ಎನ್‌ಆರ್‌ಐ ಗಂಡನ ಆಸ್ತಿ ಜಪ್ತಿ
Team Udayavani, Feb 15, 2018, 8:50 AM IST
ಪಂಜಾಬ್ ರಾಜ್ಯ ವೊಂದರಲ್ಲೇ 35,000 ಅನಿವಾಸಿ ಭಾರತೀಯ ಗಂಡಂದಿರಿಂದ ಪರಿತ್ಯಕ್ತರಾದ ಪತ್ನಿಯರಿದ್ದಾರೆ. ಗುಜರಾತ್, ಕೇರಳ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲೂ ಈ ಪಿಡುಗು ವ್ಯಾಪಕವಾಗಿದೆ.
ಮದುವೆಯ ಬಳಿಕ ಪತ್ನಿಯನ್ನು ಭಾರತದಲ್ಲೇ ತ್ಯಜಿಸಿ ಕಾನೂನಿನ ಕೈಗೆ ಸಿಗದಂತೆ ನಾಪತ್ತೆಯಾಗುವ ಎನ್‌ಆರ್‌ಐ ಗಂಡಂದಿರಿಗೆ ತಕ್ಕ ಪಾಠ ಕಲಿಸುವ ಸಲುವಾಗಿ ಅವರ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳುವ ಪ್ರಸ್ತಾವ ಸಮಯೋಚಿತವಾಗಿದೆ. ಮನೇಕಾ ಗಾಂಧಿ ನೇತೃತ್ವದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಇಟ್ಟಿರುವ ಈ ನಡೆಯಿಂದ ಶೋಷಿತ ಮಹಿಳೆಯರಿಗೆ ಭಾರೀ ಪ್ರಯೋಜನವಾಗಲಿದೆ. ಬಹಳ ಕಾಲದಿಂದ ನನೆಗುದಿಗೆ ಬಿದ್ದಿದ್ದ ಈ ಸಮಸ್ಯೆಯನ್ನು ಮನೇಕಾ ಗಾಂಧಿ ಆದ್ಯತೆಯಲ್ಲಿ ಪರಿಗಣಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ನಮ್ಮಲ್ಲಿ ವಿದೇಶಿ ವರ ಎಂದರೆ ಏನೋ ಒಂದು ರೀತಿಯ ವಿಚಿತ್ರ ಆಕರ್ಷಣೆ. ವಿದೇಶದಲ್ಲಿರುವ ಗಂಡಿನ ಮದುವೆ ಪ್ರಸ್ತಾವ ಬಂದರೆ ಹಿಂದೆಮುಂದೆ ವಿಚಾರಿಸದೆ ಒಪ್ಪಿಕೊಂಡು, ಸಾಲಸೋಲ ಮಾಡಿಯಾದರೂ ಅದ್ದೂರಿಯಾಗಿ ಮದುವೆ ಮಾಡಿಕೊಡುವ ತಂದೆ-ತಾಯಿ ಇದ್ದಾರೆ. ಅಳಿಯ ಎನ್‌ಆರ್‌ಐ ಆದರೆ ಸಮಾಜದಲ್ಲೊಂದು ಪ್ರತಿಷ್ಠೆ ಎಂಬ ಭಾವನೆಯೇ ಇದಕ್ಕೆ ಕಾರಣ.
ಈ ಪ್ರತಿಷ್ಠೆಯ ಧಾವಂತದಲ್ಲಿ ಹುಡುಗನಿಗೆ ವಿದೇಶದಲ್ಲಿರುವ ನೌಕರಿ ಏನು, ಆದಾಯವೆಷ್ಟು ಇತ್ಯಾದಿ ಮಾಹಿತಿಗಳನ್ನು ವಿಚಾರಿಸುವ ಗೋಜಿಗೆ ಹೋಗುವುದಿಲ್ಲ. ಹೆತ್ತವರ ಈ ಪ್ರತಿಷ್ಠೆಯನ್ನು ಬಳಸಿಕೊಂಡು ಸುಳ್ಳು ಹೇಳಿ ಮದುವೆಯಾಗಿರುವ ಅನೇಕ ಪ್ರಕರಣಗಳಿವೆ. ಇಂತಹ ಪ್ರಕರಣಗಳಲ್ಲಿ ಮದುವೆಯಾದ ಬಳಿಕ ಮೋಸ ಹೋದದ್ದು ಅರಿವಾಗಿ ಅಸಹಾಯಕತೆ ಯಿಂದ ಕಣ್ಣೀರಿಡುತ್ತಿರುವ ಅನೇಕ ನತದೃಷ್ಟ ಹೆಣ್ಣು ಮಕ್ಕಳಿಗೆ ಈ ಕಾನೂನಿಂದ ಪರಿಹಾರ ಸಿಗಬಹುದು.
ಹೆಚ್ಚಿನ ಪ್ರಕರಣಗಳಲ್ಲಿ ಮದುವೆ ಯಾದ ಬಳಿಕ ಹೆಂಡತಿಯನ್ನು ಗಂಡ ತನ್ನ ಜತೆಗೆ ಕರೆದುಕೊಂಡು ಹೋಗದೆ ಭಾರತದಲ್ಲೇ ಬಿಟ್ಟು ಹೋಗುತ್ತಾನೆ. ಅನಂತರ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದರೂ ಸಮನ್ಸ್‌ಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ತಪ್ಪಿಸಿಕೊಳ್ಳು ತ್ತಾನೆ. ಇಂತಹ ಪ್ರಕರಣಗಳಲ್ಲಿ 3 ಸಮನ್ಸ್‌ಗೆ ಪ್ರತಿಸ್ಪಂದನ ಬಾರದಿದ್ದರೆ ಗಂಡನ ಅಥವಾ ಅವನ ಹತ್ತಿರ ಸಂಬಂಧಿಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹೆಂಡತಿಗೆ ಪರಿಹಾರ ನೀಡಬೇಕು ಎನ್ನುತ್ತದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಇಟ್ಟಿರುವ ಪ್ರಸ್ತಾವ. ಇದಕ್ಕಾಗಿ ಅಪರಾಧ ದಂಡ ಸಂಹಿತೆಗೆ ತಿದ್ದುಪಡಿ ಮಾಡುವ ಅಗತ್ಯವಿದೆ.
ಕಳೆದ ಸುಮಾರು ಎರಡು ದಶಕಗಳಿಂದೀಚೆಗೆ ಎನ್‌ಆರ್‌ಐ ಕೌಟುಂಬಿಕ ಸಮಸ್ಯೆ ಎನ್ನುವುದು ಕಳವಳಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದಕ್ಕೆ ಅಂಕಿಅಂಶಗಳೇ ಸಾಕ್ಷಿ ಹೇಳುತ್ತಿವೆ. ಪಂಜಾಬ್ ರಾಜ್ಯವೊಂದರಲ್ಲೇ ಸುಮಾರು 35,000 ಅನಿವಾಸಿ ಭಾರತೀಯ ಗಂಡಂದಿರಿಂದ ಪರಿತ್ಯಕ್ತರಾದ ಪತ್ನಿಯರಿದ್ದಾರೆ. ಗುಜರಾತ್, ಕೇರಳ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲೂ ಈ ಪಿಡುಗು ವ್ಯಾಪಕವಾಗಿದೆ ಎನ್ನುತ್ತದೆ ಒಂದು ಎನ್‌ಜಿಒ ನಡೆಸಿದ ಅಧ್ಯಯನ. ಎನ್‌ಆರ್‌ಐ ಮದುವೆಗಳ ಬಗ್ಗೆ ಸರಕಾರದ ಬಳಿಕ ಖಚಿತ ಅಂಕಿಅಂಶಗಳು ಇಲ್ಲದಿದ್ದರೂ 2015ರಲ್ಲಿ ವಿದೇಶಗಳ ದೂತವಾಸ ಕಚೇರಿಗಳಿಗೆ ಭಾರತೀಯ ಪತ್ನಿಯರಿಂದ 3000ಕ್ಕೂ ಅಧಿಕ ಕೌಟುಂಬಿಕ ಕಲಹ ದೂರುಗಳು ಬಂದಿರುವುದನ್ನು ಸರಕಾರ ಕಳೆದ ವರ್ಷ ಬಹಿರಂಗಪಡಿಸಿದೆ. ಮದುವೆಯಾದ ಬಳಿಕ ಹೆಂಡತಿಯನ್ನು ಬಿಟ್ಟು ವಿದೇಶಕ್ಕೆ ಪಲಾಯನ ಮಾಡುವಂತೆಯೇ ವಿದೇಶಕ್ಕೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡುವುದು ಇಲ್ಲವೇ ಅನಾಥರನ್ನಾಗಿ ಮಾಡುವುದು ಕೂಡ ಗಂಭೀರ ಸಮಸ್ಯೆಯೇ. ಇದರ ನಿವಾರಣೆಗೂ ಕಠಿಣ ಕಾನೂನು ರಚನೆಯಾಗುವ ಅಗತ್ಯವಿದೆ. ಜಸ್ಟಿಸ್ ಅರವಿಂದ್ ಗೋಯಲ್ ನೇತೃತ್ವದ ಆಯೋಗ ಕಳೆದ ವರ್ಷ ಎಲ್ಲ ಎನ್‌ಆರ್‌ಐ ಮದುವೆಗಳ ನೋಂದಣಿಗೆ ಆಧಾರ್ ಕಡ್ಡಾಯ ಮಾಡಬೇಕು ಮತ್ತು ಮದುವೆಯಾದ ಒಂದು ವಾರದೊಳಗೆ ನೋಂದಣಿ ಮಾಡುವ ನಿಯಮ ಜಾರಿಗೆ ಬರಬೇಕು ಎಂದು ಶಿಫಾರಸು ಮಾಡಿತ್ತು. ಈ ಶಿಫಾರಸು ಕಾರ್ಯರೂಪಕ್ಕೆ ಬಂದರೆ ಎನ್‌ಆರ್‌ಐ ಮದುವೆಯಲ್ಲಾ ಗುವ ಬಹಳಷ್ಟು ವಂಚನೆಗಳನ್ನು ತಡೆಯ ಬಹುದು. ಹೊಸ ನಿಯಮ ರೂಪಿಸುವ ಸಾಧ್ಯತೆಯಿದ್ದರೆ ಈ ನಿಯಮವನ್ನು ಸೇರಿಸಿಕೊಳ್ಳುವ ಕುರಿತು ಚಿಂತಿಸಬೇಕು. ಇದೇ ವೇಳೆ ಎನ್‌ಆರ್‌ಐ ಪತಿಯನ್ನು ಶಿಕ್ಷಿಸುವ ಕಾನೂನು ದುರುಪಯೋಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಇದೆ. ವರದಕ್ಷಿಣೆ ಕಾಯಿದೆ ಮತ್ತು ಕೌಟುಂಬಿಕ ಹಿಂಸಾಚಾರವನ್ನು ತಡೆಯುವ ಕಾಯಿದೆಗಳು ಗಂಡ ಮತ್ತು ಅತ್ತೆಮನೆಯವರನ್ನು ಕಾನೂನಿನ ಬಲೆಗೆ ಕೆಡವಿ ಕಿರುಕುಳ ನೀಡಲು ಬಳಕೆಯಾಗುತ್ತಿರುವ ಕುರಿತು ಸ್ವತಹ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಎನ್‌ಆರ್‌ಐ ಗಂಡನ ಬಹುತೇಕ ಆಸ್ತಿಗಳು ತಂದೆ ತಾಯಿಯ ಹೆಸರಿನಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಾಗ ಸಮಸ್ಯೆಗಳು ಉದ್ಭವಾಗ ಬಹುದು. ಹೊಸ ಕಾಯಿದೆಯಲ್ಲಿ ಈ ರೀತಿಯ ಲೋಪಗಳಿಗೆ ಆಸ್ಪದ ಇರಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.