KFD; ಮಂಗನ ಕಾಯಿಲೆಗೆ ಶಾಶ್ವತ ಔಷಧ ಸಂಶೋಧನೆಯೇ ಪರಿಹಾರ
Team Udayavani, Jan 10, 2024, 5:11 AM IST
ಚಳಿಗಾಲ ಬಂತೆಂದರೆ ಸಾಕು ರಾಜ್ಯದ ಮಲೆನಾಡಿನ ಜಿಲ್ಲೆಗಳ ಅರಣ್ಯ ತಪ್ಪಲಿನ ಪ್ರದೇಶಗಳಲ್ಲಿ ವಾಸವಾಗಿರುವ ಜನರನ್ನು ಮಂಗನ ಕಾಯಿಲೆ ಕಾಡತೊಡಗುತ್ತದೆ. ಈ ಕಾಯಿಲೆ ಪತ್ತೆಯಾಗಿ ಐದಾರು ದಶಕಗಳು ಕಳೆದರೂ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟು ಮಾತ್ರವಲ್ಲದೆ ಈ ಸೋಂಕಿನ ಪತ್ತೆಯಲ್ಲೂ ವಿಳಂಬವಾಗುತ್ತಿದ್ದು ಇದು ಸೋಂಕು ಬಾಧಿತರ ಪ್ರಾಣಕ್ಕೇ ಸಂಚಕಾರ ತಂದೊಡ್ಡುತ್ತಿದೆ.
ಪ್ರತೀ ವರ್ಷವೂ ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಅರೆ ಮಲೆನಾಡು ಪ್ರದೇಶಗಳನ್ನು ಹೊಂದಿರುವ ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡದ ಜನರನ್ನು ಮಂಗನ ಕಾಯಿಲೆ ಬಾಧಿಸಲಾರಂಭಿಸುತ್ತದೆ. 2019 ಮತ್ತು 2020ರಲ್ಲಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದಿಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗಿದ್ದವಲ್ಲದೆ ಹಲವಾರು ಪ್ರಾಣಹಾನಿಯೂ ಸಂಭವಿಸಿತ್ತು.
ಈಗ ಮತ್ತೆ ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಫ್ಡಿ ಬಾಧೆ ಜನರನ್ನು ಕಾಡತೊಡಗಿದ್ದು, ಓರ್ವ ಯುವತಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾಳೆ. ಅಷ್ಟು ಮಾತ್ರವಲ್ಲದೆ ಇನ್ನೂ ಮೂರು ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಸಹಜವಾಗಿಯೇ ಇದು ಮಲೆನಾಡಿನ ಜನತೆಯಲ್ಲಿ ಆತಂಕ ಮೂಡಿಸಿದೆ.
ಕ್ಯಾಸನೂರ್ ಫಾರೆಸ್ಟ್ ಡಿಸೀಸ್ (ಕೆಎಫ್ಡಿ) ಒಂದು ಪ್ರಾಣಿಜನ್ಯ ಕಾಯಿ ಲೆಯಾಗಿದೆ. ಮಂಗಗಳಲ್ಲಿ ಕಾಣಿಸಿಕೊಳ್ಳುವ ಈ ಸೋಂಕು ಅದರ ಮೈಮೇಲಿರುವ ಉಣ್ಣೆಗಳಿಂದ ಜಾನುವಾರು ಅಥವಾ ಮಾನವರಿಗೆ ಹರಡುತ್ತದೆ. ಸೋಂಕು ಪತ್ತೆ ವಿಳಂಬವಾಗಿ, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದೇ ಹೋದಲ್ಲಿ ಸೋಂಕುಪೀಡಿತರು ಸಾವನ್ನಪ್ಪುತ್ತಾರೆ. ಈ ಕಾಯಿಲೆ ಇಷ್ಟೊಂದು ಮಾರಣಾಂತಿಕವಾದರೂ ಈವರೆಗೆ ಇದಕ್ಕೊಂದು ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗದಿರುವುದು ತೀರಾ ದುರದೃಷ್ಟಕರ.
ಈ ಹಿಂದೆ ಸೋಂಕು ನಿಯಂತ್ರಣಕ್ಕಾಗಿ ಮಲೆನಾಡು ತಪ್ಪಲಿನ ಪ್ರದೇಶದ ನಿವಾಸಿಗಳಿಗೆ ಲಸಿಕೆಯೊಂದನ್ನು ನೀಡಲಾಗುತ್ತಿತ್ತಾದರೂ ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದಿಂದ ಇದನ್ನು ಸ್ಥಗಿತಗೊಳಿಸಲಾಗಿದೆ. ಮಂಗನ ಕಾಯಿಲೆ ನಿರ್ದಿಷ್ಟ ಅವಧಿಯಲ್ಲಿ ಮತ್ತು ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಮಾತ್ರವೇ ಸೀಮಿತ ಜನಸಂಖ್ಯೆಯನ್ನು ಬಾಧಿಸುತ್ತಿರುವುದರಿಂದ ಯಾವುದೇ ಔಷಧ ಕಂಪೆನಿ ಇದಕ್ಕೊಂದು ಸೂಕ್ತ ಲಸಿಕೆಯ ಸಂಶೋಧನೆಗೆ ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಲಸಿಕೆ ಸಂಶೋಧನೆಗಾಗಿ ಹಣಕಾಸು ನೆರವು ನೀಡುವ ಸಂಬಂಧ ಔಷಧ ತಯಾರಕ ಕಂಪೆನಿಯೊಂದಿಗೆ ಮಾತುಕತೆಯನ್ನು ಕೂಡ ನಡೆಸಿದೆಯಾದರೂ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
2019ರಲ್ಲಿ ಕೆಎಫ್ಡಿ ಕಾಯಿಲೆ ಮಲೆನಾಡಿನ ನಿವಾಸಿಗಳನ್ನು ತೀವ್ರವಾಗಿ ಬಾಧಿಸಿದ ಸಂದರ್ಭದಲ್ಲಿ ರಾಜ್ಯ ಸರಕಾರ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಭರಿಸುವ ಮೂಲಕ ಬಡ ರೋಗಿಗಳಿಗೆ ನೆರವಾಗಿತ್ತು. ಆದರೆ ಈಗ ಉಚಿತ ಚಿಕಿತ್ಸೆಯನ್ನು ಸರಕಾರ ಸ್ಥಗಿತಗೊಳಿಸಿದೆ. ಮಂಗನ ಕಾಯಿಲೆ ಸೋಂಕು ಬಹುತೇಕ ಅರಣ್ಯದಂಚಿನ ಬಡ ನಿವಾಸಿಗಳನ್ನೇ ಕಾಡುವುದರಿಂದ ಈ ವೆಚ್ಚವನ್ನು ಭರಿಸುವುದು ಈ ಕುಟುಂಬಗಳಿಗೆ ಬಲುದೊಡ್ಡ ಹೊರೆಯಾಗಿದೆ. ಹೀಗಾಗಿ ಸರಕಾರ ಈ ಹಿಂದಿನಂತೆಯೇ ಕೆಎಫ್ಡಿ ಸೋಂಕುಪೀಡಿತರಿಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ತತ್‌ಕ್ಷಣ ಪುನರಾರಂಭಿಸಬೇಕು. ಅಲ್ಲದೆ ಔಷಧ ತಯಾರಕ ಸಂಸ್ಥೆಗಳು ಮತ್ತು ಸರಕಾರ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಮಂಗನ ಕಾಯಿಲೆಗೆ ಶಾಶ್ವತ ಔಷಧವೊಂದನ್ನು ಆದಷ್ಟು ಶೀಘ್ರವೇ ಸಂಶೋಧಿಸಿ, ಮಲೆನಾಡಿಗರ ರಕ್ಷಣೆಗೆ ಸಂಕಲ್ಪ ತೊಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.