ಸಂಸತ್ ಅಧಿವೇಶನ: ಹಠ, ಪ್ರತಿಷ್ಠೆ ಬಿಟ್ಟು ಸುಗಮ ಕಲಾಪ ನಡೆಸಿ
Team Udayavani, Aug 2, 2021, 6:40 AM IST
ಸದ್ಯ ಸಂಸತ್‌ನ ಉಭಯ ಸದನಗಳ ಮುಂಗಾರು ಅಧಿವೇಶನ ನಡೆಯುತ್ತಿದೆ. ಕೊರೊನಾದ ಹಿನ್ನೆಲೆಯಲ್ಲಿ ಬರೋಬ್ಬರಿ 18 ತಿಂಗಳುಗಳ ಅನಂತರ ನಡೆಯುತ್ತಿರುವ ಅಧಿವೇಶನ ಇದಾಗಿದೆ. ಈ ಬಾರಿ ಅಧಿವೇಶನದಲ್ಲಿ ಹಲವಾರು ಮಹತ್ತರ ವಿಷಯಗಳು, ಸಮಸ್ಯೆಗಳು, ಅಭಿವೃದ್ಧಿ ಯೋಜನೆಗಳ ಕುರಿತಂತೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ವಿಸ್ತೃತ ಚರ್ಚೆ ನಡೆದಾವು ಎಂಬ ದೇಶದ ಜನತೆಯ ಊಹೆ ಹುಸಿಯಾಗಿದೆ. ಜುಲೈ 19ರಿಂದೀಚೆಗೆ ಉಭಯ ಸದನಗಳಲ್ಲಿ ಯಾವುದೇ ಕಲಾಪಗಳು ನಡೆದಿಲ್ಲ.
ಸಂಸತ್‌ನ ಮುಂಗಾರು ಅಧಿವೇಶನದ ಮೊದಲ ದಿನವಾದ ಜು. 19ರಿಂದಲೇ ವಿಪಕ್ಷಗಳು ಪೆಗಾಸಸ್ ಗೂಢಚರ್ಯೆ ಪ್ರಕರಣವನ್ನು ಮುಂದಿಟ್ಟು ಚರ್ಚೆಗೆ ಅವಕಾಶ ನೀಡುವಂತೆ ಮತ್ತು ಈ ಬಗ್ಗೆ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆ ನಡೆಸಬೇಕೆಂಬ ಆಗ್ರಹವನ್ನು ಮುಂದಿಟ್ಟು ಕಲಾಪಕ್ಕೆ ತಡೆಯೊಡ್ಡಿವೆ. ಇದರ ಜತೆಯಲ್ಲಿ ಈಗಾಗಲೇ ಸಂಸತ್‌ನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ಮೂರು ಕೃಷಿ ಕಾಯಿದೆಗಳೂ ಸರಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳಿಗೆ ಅಸ್ತ್ರವಾಗಿವೆ. ಹೀಗಾಗಿ ಕಳೆದೆರಡು ವಾರಗಳ ಸಂಸತ್ ಅಧಿವೇಶನ ಸಂಪೂರ್ಣ ವ್ಯರ್ಥವಾಗಿವೆ. ಹಾಗೆಂದು ಅಧಿವೇಶನದ ಸಂದರ್ಭದಲ್ಲಿ ಸದಸ್ಯರಿಗೆ ನೀಡಲಾಗುವ ಎಲ್ಲ ವಿಶೇಷ ಭತ್ತೆ, ಸೌಲಭ್ಯಗಳೂ ಲಭಿಸುತ್ತಿವೆ. ಇದರಿಂದಾಗಿ ಸಾರ್ವಜನಿಕರ ಹಣದಲ್ಲಿ 133 ಕೋ. ರೂ. ಪೋಲಾದಂತಾಗಿದೆ.
ಆ.13ರಂದು ಅಧಿವೇಶನ ಕೊನೆಗೊಳ್ಳಲಿದ್ದು ವಿಪಕ್ಷಗಳು ಮತ್ತು ಸರಕಾರದ ನಡುವೆ ಸಹಮತ ಮೂಡದೇ ಹೋದಲ್ಲಿ ಮುಂದಿನ ಹತ್ತು ದಿನಗಳ ಅವಧಿಯಲ್ಲಿ ಸುಗಮ ಕಲಾಪಗಳೂ ನಡೆಯುವುದು ಅನುಮಾನ. ಕಲಾಪಗಳು ನಡೆಯದೇ ಸಮಯ ವ್ಯರ್ಥವಾಗುತ್ತಿರುವುದರ ಕುರಿತಂತೆಯೂ ಆಡಳಿತ ಮತ್ತು ವಿಪಕ್ಷಗಳು ಪರಸ್ಪರ ಬೆರಳು ತೋರಿಸುವುದರತ್ತಲೇ ತಮ್ಮೆಲ್ಲ ಗಮನವನ್ನು ಹರಿಸಿವೆಯೇ ವಿನಾ ಈ ಬಿಕ್ಕಟ್ಟಿಗೆ ಪರಿಹಾರ ಸೂತ್ರ ಕಂಡುಹಿಡಿದು ಕಲಾಪಗಳು ಸುಗಮವಾಗಿ ನಡೆಯುವಂತಾಗಲು ಚಿಂತಿಸದಿರುವುದು ದುರದೃಷ್ಟಕರ.
ಹಾಲಿ ಅಧಿವೇಶನದಲ್ಲಿ ಸರಕಾರ ಸುಮಾರು 43 ಮಸೂದೆಗಳಿಗೆ ಸಂಸತ್‌ನ ಉಭಯ ಸದನಗಳ ಒಪ್ಪಿಗೆ ಪಡೆಯಲು ನಿರ್ಧರಿಸಿತ್ತು. ಈವರೆಗಿನ 2 ವಾರಗಳ ಅವಧಿಯಲ್ಲಿ ಕೇವಲ 8 ಮಸೂದೆಗಳಿಗೆ ಸದನದ ಒಪ್ಪಿಗೆ ಪಡೆಯಲು ಸರಕಾರ ಸಫಲವಾಗಿದೆ. ಕೆಲವೊಂದು ಮಹತ್ತರ ಮಸೂದೆಗಳಿಗೆ ಕೇಂದ್ರ ಸರಕಾರ ವಿಪಕ್ಷಗಳ ಗದ್ದಲದ ನಡುವೆಯೇ ಯಾವುದೇ ಚರ್ಚೆ ಇಲ್ಲದೆ ಸದನದ ಅಂಗೀಕಾರವನ್ನು ಪಡೆದುಕೊಂಡಿದೆ ಎಂಬುದು ಇಲ್ಲಿ ಗಮನಾರ್ಹ.
ವಿಪಕ್ಷಗಳ ಹಠಮಾರಿತನ, ಆಡಳಿತ ಪಕ್ಷದ ಪ್ರತಿಷ್ಠೆಯಿಂದಾಗಿ ಸಂಸತ್ ಕಲಾಪಗಳು ವ್ಯರ್ಥಗೊಳ್ಳುತ್ತಿವೆ. ಅಧಿವೇಶನದ ಸಂದರ್ಭದಲ್ಲಿ ಕಲಾಪಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಸಮಾನ ಹೊಣೆಗಾರಿಕೆ ವಿಪಕ್ಷಗಳು ಮತ್ತು ಆಡಳಿತ ಪಕ್ಷದ ಮೇಲಿದೆ. ಬಹುಮತ ಇದೆ ಎಂದಾಕ್ಷಣ ವಿಪಕ್ಷಗಳು ಎತ್ತಿದ ವಿಷಯಗಳೆಲ್ಲವನ್ನೂ ಸಾರಾಸಗಟಾಗಿ ತಿರಸ್ಕರಿಸಿ ಕಲಾಪವನ್ನು ಮುಂದುವರಿಸಿಕೊಂಡು ಹೋಗುವ ಆಡಳಿತ ಪಕ್ಷದ ನಿಲುವಾಗಲಿ, ತಾನು ಹೇಳಿದಂತೆ ಕಲಾಪಗಳು ನಡೆಯಬೇಕೆಂಬ ವಿಪಕ್ಷಗಳ ಹಠಮಾರಿ ಧೋರಣೆಯಾಗಲಿ ಸ್ವೀಕಾರಾ ರ್ಹವಲ್ಲ. ಎರಡೂ ಕಡೆ ಯ ವರೂ ಈ ವಿಚಾ ರ ದಲ್ಲಿ ಪ್ರತಿಷ್ಠೆ ಬಿಡಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.