ಹಣವಿದ್ದರೆ ಜೈಲು ಕೂಡ ಅರಮನೆ; ಬಂದೀಖಾನೆಗಳ ನೈಜ ಮುಖ ಬಯಲು
Team Udayavani, Jul 14, 2017, 3:50 AM IST
ಶ್ರೀಮಂತರು ಮತ್ತು ಪ್ರಬಲ ವ್ಯಕ್ತಿಗಳು ಕಾನೂನಿನ ಕೈಗೆ ಸಿಕ್ಕಿ ಬಿದ್ದರೆ ಹೆಚ್ಚು ಹಾನಿಯಾಗುವುದು ಕಾನೂನಿಗೆ ಎಂಬ ಮಾತು ಶಶಿಕಲಾ ವಿಚಾರದಲ್ಲಿ ನಿಜವಾಗಿದೆ.
ರಾಜಕಾರಣಿಗಳು, ಉದ್ಯಮಿಗಳು, ಮಂತ್ರಿ ಮಹೋದಯರು ಕೂಡ ಅಪರಾಧ ಎಸಗಿದರೆ ಶಿಕ್ಷೆ ಅನುಭವಿಸಲೇಬೇಕು ಎನ್ನುತ್ತದೆ ಕಾನೂನು. ನ್ಯಾಯಾಲಯವೇನೋ ಕಾನೂನು ಎಲ್ಲರಿಗೂ ಸಮಾನ ಎಂಬ ತತ್ವದ ಆಧಾರದಲ್ಲಿ ಅವರಿಗೂ ಕಂಬಿ ಎಣಿಸುವ ಶಿಕ್ಷೆಯನ್ನು ವಿಧಿಸುತ್ತದೆ. ಆದರೆ ನಿಜವಾದ ಅರ್ಥದಲ್ಲಿ ಅವರು ಶಿಕ್ಷೆ ಅನುಭವಿಸುತ್ತಾರಾ? ಬಹುತೇಕ ಪ್ರಕರಣಗಳಲ್ಲಿ ಇಲ್ಲ ಎನ್ನುವುದೇ ಉತ್ತರ. ಹಣವುಳ್ಳವರಿಗೆ ಜೈಲು ಎಂದೂ ಸೆರೆಮನೆಯಾಗಿಲ್ಲ. ಮನೆಯಲ್ಲಿ ಇರುವ ಸಕಲ ಐಷಾರಾಮ ಮತ್ತು ಸವಲತ್ತುಗಳನ್ನು ಖರೀದಿಸಿ ಅನುಭವಿಸುವ ಸಾಮರ್ಥ್ಯವನ್ನು ಅವರು ಜೈಲಿನೊಳಗಿದ್ದರೂ ಹೊಂದಿರುತ್ತಾರೆ.
ಹೀಗಾಗಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ. ಕೆ. ಶಶಿಕಲಾ ಜೈಲು ಅಧಿಕಾರಿಗಳಿಗೆ ಲಂಚ ಕೊಟ್ಟು ಐಷಾರಾಮ ಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಯಲಾದಾಗ ಆಶ್ಚರ್ಯವಾಗಲಿಲ್ಲ.
ಬಡ ಕೈದಿಗಳ ಪಾಲಿಗೆ ಭಾರತದ ಜೈಲಿನಿಂತಹ ನರಕ ಇನ್ನೊಂದಿಲ್ಲ. ಅಂತೆಯೇ ಶ್ರೀಮಂತರಿಗೆ ಭಾರತದ ಜೈಲಿನಷ್ಟು ಅನುಕೂಲಕರವಾದ ಸ್ಥಳ ಇನ್ನೊಂದಿಲ್ಲ ಎನ್ನುವುದು ದೇಶದ ಜೈಲುಗಳ ಕುರಿತಾಗಿರುವ ಒಂದು ವಿಡಂಬನೆ. ಶಶಿಕಲಾ ಪ್ರಕರಣದಲ್ಲಿ ಇದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಶಶಿಕಲಾಗಾಗಿಯೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷವಾದ ಅಡುಗೆ ಮನೆಯನ್ನು ಸಜ್ಜುಗೊಳಿಸಲಾಗಿದೆ. ಇದರಲ್ಲಿ ಅವರಿಗಿಷ್ಟವಾದ ಊಟ ತಿಂಡಿ ನಿತ್ಯ ತಯಾರಾಗುತ್ತದೆ. ಅವರಿಗಾಗಿಯೇ ಮೀಸಲಾಗಿರುವ ಬಾಣಸಿಗರೂ ಇದ್ದಾರೆ. ಇದಲ್ಲದೆ ಸಾಮಾನ್ಯ ಕೈದಿಗಳಿಗೆ ಇಲ್ಲದಿರುವ ಹಲವು ಐಷಾರಾಮ ಸೇವೆಗಳು ಶಶಿಕಲಾಗೆ ಸಿಗುತ್ತಿರುವುದನ್ನು ಬಂದೀಖಾನೆಗಳ ಡಿಜಿಪಿ ಡಿ . ರೂಪಾ ಜು.10ರಂದು ಜೈಲು ತಪಾಸಣೆ ಕೈಗೊಂಡ ವೇಳೆ ಪತ್ತೆ ಹಚ್ಚಿ ವರದಿ ಮಾಡಿದ್ದಾರೆ.
ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಶಶಿಕಲಾ ಬಂಧೀಖಾನೆಗಳ ಮಹಾ ನಿರ್ದೇಶಕ ಸತ್ಯನಾರಾಯಣ ಅವರಿಗೆ 2 ಕೋ. ರೂ. ಲಂಚ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅಲ್ಲದೆ ಇತರ ಜೈಲು ಅಧಿಕಾರಿಗಳನ್ನೂ ಶಶಿಕಲಾ ಅವರ ಯೋಗ್ಯತೆ ತಕ್ಕಂತೆ ಹಣಕೊಟ್ಟು ಖುಷಿ ಪಡಿಸಿದ್ದಾರೆ. ಶಶಿಕಲಾ ಮಾತ್ರವಲ್ಲದೆ ನಕಲಿ ಛಾಪಾ ಕಾಗದ ಪ್ರಕರಣದ ಕೈದಿ ಅಬ್ದುಲ್ ಕರೀಂ ತೆಲಗಿ ಕೂಡ ಜೈಲಿನಲ್ಲಿ ರಾಜಾತಿಥ್ಯ ಪಡೆದುಕೊಳ್ಳುತ್ತಿರುವುದನ್ನು ರೂಪಾ ವರದಿಯಲ್ಲಿ ಉಲ್ಲೇಖೀಸಿದ್ದಾರೆ. ಪರಪ್ಪನ ಅಗ್ರಹಾರ ಎಂದಲ್ಲ ದೇಶದ ಯಾವುದೇ ಜೈಲಿಗೆ ದಾಳಿ ಮಾಡಿದರೂ ಇಂತಹ ಪ್ರಕರಣಗಳು ಸಿಕ್ಕೇ ಸಿಗುತ್ತವೆ. ಮಾಫಿಯಾ ಡಾನ್‌ಗಳು ಜೈಲಿನೊಳಗೆ ಕುಳಿತೇ ಡೀಲ್ ಕುದುರಿಸುತ್ತಾರೆ. ಇಷ್ಟೇಕೆ ಜೈಲಿಗೆ ಕರೆವೆಣ್ಣುಗಳನ್ನು ಕರೆಸಿಕೊಂಡ ಪ್ರಕರಣವೂ ಇದೆ. ಇವೆಲ್ಲ ಜೈಲು ಸಿಬ್ಬಂದಿ ಸಹಕಾರವಿಲ್ಲದೆ ನಡೆಯುವುದು ಸಾಧ್ಯವೇ? ಹೀಗಾಗಿ ಶಶಿಕಲಾ ಜೈಲಿನೊಳಗೆ ರಾಜಾತಿಥ್ಯ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾದಾಗ ಯಾರಿಗೂ ಆಶ್ಚರ್ಯವಾಗಲಿಲ್ಲ. ಹೇಳಿ ಕೇಳಿ ಚುನಾವಣಾ ಆಯೋಗಕ್ಕೆ ಲಂಚ ಕೊಡಲು ಹೋದ ಪಕ್ಷದ ಅಧಿನಾಯಕಿ ಆಕೆ. ಶಶಿಕಲಾ ಅವರನ್ನು ಪರಪ್ಪನ ಅಗ್ರಹಾರ ಜೈಲಿ ನಲ್ಲಿಡಲು ಕರೆತಂದಾಗಲೇ ಅನಂತರ ಆಗಬಹುದಾದ ಅಪಸವ್ಯಗಳ ಕುರಿತು ಅರಿವು ಇರಬೇಕಿತ್ತು.
ಎಐಎಡಿಎಂಕೆ ನಾಯಕರು ಮತ್ತು ಸಚಿವರು ಪರಪ್ಪನ ಅಗ್ರಹಾರ ಜೈಲಿಗೆ ಬಂದು ತಾಸುಗಟ್ಟಲೆ ಸಭೆ ನಡೆಸಿ ಹೋಗುತ್ತಿರುವ ವಿಷಯ ಆಗಾಗ ವರದಿಯಾಗಿದ್ದರೂ ಸರಕಾರ ಕ್ರಮ ಕೈಗೊಂಡಿರಲಿಲ್ಲ. ಶಶಿಕಲಾ ವಿಚಾರದಲ್ಲಿ ಮಾದರಿ ಜೈಲು ಸಂಹಿತೆಯ ಉಲ್ಲಂಘನೆಯಾಗುತ್ತಿದ್ದರೂ ಸುಮ್ಮನಿದ್ದ ಸರಕಾರ ಈಗ ಎಚ್ಚೆತ್ತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಆದರೆ ತನಿಖಾಧಿಕಾರಿ ಯಾರು? ತನಿಖೆಗೆ ಎಷ್ಟು ಕಾಲಮಿತಿ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಶ್ರೀಮಂತರು ಮತ್ತು ಪ್ರಬಲ ವ್ಯಕ್ತಿಗಳು ಕಾನೂನಿನ ಕೈಗೆ ಸಿಕ್ಕಿ ಬಿದ್ದರೆ ಹೆಚ್ಚು ಹಾನಿಯಾಗುವುದು ಕಾನೂನಿಗೆ ಎಂಬ ಮಾತು ಶಶಿಕಲಾ ವಿಚಾರದಲ್ಲಿ ನಿಜವಾಗಿದೆ. ವಿಐಪಿ ಕೈದಿಗಳು ಜೈಲಿನಲ್ಲೂ ಸ್ವತಂತ್ರರು ಎನ್ನುವುದು ಬೇಸರದ ವಿಷಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.