ಕೋವಿಡ್, ಪ್ರವಾಹವೇ ಹೊಸ ಸಂಪುಟದ ಮುಂದಿರುವ ಸವಾಲು
Team Udayavani, Aug 5, 2021, 6:00 AM IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ರಚನೆಯಾಗಿದೆ. ಮುಖ್ಯಮಂತ್ರಿ ಸೇರಿ 30 ಮಂದಿ ಸಂಪುಟ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಂತಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಳ ಜಾಣ್ಮೆ ಹಾಗೂ ಸೂಕ್ಷ್ಮತೆ ಅರಿತು ಮೂಲ ಬಿಜೆಪಿಯವರು, ವಲಸಿಗರು, ಸಂಘ ಪರಿವಾರದ ಶಿಫಾರಸು ಹೊಂದಿರುವವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಬಲಿಗರು ಹೀಗೆ ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವ ಸದ್ಯದ ಪರಿಸ್ಥಿತಿಯಲ್ಲಿ ಸಮತೋಲಿತ ಸಂಪುಟವನ್ನೇ ರಚಿಸಿದ್ದಾರೆ. ಹೀಗಾಗಿ, ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾದಂತೆ. ಇನ್ನು, ಖಾತೆಗಳ ಹಂಚಿಕೆಯಲ್ಲಿ ಹೆಚ್ಚು ಆಕ್ಷೇಪಗಳಿಲ್ಲದಂತೆ ನೋಡಿಕೊಂಡರೆ ಮತ್ತಷ್ಟು ನಿರಾಳರಾಗುತ್ತಾರೆ.
ನಾಯಕತ್ವ ಬದಲಾವಣೆ, ಹೊಸ ಮುಖ್ಯಮಂತ್ರಿ ಆಯ್ಕೆ, ಹೊಸ ಸಚಿವ ಸಂಪುಟ ರಚನೆ ಹೀಗೆ ಕಳೆದ ಹತ್ತು ದಿನಗಳಿಂದ ರಾಜ್ಯದ ಆಡಳಿತ ಯಂತ್ರ ಒಂದು ರೀತಿಯಲ್ಲಿ ಸ್ಥಗಿತಗೊಂಡಂತಾಗಿತ್ತು. ಕೊರೊನಾ ಮೂರನೇ ಅಲೆ ಭೀತಿ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಈಗಿರುವ ಮೊದಲ ಸವಾಲು. ಇದನ್ನು ಸಮರ್ಥವಾಗಿ ಎದುರಿಸಬೇಕಾಗಿದೆ.
ಮುಖ್ಯಮಂತ್ರಿಯವರು ನೂತನ ಸಚಿವ ಸಂಪುಟದ ಸಭೆ ನಡೆಸಿ ಗುರುವಾರದಿಂದಲೇ ಸಚಿವರು ಜಿಲ್ಲಾ ಪ್ರವಾಸ ಕೈಗೊಂಡು ಮೂರನೇ ಅಲೆ ನಿಯಂತ್ರಣ ಹಾಗೂ ಪ್ರವಾಹ ಸಂತ್ರಸ್ತರ ನೆರವು ಕಾರ್ಯದಲ್ಲಿ ತೊಡಗಲಿದ್ದಾರೆ ಎಂದು ಹೇಳಿರುವುದು ಸಮಾಧಾನಕರ. ನೂತನ ಸಚಿವರಿಗೂ ನಿಮ್ಮ ನಿಮ್ಮ ಜಿಲ್ಲೆಗಳಿಗೆ ತೆರಳಿ ಪ್ರಗತಿ ಪರಿಶೀಲನೆ ನಡೆಸಿ ಎಂದು ತಾಕೀತು ಸಹ ಮಾಡಿದ್ದಾರೆ. ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಾಗೂ ಖಾತೆ ಹಂಚಿಕೆಯಾಗದೆ ಪ್ರವಾಸ ಮಾಡಿದರೂ ಕಷ್ಟ. ಆದರೂ ತಮ್ಮ ತಮ್ಮ ಜಿಲ್ಲೆಗಳಲ್ಲಿ ಹೋಗಿ ಅಧಿಕಾರಿಗಳ ಸಭೆ ನಡೆಸಿದರೆ ಸ್ವಲ್ಪ ಮಟ್ಟಿಗಾದರೂ ಜನರ ಸಮಸ್ಯೆಗೆ ಪರಿಹಾರ ಸಿಗಲಿದೆ. ಬದಲಾದ ರಾಜಕೀಯ ವಿದ್ಯಮಾನದಲ್ಲಿ ಹೊಸ ಸಿಎಂ ನೇತೃತ್ವದ ಸರಕಾರದ ಮೇಲೂ ಜನರ ನಿರೀಕ್ಷೆ ಸಾಕಷ್ಟಿದೆ. ಕೊರೊನಾದಿಂದಾಗಿ ಆರ್ಥಿಕ ಪರಿಸ್ಥಿತಿ ಸಂಕಷ್ಟವಾಗಿದ್ದು ಅದನ್ನು ಸರಿದಾರಿಗೆ ತರಬೇಕಾಗಿದೆ.
ಕೇಂದ್ರ ಸರಕಾರದ ಪುರಸ್ಕೃತ ಯೋಜನೆಗಳಿಂದ ರಾಜ್ಯಕ್ಕೆ ಬರಬೇಕಾದ ಅನುದಾನದ ಪಾಲು ಪಡೆಯಬೇಕು. ಜಿಎಸ್‌ಟಿ ಪರಿಹಾರ ಪಡೆಯಬೇಕು. ಮೇಕೆದಾಟು ಯೋಜನೆ ವಿಚಾರದಲ್ಲಿ ಖಡಕ್ ನಿಲುವು ತಾಳಬೇಕು. ಇದೆಲ್ಲವೂ ಹೊಸ ಸಂಪುಟದ ಜವಾಬ್ದಾರಿಯಾಗಿದೆ.
ಸಂಪುಟದಲ್ಲಿ ಸ್ಥಾನ ಸಿಗದವರ ಆಕ್ರೋಶ ಅಸಮಾಧಾನ ಸಹಜ. ಸಂಪುಟದಲ್ಲಿ ಇನ್ನೂ ನಾಲ್ಕು ಸ್ಥಾನ ಖಾಲಿ ಇದ್ದು ಅದು ನಿಮಗೇ ಎಂದು ಸಮಾಧಾನ ಹೇಳಬಹುದು. ಆದರೆ, ಅಸಮಾಧಾನ ಸ್ಫೋಟವಾಗದಂತೆ ನೋಡಿಕೊಳ್ಳುವಲ್ಲಿ ಕೇಂದ್ರದ ವರಿಷ್ಠರು, ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು ಹಾಗೂ ಸಂಘ ಪರಿವಾರದವರ ಹೊಣೆಗಾರಿಕೆಯೂ ಇದೆ. ಯಾಕೆಂದರೆ ಮುಖ್ಯಮಂತ್ರಿಯವರೇ ಹೇಳಿದಂತೆ ಕೇಂದ್ರದ ವರಿಷ್ಠರದೇ ಅಂತಿಮ ತೀರ್ಮಾನ. ಎಲ್ಲವನ್ನೂ ಅಳೆದು ತೂಗಿ ಸಾಮಾಜಿಕ ನ್ಯಾಯ, ಜಾತಿವಾರು, ಪ್ರಾದೇಶಿಕವಾರು, ಜಿಲ್ಲಾವಾರು ಅನ್ಯಾಯ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೂ ಅಸಮಾಧಾನಿತರಿಗೆ ಸಮಾಧಾನಪಡಿಸುವ ಕೆಲಸವೂ ಸುಲಭದ್ದಲ್ಲ. ಆದರೆ ಅದೇ ದೊಡ್ಡ ತಲೆನೋವಾಗಿ ಪರಿಣಮಿಸಬಾರದು. ಇದೇ ಕಾರಣಕ್ಕಾಗಿ ಮತ್ತೆ ಆಡಳಿತಕ್ಕೆ ಅಡ್ಡಿಯುಂಟಾಗಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.