ನೋ ಡಿಟೆನ್ಶನ್ ಪಾಲಿಸಿ ರದ್ದು: ಗುಣಮಟ್ಟ ಸುಧಾರಿಸಲಿ
Team Udayavani, Jan 5, 2019, 12:30 AM IST
ಮಕ್ಕಳ ತಪ್ಪಿಗಿಂತ ನೋ ಡಿಟೆನ್ಶನ್ ಪಾಲಿಸಿಯನ್ನು ಅರ್ಥೈಸಿಕೊಂಡ ರೀತಿಯಲ್ಲಿ ತಪ್ಪಿದೆ. ಬಹುತೇಕ ಶಿಕ್ಷಕರು ಮತ್ತು ಪಾಲಕರು ಹೇಗೊ ಫೇಲ್ ಆಗುವುದಿಲ್ಲವಲ್ಲ ಎಂದು ಕಲಿಯುವ ಪ್ರಕ್ರಿಯೆಯನ್ನು ಹಗುರವಾಗಿ ಪರಿಗಣಿಸಿರುವುದು ಅಧ್ಯಯನದಿಂದ ವ್ಯಕ್ತವಾಗಿದೆ.
ಎಂಟನೇ ತರಗತಿ ವರೆಗೆ ಮಕ್ಕಳನ್ನು ಅನುತ್ತೀರ್ಣಗೊಳಿಸದೇ ಇರುವ ನೋ ಡಿಟೆನ್ಶನ್ ಪಾಲಿಸಿಯನ್ನು ರದ್ದುಪಡಿಸುವ ಸಲುವಾಗಿ ಮಂಡಿಸಿದ ವಿಧೇಯಕ ರಾಜ್ಯಸಭೆಯಲ್ಲಿ ಧ್ವನಿಮತದಿಂದ ಅಂಗೀಕಾರಗೊಂಡಿರುವುದರಿಂದ ಅದಿನ್ನು ಕಾನೂನು ರೂಪದಲ್ಲಿ ಜಾರಿಗೆ ಬರಲಿದೆ. ಹೀಗಾಗಿ ಇನ್ನು ಮುಂದೆ ಶಾಲೆಗಳು ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸ ಬಹುದು. ಆದರೆ ಪ್ರಸಕ್ತ ಇರುವ ಶಿಕ್ಷಣ ವ್ಯವಸ್ಥೆಯಲ್ಲಿ ಈ ತಿದ್ದುಪಡಿಯಿಂದ ಶಿಕ್ಷಣಕ್ಕೆ ಯಾವುದಾದರೂ ಪ್ರಯೋಜನವಾಗಬಹುದು ಎಂಬ ಖಾತರಿಯಿಲ್ಲ. ಇದರ ಬದಲಾಗಿ ಇದರಿಂದ ಪ್ರತಿಕೂಲ ಪರಿಣಾಮಗಳಾಗಬಹುದು ಎಂಬ ಕೆಲ ಶಿಕ್ಷಣ ತಜ್ಞರ ಎಚ್ಚರಿಕೆಯಲ್ಲಿ ಹೆಚ್ಚು ತಿರುಳಿರುವಂತೆ ಕಾಣಿಸುತ್ತದೆ.
ಮೊದಲಾಗಿ ಈ ವಿಧೇಯಕ ಆರರಿಂದ ಹದಿನಾಲ್ಕು ವರ್ಷದ ವರೆಗಿನ ಮಕ್ಕಳನ್ನು ಅನುತ್ತೀರ್ಣಗೊಳಿಸಬಾರದು ಎಂದಿರುವ ಶಿಕ್ಷಣ ಹಕ್ಕು ಕಾಯಿದೆಯ ಪರಿಚ್ಛೇದ 30(1)ರ ಆಶಯಕ್ಕೆ ತದ್ವಿರುದ್ಧವಾಗಿದೆ. ಅನುತ್ತೀರ್ಣಗೊಂಡಿರುವ ಕಾರಣಕ್ಕೆ ಮಕ್ಕಳು ಅರ್ಧದಲ್ಲಿ ಶಾಲೆ ಬಿಟ್ಟು ಹೋಗಬಾರದು ಎಂಬ ಉದ್ದೇಶದಿಂದ ಶಿಕ್ಷಣ ಹಕ್ಕು ಕಾಯಿದೆಯಲ್ಲಿ ನೋ ಡಿಟೆನ್ಶನ್ ಪಾಲಿಸಿಯನ್ನು ಸೇರಿಸಲಾಗಿತ್ತು. ಇದೇ ವೇಳೆ ನೋ ಡಿಟೆನ್ಶನ್ ಪಾಲಿಸಿಯಿಂದಾಗಿ ಶಿಕ್ಷಣದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮವಾಗಿದೆ ಎನ್ನುವು ದನ್ನು ಕೂಡಾ ಒಪ್ಪಿಕೊಳ್ಳಬೇಕು. ಎಂಟನೇ ತರಗತಿ ತನಕ ಸರಾಗ ವಾಗಿ ತೇರ್ಗಡೆಯಾಗಿ ಬಂದ ಮಗು ಒಂಭತ್ತನೇ ತರಗತಿಯಲ್ಲಿ ಕಲಿಕೆ ಕಠಿನವಾಗಿ ಮುಗ್ಗರಿಸ ತೊಡಗುತ್ತದೆ. ಹತ್ತನೇ ತರಗತಿ ಪರೀಕ್ಷೆಯಂತೂ ಕೆಲವು ಮಕ್ಕಳ ಪಾಲಿಗೆ ಕಬ್ಬಿಣದ ಕಡಲೆಯಾಗುತ್ತದೆ. ಹತ್ತನೇ ತರಗತಿಯ ಫಲಿತಾಂಶ ಕಡಿಮೆಯಾಗಬಾರದು ಎಂಬ ಕಾರಣಕ್ಕಾಗಿ ಅನೇಕ ಶಾಲೆಗಳು ಮಕ್ಕಳನ್ನು ಒಂಭತ್ತನೇ ತರಗತಿಯಲ್ಲಿ ಅನುತ್ತೀರ್ಣಗೊಳಿಸುವುದೂ ಇದೆ.
ಆದರೆ ಇದರಲ್ಲಿ ಮಕ್ಕಳ ತಪ್ಪಿಗಿಂತ ನೋ ಡಿಟೆನ್ಶನ್ ಪಾಲಿಸಿಯನ್ನು ಅರ್ಥೈಸಿಕೊಂಡ ರೀತಿಯಲ್ಲಿ ತಪ್ಪಿದೆ. ಬಹುತೇಕ ಶಿಕ್ಷಕರು ಮತ್ತು ಪಾಲಕರು ಹೇಗೊ ಫೇಲ್ ಆಗುವುದಿಲ್ಲವಲ್ಲ ಎಂದು ಕಲಿಯುವ ಪ್ರಕ್ರಿಯೆಯನ್ನು ಹಗುರವಾಗಿ ಪರಿಗಣಿಸಿರುವುದು ಅಧ್ಯಯನದಿಂದ ವ್ಯಕ್ತವಾಗಿದೆ. ಪ್ರಾಥಮಿಕ ತರಗತಿಗಳಲ್ಲಿ ವಿಷಯಗಳನ್ನು ಮನದಟ್ಟುಮಾಡಿಕೊಳ್ಳದೆ ಏಕಾಏಕಿ 9ನೇ ತರಗತಿಯಲ್ಲಿ ಅದನ್ನು ತುರುಕಲು ಪ್ರಯತ್ನಿಸಿದರೆ ಮಕ್ಕಳು ಕಂಗಾಲಾಗುವುದು ಸಹಜ. ಹಾಗೆಂದು ಇದಕ್ಕೆ ಅವರನ್ನು ದೂರಿ ಪ್ರಯೋಜನವಿಲ್ಲ. ಇದರ ಬದಲಾಗಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ನಾವೆಲ್ಲಿ ಎಡವಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯವಿತ್ತು. ಸತತ ಸಮಗ್ರ ಮೌಲ್ಯಮಾಪನ ಎಂಬ ಪ್ರಕ್ರಿಯೆಯನ್ನು ಕಡೆಗಣಿಸಿದ್ದೇ ನೋ ಡಿಟೆನ್ಶನ್ ಪಾಲಿಸಿಯಿಂದಾಗಿ ಮಕ್ಕಳ ಕಲಿಯುವ ಸಾಮರ್ಥ್ಯ ಕುಂಠಿತವಾಗಲು ಕಾರಣವಾಯಿತು. ಅನೇಕ ಶಾಲೆಗಳು ಸತತ ಸಮಗ್ರ ಮೌಲ್ಯಮಾಪನವನ್ನು ಪ್ರೊಜೆಕ್ಟ್ ವರ್ಕ್ ಮಟ್ಟಕ್ಕಿಳಿಸಿ ಮಕ್ಕಳ ಮೇಲೆ ಮತ್ತಷ್ಟು ಹೊರೆ ಹೊರಿಸಿವೆ. ಆದರೆ ಎಲ್ಲಿ ತಪ್ಪಾಗಿದೆ ಎಂಬುದರ ಕುರಿತು ಸರಕಾರವಾಗಲಿ, ಶಿಕ್ಷಣ ತಜ್ಞರಾಗಲಿ ಗಂಭೀರವಾಗಿ ಚಿಂತಿಸಿರುವಂತೆ ಕಾಣುವುದಿಲ್ಲ.
ಮಾನವ ಸಂಪನ್ಮೂಲ ಇಲಾಖೆ ಕೇಂದ್ರೀಯ ಶಿಕ್ಷಣ ಸಲಹಾ ಸಮಿತಿ ನೀಡಿದ ವರದಿಯನ್ನು ಕಣ್ಮುಚ್ಚಿ ಒಪ್ಪಿಕೊಂಡಿದೆ. ಒಂಭತ್ತು ಮತ್ತು ಹತ್ತನೇ ತರಗತಿಯಲ್ಲಿ ಅನು¤ತೀರ್ಣತೆಯ ಪ್ರಮಾಣ ಹೆಚ್ಚಾಗಲು ಪ್ರಾಥಮಿಕ ತರಗತಿಗಳಿಗೆ ನೋ ಡಿಟೆನ್ಶನ್ ನೀತಿಯನ್ನು ಅಳವಡಿಸಿಕೊಂಡಿರುವುದೇ ಕಾರಣ ಎಂಬ ಅಂಶ ಈ ಸಮಿತಿಯ ವರದಿಯಲ್ಲಿದೆ. ಇದೇ ವೇಳೆ 2016ರಲ್ಲಿ ಪಂಜಾಬಿನಲ್ಲಿ ನಡೆಸಿದ ಸಮೀಕ್ಷೆಯೊಂದು ಪ್ರಾಥಮಿಕ ತರಗತಿಗಳಲ್ಲಿ ಅನುತ್ತೀರ್ಣಗೊಳಿಸುವ ಪದ್ಧತಿಯನ್ನು ಮರಳಿ ಪ್ರಾರಂಭಿಸಿದರೆ ಅರ್ಧಕ್ಕೆ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ ಎನ್ನುವುದನ್ನು ಕಂಡುಕೊಂಡಿತ್ತು. ನೋ ಡಿಟೆನ್ಶನ್ ಪಾಲಿಸಿ ರದ್ದುಗೊಳಿಸುವುದರಿಂದ ಬಹುತೇಕ ಬಾಧಿತರಾಗುವುದು ಬಡವರು ಮತ್ತು ಸಾಮಾಜಿಕವಾಗಿ ಹಿಂದುಳಿದವರ ಮಕ್ಕಳ ಮೇಲೆ. ಅವರ ಕಲಿಕೆಯ ಸಾಮಾಜಿಕ ಪರಿಸ್ಥಿತಿಯೂ ಪ್ರಭಾವ ಬೀರುತ್ತಿದೆ ಎನ್ನುವ ಅಂಶವನ್ನು ಪರಿಗಣಿಸಬೇಕು. ಈ ಋಣಾತ್ಮಕ ಅಂಶಗಳನ್ನು ಸರಿಪಡಿಸದೆ ಬರೀ ಉತ್ತೀರ್ಣ – ಅನುತ್ತೀರ್ಣ ನೀತಿಯನ್ನಷ್ಟೇ ಬದಲಾಯಿಸಿದರೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯಾಗುವುದು ಸಾಧ್ಯವಿಲ್ಲ. ಶಿಕ್ಷಣದ ಗುಣಮಟ್ಟ ಹೆಚ್ಚಾಗಬೇಕಿದ್ದರೆ ಶಾಲೆಗಳು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳತ್ತ ಗಮನ ಹರಿಸುವ ಅಗತ್ಯವಿದೆ. ಇದರ ಬದಲಾಗಿ ನೋ ಡಿಟೆನ್ಶನ್ ಪಾಲಿಸಿಯನ್ನು ರದ್ದುಗೊಳಿಸುವಂಥ ತೇಪೆ ಹಚ್ಚುವ ಕ್ರಮಗಳಿಂದ ಘನವಾದುದ್ದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.