ಒಬಿಸಿ ಮೀಸಲಾತಿ: ರಾಜ್ಯಗಳಿಗೆ ಅಧಿಕಾರ ಸ್ವಾಗತಾರ್ಹ ಕ್ರಮ
Team Udayavani, Aug 10, 2021, 6:10 AM IST
ಒಬಿಸಿ ಮೀಸಲಾತಿ ಪಟ್ಟಿ ರೂಪಿಸುವಲ್ಲಿ ರಾಜ್ಯಗಳಿಗೇ ಅಧಿಕಾರ ನೀಡುವ ಕುರಿತಂತೆ ಸಂಸತ್‌ನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮ ಸ್ವಾಗತಾರ್ಹವಾದದ್ದು. ಮರಾಠಾ ಮೀಸಲಾತಿ ಸಂಬಂಧ ಈಗಾಗಲೇ ಸುಪ್ರೀಂ ಕೋರ್ಟ್, ರಾಜ್ಯಗಳಿಗೆ ಮೀಸಲಾತಿ ಪಟ್ಟಿ ನಿರ್ಧರಿಸುವ ಹಕ್ಕು ಇಲ್ಲ ಎಂದು ತೀರ್ಪು ನೀಡಿದ್ದು, ಇದರಿಂದ ಭಾರೀ ಹಿನ್ನಡೆಯಾಗಿತ್ತು. ಆದರೆ ಈಗ ಕೇಂದ್ರ ಸರಕಾರವೇ ರಾಜ್ಯಗಳಿಗೆ ಅಧಿಕಾರ ನೀಡುವ ಸಲುವಾಗಿ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಮುಂದಾಗಿದೆ. ಒಂದು ವೇಳೆ ಸಂಸತ್‌ನ ಎರಡೂ ಸದನಗಳಲ್ಲಿ ಪಾಸಾದರೆ, ರಾಜ್ಯಗಳಿಗೇ ಮತ್ತೆ ಅಧಿಕಾರ ಸಿಗಲಿದೆ.
ಟೀಕಾಕಾರರ ಲೆಕ್ಕಾಚಾರದಲ್ಲಿ ಕೇಂದ್ರ ಸರಕಾರ, ಮುಂಬರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದೆ. ಇಲ್ಲದಿದ್ದರೆ ಅದು ಒಬಿಸಿ ಪಟ್ಟಿ ಮಾಡುವ ಅಧಿಕಾರವನ್ನು ತನ್ನ ಬಳಿಯೇ ಇರಿಸಿಕೊಳ್ಳುತ್ತಿತ್ತು ಎಂದು ವಾದಿಸುವವರಿದ್ದಾರೆ. ಆದರೆ ಇಂಥ ಟೀಕೆ-ಆರೋಪಗಳು ಸಹಜವಾಗಿಯೇ ಕೇಳಿಬರುವಂಥವು. ಇದರಲ್ಲಿ ಕೆಲವೊಮ್ಮೆ ಸತ್ಯವೂ ಇರುತ್ತದೆ, ಕೆಲವೊಮ್ಮೆ ಅಸತ್ಯವೂ ಇರುತ್ತದೆ. ಆದರೆ ಈಗ ಕೇಂದ್ರ ಸರಕಾರದ ನಡೆ ಮಾತ್ರ ರಾಜ್ಯ ಸರಕಾರಗಳಿಗೆ ಉಪಯೋಗವಾಗುವಂಥದ್ದು.
ಮಹಾರಾಷ್ಟ್ರದಲ್ಲಿ ಮರಾಠರಿಗೆ ಅಲ್ಲಿನ ಸರಕಾರವೇ ಮೀಸಲಾತಿ ನೀಡಿತ್ತು. ಆದರೆ ಇದನ್ನು ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಇಂಥ ಅಧಿಕಾರವೇ ಇಲ್ಲ ಎಂಬ ಕಾರಣದಿಂದಾಗಿ ತೆಗೆದುಹಾಕಿತ್ತು. ಅಲ್ಲದೇ ಇಂಥ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಅಧಿಕಾರ ಕೇಂದ್ರ ಸರಕಾರಕ್ಕೆ ಮಾತ್ರ ಇದೆ ಎಂದೂ ಹೇಳಿತ್ತು. ಆದರೆ ಕೇಂದ್ರ ಸರಕಾರವೇ ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿ, ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದರೂ, ಕೋರ್ಟ್ ತಳ್ಳಿಹಾಕಿತ್ತು.
ಈಗ ಬೇರೆ ದಾರಿ ಇಲ್ಲದೇ ಕೇಂದ್ರ ಸರಕಾರ ಸಂವಿಧಾನ ತಿದ್ದುಪಡಿಯ ದಾರಿ ಹಿಡಿದಿದೆ. ಒಂದು ವೇಳೆ ಮೂರನೇ ಎರಡು ಬಹುಮತದಿಂದ ಸಂಸತ್‌ನಲ್ಲಿ ಅಂಗೀಕಾರವಾದರೆ, ಕರ್ನಾಟಕವೂ ಸೇರಿ ಬಹಳಷ್ಟು ರಾಜ್ಯಗಳಲ್ಲಿ ಕಾಯುತ್ತಿರುವ ಹಿಂದುಳಿದ ವರ್ಗಗಳಿಗೆ ಅನುಕೂಲವಾಗಲಿದೆ. ಹಾಗೆಯೇ ಕರ್ನಾಟಕದಲ್ಲೂ ಪಂಚಮಸಾಲಿ ಸೇರಿದಂತೆ ಕೆಲವು ಸಮುದಾಯಗಳು ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂಬ ಬಗ್ಗೆ ಬೇಡಿಕೆ ಇಟ್ಟಿದ್ದು, ಇದನ್ನು ಬಗೆಹರಿಸುವುದು ಸುಲಭವಾಗಲಿದೆ.
ಏನೇ ಆಗಲಿ, ಮೀಸಲಾತಿ ನಿಗದಿ ಮಾಡುವ ಅಧಿಕಾರ ಸಿಕ್ಕಿದೆ ಎಂಬ ಕಾರಣಕ್ಕಾಗಿ ರಾಜ್ಯಗಳು ತಮಗೆ ಬೇಕಾದವರು ಮತ್ತು ಮತಗಳಿಕೆಗಾಗಿ ಬಳಸಿಕೊಳ್ಳಬಾರದು. ಕೆಲವೊಂದು ವರ್ಗಗಳನ್ನು ಗುರಿಯಾಗಿರಿಸಿಕೊಂಡು, ಹೆಚ್ಚಿನ ವೋಟ್ ಬರಬಹುದು ಎಂಬ ಕಾರಣಕ್ಕಾಗಿ ಅಂಥವರಿಗೆ ಮೀಸಲಾತಿ ನೀಡುವ ಪದ್ಧತಿಗಳು ಜಾರಿಯಾಗಬಾರದು. ಹೀಗೆ ಮಾಡಿದಲ್ಲಿ ಮೀಸಲಾತಿ ಕುರಿತಂತೆ ಜನರಲ್ಲಿ ನಂಬಿಕೆ ಹೋಗಬಹುದು ಮತ್ತು ಸರಕಾರದ ನಿರ್ಧಾರಗಳನ್ನು ಪ್ರಶ್ನಿಸಿ ಜನ ಕೋರ್ಟ್ ಮೊರೆ ಹೋಗಬಹುದು. ಹೀಗಾಗಿ ಮೀಸಲಾತಿ ನೀಡುವಾಗ ಅಳೆದು ತೂಗಿ, ನಿಜವಾಗಿಯೂ ಹಿಂದುಳಿದವರಿಗೆ ಮಾತ್ರ ಕೊಡಬೇಕು. ಆಗ ಮಾತ್ರ ರಾಜ್ಯಗಳಿಗೆ ಸಿಕ್ಕಿದ ಅಧಿಕಾರ ಸರಿಯಾದ ಲೆಕ್ಕಾಚಾರದಲ್ಲಿ ಬಳಕೆಯಾದಂತೆ ಆಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.