ಕೆಸಿಆರ್ ಅರ್ಥಹೀನ ಹೇಳಿಕೆಗೆ ರಾಜ್ಯ ಗಟ್ಟಿ ದನಿ ಎತ್ತಲಿ
Team Udayavani, Aug 19, 2022, 6:00 AM IST
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ರಾಯಚೂರು ಜಿಲ್ಲೆ ತೆಲಂಗಾಣಕ್ಕೆ ಸೇರ್ಪಡೆಯಾಗಲು ತುದಿಗಾಲ ಮೇಲೆ ನಿಂತಿದೆ ಎಂಬಂತೆ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಭಾವನೆಗಳನ್ನು ಕೆರಳಿಸುವ, ಭಾಷಾ ಬಾಂಧವ್ಯ, ನೆರೆ ಹೊರೆ ರಾಜ್ಯಗಳ ಉತ್ತಮ ಸಂಬಂಧಕ್ಕೆ ಧಕ್ಕೆ ತರುವ ಯತ್ನಕ್ಕೆ ಮುಂದಾಗಿದ್ದಾರೆ.
ಆ ಮೂಲಕ ಕನ್ನಡಿಗರ ಆತ್ಮಾಭಿಮಾನ ಕೆಣಕುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ರಾಯಚೂರು ಎಂದರೆ ಕನಿಷ್ಟ ಅಭಿವೃದ್ಧಿಯನ್ನೇ ಕಾಣದ ನರಕರೂಪದ ನೆಲದಂತೆ, ತೆಲಂಗಾಣವೆಂದರೆ ಸ್ವರ್ಗದ ಪ್ರತಿರೂಪ ಎಂಬಂತೆ ಬಿಂಬಿಸುವ ಮೂಲಕ ರಾಜಕೀಯ ಲಾಭಕ್ಕೆ ಮುಂದಾಗಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು, ಅದನ್ನು ಪಡೆಯದೆ ಬಿಡಲಾರೆವು ಎಂದು ಸಮಯ ಸಿಕ್ಕಾಗಲೆಲ್ಲ ಕೇಳಿಬರುವ ಕೂಗು ಬರುಬರುತ್ತ ಸವಕಲು ನಾಣ್ಯವಾಗಿದೆ. ಕನ್ನಡಿಗರು, ಮರಾಠಿಗರು ಬೆಳಗಾವಿಯಲ್ಲಿ ಸಹೋದರರಂತೆ ಬಾಳುತ್ತಿದ್ದರೂ ವರ್ಷಕ್ಕೊಮ್ಮೆಯಾದರೂ ಬಾಂಧವ್ಯಕ್ಕೆ ಹುಳಿ ಹಿಂಡುವ ಕಾರ್ಯ ಮಹಾರಾಷ್ಟ್ರದ ಕೆಲವರಿಂದ ನಡೆಯುತ್ತಲೇ ಇದೆ. ಇದೀಗ ನೆರೆಯ ತೆಲಂಗಾಣದಿಂದ ಇಂತಹದ್ದೇ ಹೊಸ ವರಸೆ ಶುರುವಾಗಿದೆ. ವರ್ಷದ ಹಿಂದೆ ರಾಯಚೂರಿನ ಶಾಸಕರು ಮಾತಿನ ಆವೇಶದಲ್ಲಿ ಹೇಳಿದ ಒಂದೇ ಒಂದು ಶಬ್ದವನ್ನು ಮೂಲವಾಗಿಟ್ಟುಕೊಂಡು ತೆಲಂಗಾಣದಲ್ಲಿನ ಆಡಳಿತರೂಢ ಟಿಆರ್‌ಎಸ್ ನಾಯಕರು ರಾಯಚೂರು ತೆಲಂಗಾಣಕ್ಕೆ ಸೇರಿಯೇ ಬಿಟ್ಟಿತು ಎಂಬರ್ಥದಲ್ಲಿ, ರಾಯಚೂರು ಜಿಲ್ಲೆಯ ಇಡೀ ಜನತೆ ತೆಲಂಗಾಣಕ್ಕೆ ಹೋಗಲು ನಾವು ಸಿದ್ಧ ಎಂದು ಒಕ್ಕೊರಲಿನ ಧ್ವನಿ ಮೊಳಗಿಸಿದ್ದಾರೆ, ಬೇಡಿಕೆ ಮಂಡಿಸಿದ್ದಾರೆ, ಒತ್ತಾಯ ಮಾಡುತ್ತಿದ್ದಾರೆ ಎಂಬಂತೆ ಹೇಳಿಕೆ ನೀಡಿದ್ದಾರೆ.
ರಾಯಚೂರು ಕನ್ನಡ ನೆಲ ಎಂಬುದರಲ್ಲಿ ಸಂಶಯ ಇಲ್ಲವೇ ಇಲ್ಲ. ತೆಲಂಗಾಣ ಗಡಿಗೆ ಹೊಂದಿಕೊಂಡ ಕೆಲ ಹಳ್ಳಿಗಳಲ್ಲಿ ಹೆಚ್ಚಿನವರು ತೆಲುಗು ಭಾಷೆ ಮಾತನಾಡುತ್ತಿರಬಹುದು. ಅದೇ ರೀತಿ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ತೆಲಂಗಾಣದ ಅನೇಕ ಗ್ರಾಮಗಳಲ್ಲಿ ಕನ್ನಡ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದೂ ನಿಜ.
ಹೈದರಾಬಾದ್ ನಿಜಾಮರ ಕಪಿಮುಷ್ಟಿಯಿಂದ ಹೊರಬರಲು, ರಜಾಕರ ದುರಾಳಿತದ ವಿರುದ್ಧ ತೊಡೆತಟ್ಟಿ ನಿಂತ ಹೈದರಾಬಾದ್ ಕರ್ನಾಟಕ (ಇಂದಿನ ಕಲ್ಯಾಣ ಕರ್ನಾಟಕ) ವಿಮೋಚನಾ ಹೋರಾಟಕ್ಕೆ ತನ್ನದೇ ಮಹತ್ವದ ಕೊಡುಗೆ ನೀಡಿದ ಕೀರ್ತಿ ರಾಯಚೂರಿಗೆ ಇದೆ. ರಾಯಚೂರು ತೆಲಂಗಾಣಕ್ಕೆ ಸೇರಲು ಸಿದ್ಧವಿದೆ ಎಂದು ನಿರ್ಣಯ ಕೈಗೊಂಡ, ಠರಾವು ಪಾಸು ಮಾಡಿದ್ದೇನಾದರೂ ಇದೆಯೇ?
ತೆಲಂಗಾಣಕ್ಕೆ ಸೇರುವುದಾಗಿ ಮಹಾರಾಷ್ಟ್ರದ ಗಡಿ ಭಾಗದ ಕೆಲ ಹಳ್ಳಿಗಳು ನಿರ್ಣಯ ಕೈಗೊಂಡಂತೆ, ಅದೇ ಮಹಾರಾಷ್ಟ್ರದ ಗಡಿಭಾಗದ ಅನೇಕ ಹಳ್ಳಿಗಳು ಕರ್ನಾಟಕಕ್ಕೆ ಸೇರಲು ಸಿದ್ಧ ನಮ್ಮನ್ನು ಸೇರಿಸಿಕೊಳ್ಳಿ ಎಂದು ಮನವಿ ಮಾಡಿವೆ. ಅಷ್ಟೇ ಏಕೆ ಆಂಧ್ರಪ್ರದೇಶದ ಶಾಸಕರೊಬ್ಬರು ಮಂತ್ರಾಲಯವನ್ನು ಕರ್ನಾಟಕ ಸೇರಿಸಿಬಿಡಿ ಎಂದಿದ್ದರು. ಆವೇಶದಲ್ಲಿ ಬರುವ ಹೇಳಿಕೆ ಆಧರಿಸಿ, ಜಿಲ್ಲೆಯ ಜನತೆಯ ನಿರ್ಣಯವೇ ಇದಾಗಿದೆ ಎಂಬಂತೆ ಹೇಳಿಕೆ ನೀಡುವುದು ತರವಲ್ಲ. ಈ ಹೇಳಿಕೆ ವಿರುದ್ಧ ರಾಜ್ಯದ ಮುಖ್ಯಮಂತ್ರಿಗಳಾದಿಯಾಗಿ ಎಲ್ಲ ಜನಪ್ರತಿನಿಧಿಗಳು ದನಿ ಎತ್ತಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಂಥ ಹೇಳಿಕೆಗಳು ಮತ್ತಷ್ಟು ದುಬಾರಿಯಾಗಿ ಪರಿಣಮಿಸಬಹುದು. ಇಂಥ ವಿಭಜಕ ಮನಸ್ಥಿತಿಯನ್ನು ಆರಂಭದಲ್ಲೇ ಮೊಟಕುಗೊಳಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.