“ಅಸಂಸದೀಯ ಪದ’ದ ನೆಪದಲ್ಲಿ ಚರ್ಚೆ ಕುಂಠಿತವಾಗದಿರಲಿ
Team Udayavani, Jul 15, 2022, 6:00 AM IST
ಮುಂದಿನ ಸೋಮವಾರದಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಇದರ ಬೆನ್ನ ಹಿಂದೆಯೇ ಅಸಂಸದೀಯ ಪದಗಳ ನಿರ್ಬಂಧ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಲೋಕಸಭೆ ಕಾರ್ಯಾಲಯ ಈ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಅಸತ್ಯ, ಭ್ರಷ್ಟತೆ ಸೇರಿದಂತೆ ಕೆಲವೊಂದು ಪದಗಳನ್ನು ಬಳಕೆ ಮಾಡದಂತೆ ನಿರ್ಬಂಧಿಸಲಾಗಿದೆ. ವಿಪಕ್ಷಗಳ ಪ್ರಕಾರ, ಇದೊಂದು ಪ್ರಜಾಸತ್ತಾತ್ಮಕ ವಿರೋಧಿ ನಡೆಯಾಗಿದ್ದು, ಸಂಸತ್‌ನಲ್ಲಿ ಚರ್ಚೆಗೆ ಅವಕಾಶವೇ ಇಲ್ಲದಂಥ ಪರಿಸ್ಥಿತಿ ಉದ್ಭವವಾಗಬಹುದು ಎಂದು ಆರೋಪಿಸಿವೆ.
ಅಸಂಸದೀಯ ಪದ ಎಂದರೆ, ಸಂಸತ್‌ನ ಘನತೆಗೆ ಧಕ್ಕೆ ತರುವ ಪದಗಳು. ದೇಶದ ಅತ್ಯುನ್ನತ ಸದನವಾಗಿ, ಜನರ ಹಿತದೃಷ್ಟಿಯಿಂದ ಶಾಸನ ರೂಪಿಸುವ ಈ ಸದನದಲ್ಲಿ ಕೀಳು ಅಭಿರುಚಿಯ ಪದಗಳನ್ನು ಸಂಸದರು ಬಳಕೆ ಮಾಡಬಾರದು ಎಂಬುದು ಈಗ ಹೊರಡಿಸಿರುವ ನಿಯಮದ ತಾತ್ಪರ್ಯ. ಒಂದು ಲೆಕ್ಕಾಚಾರದಲ್ಲಿ ನೋಡುವುದಾದರೆ, ಕೆಲವು ಪದಗಳಿಗೆ ಮಿತಿ ಹೇರುವುದು ಉತ್ತಮವೇ. ಹಾಗಂತ ತೀರಾ ದಿನನಿತ್ಯದ ರಾಜಕೀಯ ಚರ್ಚೆಯಲ್ಲಿ ಬಳಕೆ ಮಾಡುವಂಥ ಪದಗಳನ್ನು ನಿರ್ಬಂಧ ಪಟ್ಟಿಗೆ ಸೇರಿಸಿರುವುದು ಉಚಿತವಾದ ಕ್ರಮವಲ್ಲ.
ಈ ಕುರಿತಂತೆ ವಿವಾದ ಏರ್ಪಟ್ಟ ಮೇಲೆ ಸ್ಪೀಕರ್ ಓಂ ಬಿರ್ಲಾ ಅವರೇ ಸ್ಪಷ್ಟನೆ ನೀಡಿದ್ದು, ಯಾರ ಮಾತಿಗೂ ನಿರ್ಬಂಧ ಹೇರಲಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಸಂಸತ್‌ನ ಘನತೆ ಕಾಪಾಡಬೇಕಾದದ್ದು ಆಡಳಿತ ಮತ್ತು ವಿಪಕ್ಷಗಳಲ್ಲಿ ಇರುವ ಸದಸ್ಯರ ಆದ್ಯ ಕರ್ತವ್ಯ ಎಂದೂ ಹೇಳಿದ್ದಾರೆ.
ಅಸಂಸದೀಯ ಪದ ವಿಚಾರವಾಗಿ ಇದೇ ಮೊದಲ ಬಾರಿಗೆ ಇಂಥ ನಿಯಮಗಳನ್ನೇನೂ ಹೊರಡಿಸಿಲ್ಲ. 1999ರಲ್ಲೇ ಇಂಥ ಪ್ರಯತ್ನ ಶುರು ವಾಗಿ 2002ರ ಹೊತ್ತಿಗೆ 900 ಪುಟಗಳ ಒಂದು ಪುಸ್ತಕವನ್ನೇ ಸಿದ್ಧ ಮಾಡಲಾಗಿದೆ. ಹಾಗೆಯೇ ಯುಪಿಎ ಸರಕಾರದ ಅವಧಿಯ 2012ರಲ್ಲಿಯೂ ಇಂಥ ಕೈಪಿಡಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿಯೂ ಕೆಲವೊಂದು ಪದಗಳಿಗೆ ನಿರ್ಬಂಧ ಹೇರಲಾಗಿತ್ತು. ಈ ಪಟ್ಟಿಗೆ ಈಗ ಹೊಸದಾಗಿ 62 ಹೊಸ ಪದಗಳನ್ನು ಸೇರಿಸಲಾಗಿದೆ ಎಂಬುದು ಕೇಂದ್ರ ಸರಕಾರದ ಸಮಜಾಯಿಷಿ. ಆದರೆ ಈಗ ಬಹುತೇಕರ ಆಕ್ಷೇಪವಿರುವುದು ಭ್ರಷ್ಟಾಚಾರಿ, ಸುಳ್ಳು ಗಾರ, ಅಸಮರ್ಥ, ಅಸತ್ಯ, ಮೋಸ, ಸುಳ್ಳು, ನಾಟಕ, ದಾರಿ ತಪ್ಪಿಸುವಿಕೆ ಸೇರಿದಂತೆ ಪ್ರಮುಖ ಪದಗಳ ಬಗ್ಗೆ. ಯಾವುದೇ ಪಕ್ಷದ ಆಡಳಿತವಿರಲಿ ಸರಕಾರದ ವಿರುದ್ಧ ಟೀಕೆ ಮಾಡುವಾಗ ವಿಪಕ್ಷಗಳು ಇಂಥ ಪದಗಳನ್ನು ಬಳಕೆ ಮಾಡಲೇಬೇಕು. ಆದರೆ ಈ ಪದಗಳನ್ನು ಬಿಟ್ಟು ಬೇರೆ ಯಾವ ಪದಗಳನ್ನು ಉಪಯೋಗಿಸಲಿ ಎಂಬುದು ವಿಪಕ್ಷಗಳ ಆಕ್ಷೇಪ.
ವಿಶೇಷವೆಂದರೆ, ಕೆಲವು ಅಧಿಕಾರಿಗಳು ಹೇಳುವಂತೆ, ದೇಶದ ಎಲ್ಲ ವಿಧಾನಸಭೆಗಳ ಕಡತದಿಂದ ತೆಗೆದುಹಾಕಿರುವ ಪದಗಳನ್ನು ನೋಡಿಯೇ ಈಗ ನಿರ್ಬಂಧದ ಸೂಚನೆ ನೀಡಲಾಗಿದೆ. ಅಂದರೆ 2021ರಲ್ಲಿ ರಾಜಸ್ಥಾನ ವಿಧಾನಸಭೆಯಲ್ಲಿ ಅಸತ್ಯ, 1980ರ ಜುಲೈನಲ್ಲಿ ಸಂಸತ್‌ನಲ್ಲಿ ಭ್ರಷ್ಟ ಮತ್ತು ಭ್ರಷ್ಟಾಚಾರಿ ಪದಗಳನ್ನು ತೆಗೆದುಹಾಕಲಾಗಿದೆ. ಅಸಮರ್ಥ ಸಚಿವರು ಎಂಬ ಪದವನ್ನು 1976ರ ನವೆಂಬರ್‌ನಲ್ಲಿ ತೆಗೆಯಲಾಗಿದೆ.
ಈ ಸಂಗತಿಗಳನ್ನು ನೋಡಿದರೆ, ಯಾವುದೇ ಪಕ್ಷಗಳಿದ್ದರೂ ಅವುಗಳು ತಮ್ಮ ಮೂಗಿನ ನೇರಕ್ಕೆ ಇಂಥ ನಿಯಮಗಳನ್ನು ಮಾಡಿಕೊಳ್ಳುತ್ತವೆ ಎಂಬುದು ಗೊತ್ತಾಗುತ್ತದೆ. ಆದರೆ ಏನೇ ಆಗಲಿ ಪದಗಳ ಮೇಲಿನ ನಿರ್ಬಂಧದಿಂದ ಸಂಸತ್ ಅಥವಾ ವಿಧಾನಸಭೆಗಳಲ್ಲಿ ಉತ್ತಮ ಚರ್ಚೆಗೆ ಅವಕಾಶ ಸಿಗದಂತೆ ಆಗಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.