ಸಯೀದ್ ಬೆನ್ನಿಗಿದೆ ಪಾಕ್ ಸೇನೆ: ಪಾಕ್ ಬಣ್ಣ ಬಯಲು
Team Udayavani, Nov 25, 2017, 1:31 PM IST
ಉಗ್ರ ಹಾಫಿಜ್ ಸಯೀದ್ ಹತ್ತು ತಿಂಗಳ ಗೃಹ ಬಂಧನದಿಂದ ಬಿಡುಗಡೆಯಾಗಿರುವುದರೊಂದಿಗೆ ನರಿ ಬುದ್ಧಿಯ ಪಾಕಿಸ್ಥಾನದ ನಿಜ ಬಣ್ಣ ಮತ್ತೂಮ್ಮೆ ಜಗತ್ತಿನೆದುರು ಬಯಲಾಗಿದೆ. ಎಷ್ಟೇ ಅಂತಾರಾಷ್ಟ್ರೀಯ ಒತ್ತಡ ಹಾಕಿದರೂ ಪಾಕಿಸ್ಥಾನ ತನ್ನ ನೈಜ ಸ್ವಭಾವವನ್ನು ಬದಲಾಯಿಸಿಕೊಳ್ಳುವುದಿಲ್ಲ ಎನ್ನುವುದು ಈ ಬೆಳವಣಿಗೆಯಿಂದ ಮತ್ತೂಮ್ಮೆ ಸಾಬೀತಾಗಿದೆ. ಅಮೆರಿಕ ಮತ್ತು ವಿಶ್ವಸಂಸ್ಥೆಯ ತೀವ್ರ ಒತ್ತಡದಿಂದಾಗಿ ಕಳೆದ ಜನವರಿಯಲ್ಲಿ ಸಯೀದ್‌ನನ್ನು ಗೃಹ ಬಂಧನದಲ್ಲಿಟ್ಟಿದ್ದ ಪಾಕ್ ಸರಕಾರ ಮೊನ್ನೆ ಬಂಧನ ವಿಸ್ತರಣೆ ವಿಚಾರಣೆ ವೇಳೆ ಪ್ರಬಲ ವಾದ ಮಂಡನೆ ಮಾಡದೆ ಬಿಡುಗಡೆಗೆ ದಾರಿ ಮಾಡಿಕೊಟ್ಟಿದೆ. ಆ ದೇಶದ ಬದಲಾದ ರಾಜಕೀಯ ಪರಿಸ್ಥಿತಿಯೂ ಸಯೀದ್ ಬಿಡುಗಡೆಗೆ ಕಾರಣವಾಗಿದೆ. ಸಯೀದ್‌ನನ್ನು ಗೃಹ ಬಂಧನದಲ್ಲಿಟ್ಟದ್ದು ಪ್ರಧಾನಿ ನವಾಜ್ ಶರೀಫ್. ಭ್ರಷ್ಟಾಚಾರದ ಆರೋಪದಲ್ಲಿ ಅವರು ಪದಚ್ಯುತಗೊಂಡ ಬಳಿಕ ಪ್ರಧಾನಿ ಹುದ್ದೆಗೆ ನೆಪಮಾತ್ರಕ್ಕೆ ವ್ಯಕ್ತಿಯೊಬ್ಬರ ನೇಮಕವಾಗಿದೆ. ಈಗ ಅಲ್ಲಿ ನಿಜವಾಗಿ ಆಡಳಿತ ನಡೆಸುತ್ತಿರುವುದು ಸೇನೆ. ಸಯೀದ್ ಬಂಧನದಿಂದ ಬಿಡುಗಡೆಯಾದರೆ ಸೇನೆಗೆ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುತ್ತದೆ. ಒಟ್ಟಾರೆಯಾಗಿ ನ್ಯಾಯಾಲಯದ ವಿಚಾರಣೆ ಎನ್ನುವುದು ಸೇನೆಯೇ ರಚಿಸಿದ ಷಡ್ಯಂತ್ರದ ಒಂದು ಭಾಗ. ಹೀಗಾಗಿ ಸಯೀದ್ ಬಿಡುಗಡೆಯಾಗಿರುವುದರಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇಲ್ಲ. ಅವನ ಬಂಧನ ವಿಸ್ತರಣೆಯಾಗದಿದ್ದರೆ ಆಶ್ಚರ್ಯವಾಗುತ್ತಿತ್ತು.
ಸಯೀದ್ ಬಂಧನದಿಂದ ಈಗಾಗಲೇ ಹದಗೆಟ್ಟಿರುವ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಕೆಡುವುದರಲ್ಲಿ ಯಾವ ಅನುಮಾನವೂ ಇಲ್ಲ. ಏಕೆಂದರೆ ಗೃಹ ಬಂಧನದಿಂದ ಹೊರಬಂದ ಬಳಿಕ ಸಯೀದ್ ಮಾಡಿದ ಮೊದಲ ಕೆಲಸವೇ ಭಾರತದ ಮೇಲೆ ವಿಷ ಕಾರಿದ್ದು. ಭಾರತದ ಮೇಲೆ ಈ ಜನ್ಮದಲ್ಲಿ ಮುಗಿಯದಷ್ಟು ದ್ವೇಷವನ್ನು ತುಂಬಿಕೊಂಡಿರುವ ಅವನಿಂದ ಈ ಪ್ರತಿಕ್ರಿಯೆ ನಿರೀಕ್ಷಿತವೇ. ಆದರೆ ಇದರಿಂದ ಕಾಶ್ಮೀರದ ಶಾಂತಿ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ ಎನ್ನುವುದು ಕಳವಳಕಾರಿ ವಿಚಾರ. ಕೇಂದ್ರ ಸರಕಾರದ ಸತತ ಪ್ರಯತ್ನದಿಂದಾಗಿ ಕಣಿವೆ ರಾಜ್ಯದಲ್ಲೀಗ ನಿಧಾನವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಾಣಿಸುತ್ತಿದೆ. ಸಂಧಾನಕಾರರಾಗಿ ನೇಮಕಗೊಂಡಿರುವ ದಿನೇಶ್ವರ್ ಶರ್ಮ ಅವರ ಎಲ್ಲರನ್ನೂ ಒಳಗೊಂಡು ಮಾತುಕತೆ ನಡೆಸುವ ಕಾರ್ಯತಂತ್ರ ಯಶಸ್ವಿಯಾಗುತ್ತಿದೆ. ಈಗಾಗಲೇ ಯುವಕರಲ್ಲಿ ಉಗ್ರ ಪಡೆ ಸೇರುವುದರಿಂದ ಪ್ರಯೋಜನವಿಲ್ಲ ಎಂಬ ನಂಬಿಕೆ ಹುಟ್ಟಲಾರಂಭಿಸಿದೆ. ಯುವ ಫುಟ್ಬಾಲ್ ಆಟಗಾರನೊಬ್ಬ ಎಲ್‌ಇಟಿ ಸೇರಿದ ಒಂದೇ ವಾರದಲ್ಲಿ ವಾಪಸಾಗಿರುವುದು ಮತ್ತು ಹಲವು ಯುವಕರು ಮುಖ್ಯವಾಹಿನಿಗೆ ಬರಲು ಆಸಕ್ತಿ ತೋರಿಸಿರುವುದು ಕಾಶ್ಮೀರ ಕಣಿವೆಯಲ್ಲಿ ಹಿಂದಿನಂತೆ ಗುಲ್‌ಮೊಹರ್‌ಗಳು ಅರಳಲು ಪೂರಕ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎನ್ನುವ ಶುಭಸೂಚನೆಗಳಾಗಿದ್ದವು. ಆದರೆ ಸಯೀದ್ ಬಿಡುಗಡೆಯಿಂದ ಈ ಎಲ್ಲ ಪ್ರಯತ್ನಗಳು ವಿಫಲಗೊಳ್ಳುವ ಸಾಧ್ಯತೆಯಿದೆ. ಮತ್ತೆ ತನ್ನ ಮತಾಂಧ ಭಾಷಣಗಳಿಂದ ಸಯೀದ್ ಯುವಕರನ್ನು ಉಗ್ರ ಲೋಕದತ್ತ ಸೆಳೆಯುವುದು ನಿಚ್ಚಳ. ಕಾಶ್ಮೀರದ ಸ್ವಾತಂತ್ರ್ಯವೇ ತನ್ನ ಪರಮ ಧ್ಯೇಯ ಎಂದು ಬಂಧನದಿಂದ ಹೊರ ಬಂದ ಕೂಡಲೇ ಅವನು ಘೋಷಿಸಿರುವುದು ಈ ಕಾರಣಕ್ಕೆ ಭದ್ರತಾ ಪಡೆಗಳ ಚಿಂತೆಗೆ ಕಾರಣವಾಗಿದೆ. ಭದ್ರತಾ ಪಡೆಗಳು ಈ ವರ್ಷ 200ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿವೆ. ಇವರಲ್ಲಿ ಹೆಚ್ಚಿನವರು ಸಯೀದ್‌ನ ಎಲ್‌ಇಟಿ ಉಗ್ರರು.
ಲಷ್ಕರ್‌ನ ಹಲವು ಪ್ರಮುಖ ಕಮಾಂಡರ್‌ಗಳನ್ನು ಸಾಯಿಸುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ. ಇದರಿಂದಾಗಿ ಲಷ್ಕರ್ ಮತ್ತು ಆ ಮೂಲಕ ಪರೋಕ್ಷವಾಗಿ ಪಾಕ್ ಸೇನೆಗೆ ಭಾರೀ ಹಿನ್ನಡೆಯಾಗಿತ್ತು. ಹೀಗಾಗಿ ಪಾಕ್ ಸೇನೆಗೆ ಸಯೀದ್ ಆದಷ್ಟು ಬೇಗ ಗೃಹಬಂಧನದಿಂದ ಹೊರಬರುವುದು ಅಗತ್ಯವಾಗಿತ್ತು. ನವಾಜ್ ಶರೀಫ್ ಮತ್ತು ಸೇನೆ ನಡುವಿನ ಅಧಿಕಾರದ ಕಚ್ಚಾಟದಲ್ಲಿ ಸದ್ಯಕ್ಕೆ ಸೇನೆಯದ್ದೇ ಮೇಲ್ಗೆ„ಯಾಗಿದೆ. ಆದರೆ ನೆರೆ ರಾಷ್ಟ್ರಗಳಿಗೆ ಮಾತ್ರ ಇದು ಅಪಾಯದ ಮುನ್ಸೂಚನೆ. ಮುಂದಿನ ವರ್ಷ ಪಾಕಿಸ್ಥಾನದ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಇದರಲ್ಲಿ ಸಯೀದ್‌ನ ರಾಜಕೀಯ ಪಕ್ಷ ಸ್ಪರ್ಧಿಸುವುದರಲ್ಲಿ ಅನುಮಾನವಿಲ್ಲ. ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಸಾಧ್ಯವಾಗಲೆಂದೇ ಸೇನೆ ಅವನನ್ನು ಗೃಹಬಂಧನದಿಂದ ಬಿಡುಗಡೆ ಮಾಡಿಸಿಕೊಂಡಿದೆ. ಅವನ ಪಕ್ಷವನ್ನು ಗೆಲ್ಲಿಸಲು ಸೇನೆ ಶತಾಯಗತಾಯ ಪ್ರಯತ್ನಿಸಲಿದೆ. ಈ ಪ್ರಯತ್ನ ಸಫಲವಾದರೆ ದೇಶದ ಆಡಳಿತ ಅಧಿಕೃತವಾಗಿಯೇ ಉಗ್ರರ ಕೈಗೆ ಹೋಗುತ್ತದೆ. ಸೇನೆಗೆ ಬೇಕಾಗಿರುವುದು ಕೂಡ ಇದೇ ವ್ಯವಸ್ಥೆ. ರಾಜಕೀಯ ನಾಯಕರಿಗಿಂತ ಅಲ್ಪಬುದ್ಧಿಯ ಮತಾಂಧ ನಾಯಕರನ್ನು ತನ್ನ ತಾಳಕ್ಕೆ ಕುಣಿಸುವುದು ಸುಲಭ ಎನ್ನುವುದು ಸೇನೆಗೆ ಗೊತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಾಕಿಸ್ಥಾನದಲ್ಲಿ ಯಾವುದೇ ಬದಲಾವಣೆಯಾಗುವುದಿದ್ದರೂ ಅದು ಇನ್ನಷ್ಟು ಕೆಟ್ಟ ಪರಿಸ್ಥಿತಿಗೆ ಕಾರಣವಾಗುತ್ತದೆ ಎಂದು ಧಾರಾಳವಾಗಿ ಹೇಳಬಹುದು. ಪಾಕಿಸ್ಥಾನ ಈಗ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ದೇಶವಲ್ಲ, ಬದಲಾಗಿ ಭಯೋತ್ಪಾದಕರಿಂದಲೇ ಆಳಲ್ಪಡುತ್ತಿರುವ ದೇಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.