ಪಾಕಿಸ್ತಾನದ ದುಡುಕಿನ ನಿರ್ಧಾರಗಳು
Team Udayavani, Aug 10, 2019, 5:41 AM IST
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಪಡಿಸಿದ ಬಳಿಕ ಪಾಕಿಸ್ತಾನ ದಿಗ್ಭ್ರಮೆಗೊಳಗಾಗಿ ವಿವೇಚನಾ ಶಕ್ತಿಯನ್ನು ಕಳೆದುಕೊಂಡಿರುವುದು ಅದು ಕೈಗೊಂಡಿರುವ ನಿರ್ಧಾರಗಳಿಂದ ಸ್ಪಷ್ಟವಾಗುತ್ತಿದೆ. ಭಾರತದ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುವಂಥ ದುಸ್ಸಾಹಸಕ್ಕೆ ಮುಂದಾಗಿರುವುದು ಆ ದೇಶಕ್ಕೆ ದುಬಾರಿಯಾಗಿ ಪರಿಣಮಿಸೀತು. ಪಾಕಿಸ್ತಾನ ಕೈಗೊಳ್ಳುತ್ತಿರುವ ಆವೇಶದ ನಿರ್ಧಾರಗಳನ್ನು ನೋಡುವಾಗ ಆ ದೇಶದ ಆಡಳಿತ ವ್ಯವಸ್ಥೆಯಲ್ಲಿ ದೂರಗಾಮಿ ಪರಿಣಾಮಗಳನ್ನು ಆಲೋಚಿಸಿ ಯೋಗ್ಯ ಮಾರ್ಗದರ್ಶನ ನೀಡುವವರು ಇಲ್ಲವೇ ಎಂಬ ಅನುಮಾನ ಮೂಡುತ್ತದೆ.
ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸುವ ಸಲುವಾಗಿ ಭಾರತದ ರಾಯಭಾರಿಯನ್ನು ಉಚ್ಛಾಟಿಸಿರುವ ಪಾಕ್ ದಿಲ್ಲಿಯಲ್ಲಿರುವ ತನ್ನ ರಾಯಭಾರಿಯನ್ನು ವಾಪಸು ಕರೆಸಿಕೊಂಡಿದೆ. ಸಾಮಾನ್ಯವಾಗಿ ಉಭಯ ದೇಶಗಳ ನಡುವೆ ಯುದ್ಧ ಘೋಷಣೆಯಾದರೆ ಮಾತ್ರ ಇಂಥ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಸದ್ಯಕ್ಕೆ ಭಾರತ-ಪಾಕ್ ನಡುವೆ ಅಂಥ ಸ್ಥಿತಿಯೇನೂ ಉದ್ಭವಿಸಿಲ್ಲ. ಕಾಶ್ಮೀರ ನಮ್ಮ ಆಂತರಿಕ ವಿಚಾರವಾಗಿದ್ದು, ಇದನ್ನು ಪ್ರಶ್ನಿಸುವ ಯಾವ ಅಧಿಕಾರವೂ ಪಾಕಿಸ್ತಾನಕ್ಕೆ ಇಲ್ಲ. ಇದನ್ನು ನಮ್ಮ ಸರಕಾರ ಸ್ಪಷ್ಟವಾಗಿಯೇ ಪಾಕಿಸ್ತಾನಕ್ಕೆ ತಿಳಿಸಿದೆ. ಇದರ ಹೊರತಾಗಿಯೂ ಪಾಕ್ ಕೆಲವು ಉದ್ಧಟತನದ ಕ್ರಮಗಳನ್ನು ಕೈಗೊಂಡಿರುವುದು ಅದು ವಿವೇಚನೆಯನ್ನು ಕಳೆದುಕೊಂಡಿ ರುವುದರ ಲಕ್ಷಣ.
ವಾಘಾ ಗಡಿಯಲ್ಲಿ ಭದ್ರತೆಯ ನೆಪ ಹೇಳಿ ಸಮ್ಜೋತಾ ಎಕ್ಸ್‌ಪ್ರೆಸ್ ರೈಲನ್ನು ನಿಲ್ಲಿಸಿದ್ದು ಕೂಡಾ ಪ್ರಬುದ್ಧ ನಡೆಯಲ್ಲ. ಭಾರತ ಎಂದೂ ಅನ್ಯ ದೇಶದ ಪ್ರಜೆಗಳನ್ನು ಹಿಂಸಿಸಿದ ಉದಾಹರಣೆಯಿಲ್ಲ. ಯುದ್ಧ ಕಾಲದಲ್ಲಿ ಸೆರೆ ಸಿಕ್ಕಿದ ಪಾಕ್ ಯೋಧರನ್ನು ಕೂಡಾ ಗೌರವದಿಂದ ನಡೆಸಿಕೊಂಡವರು ನಾವು. ಹೀಗಿರುವಾಗ ರೈಲಿನ ಚಾಲಕರು ಮತ್ತು ಭದ್ರತಾ ಸಿಬ್ಬಂದಿಗೆ ಭಾರತದಲ್ಲಿ ಭದ್ರತೆ ಇಲ್ಲ ಎಂದು ಹೇಳಿರುವುದು ಪಾಕಿನ ಹತಾಶ ಮನೋಭಾವವನ್ನಷ್ಟೇ ತೋರಿಸುತ್ತದೆ.
ಕಳೆದ ಕೆಲವು ವರ್ಷಗಳಿಂದೀಚೆಗೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಕನಿಷ್ಠ ಮಟ್ಟಕ್ಕಿಳಿದಿದೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತ ಕೈಗೊಂಡಿರುವ ಕಠಿಣ ನಿಲುವೇ ಇದಕ್ಕೆ ಕಾರಣ. ಹೀಗಾಗಿ ದ್ವಿಪಕ್ಷೀಯ ಸಂಬಂಧವನ್ನು ಸಂಪೂರ್ಣ ರದ್ದುಗೊಳಿಸಿದರೂ ಅದರಿಂದ ನಮಗೇನೂ ವಿಶೇಷ ಹಾನಿಯಾಗುವುದಿಲ್ಲ. ಇನ್ನು ವ್ಯಾಪಾರ ಸಂಬಂಧ ಮತ್ತು ಸಾಂಸ್ಕೃತಿಕ ವಿನಿಮಯಗಳನ್ನು ರದ್ದುಗೊಳಿಸುವುದರಿಂದ ನಷ್ಟವಾಗುವುದು ಪಾಕಿಸ್ತಾನಕ್ಕೇ. ಪಾಕಿಸ್ತಾನದ ಜೊತೆಗೆ ನಾವು ಒಟ್ಟು ವಾಣಿಜ್ಯದ ಶೇ.0.3 ವ್ಯವಹಾರವನ್ನಷ್ಟೇ ಹೊಂದಿದ್ದೇವೆ. ನಾವು ಆಮದು ಮಾಡಿಕೊಳ್ಳುವುದಕ್ಕಿಂತ ನಮ್ಮ ರಫ್ತೇ ಪಾಕಿಗೆ ಹೆಚ್ಚಿನ ಪ್ರಮಾಣದಲ್ಲಿದೆ. ಮೊದಲೇ ಆರ್ಥಿಕ ಸ್ಥಿತಿ ಹದಗೆಟ್ಟು ಶೋಚನೀಯ ಸ್ಥಿತಿಯಲ್ಲಿರುವ ಆ ದೇಶ ಈ ಕ್ರಮದಿಂದ ಇನ್ನಷ್ಟು ಬಳಲಿದೆ. ಸಾಂಸ್ಕೃತಿಕ ವಿನಿಮಯದಲ್ಲಿ ಪಾಕಿಸ್ತಾನದ ಕಲಾವಿದರಿಗೇ ಹೆಚ್ಚು ಪ್ರಯೋಜನವಾಗುತ್ತಿತ್ತೇ ಹೊರತು ಭಾರತದವರಿಗಲ್ಲ.
ಹೇಗಾದರೂ ಮಾಡಿ ಕಾಶ್ಮೀರವನ್ನು ಒಂದು ಅಂತಾರಾಷ್ಟ್ರೀಯ ವಿಷಯವನ್ನಾಗಿ ಮಾಡಬೇಕೆಂಬ ಉದ್ದೇಶ ಪಾಕಿನ ಈ ಎಲ್ಲಾ ಕ್ರಮಗಳ ಹಿಂದೆ ಇದೆ. ಆದರೆ ಅಫ್ಘಾನಿಸ್ಥಾನ ತನ್ನನ್ನು ಕಾಶ್ಮೀರಕ್ಕೆ ತಳಕು ಹಾಕುವುದು ಬೇಡ ಎಂದು ಮುಖಕ್ಕೆ ಹೊಡೆದಂತೆ ಹೇಳಿಯಾಗಿದೆ. ಇನ್ನು ತನ್ನ ಆಪ್ತರಾಷ್ಟ್ರವೆಂದು ಪಾಕ್ ಭಾವಿಸಿದ್ದ ಟರ್ಕಿ ಮತ್ತು ಸೌದಿ ಅರೇಬಿಯಾದಿಂದಲೂ ಆ ದೇಶಕ್ಕೆ ಸಕಾರಾತ್ಮಕ ವಾದ ಸ್ಪಂದನ ಸಿಕ್ಕಿಲ್ಲ.
ಸೌದಿ ಅರೇಬಿಯ ಕಾಶ್ಮೀರಕ್ಕೆ ಈಗಾಗಲೇ ತನ್ನ ನಿಲುವು ಸ್ಪಷ್ಟಸಡಿಸಿದೆ. ಅಮೆರಿಕವೂ ಪಾಕಿಸ್ತಾನಕ್ಕೆ ಸಂಯಮದ ಬೋಧನೆ ಮಾಡಿರುವುದರಿಂದ ದೊಡ್ಡಣ್ಣನಿಂದಲೂ ಪಾಕ್ ಹೆಚ್ಚಿನದ್ದೇನೋ ನಿರೀಕ್ಷಿಸುವಂತಿಲ್ಲ. ಇನ್ನು ಪಾಕಿಗೆ ಭರವಸೆ ಇರುವುದು ಚೀನದ ಮೇಲೆ ಮಾತ್ರ. ಆದರೆ ಈ ಪರಿಸ್ಥಿತಿಯಲ್ಲಿ ಚೀನ ಪಾಕಿಸ್ತಾನದಂತೆ ದುಡುಕಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿಲ್ಲ. ಆದರೆ ಏನಾದರೂ ಮಾಡಲೇಬೇಕಾದ ವಿಪರೀತ ಒತ್ತಡ ಪಾಕ್ ಸರಕಾರದ ಮೇಲಿದೆ.
ಹೀಗಾಗಿ ಅದು ಈ ಮಾದರಿಯ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಪಾಕಿಸ್ತಾನ ಭಯೋತ್ಪಾದಕರನ್ನು ಪೋಷಿಸುತ್ತಿರುವ ದೇಶ ಎನ್ನುವುದು ಅಂತಾರಾಷ್ಟ್ರೀಯ ಸಮುದಾಯಕ್ಕೀಗ ಮನವರಿಕೆಯಾಗಿದ್ದು, ಹೀಗಾಗಿ ಎಲ್ಲಾ ದೇಶಗಳು ಪಾಕ್ ಜೊತೆಗೆ ವ್ಯವಹರಿಸುವಾಗ ಬಹಳ ಎಚ್ಚರಿಕೆಯ ನಡೆಯಿಡುತ್ತಿವೆ. ಹತಾಶಗೊಂಡಿರುವ ಪಾಕಿಸ್ತಾನ ಮತ್ತೂಮ್ಮೆ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ತೀವ್ರಗೊಳಿಸಲು ಪ್ರಯತ್ನಿಸುವ ಎಲ್ಲಾ ಸಾಧ್ಯತೆಗಳು ಇವೆ. ಇದಕ್ಕಾಗಿ ತನ್ನ ನೆಲದಲ್ಲಿರುವ ಭಯೋತ್ಪಾದಕ ಸಂಘಟನೆಗಳನ್ನು ಬಳಸಿಕೊಳ್ಳಲು ಆ ದೇಶ ಹೇಸಲಿಕ್ಕಿಲ್ಲ. ವಿಶೇಷ ಸ್ಥಾನಮಾನ ರದ್ದಾಗಿರುವುದರಿಂದ ಆಕ್ರೋಶಗೊಂಡಿರುವ ಕಾಶ್ಮೀರಿಗಳು ಭಾರತದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ತೋರಿಸಿಕೊಡುವ ಪ್ರಯತ್ನವನ್ನು ಖಂಡಿತ ಮಾಡಲಿದೆ. ಇದರಲ್ಲೇನಾದರೂ ಅದು ಸಫಲಗೊಂಡರೆ ಕೇಂದ್ರ ಇಷ್ಟರ ತನಕ ಮಾಡಿರುವ ಪ್ರಯತ್ನಗಳಿಗೆ ಪೆಟ್ಟು ಬೀಳುತ್ತದೆ. ಈ ವಿಚಾರದಲ್ಲಿ ನಾವು ಗರಿಷ್ಠ ಎಚ್ಚರಿಕೆಯಲ್ಲಿರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.