ಪಕ್ಷಾಂತರ ಪಿಡುಗಿಗೆ ಬೇಕಿದೆ ಮದ್ದು
Team Udayavani, Nov 14, 2019, 4:13 AM IST
ಕರ್ನಾಟಕದ ರಾಜಕೀಯದಲ್ಲಿ ಸಾಕಷ್ಟು ಬಿರುಗಾಳಿ ಎಬ್ಬಿಸಿದ್ದ ಅನರ್ಹ ಶಾಸಕರ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ನ ತ್ರಿ ಸದಸ್ಯ ಪೀಠ ತೀರ್ಪು ನೀಡಿದ್ದು ಎಲ್ಲರೂ ಅವರವರ ಅನುಕೂಲಕ್ಕೆ ತಕ್ಕಂತೆ ಸಮಾಧಾನ ಪಟ್ಟುಕೊಳ್ಳುವಂತೆ ಮಾಡಿದೆ.
ದೇಶದ ರಾಜಕಾರಣದಲ್ಲಿ ಪಕ್ಷಾಂತರ ಪಿಡುಗು ಕ್ಯಾನ್ಸರ್‌ನಂತೆ ಹಬ್ಬುತ್ತಿದ್ದು, ಅದಕ್ಕೆ ಸೂಕ್ತ ಚುಚ್ಚು ಮದ್ದು ನೀಡಬೇಕಾದ ಅಗತ್ಯವಿದ್ದು, ಸುಪ್ರೀಂ ಕೋರ್ಟ್ ಅನರ್ಹ ಶಾಸಕರ ಪ್ರಕರಣದಲ್ಲಿ ಸಂವಿಧಾನದಲ್ಲಿ ಸ್ಪೀಕರ್‌ಗೆ ಇರುವ ಅಧಿಕಾರ, ಶಾಸಕರಿಗೆ ಇರುವ ಹಕ್ಕಿನ ಬಗ್ಗೆ ವಿಸ್ತೃತವಾಗಿ ಚಿಂತನೆ ನಡೆಸಿ, ಈಗಿರುವ ಕಾನೂನಿನ ವ್ಯಾಪ್ತಿಯಲ್ಲಿ ತೀರ್ಪು ಪ್ರಕಟಿಸಿರುವುದು ಸದ್ಯದ ಗಾಯಕ್ಕೆ ಮುಲಾಮು ಹಚ್ಚಿದಂತಾಗಿದೆ.
ಕರ್ನಾಟಕದಲ್ಲಿ ಮೈತ್ರಿ ಸರಕಾರದ ವಿರುದ್ಧ ಬಂಡಾಯ ಸಾರಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಶಾಸಕರು ತಾವು ಆಯ್ಕೆ ಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬಂಡಾಯ ಸಾರಿ ಮುಂಬಯಿಗೆ ತೆರಳಿದ್ದರು.
ಬಂಡಾಯ ಶಾಸಕರು ಸರಕಾರ ಉರುಳಿಸಲು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಆ ಶಾಸಕರನ್ನು ಅನರ್ಹಗೊಳಿಸುವಂತೆ ದೂರು ನೀಡಿದ್ದರು. ಸ್ಪೀಕರ್ ರಮೇಶ್ ಕುಮಾರ್ ಬಂಡಾಯ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವ ವಿಷಯದಲ್ಲಿ ಸಹಜ ನ್ಯಾಯ ನೀಡದೇ ಅನರ್ಹಗೊಳಿಸಿದ್ದಾರೆ ಎಂದು ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಸುಪ್ರೀಂ ಕೋರ್ಟ್ ಕೂಡ ಅನರ್ಹ ಶಾಸಕರ ಪ್ರಕರಣದಲ್ಲಿ ಅನೇಕ ವಿಷಯಗಳನ್ನು ಸೂಕ್ಷ್ಮವಾಗಿ ಉಲ್ಲೇಖೀಸಿದ್ದು, ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಮಹಾಮಾರಿಯಂತೆ ಬೆಳೆಯುತ್ತಿರುವ ಪಕ್ಷಾಂತರ ಚುಟುವಟಿಕೆಯ ಬಗ್ಗೆ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ ಒಂದು ಸರ್ಕಾರವನ್ನು ಉರುಳಿಸಲು ಹಾಗೂ ಅಧಿಕಾರಕ್ಕಾಗಿ ತಾವು ಆಯ್ಕೆಯಾಗಿರುವ ಪಕ್ಷವನ್ನು ತ್ಯಜಿಸಿ ಬೇರೊಂದು ಪಕ್ಷಕ್ಕೆ ಬೆಂಬಲ ಸೂಚಿಸುವ ಶಾಸಕರ ನಡೆಯನ್ನೂ ಸಮರ್ಥಿಸದೇ ಇರುವುದು ಪಕ್ಷಾಂತರಿಗಳಿಗೆ ಸೂಕ್ತ ಸಂದೇಶ ರವಾನೆ ಮಾಡಿದಂತಾಗಿದೆ.
ಪಕ್ಷಾಂತರ ವಿಷಯದಲ್ಲಿ ರಾಜಕೀಯ ಪಕ್ಷಗಳು ಹಾಗೂ ಜನ ಪ್ರತಿನಿಧಿಗಳ ನಡವಳಿಕೆಗಳ ಬಗ್ಗೆ ಸುಪ್ರೀಂ ಕೋರ್ಟ್ ನೈತಿಕತೆಯ ಪ್ರಶ್ನೆ ಎತ್ತಿದ್ದು, ರಾಜಕೀಯದಲ್ಲಿ ನೈತಿಕತೆಯ ಪಾಲನೆ ಕಡಿಮೆಯಾಗುತ್ತಿದೆ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದು, ರಾಜಕೀಯ ವ್ಯವಸ್ಥೆಯ ಸುಧಾರಣೆಗೆ ಪರೋಕ್ಷವಾಗಿ ನಿರ್ದೇಶನ ನೀಡಿದಂತಿದೆ.
ವಿಶೇಷವಾಗಿ 17 ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ಕ್ರಮ ಸರಿ ಎಂದು ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್ ಅವರ ಅನರ್ಹತೆಯ ಅವಧಿಯನ್ನು ನಿರ್ಧರಿಸುವ ಅಧಿಕಾರ ಸ್ಪೀಕರ್‌ಗೆ ಇಲ್ಲ ಎನ್ನುವ ಮೂಲಕ ಸಂವಿಧಾನದ 10 ನೇ ಪರಿಚ್ಛೇದ ಪಕ್ಷಾಂತರ ನಿಷೇಧ ಕಾಯ್ದೆ ಇನ್ನೂ ಬಲಗೊಳ್ಳಬೇಕಿದೆ ಎನ್ನುವುದನ್ನು ಸೂಚಿಸಿದಂತಿದೆ.
ಆದರೆ, ಈ ಪ್ರಕರಣದ ಮೂಲಕ ಪಕ್ಷಾಂತರಿಗಳಿಗೆ ಸೂಕ್ತ ಸಂದೇಶ ರವಾನೆಯಾಗಬೇಕೆಂಬ ಸಾಮಾನ್ಯ ಜನರ ಬಯಕೆ ಇನ್ನೂ ಜೀವಂತವಾಗಿ ಉಳಿಯುವಂತೆ ಮಾಡಿದೆ. ಸುಪ್ರೀಂ ಕೋರ್ಟ್ ತನಗಿರುವ ಅಧಿಕಾರ ಬಳಸಿಕೊಂಡು ತೀರ್ಪು ನೀಡಿದ್ದು, ಉಪ ಚುನಾವಣೆಯಲ್ಲಿ ಮತದಾರರು ತಮ್ಮ ವಿವೇಚನೆ ಬಳಸಿ ನೀಡುವ ಮತ ಪಕ್ಷಾಂತರ ಪಿಡುಗಿಗೆ ಮದ್ದಾಗಬೇಕಿದೆ. ಅಲ್ಲದೇ ಪಕ್ಷಾಂತರ ನಿಷೇಧ ಕಾಯ್ದೆ ಬಲಗೊಳಿಸಲು ಎಲ್ಲ ರಾಜಕೀಯ ಪಕ್ಷಗಳೂ ಪ್ರಾಮಾಣಿಕ ಯತ್ನ ಮಾಡಬೇಕಿರುವುದು ಇಂದಿನ ಅನಿವಾರ್ಯತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.