ನೇಪಾಲದ ಉದ್ಧಟತನ ಎಚ್ಚರಿಕೆ ಅಗತ್ಯ
Team Udayavani, Jun 13, 2020, 7:11 AM IST
ನೆರೆ ರಾಷ್ಟ್ರ ನೇಪಾಲ ಕಳೆದ ಕೆಲವು ತಿಂಗಳಿಂದ ಭಾರತಕ್ಕೆ ತಲೆನೋವಾಗಿ ಬದಲಾಗಿದೆ. ಅದರಲ್ಲೂ ಕಾಲಾಪಾನಿ, ಲಿಂಪಿಯಾಧುರಾ, ಲಿಪುಲೇಖ್ ಪ್ರದೇಶಗಳ ವಿಚಾರವಾಗಿ ಎರಡೂ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟು ಭವಿಷ್ಯದಲ್ಲೂ ಉಲ್ಬಣಿಸುವ ಲಕ್ಷಣ ಕಾಣಿಸುತ್ತಿದೆ. ನ್ಯಾಯಯುತವಾಗಿ ಭಾರತಕ್ಕೇ ಸೇರಿದ ಪ್ರದೇಶಗಳನ್ನು ತನ್ನದೆಂದು ಸಾರುತ್ತಾ ನೇಪಾಲವೀಗ ಸಿದ್ಧಪಡಿಸಿರುವ ಹೊಸ ನಕ್ಷೆಗೆ ಶನಿವಾರ ಅಲ್ಲಿನ ಸಂಸತ್ತಿನಲ್ಲಿ ಮೊಹರು ಬೀಳುವ ಸಾಧ್ಯತೆ ಇದೆ. ಆದಾಗ್ಯೂ, ಭಾರತ ಈ ವಿಚಾರದಲ್ಲಿ ನೇಪಾಲಕ್ಕೆ ಎಚ್ಚರಿಕೆಯ ಸಂದೇಶವನ್ನೇನೋ ಕಳಿಸಿದೆಯಾದರೂ, ಆ ರಾಷ್ಟ್ರದೊಂದಿಗೆ ಸಂಬಂಧ ಹಾಳಾಗದಂತೆ ಎಚ್ಚರಿಕೆಯಿಂದಲೂ ವರ್ತಿಸುತ್ತಿದೆ.
ಗುರುವಾರ ಕೂಡ ಭಾರತ ಸರಕಾರ, ತಾನು ನೇಪಾಲದೊಂದಿಗಿನ ಸ್ನೇಹ-ಬಾಂಧವ್ಯಕ್ಕೆ ಹೆಚ್ಚು ಮೌಲ್ಯಕೊಡುವುದಾಗಿ ಹೇಳಿ ಪ್ರಬುದ್ಧತೆ ಮೆರೆದಿದೆ. ಆದರೆ, ಇನ್ನೊಂದೆಡೆ ನೇಪಾಲದ ಕಮ್ಯುನಿಸ್ಟ್ ಓಲಿ ಸರಕಾರ ಮಾತ್ರ, ತನ್ನ ಉದ್ಧಟತನದ ಮೂಲಕ ಭಾರತದೆಡೆಗಿನ ತನ್ನ ದ್ವೇಷವನ್ನು, ಅದಕ್ಕಿಂತ ಮುಖ್ಯವಾಗಿ ಚೀನದೆಡೆಗಿನ ತನ್ನ ಪ್ರೇಮವನ್ನು ಢಾಳಾಗಿಯೇ ಪ್ರದರ್ಶಿಸುತ್ತಿದೆ. ಹಾಗೆಂದು ನೇಪಾಲದ ಕಿರಿಕಿರಿಯನ್ನೆಲ್ಲ ಭಾರತ ಯಾವಾಗಲೂ ಸಹಿಸಿಕೊಂಡಿದೆ ಎಂದೇನಲ್ಲ. ಹಿಂದೆ ರಾಜೀವ್ ಗಾಂಧಿ ಸಮಯದಲ್ಲೂ, ಅಂದರೆ 1989ರಲ್ಲಿ ವ್ಯಾಪಾರ ಒಪ್ಪಂದವೊಂದರಲ್ಲಿ ತಂಟೆ ತೆಗೆದು ಭಾರತದ ಮುನಿಸಿಗೆ ಆ ರಾಷ್ಟ್ರ ಪಾತ್ರವಾಗಿತ್ತು. ಇದರಿಂದ ವ್ಯಗ್ರವಾದ ರಾಜೀವ್ ಸರಕಾರ ನೇಪಾಲದ ಮೇಲೆ ನಾಕಾಬಂಧಿ ಹಾಕಿತು. ಪರಿಣಾಮವಾಗಿ ನೇಪಾಲಕ್ಕೆ ಭಾರತದಿಂದ ಸುಮಾರು 13 ತಿಂಗಳ ಕಾಲ ಆಹಾರ ಪದಾರ್ಥ, ತೈಲ, ಔಷಧಗಳ ಪೂರೈಕೆಯೇ ನಿಂತು, ಆ ರಾಷ್ಟ್ರ ಅಕ್ಷರಶಃ ತತ್ತರಿಸಿಹೋಗಿತ್ತು. ಸತ್ಯವೇನೆಂದರೆ, ಭಾರತದ ಮುನಿಸಿಗೆ…ವ್ಯಾಪಾರ ಒಪ್ಪಂದಕ್ಕಿಂತಲೂ, ಅದರ ಹಿಂದಿನ ವರ್ಷ ನೇಪಾಲಸರಕಾರ ಚೀನದೊಂದಿಗೆ ಮಾಡಿಕೊಂಡಿದ್ದ ಮಿಲಿಟರಿ ಒಪ್ಪಂದ ಬೇಸರ ತರಿಸಿತ್ತು. ಭಾರತವನ್ನು ಏನಕೇನ ಸುತ್ತುವರಿದು ದುರ್ಬಲವಾಗಿಸಬೇಕು ಎಂದು ಪ್ರಯತ್ನಿಸುವ ಚೀನಕ್ಕೆ ನೇಪಾಲಆಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ವೇದಿಕೆ ಕೊಡುತ್ತಲೇ ಬಂದಿದೆ.
ಇನ್ನು 2015ರಲ್ಲೂ ನೇಪಾಲಭಾರತದ ವಿರೋಧದ ನಡುವೆಯೂ ತನ್ನ ಸಂವಿಧಾನದಲ್ಲಿ ಬದಲಾವಣೆ ಮಾಡಿತ್ತು. ಆಗ ಮೋದಿ ಸರಕಾರ, ನೇಪಾಲಕ್ಕೆ ಅಘೋಷಿತ ನಾಕಾಬಂದಿ ಹಾಕಿದಾಗ, ಆ ಪುಟ್ಟ ರಾಷ್ಟ್ರದಲ್ಲಿ ಮತ್ತೂಮ್ಮೆ ಅಗತ್ಯ ವಸ್ತುಗಳ ತೀವ್ರ ಅಭಾವ ಹಾಗೂ ವಿಪರೀತ ಬೆಲೆ ಏರಿಕೆ ಸೃಷ್ಟಿಯಾಯಿತು. ಗಮನಿಸಬೇಕಾದ ಸಂಗತಿಯೆಂದರೆ, ಭಾರತವು ನೇಪಾಲದ ಉದ್ಧಟತನಕ್ಕೆ ಪ್ರತ್ಯುತ್ತರ ನೀಡಲು ಮುಂದಾದಾಗಲೆಲ್ಲ, ಅವಕಾಶವಾದಿ ಚೀನ ಆ ರಾಷ್ಟ್ರದ ಸಹಾಯಕ್ಕೆ ಓಡೋಡಿ ಬಂದುಬಿಡುತ್ತದೆ. ಕೊರೊನಾ ಹಾವಳಿ ಆರಂಭವಾದ ನಂತರದಿಂದಂತೂ ಓಲಿ-ಜಿನ್‌ಪಿಂಗ್ ಜೋಡಿ ಭಾರತಕ್ಕೆ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯೊಡ್ಡುತ್ತಲೇ ಇದ್ದಾರೆ.
ಅದರಲ್ಲೂ ನೇಪಾಲಪ್ರಧಾನಿ ಓಲಿ ಅವರಂತೂ, ಈಗಲೂ ನೇಪಾಲದಲ್ಲಿ ಕೊರೊನಾ ಹೆಚ್ಚಳಕ್ಕೆ ಭಾರತವನ್ನೇ ದೂರುತ್ತಿದ್ದಾರೆ. ಭಾರತದಿಂದ ಹಿಂದಿರುಗುತ್ತಿರುವ ನೇಪಾಳಿಯರಲ್ಲೇ ಅಧಿಕ ಜನರಿಗೆ ಸೋಂಕು ಪತ್ತೆಯಾಗುತ್ತಿದೆ ಎನ್ನುವ ಅವರ ಹೇಳಿಕೆ ಎಷ್ಟು ನಿಜ? ಇದರಲ್ಲಿ ಭಾರತದ ತಪ್ಪೇನಿದೆ? ನೇಪಾಳಿಯರಿಗೆ ತಮ್ಮ ನೆಲದಲ್ಲೇ ಉದ್ಯೋಗ ಸೃಷ್ಟಿಸಲಾರದ ಫಲವಾಗಿಯೇ ಅಲ್ಲವೇ ಅವರು ಭಾರತಕ್ಕೆ ಬರುತ್ತಿರುವುದು? ಇದೆಲ್ಲ ತಿಳಿದಿದ್ದರೂ ಸಹ, ಚೀನಗಿಂತಲೂ
ಭಾರತದ ಕೊರೊನಾ ಹೆಚ್ಚು ಅಪಾಯಕಾರಿ ಎಂಬ ಅವರ ಚುಚ್ಚು ಮಾತುಗಳ ಹಿಂದೆ, ಚೀನದ ಧ್ವನಿಯೂ ಮಿಳಿತವಾಗಿರುವುದು ಸ್ಪಷ್ಟವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.