ಆರ್‌ಬಿಐಗೆ ಹೊಸ ಗವರ್ನರ್: ಸರ್ಕಾರದ ಮೇಲಿದೆ ಜವಾಬ್ದಾರಿ
Team Udayavani, Dec 13, 2018, 6:00 AM IST
ಊರ್ಜಿತ್ ಪಟೇಲ್ ರಾಜೀನಾಮೆಯಿಂದ ತೆರವಾಗಿರುವ ಆರ್‌ಬಿಐ ಗವರ್ನರ್ ಹುದ್ದೆಗೆ ಶಕ್ತಿಕಾಂತ್ ದಾಸ್‌ರನ್ನು ಕೇಂದ್ರ ಸರಕಾರ ನೇಮಿಸಿದೆ. ಪಟೇಲ್ ರಾಜೀನಾಮೆ ನೀಡಿದ 24 ತಾಸಿನೊಳಗಾಗಿ ಅನುಭವಿ ಅಧಿಕಾರಿ ದಾಸ್ ಅವರನ್ನು 3 ವರ್ಷಗಳ ಪೂರ್ಣಾವಧಿಗೆ ನೇಮಿಸಿ ಸರಕಾರ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಆರ್‌ಬಿಐ ಮತ್ತು ಸರಕಾರದ ನಡುವಿನ ತಿಕ್ಕಾಟ ತಾರಕಕ್ಕೇರಿರುವ ಸಂದರ್ಭದಲ್ಲಿ ಮತ್ತು ದೇಶದ ಆರ್ಥಿಕ ವ್ಯವಸ್ಥೆ ಸ್ಥಿತ್ಯಂತರಕ್ಕೊಳಗಾಗುತ್ತಿರುವ ಕಾಲಘಟ್ಟದಲ್ಲಿ ಮಹತ್ವದ ಹುದ್ದೆಗೆ ದಾಸ್ ಬಂದಿದ್ದಾರೆಂಬ ಕಾರಣಕ್ಕೆ ಈ ನೇಮಕ ಪ್ರಾಮುಖ್ಯ ಪಡೆದಿದೆ. ದಾಸ್ ನೇಮಕದ ಮೂಲಕ 5 ವರ್ಷಗಳ ಬಳಿಕ ಆರ್‌ಬಿಐಗೆ ಅಧಿಕಾರಿಯೊಬ್ಬರು ಗವರ್ನರ್ ಆದಂತಾಗಿದೆ. ರಘುರಾಮ್ ರಾಜನ್, ಊರ್ಜಿತ್ ಪಟೇಲ್ ವೃತ್ತಿಪರ ಅಕಾಡೆಮಿಕ್ ಹಿನ್ನೆಲೆಯ ವರಾಗಿದ್ದರು.
ಕೆಲ ಸಮಯದಿಂದ ಆರ್‌ಬಿಐಯ ಸ್ವಾಯತ್ತೆಗೆ ಸಂಬಂಧಿಸಿದಂತೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಪಟೇಲ್ ರಾಜೀನಾಮೆಗೂ ಇದುವೇ ಕಾರಣ ಎನ್ನಲಾಗುತ್ತಿದೆ. ಆದರೆ ಈ ಕುರಿತು ಅಧಿಕೃತವಾಗಿ ಯಾರೂ ಏನನ್ನೂ ಹೇಳದಿರುವುದರಿಂದ ಎಂದಾದದೂ ಪಟೇಲ್ ಪುಸ್ತಕ ಬರೆದರಷ್ಟೇ ಇದು ದೃಢಪಡಬಹುದು. ಏನೇ ಆದರೂ ಪಟೇಲ್ ಹಠಾತ್ ರಾಜೀನಾಮೆ ನಿರ್ಧಾರ ಸರಕಾರಕ್ಕೆ ಸಾಕಷ್ಟು ಮುಜುಗರವುಂಟು ಮಾಡಿದೆ. ಸರಕಾರ ಮತ್ತು ಆರ್‌ಬಿಐ ನಡುವಿನ ಈ ರೀತಿಯ ಸಂಘರ್ಷ ಒಟ್ಟಾರೆ ದೇಶದ ಆರ್ಥಿಕ ವ್ಯವಸ್ಥೆಗೆ ಹಿತಕಾರಿಯಾದ ಬೆಳವಣಿಗೆಯಲ್ಲ. ಹೀಗಾಗಿ ಈ ಗೊಂದಲವನ್ನು ನಿವಾರಿಸುವ ಹೊಣೆಯೀಗ ಶಕ್ತಿಕಾಂತ್ ದಾಸ್ ಮೇಲಿದೆ.
ಹಾಗೇ ನೋಡಿದರೆ ಮೋದಿ ಸರಕಾರದಲ್ಲಿ ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಇಲಾಖೆ ಮತ್ತು ವಿವಿಧ ಸಮಿತಿಗಳಿಗೆ ನೇಮಕಗೊಂಡಿದ್ದ ಅಧಿಕಾರಿಗಳು ಅರ್ಧದಲ್ಲೇ ಹುದ್ದೆ ತೊರೆದು ಹೋಗಿರುವ ಕೆಲವು ಉದಾಹರಣೆಗಳಿವೆ. ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದ ಚಿಂತನೆಗೂ ಅಧಿಕಾರಿ ವರ್ಗದ ಚಿಂತನೆಗೂ ತಾಳಮೇಳ ಸರಿಹೋಗುತ್ತಿಲ್ಲ ಎನ್ನುವ ಅಭಿಪ್ರಾಯವೂ ಇದೆ. ಇದು ಸರಕಾರದ ವರ್ಚಸ್ಸಿನ ಮೇಲೂ ಪರಿಣಾಮ ಬೀರುತ್ತಿದೆ. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಇನ್ನೈದು ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಉತ್ತಮ ನಿರ್ವಹಣೆ ದಾಖಲಿಸಬೇಕಾದರೆ
ಆರ್‌ಬಿಐಯಂಥ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸರಕಾರ ಅನಗತ್ಯ ಹಸ್ತಕ್ಷೇಪ ನಡೆಸುತ್ತಿಲ್ಲ ಎಂಬ ಸಂದೇಶ ರವಾನೆಯಾಗಬೇಕಾದ ತುರ್ತು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬಲ್ಲ ಶಕ್ತಿಕಾಂತ್ ದಾಸ್ ಅವರನ್ನು ಆರಿಸಲಾಗಿದೆ.
ತಮಿಳುನಾಡು ಕ್ಯಾಡರ್‌ನ ಐಎಎಸ್ ಅಧಿಕಾರಿಯಾಗಿರುವ ದಾಸ್ ಬಹಳ ವರ್ಷ ಅಧಿಕಾರದ ಪಡಸಾಲೆಯಲ್ಲಿ ಓಡಾಡಿದವರು. ಅವರು ಸೇವಾವಧಿಯ ಹೆಚ್ಚಿನ ಅವಧಿಯನ್ನು ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ಕಳೆದಿದ್ದಾರೆ. ಖಾಸಗಿ ವಲಯದ ವೃತ್ತಿಪರ ಹಿನ್ನೆಲೆಯಿಂದ ಬಂದವರು ಸರಕಾರಿ ವ್ಯವಸ್ಥೆಯಲ್ಲೂ ಖಾಸಗಿ ವ್ಯವಸ್ಥೆಯ ವೇಗ ನಿರೀಕ್ಷಿಸುತ್ತಾರೆ. ಇದು ಸಾಧ್ಯವಾಗದಾಗ ಅವರಿಗೆ ವ್ಯವಸ್ಥೆಯ ಮೇಲೆ ಭ್ರಮೆ ನಿರಸನವಾಗುತ್ತದೆ. ಪಟೇಲ್ ಮತ್ತು ಸರಕಾರದ ನಡುವಿನ ತಿಕ್ಕಾಟಕ್ಕೆ ಇದೂ ಒಂದು ಕಾರಣವಾಗಿತ್ತು. ಆದರೆ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ದಾಸ್‌ಗೆ ಸರಕಾರಿ ವ್ಯವಸ್ಥೆ ಚಲಿಸುವ ರೀತಿ ಗೊತ್ತಿರುವುದರಿಂದ ಈ ರೀತಿಯ ಗೊಂದಲ ಉಂಟಾಗದು. ಒಂದು ವೇಳೆ ಉಂಟಾದರೂ ಅದನ್ನು ನಿಭಾಯಿಸುವ ಜಾಣ್ಮೆ ಅವರಿಗಿದೆ. ಆದರೆ ಇದು ಪ್ರತಿಕೂಲವಾಗಿ ಪರಿಣಮಿಸದಂತೆ ನೋಡಿಕೊಳ್ಳುವ ಹೊಣೆ ಅವರ ಮೇಲೆ ಮಾತ್ರವಲ್ಲದೆ ಸರಕಾರದ ಮೇಲೂ ಇದೆ. ಅನುಭವ, ಸಾಮರ್ಥ್ಯ, ದಕ್ಷತೆ ಇತ್ಯಾದಿ ಮಾನದಂಡಗಳಲ್ಲಿ ದಾಸ್ ಆಯ್ಕೆ ಸೂಕ್ತವೆನಿಸಿದೆ.
ವಾಸ್ತವವಾಗಿ ಸವಾಲು ಇರುವುದು ಕೇಂದ್ರ ಸರಕಾರಕ್ಕೆ. ಸರಕಾರದ ಹಿತವನ್ನು ಕಾಯುವಂಥ ಅಧಿಕಾರಿಯನ್ನು ನೇಮಿಸಿಕೊಂಡು ಆರ್ಥಿಕ ಕ್ಷೇತ್ರದಲ್ಲಿ ಹಿತಕರ ವಾತಾವರಣವನ್ನು ಅತ್ಯಂತ ಕ್ಲಪ್ತ ಸಮಯದಲ್ಲಿ ಸೃಷ್ಟಿಸಬೇಕಿದೆ. ಇದಕ್ಕೆ ರಾಜಕಾರಣಕ್ಕಿಂತಲೂ ಅಧಿಕಾರಿಗೆ ಒಂದಿಷ್ಟು ಸ್ವಾತಂತ್ರ್ಯ ನೀಡಿ, ಅವರ ಅನುಭವವನ್ನು ಬಳಸಿಕೊಳ್ಳುವ ವಿವೇಚನೆ ಮತ್ತು ಸಮಯ ಪ್ರಜ್ಞೆಯನ್ನು ಪ್ರದರ್ಶಿಸಬೇಕಾದ ಹೊಣೆಗಾರಿಕೆ ಸರಕಾರದ್ದು. ಅದರಲ್ಲಿ ದ್ವಂದ್ವ ನಿಲುವು ತಾಳಿದರೆ ದೇಶದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಬೇಕಾದದ್ದು ಅತ್ಯಂತ ಅಗತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪಾಟ್ನಾ ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.