ತೈಲ ಬೆಲೆ ಏರಿಕೆ: ಜನಸಾಮಾನ್ಯರು, ಆರ್ಥಿಕತೆಗೆ ಹೊರೆಯಾಗದಿರಲಿ
Team Udayavani, Mar 24, 2022, 6:00 AM IST
ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಸಮರದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಒಂದೇ ಸವನೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಪೆಟ್ರೋಲ್- ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿದೆ.
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ವರ್ಷದ ನವೆಂಬರ್‌ನಲ್ಲಿ ಕೇಂದ್ರ ಸರಕಾರ ತೈಲೋತ್ಪನ್ನಗಳ ಮೇಲಣ ಆಮದು ಸುಂಕ ಕಡಿತಗೊಳಿಸಿದ್ದೇ ಅಲ್ಲದೆ ತೈಲ ಬೆಲೆಗಳ ದಿನವಹಿ ಪರಿಷ್ಕರಣೆಗೆ ತಡೆ ಒಡ್ಡಿತ್ತು. ಮಾರ್ಚ್ 10ರಂದು ಚುನಾವಣ ಫಲಿತಾಂಶ ಘೋಷಣೆಯಾದ ಬಳಿಕ ತೈಲ ಕಂಪೆನಿಗಳು ಬೆಲೆಯನ್ನು ಹೆಚ್ಚಿಸುವ ಸೂಚನೆಗಳು ಲಭಿಸಿತ್ತಾದರೂ ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಳಿತ ಕಂಡ ಹಿನ್ನೆಲೆ ಯಲ್ಲಿ ಕೇಂದ್ರ ಸರ್ಕಾರ ತೈಲ ಕಂಪೆನಿಗಳ ಪ್ರಸ್ತಾವನೆಗೆ ತಾತ್ಕಾಲಿಕ ತಡೆ ಒಡ್ಡಿತ್ತು.
ಕಳೆದ ವಾರವಷ್ಟೇ ಸಗಟು ತೈಲ ಖರೀದಿಯ ಬೆಲೆಯನ್ನು ಹೆಚ್ಚಿಸುವ ಮೂಲಕ ಚಿಲ್ಲರೆ ಖರೀದಿ ಬೆಲೆಯನ್ನೂ ಹೆಚ್ಚಿಸುವ ಸುಳಿವನ್ನು ದೇಶದ ತೈಲ ಕಂಪೆನಿಗಳು ನೀಡಿದ್ದವು. 137 ದಿನಗಳ ಬಳಿಕ ದಿನವಹಿ ತೈಲ ಬೆಲೆ ಪರಿಷ್ಕರಣೆಯನ್ನು ತೈಲ ಕಂಪೆನಿಗಳು ಪುನರಾರಂಭಿಸಿದ್ದು ಕಳೆದೆರಡು ದಿನಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 1.60 ರೂ. ಹೆಚ್ಚಿಸಿವೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ತೈಲ ಬೆಲೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.
ರಷ್ಯಾ-ಉಕ್ರೇನ್ ನಡುವಣ ಯುದ್ಧ ಮುಂದುವರಿದಿರುವುದರಿಂದ ಮತ್ತು ರಷ್ಯಾದ ಮೇಲೆ ಅಮೆರಿಕ ಸಹಿತ ಐರೋಪ್ಯ ರಾಷ್ಟ್ರಗಳು ಆರ್ಥಿಕ ನಿರ್ಬಂಧಗಳನ್ನು ಹೇರಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚುತ್ತಲೇ ಇದೆ. ಇದಕ್ಕನುಸಾರವಾಗಿಯೇ ತೈಲ ಕಂಪೆನಿಗಳು ಬೆಲೆಯನ್ನು ಪರಿಷ್ಕರಿಸಲಿವೆ. ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ತೈಲ ಆಮದು ಮಾಡಿಕೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿದೆಯಾದರೂ ಇದಕ್ಕೆ ಒಂದಿಷ್ಟು ಸಮಯ ತಗಲುವ ಸಾಧ್ಯತೆ ಇದೆ. ಹೀಗಾಗಿ ತೈಲ ಕಂಪೆನಿಗಳು ನಷ್ಟವನ್ನು ಸರಿದೂಗಿಸಿಕೊಳ್ಳಲು ತೈಲ ಬೆಲೆ ಏರಿಕೆಯ ಹಾದಿ ಹಿಡಿದಿವೆ. ಇದೇ ವೇಳೆ ಎಲ್‌ಪಿಜಿ ಸಿಲಿಂಡರ್ ಬೆಲೆಯೂ 50 ರೂ. ಏರಿಕೆಯಾಗಿದೆ.
ತೈಲೋತ್ಪನ್ನಗಳು ಮತ್ತು ಇಂಧನದ ಬೆಲೆ ಏರಿಕೆ ಜನಸಾಮಾನ್ಯರ ಮೇಲೆ ತೀವ್ರತೆರನಾದ ಪರಿಣಾಮ ಬೀರಲಿದೆ. ಅಷ್ಟು ಮಾತ್ರವಲ್ಲದೆ ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಸರಕು ಸಾಗಣೆ ವೆಚ್ಚ ಅಧಿಕವಾಗಲಿದ್ದು ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆ ಕಾಣಲಿರುವುದು ನಿಶ್ಚಿತ. ಇವೆಲ್ಲದರ ಪರಿಣಾಮ ಹಣದುಬ್ಬರ ಮತ್ತೆ ಹೆಚ್ಚಾಗಲಿದ್ದು ಚೇತರಿಸಿಕೊಳ್ಳುತ್ತಿರುವ ದೇಶದ ಆರ್ಥಿಕತೆಯ ಮೇಲೆ ಬಲುದೊಡ್ಡ ಹೊಡೆತ ಬೀಳಲಿದೆ.
ಈ ಬೆಳವಣಿಗೆಗಳ ನಡುವೆ ರಾಜ್ಯ ಸರಕಾರ ಮುಂದಿನ ವಾರ ಗ್ರಾಹಕರಿಗೆ ಹೊರೆಯಾಗದಂತೆ ವಿದ್ಯುತ್ ದರವನ್ನು ಹೆಚ್ಚಿಸುವ ಇಂಗಿತ ವ್ಯಕ್ತಪಡಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಈ ನಡೆಗಳು ಜನಸಾಮಾನ್ಯರ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಲಿದ್ದು ಅವರ ಜೀವನವನ್ನು ಇನ್ನಷ್ಟು ದುಸ್ತರವನ್ನಾಗಿಸಲಿವೆ. ಇತ್ತ ಸರಕಾರ ಗಂಭೀರ ಚಿಂತನೆ ನಡೆಸಿ ಜನರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ಪರ್ಯಾಯ ಮಾರ್ಗೋಪಾಯ ಗಳನ್ನು ಕಂಡುಕೊಳ್ಳಬೇಕು. ಪ್ರಸಕ್ತ ಹಣಕಾಸು ವರ್ಷದ ಕೊನೆಯ ಮಾಸಿಕದಲ್ಲಿನ ಈ ಎಲ್ಲ ಏರುಪೇರುಗಳು ವಾರ್ಷಿಕ ಹಣಕಾಸು ವ್ಯವಹಾರ, ವಾಣಿಜ್ಯ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಕೂಡ ಸರಕಾರ ಮರೆಯಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.