ನೌಕಾಪಡೆ ಬಲ ವೃದ್ಧಿಸಲಿ; ವಿರಾಟನಿಗಿರಲಿ ನೆಮ್ಮದಿಯ ನಿವೃತ್ತಿ
Team Udayavani, Mar 10, 2017, 3:45 AM IST
ಭಾರತೀಯ ನೌಕಾಪಡೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಐಎನ್‌ಎಸ್ ವಿರಾಟ್ ನಿವೃತ್ತಿಗೊಂಡಿದೆ. ನಮ್ಮಲ್ಲಿ ಈಗ ಇರುವುದು ಒಂದೇ ವಿಮಾನ ವಾಹಕ ಸಮರ ನೌಕೆ. ಭಾರತ ಯುದ್ಧದಾಹಿ ದೇಶವಲ್ಲವಾದರೂ ಸ್ವರಕ್ಷಣೆ, ವ್ಯಾಪಾರ ವಹಿವಾಟುಗಳ ಹಿತಾಸಕ್ತಿಯ ರಕ್ಷಣೆಗಾಗಿ ಇನ್ನಷ್ಟು ಯುದ್ಧನೌಕೆಗಳ ಬಲ ನಮಗೆ ಬೇಕು.
ನೌಕಾಪಡೆಗೆ ಸುಮಾರು ಮೂರು ದಶಕಗಳ ಅಮೂಲ್ಯ ಸೇವೆ ಸಲ್ಲಿಸಿದ ಯುದ್ಧ ವಿಮಾನ ವಾಹಕ ನೌಕೆ ಐಎನ್‌ಎಸ್ ವಿರಾಟ್ ಮಾ. 6ರಂದು ನಿವೃತ್ತಿಯಾಗಿದೆ. ನಿವೃತ್ತಿಯಾಗಿರುವುದು ಒಂದು ಹಡಗೇ ಆಗಿದ್ದರೂ ದೇಶದ ಜತೆಗೆ ವಿರಾಟ್‌ಗೆ ಭಾವನಾತ್ಮಕವಾದ ಬೆಸುಗೆಯಿತ್ತು. ವಿರಾಟ್ 30 ವರ್ಷ ಭಾರತದ ನೌಕಾಪಡೆಗಾಗಿ ದುಡಿದಿದೆ. ಇದಕ್ಕೂ ಮೊದಲು 27 ವರ್ಷ ಬ್ರಿಟಿಶ್ ರಾಯಲ್ ನೇಮಿಯ ಸೇವೆಯಲ್ಲಿತ್ತು. ಈ ಯುದ್ಧನೌಕೆಯನ್ನು 80ರ ದಶಕದಲ್ಲಿ ಭಾರತ 433 ರೂ. ಕೋ.ಗೆ ಖರೀದಿಸಿ 1987ರಲ್ಲಿ ಸೇವೆಗೆ ಸೇರಿಸಿಕೊಂಡಿತು. ಅಂದಿನಿಂದ ನೌಕಾಪಡೆಯ ಅವಿಭಾಜ್ಯ ಅಂಗವಾಗಿದ್ದ ವಿರಾಟ್ ಹಲವು ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದೆ. 1971ರ ಭಾರತ-ಪಾಕ್ ಯುದ್ಧ ಸಂದರ್ಭದಲ್ಲಿ ವಿರಾಟ್ ನಿರ್ಣಾಯಕ ಪಾತ್ರ ವಹಿಸಿತ್ತು.
ಐಎನ್‌ಎಸ್ ವಿರಾಟ್ ನಿವೃತ್ತಿಯಾಗುವುದರೊಂದಿಗೆ ಭಾರತದ ನೌಕಾಪಡೆಯಲ್ಲಿ ದೊಡ್ಡದೊಂದು ಶೂನ್ಯ ಸೃಷ್ಟಿಯಾಗಿದೆ. ನಮ್ಮ ನೌಕಾಪಡೆಯಲ್ಲಿ ಇದ್ದದ್ದೇ ಎರಡು ಯುದ್ಧ ವಿಮಾನ ವಾಹಕ ಸಮರ ನೌಕೆಗಳು. ವಿರಾಟ್ ಮತ್ತು 2013ರಲ್ಲಿ ಸೇವೆಗೆ ಸೇರ್ಪಡೆಯಾಗಿರುವ ಐಎನ್‌ಎಸ್ ವಿಕ್ರಮಾದಿತ್ಯ. ಇದಕ್ಕೆ ಅತ್ಯಾಧುನಿಕ ಯುದ್ಧಾಸ್ತ್ರ ಅಳವಡಿಸಲಾಗುತ್ತಿದೆ.
ಆಧುನಿಕ ರಣವ್ಯೂಹದಲ್ಲಿ ವಿಮಾನ ವಾಹಕ ಅತ್ಯಂತ ಮಹತ್ವದ ಸ್ಥಾನವಿದೆ. ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸಲು ನೆರವಾಗುವುದು ಸಮರ ನೌಕೆಗಳು. ಅಮೆರಿಕ ಇಂತಹ 10 ಸಮರ ನೌಕೆಗಳನ್ನು ಹೊಂದಿರುವುದರಿಂದಲೇ ಜಗತ್ತಿನ ಬಲಾಡ್ಯ ಸೇನೆ ಎಂದು ಗುರುತಿಸಲ್ಪಡುತ್ತದೆ. ಭಾರತ ಯುದ್ಧದಾಹಿ ದೇಶವಲ್ಲ. ಆದರೆ ಸ್ವರಕ್ಷಣೆಗಾಗಿ ಇಂತಹ ಸಮರ ನೌಕೆಗಳು ಬೇಕು. ಪೂರ್ವ ಮತ್ತು ಪಶ್ಚಿಮದಲ್ಲಿ ಅಂತಾರಾಷ್ಟ್ರೀಯ ಜಲಸೀಮೆಯನ್ನು ಹೊಂದಿರುವ ಭಾರತಕ್ಕೆ ಬಲಿಷ್ಠ ನೌಕಾಪಡೆ ತೀರಾ ಅನಿವಾರ್ಯ. ನೆರೆ ರಾಷ್ಟ್ರ ಚೀನ ಹಿಂದು ಮಹಾಸಾಗರದಲ್ಲಿ ಆಗಾಗ ತಗಾದೆ ತೆಗೆಯುವ ಅಭ್ಯಾಸ ಹೊಂದಿದೆ. ಫೆಸಿಫಿಕ್ ಸಾಗರದಲ್ಲಿ ಆಧಿಪತ್ಯ ಸ್ಥಾಪಿಸುವ ಚೀನಕ್ಕೆ ಸಡ್ಡು ಹೊಡೆಯಬೇಕಾದರೆ ಅಷ್ಟೇ ಬಲಿಷ್ಠ ನೌಕಾಪಡೆಯನ್ನು ನಾವು ಹೊಂದಿರಬೇಕು.
ಹಿಂದೂ ಮಹಾಸಾಗರ ಮತ್ತು ಸುತ್ತಮುತ್ತ ನಮ್ಮ ವ್ಯಾಪಾರ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕೆ ಕೂಡ ನೌಕೆಯ ಬಲ ಅಗತ್ಯ. ಸಮರ ನೌಕೆಗಳಿಗಾಗಿ ಭಾರತ ಇಷ್ಟರ ತನಕ ಅವಲಂಬಿಸಿರುವುದು ಬೇರೆ ದೇಶಗಳನ್ನು. ಎಲ್ಲ ಅಭಿವೃದ್ಧಿ ಹೊಂದಿದ ದೇಶಗಳು ಈಗ ಯುದ್ಧಾಸ್ತ್ರಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಯತ್ನಿಸುತ್ತಿವೆ. ಭಾರತವೂ ಈ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ. ಐಎನ್‌ಎಸ್ ವಿಕ್ರಾಂತ್ ಗೌರವಾರ್ಥ ಇದೇ ಹೆಸರಿನಲ್ಲಿ ಇನ್ನೊಂದು ಯುದ್ಧ ನೌಕೆ ನಿರ್ಮಾಣವಾಗುತ್ತಿದೆ. ಆದರೆ 2023ಕ್ಕಿಂತ ಮೊದಲು ಇದು ಸೇವೆಗೆ ಲಭ್ಯವಾಗುವುದಿಲ್ಲ ಎಂದು ವರದಿಗಳು ಹೇಳುತ್ತಿವೆ. ಇದಕ್ಕೆ ಕಾರಣ ನಮ್ಮ ಕೆಂಪುಪಟ್ಟಿಯ ಆಮೆನಡಿಗೆ. ಅದೇ ರೀತಿ ಐಎನ್‌ಎಸ್ ವಿಶಾಲ್ ಎಂಬ ಇನ್ನೊಂದು ನೌಕೆಯ ನಿರ್ಮಾಣ ಯೋಜನೆಯೂ ಇದೆ.
ಐಎನ್‌ಎಸ್ ವಿಕ್ರಮಾದಿತ್ಯ ಸೇವೆಗೆ ಸೇರ್ಪಡೆಯಾಗುವಾಗ 20 ವರ್ಷ ವಿಳಂಬವಾಗಿತ್ತು ಎನ್ನುವುದೇ ಯುದ್ಧ ನೌಕೆಗಳ ನಿರ್ಮಾಣದಲ್ಲಿ ನಾವು ಎಷ್ಟು ಹಿಂದೆ ಇದ್ದೇವೆ ಎನ್ನುವುದಕೆ ಉದಾಹರಣೆ. ಹಾಗೆಂದು ಇದು ಪೂರ್ತಿ ಸ್ವದೇಶಿ ಯುದ್ಧ ನೌಕೆಯಲ್ಲ. ಭಾರತವಿನ್ನೂ ಯುದ್ಧ ನೌಕೆಗಳನ್ನು ಸ್ವತಂತ್ರವಾಗಿ ನಿರ್ಮಿಸಿಯೇ ಇಲ್ಲ. ಈ ಪರಿಸ್ಥಿತಿಯಲ್ಲಿ ಸಮರ ನೌಕೆಗಳನ್ನು ನಿರ್ಮಿಸುವ ಸಾಮರ್ಥ್ಯ ನಾವು ಹೊಂದಿದ್ದೇವೆ ಎನ್ನುವುದಷ್ಟೆ ಸದ್ಯಕ್ಕೆ ಸಮಾಧಾನ ಕೊಡುವ ಸಂಗತಿ.
ಐಎನ್‌ಎಸ್ ವಿಕ್ರಾಂತ್ ನಿವೃತ್ತಿಯಾದ ಬಳಿಕ ಅದನ್ನು ಗುಜರಿಗೆ ಮಾರಾಟ ಮಾಡಲಾಗಿದೆ. ಇದೀಗ ವಿರಾಟ್ ಅನ್ನು ಏನು ಮಾಡುವುದು ಎಂಬ ಪ್ರಶ್ನೆ. ಮ್ಯೂಸಿಯಂ ಮಾಡುವ, ಡೈವರ್ ಸ್ಪಾಟ್ ಮಾಡುವ ಪ್ರಸ್ತಾವಗಳೆಲ್ಲ ಇದ್ದರೂ ಇದು ಬಹಳ ಖರ್ಚು ಬಯಸುವ ಯೋಜನೆಗಳು. ನಾಲ್ಕು ತಿಂಗಳ ಒಳಗಾಗಿ ಯಾರೂ ಖರೀದಿದಾರರು ಮುಂಬರದಿದ್ದರೆ ವಿಕ್ರಾಂತ್‌ಗಾದ ಗತಿಯೇ ವಿರಾಟ್‌ಗೂ ಆಗಲಿದೆ ಎಂದು ನೌಕಾಪಡೆ ಮುಖ್ಯಸ್ಥರು ಹೇಳಿದ್ದಾರೆ. ದೇಶಕ್ಕೆ ಸೇವೆ ಸಲ್ಲಿಸಿದ ಯುದ್ಧ ನೌಕೆಗಳು ಕಡೆಗೆ ಗುಜರಿ ಅಂಗಡಿಯಲ್ಲಿ ನುಜ್ಜುಗುಜ್ಜಾಗಬಾರದು ಎನ್ನುವುದು ಜನರ ಅಪೇಕ್ಷೆ. ಹೀಗಾಗಿ ಸರಕಾರ ಭವ್ಯ ಪರಂಪರೆಯನ್ನು ಹಡಗುಗಳನ್ನು ಕನಿಷ್ಠ ಪ್ರವಾಸಿ ಆಕರ್ಷಣೆ ಕೇಂದ್ರವನ್ನಾಗಿಯಾದರೂ ಅಭಿವೃದ್ಧಿಪಡಿಸಲು ಮನಸ್ಸು ಮಾಡಬೇಕು. ಇದು ಯುದ್ಧ ನೌಕೆಗಳಿಗೆ ಸಲ್ಲಿಸುವ ನಿಜವಾದ ಗೌರವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
IPL-2025: ಓಂಕಾರ್ ಸಾಳ್ವಿ ಆರ್‌ಸಿಬಿ ಬೌಲಿಂಗ್ ಕೋಚ್
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.