ಪಾಕ್ ಕಪ್ಪುಪಟ್ಟಿಗೆ ಸೇರಬೇಕಿತ್ತು
Team Udayavani, Oct 17, 2019, 5:43 AM IST
ಉಗ್ರರಿಗೆ ಅಕ್ರಮವಾಗಿ ಹಣ ವರ್ಗಾವಣೆ ಆಗುವುದನ್ನು ತಡೆಯಲು ಎಫ್ಎಟಿಎಫ್ ವಿಧಿಸಿರುವ 30 ಷರತ್ತುಗಳಲ್ಲಿ ಕೆಲವನ್ನು ಮಾತ್ರ ಪಾಕ್ ಈಡೇರಿಸಿದೆ.
ಹಣಕಾಸು ಕ್ರಿಯಾ ಪಡೆಯ (ಎಫ್ಎಟಿಎಫ್) ಕಪ್ಪುಪಟ್ಟಿಗೆ ಸೇರುವುದರಿಂದ ಪಾಕಿ ಸ್ತಾನ ಸ್ವಲ್ಪದರಲ್ಲಿಯೇ ಪಾರಾಗಿದೆ. ಮಂಗಳವಾರ ನಡೆದ ಎಫ್ಎಟಿಎಫ್ ಸಭೆಯಲ್ಲಿ ಪಾಕಿ ಸ್ತಾನಕ್ಕೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಿನ ಫೆಬ್ರವರಿ ತನಕ ಸಮಯಾವಕಾಶ ನೀಡಲಾಗಿದೆ. ಅಷ್ಟರತನಕ ಪಾಕ್ ಎಫ್ಎಟಿಎಫ್ನ ಕಂದುಪಟ್ಟಿಯಲ್ಲಿಯೇ ಮುಂದುವರಿಯಲಿದೆ.
ಪ್ಯಾರಿಸ್‌ನಲ್ಲಿ ನಡೆದ ಎಫ್ಎಟಿಎಫ್ನ ಈ ಸಭೆಯಲ್ಲೇ ಪಾಕ್ ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿತ್ತು. ಪಾಕ್‌ನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಭಾರತ ಬಲವಾಗಿ ಒತ್ತಾಯಿಸಿತ್ತು. ಆದರೆ ಕೊನೆಗಳಿಗೆಯಲ್ಲಿ ಅದರ ನೆರವಿಗೆ ಬಂದದ್ದು ಸರ್ವಋತು ಮಿತ್ರರಾದ ಚೀನ, ಮಲೇಶ್ಯಾ ಹಾಗೂ ಟರ್ಕಿ ದೇಶಗಳು. ಕನಿಷ್ಠ ಮೂರು ಸದಸ್ಯ ರಾಷ್ಟ್ರಗಳ ಬೆಂಬಲ ಇದ್ದರೆ ಕಪ್ಪುಪಟ್ಟಿಗೆ ಸೇರುವುದನ್ನು ತಡೆಹಿಡಿಯಬಹುದು ಎಂಬ ಎಫ್ಎಟಿಎಫ್ ನಿಯಮದಿಂದಾಗಿ ಪಾಕ್ ಈ ಸಲ ಬಚಾವಾಗಿದೆ. ಪಾಕ್ ಸದ್ಯಕ್ಕೆ ಬೀಸುವ ದೊಣ್ಣೆಯ ಏಟಿನಿಂದ ಪಾರಾಗಿದ್ದರೂ ಭಾರತದ ಪಾಲಿಗೆ ಇದು ಕಹಿ ಸುದ್ದಿಯೇ ಸರಿ.
ಪಾಕ್ ಕಪ್ಪುಪಟ್ಟಿಗೆ ಸೇರಿದ್ದರೆ ಉಗ್ರರ ವಿರುದ್ಧ ನಾವು ನಡೆಸುತ್ತಿರುವ ಹೋರಾಟಕ್ಕೆ ಸಿಗುವ ದೊಡ್ಡದೊಂದು ಗೆಲುವಾಗುತ್ತಿತ್ತು. ಪಾಕ್ ನೀಡುತ್ತಿರುವ ಹಣಕಾಸಿನ ನೆರವು ಮತ್ತು ಕುಮ್ಮಕ್ಕಿನಿಂದಲೇ ಅಲ್ಲಿ ಉಗ್ರರು ಕೊಬ್ಬಿ ಮೆರೆಯುತ್ತಿರುವುದು ರಹಸ್ಯ ವಿಚಾರವೇನಲ್ಲ. ಉಗ್ರರ ಬೆನ್ನುಮೂಳೆ ಮುರಿಯಬೇಕಾದರೆ ಅವರಿಗೆ ಸಿಗುವ ಹಣಕಾಸಿನ ನೆರವಿಗೆ ತಡೆ ಹಾಕಬೇಕು. ಆದರೆ ಪಾಕಿ ಸ್ತಾನದಲ್ಲಿ ಸ್ವತಃ ಸರಕಾರವೇ ಹಣಕಾಸಿನ ಹಾಗೂ ಇನ್ನಿತರ ಬೆಂಬಲ ನೀಡುತ್ತಿರುವುದರಿಂದ ಇದು ಸಾಧ್ಯವಾಗದ ಮಾತು. ಈ ಕಾರಣಕ್ಕಾದರೂ ಪಾಕಿ ಸ್ತಾನ ಈ ಸಲವೇ ಕಪ್ಪುಪಟ್ಟಿಗೆ ಸೇರಬೇಕಿತ್ತು.
ಲಷ್ಕರ್-ಎ-ತಯ್ಯಬ, ಜೈಶ್-ಇ-ಮೊಹಮ್ಮದ್‌ನಂಥ ಉಗ್ರ ಸಂಘಟನೆಗಳು ಪಾಕಿ ಸ್ತಾನದಲ್ಲಿ ರಾಜಾರೋಷವಾಗಿ ಕಾರ್ಯನಿರತವಾಗಿವೆ. ಉಗ್ರರಿಗೆ ಪಿಂಚಣಿ ನೀಡುವ ಸೌಲಭ್ಯವೂ ಪಾಕಿಸ್ತಾನಲ್ಲಿದೆ ಎನ್ನುವ ವಿಚಾರ ಇತ್ತೀಚೆಗೆ ಅದು ಹಾಫಿಜ್ ಸಯೀದ್‌ನ ಸ್ತಂಭನಗೊಂಡಿರುವ ಖಾತೆಯಿಂದ ಹಣ ಪಡೆಯಲು ಅವಕಾಶ ಕೊಡಬೇಕೆಂದು ಮನವಿ ಮಾಡಿದಾಗ ಬಹಿರಂಗವಾಗಿತ್ತು.
ಉಗ್ರರಿಗೆ ಅಕ್ರಮವಾಗಿ ಹಣ ವರ್ಗಾವಣೆಯಾಗುವುದನ್ನು ತಡೆಯಲು ಎಫ್ಎಟಿಎಫ್ ವಿಧಿಸಿರುವ 30 ಷರತ್ತುಗಳಲ್ಲಿ ಕೆಲವನ್ನು ಮಾತ್ರ ಪಾಕ್ ಈಡೇರಿಸಿದೆ. ಜಾಗತಿಕ ಉಗ್ರರೆಂದು ಘೋಷಿಸಲ್ಪಟ್ಟಿರುವವರು ಅಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಹಾಗೂ ಸಭೆ, ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಅವರ ಈ ಎಲ್ಲ ಚಟುವಟಿಕೆಗಳಿಗೆ ಹಣ ಎಲ್ಲಿಂದ ಬರುತ್ತದೆ ಎನ್ನುವುದು ರಹಸ್ಯ ವಿಚಾರವೇನಲ್ಲ. ಆದರೆ ಇದನ್ನು ತಡೆಯಲು ಪಾಕ್ ಸರಕಾರ ಯಾವ ಸದೃಢವಾದ ಕ್ರಮಗಳನ್ನೂ ಕೈಗೊಂಡಿಲ್ಲ. ಬದಲಾಗಿ ಪಾಕ್ ಸೇನೆ ಮತ್ತು ಗುಪ್ತಚರ ಪಡೆ ಐಎಸ್‌ಐ ನೇರವಾಗಿಯೇ ಉಗ್ರರ ಜೊತೆಗೆ ಸಂಪರ್ಕದಲ್ಲಿದೆ. ಇಂಥ ದೇಶವನ್ನು ಆದಷ್ಟು ಬೇಗ ಕಪ್ಪುಪಟ್ಟಿಗೆ ಸೇರಿಸಿ ಆರ್ಥಿಕವಾಗಿಯೂ ಏಕಾಂಗಿಯಾಗಿಸುವ ಅಗತ್ಯವಿದೆ.
ಎಪ್‌ಎಟಿಎಫ್ನ ಕಪ್ಪುಪಟ್ಟಿಗೆ ಸೇರಿದರೆ ಪಾಕಿಗೆ ಸಿಗುವ ಅಂತಾರಾಷ್ಟ್ರೀಯ ಹಣಕಾಸು ನೆರವು ಸ್ಥಗಿತವಾಗುತ್ತದೆ. ಐಎಂಎಫ್ನಿಂದಲೂ ಯಾವ ನೆರವೂ ಸಿಗುವುದಿಲ್ಲ. ಐಎಂಎಫ್ನ 6 ಶತಕೋಟಿ ಡಾಲರ್ ಸಾಲಕ್ಕೆ ತಡೆ ಬೀಳುತ್ತದೆ. ಯಾವ ದೇಶವೂ ಅಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲದಂಥ ವಾತಾವರಣ ಸೃಷ್ಟಿಯಾಗುತ್ತದೆ. ಈಗಾಗಲೇ ಆರ್ಥಿಕವಾಗಿ ಕಂಗಾಲು ಸ್ಥಿತಿಯಲ್ಲಿರುವ ಪಾಕಿಗೆ ಈ ಹೊಡೆತ ಮಾರಕವಾಗುತ್ತಿತ್ತು.
ಉಗ್ರವಾದವನ್ನೇ ರಾಷ್ಟ್ರೀಯ ನೀತಿಯನ್ನಾಗಿ ಮಾಡಿಕೊಂಡಿರುವ, ನೆರೆ ರಾಷ್ಟ್ರದ ವಿಚಾರದಲ್ಲಿ ವಿನಾಕಾರಣ ಮೂಗುತೂರಿಸುತ್ತಾ, ಉಗ್ರರನ್ನು ಛೂ ಬಿಟ್ಟು ರಕ್ತದೋಕುಳಿ ಹರಿಸುತ್ತಿರುವ ದೇಶದ ವಿರುದ್ಧ ಈ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಇದರಿಂದ ಭಾರತ ಮಾತ್ರವಲ್ಲದೆ ಒಟ್ಟಾರೆಯಾಗಿ ಜಾಗತಿಕ ಶಾಂತಿಗೆ ಒಳಿತಾಗುತ್ತಿತ್ತು. ಅಫ್ಘಾನಿಸ್ಥಾನ, ಭಾರತ ಸೇರಿದಂತೆ ಏಶ್ಯಾದಲ್ಲಿ ಹಾಗೂ ಒಟ್ಟಾರೆಯಾಗಿ ವಿಶ್ವದಲ್ಲಿ ಶಾಂತಿ ನೆಲೆಯಾಗಬೇಕಾದರೆ ಪಾಕಿನಲ್ಲಿರುವ ಉಗ್ರ ಕಾರ್ಖಾನೆಗಳು ಮುಚ್ಚಲೇಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.