಸ್‌ನ ಈ ವರದಿ ಕೇವಲ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ತೀವ್ರ ಕುತೂಹಲ ಕೆರಳಿಸಿದೆ. ಭಾರತದ ವಿರುದ್ಧ ಸದಾ ಒಂದಿಲ್ಲೊಂದು ತಕರಾರು ತೆಗೆಯುತ್ತಲೇ ಬಂದಿರುವ ಚೀನ, ವಿದೇಶಗಳಲ್ಲಿನ ಮಾಧ್ಯಮಗಳು ಮತ್ತು ರಾಜಕೀಯ ಪಕ್ಷಗಳ ಮೇಲೆ ಹಿಡಿತ ಸಾಧಿಸುವ ಷಡ್ಯಂತ್ರ ನಡೆಸಿರುವುದು ಖಂಡನಾರ್ಹ. ಮಾಧ್ಯಮದ ಮೂಲಕ ಪರ ದೇಶಗಳ ಮೇಲೆ ತನ್ನ ನೀತಿಗಳನ್ನು ಪರೋಕ್ಷವಾಗಿ ಹೇರುವ ಮೂಲಕ ಅಲ್ಲಿನ ಜನರನ್ನು ಸೆಳೆದು, ತನ್ನ ಮಾರುಕಟ್ಟೆಯನ್ನು ವೃದ್ಧಿಸಿಕೊಳ್ಳುವ ಮತ್ತು ಆ ಮೂಲಕ ತನ್ನ ವಿಸ್ತರಣವಾದಕ್ಕೆ ಬಲ ತುಂಬುವ ಚೀನದ ಈ ತಂತ್ರಗಾರಿಕೆ ಜಾಗತಿಕ ಶಾಂತಿಗೆ ಭಂಗ ತರುವಂಥದ್ದಾಗಿದೆ.
ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಎಂದು ಪರಿಗಣಿಸಲ್ಪಟ್ಟಿರುವ ಮಾಧ್ಯಮಗಳಿಗೆ ನೀಡಲಾಗಿರುವ ಸ್ವಾಯತ್ತೆಯನ್ನು ದುರುಪಯೋಗಪಡಿಸಿಕೊಳ್ಳುವ ಯಾವುದೇ ಪ್ರಯತ್ನಕ್ಕೆ ಸರಕಾರ ಅವಕಾಶ ನೀಡಕೂಡದು. ಈ ವಿಷಯದಲ್ಲಿ ರಾಜಕೀಯ ಮಹತ್ವಾಕಾಂಕ್ಷೆಗಿಂತ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ ಎಂಬುದನ್ನು ಎಲ್ಲ ಪಕ್ಷಗಳು ಮನಗಾಣಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.