ಆದ್ಯತೆಯಲ್ಲಿ ಸಮಸ್ಯೆ ಬಗೆಹರಿಸಿ: ನಗದು ಅಭಾವ
Team Udayavani, Apr 19, 2018, 7:00 AM IST
ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳ ಎಟಿಎಂಗಳಲ್ಲಿ ನಗದು ಅಭಾವ ಕಾಣಿಸಿಕೊಂಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಮುಖ್ಯವಾಗಿ ಚುನಾವಣೆಯ ಹೊಸ್ತಿಲಲ್ಲಿರುವ ನಮ್ಮ ರಾಜ್ಯದ ಕೆಲ ನಗರಗಳ ಎಟಿಎಂಗಳಲ್ಲಿ ಹಣವಿಲ್ಲ. ಎಟಿಎಂಗಳ ಎದುರು ಇರುವ ಜನರ ಸರತಿ ಸಾಲು ನೋಟು ಅಪನಗದೀಕರಣ ಸಂದರ್ಭದ ಪರಿಸ್ಥಿತಿಯನ್ನು ನೆನಪಿಸುತ್ತಿದೆ. ಕೆಲವು ಎಟಿಎಂಗಳನ್ನು ನಗದು ಇಲ್ಲ ಎಂಬ ಕಾರಣಕ್ಕೆ ಖಾಯಂ ಆಗಿ ಮುಚ್ಚಲಾಗಿದೆ. ಜನರು ದೈನಂದಿನ ಖರ್ಚುವೆಚ್ಚದ ಹಣಕ್ಕಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಮಧ್ಯ ಪ್ರದೇಶ, ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ, ದಿಲ್ಲಿಯಲ್ಲೂ ನಗದು ಅಭಾವ ತಲೆದೋರಿರುವ ಕುರಿತು ವರದಿಯಾಗಿದೆ. ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಕಳೆದೊಂದು ತಿಂಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿವೆ.
ಹೀಗೆ ದಿಢೀರ್ ಎಂದು ನಗದಿನ ಕೊರತೆ ಉಂಟಾಗಲು ಕಾರಣ ಏನು ಎನ್ನುವುದು ಜನರನ್ನು ಕಾಡುತ್ತಿರುವ ಪ್ರಶ್ನೆ. ಸದ್ಯದಲ್ಲಿಯೇ ಚುನಾವಣೆ ಎದುರಿಸಲಿರುವ ಕೆಲವು ರಾಜ್ಯಗಳಲ್ಲಿಯೇ ನಗದು ಕೊರತೆ ಹೆಚ್ಚಿದೆ. ಜತೆಗೆ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆಯೂ ನಡೆಯವಲಿರುವುದರಿಂದ ನಗದು ಸಂಗ್ರಹ ಪ್ರಾರಂಭವಾಗಿರುವ ಗುಮಾನಿಯೂ ಇದೆ. ಸಾಮಾನ್ಯವಾಗಿ ಜನವರಿಯಿಂದ ಮೇ ತನಕ ಹೆಚ್ಚು ಆರ್ಥಿಕ ವಹಿವಾಟುಗಳು ನಡೆಯುವ ಕಾಲ. ಸಹಜವಾಗಿ ಈ ಸಂದರ್ಭದಲ್ಲಿ ಹಣದ ಚಲಾವಣೆಯೂ ಹೆಚ್ಚಿರುತ್ತದೆ. ಹೀಗಾಗಿ ಕೆಲವು ಕಡೆ ನಗದು ಕೊರತೆ ಉಂಟಾಗಿರುವ ಸಾಧ್ಯತೆ ಇದೆ ಎನ್ನುವುದು ಸರಕಾರ ನೀಡುತ್ತಿರುವ ಸಮಜಾಯಿಷಿ. ಕಳೆದ ಮೂರು ತಿಂಗಳಲ್ಲಿ ಎಟಿಎಂಗಳಿಂದ ನಗದು ಹಿಂದೆಗೆತ ಹೆಚ್ಚಾಗಿದೆ ಎನ್ನುವ ಅರುಣ್ ಜೈಟ್ಲೀ ಹೇಳಿಕೆ ಇದನ್ನು ಪುಷ್ಟೀಕರಿಸುತ್ತದೆ. ಆದರೆ ಆರ್ಥಿಕತೆಯಲ್ಲಿ ಬರೀ 13 ದಿನಗಳಲ್ಲಿ 45,000 ಕೋ. ರೂ. ನಗದಿಗೆ ಬೇಡಿಕೆಯಿತ್ತು ಎಂಬ ಅಂಕಿಅಂಶ ಮಾತ್ರ ಬೇರೆಯದ್ದೇ ಕತೆ ಹೇಳುತ್ತಿದೆ. ಹೀಗೆ ಬೇಡಿಕೆ ದಿಢೀರ್ ಏರಿಕೆಯಾಗಲು ಕಾರಣ ಏನು ಎನ್ನುವುದನ್ನು ಸರಕಾರ ಪತ್ತೆ ಹಚ್ಚಬೇಕು.
ಆದರೆ ಒಟ್ಟಾರೆ ಪರಿಸ್ಥಿತಿಯನ್ನು ಗಮನಿಸುವಾಗ ಜನರು ಆತಂಕಕ್ಕೀಡಾಗುವ ಅಗತ್ಯವಿಲ್ಲ ಎಂದೆನಿಸುತ್ತಿದೆ. ಪ್ರಸ್ತುತ 18 ಲಕ್ಷ ಕೋ. ರೂ. ಚಲಾವಣೆಯಲ್ಲಿದೆ. ಇದು ಅಪನಗದೀಕರಣದ ಸಂದರ್ಭದಲ್ಲಿ ಇದ್ದ ನಗದು ಚಲಾವಣೆಗಿಂತ ಹೆಚ್ಚಿನ ಮೊತ್ತ.ಅಂದರೆ ಚಲಾವಣೆಯಲ್ಲಿರುವ ಒಟ್ಟು ನಗದು ತೃಪ್ತಿಕರ ಮಟ್ಟದಲ್ಲಿದೆ. ಹೀಗಾಗಿ ದೇಶದ ಕೆಲವು ಕಡೆ ಮಾತ್ರ ನಗದು ಕೊರತೆ ಕಾಣಿಸಿಕೊಂಡಿರುವುದಕ್ಕೆ ಬೇರೆಯೇ ಕಾರಣಗಳಿರಬಹುದು ಎಂಬ ವಾದವನ್ನು ಒಪ್ಪಿಕೊಳ್ಳಬಹುದು.ಸರಕಾರವೇ ಹೇಳಿರುವಂತೆ ನಗದಿನ ಅಸಮಾನ ಹಂಚಿಕೆಯೂ ಆಗಿರಬಹುದು. ಇದನ್ನು ಮೂರು ದಿನಗಳಲ್ಲಿ ಸರಿಪಡಿಸುತ್ತೇವೆ ಎಂದು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಭರವಸೆ ನೀಡಿರುವುದರಿಂದ ಸದ್ಯ ನೆಮ್ಮದಿಯಿಂದಿರಬಹುದು. ಅದೇ ರೀತಿ ಸಮಸ್ಯೆಯ ಮೂಲವನ್ನು ಪತ್ತೆಹಚ್ಚಲು ಆರ್‌ಬಿಐ ಸಮಿತಿ ರಚನೆ ಮಾಡಿರುವುದು ಕೂಡಾ ಸ್ವಾಗತಾರ್ಹ.
ಡಿಜಿಟಲ್ ವಹಿವಾಟಿಗೆ ಹೆಚ್ಚಿನ ಉತ್ತೇಜನ ನೀಡಬೇಕೆಂಬ ಉದ್ದೇಶದಿಂದ ಪ್ರಧಾನಿ ಮೋದಿ 2016ರ ನವಂಬರ್‌ನಲ್ಲಿ 500 ಮತ್ತು 1000 ರೂ. ನೋಟುಗಳ ಚಲಾವಣೆ ರದ್ದುಪಡಿಸುವ ನಿರ್ಧಾರ ಘೋಷಿಸಿದ್ದರು. ಈ ಸಂದರ್ಭದಲ್ಲಿ ಕೆಲ ದಿನಗಳ ಮಟ್ಟಿಗೆ ಡಿಜಿಟಲ್ ವಹಿವಾಟಿನತ್ತ ಜನರು ವಾಲಿದರೂ ಇದರಲ್ಲಿರುವ ಹಲವು ಅಡೆತಡೆಗಳಿಂದ ಬೇಸತ್ತು ನಗದು ವಹಿವಾಟಿನತ್ತ ಮರಳಿದ್ದಾರೆ. ಹೀಗಾಗಿ ವ್ಯವಸ್ಥೆಯಲ್ಲಿ ನಗದು ಸರಾಗವಾಗಿ ಹರಿದಾಡದಿದ್ದರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮದುವೆ, ಹಬ್ಬಹರಿದಿನಗಳಂತಹ ದಿನಗಳಲ್ಲಿ ನಗದು ಬೇಡಿಕೆ ಹೆಚ್ಚಳವನ್ನು ಮುಂದಾಗಿಯೇ ಅಂದಾಜಿಸಿ ಸಮರ್ಪಕ ವ್ಯವಸ್ಥೆ ಮಾಡುವುದು ಆರ್‌ಬಿಐ ಕರ್ತವ್ಯ. ಆದರೆ ಆರ್‌ಬಿಐ ಇದಕ್ಕೆ ತದ್ವಿರುದ್ಧವಾಗಿ ಸಮಸ್ಯೆ ಉಲ್ಬಣಿಸಿದ ಬಳಿಕ 500 ರೂ. ನೋಟನ್ನು ಹೆಚ್ಚು ಮುದ್ರಿಸುವಂತಹ ಪರಿಹಾರೋಪಾಯಗಳನ್ನು ಹುಡುಕುತ್ತಿದೆ. ಇದೇ ವೇಳೆ ನಗದು ಹಣವನ್ನು ಹಿಡಿದಿಡುವ ಪ್ರಯತ್ನಗಳಾಗುತ್ತಿರುವ ಸಂದೇಹವೂ ಇದೆ.
ಚಿಲ್ಲರೆ ಮತ್ತು ಅಸಂಘಟಿತ ವಲಯದ ಶೇ.90ಕ್ಕಿಂತಲೂ ಹೆಚ್ಚಿನ ವಹಿವಾಟುಗಳು ನಗದನ್ನು ಅವಲಂಬಿಸಿವೆ. ನಗದು ಪೂರೈಕೆಯಲ್ಲಾಗುವ ವ್ಯತ್ಯಯದ ಮೊದಲ ಪರಿಣಾವಾಗುವುದೇ ಈ ವಲಯಗಳ ಮೇಲೆ. ಈ ವಲಯಗಳು ಹದತಪ್ಪಿದರೆ ಇಡೀ ಆರ್ಥಿಕ ವ್ಯವಸ್ಥೆಯೇ ಅಸ್ತವ್ಯಸ್ತವಾಗಬಹುದು. ಏಕೆಂದರೆ ನಮ್ಮ ಆರ್ಥಿಕತೆಯ ದೊಡ್ಡ ಪಾಲು ಈ ವಲಯಗಳದ್ದು. ಈಗ ಕಾಣಿಸಿಕೊಂಡಿರುವ ನಗದು ಕೊರತೆಯ ಖಚಿತ ಕಾರಣ ಏನೇ ಇದ್ದರೂ ಈಗ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವುದು ಸರಕಾರದ ಮುಖ್ಯ ಆದ್ಯತೆಯಾಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.