ಪ್ಲಾಸ್ಟಿಕ್ ನಿಷೇಧ: ಸಮರೋಪಾದಿ ಕೆಲಸ ಮುಖ್ಯ
Team Udayavani, Aug 27, 2019, 5:42 AM IST
ಒಂದು ಸಲ ಬಳಸಿ ಎಸೆಯುವ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸುವ ಕುರಿತು ದೇಶದಲ್ಲಿ ಗಂಭೀರವಾದ ಚಿಂತನ ಮಂಥನ ನಡೆಸಲು ಈಗ ಕಾಲ ಕೂಡಿ ಬಂದಿರುವಂತೆ ಕಾಣಿಸುತ್ತದೆ. ಪ್ರಧಾನಿ ಮೋದಿಯವರೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ಲಾಸ್ಟಿಕ್ ನಿಷೇಧಿಸಲು ಆಂದೋಲನವನ್ನು ಕೈಗೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದ್ದರು. ಇದೀಗ ರವಿವಾರದ ಮನ್ ಕಿ ಬಾತ್ ರೇಡಿಯೊ ಭಾಷಣದಲ್ಲೂ ಈ ವಿಚಾರವನ್ನು ಪುನರುಚ್ಚರಿಸಿದ್ದು ಪ್ಲಾಸ್ಟಿಕ್ ನಿಷೇಧವನ್ನು ಸರಕಾರ ಗಂಭೀರವಾಗಿ ಪರಿಗಣಿಸಿರುವುದಕ್ಕೆ ಸಾಕ್ಷಿ. ಸ್ವಚ್ಛ ಭಾರತ ಅಭಿಯಾನದಂತೆ ಪ್ಲಾಸ್ಟಿಕ್ ನಿಷೇಧವನ್ನೂ ಒಂದು ಆಂದೋಲನವಾಗಿ ಬದಲಾಯಿಸಬೇಕೆಂದು ಮೋದಿ ಹೇಳಿದ್ದಾರೆ. ವಿಪಕ್ಷಗಳೂ ಪ್ಲಾಸ್ಟಿಕ್ ವಿಚಾರದಲ್ಲಿ ಸಹಮತ ವ್ಯಕ್ತಪಡಿಸಿರುವುದು ಭೂ ಮಾತೆಯ ಉಸಿರು ಕಟ್ಟಿಸುತ್ತಿರುವ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯುವಲ್ಲಿ ಒಮ್ಮತ ಮೂಡಿ, ಪ್ರಯತ್ನ ಸಫಲವಾಗಬಹುದು ಎನ್ನುವ ಆಶಾಭಾವನೆ ಮೂಡಿಸಿದೆ.
ದೇಶದಲ್ಲಿ ನಿತ್ಯ 26000 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ದಿಲ್ಲಿ, ಬೆಂಗಳೂರಿನಂಥ ಬೃಹತ್ ನಗರಗಳಲ್ಲಿ ನಿತ್ಯ 7ರಿಂದ 9 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಯಾಗುತ್ತಿದ್ದರೂ ಇದರಲ್ಲಿ ಮರು ಸಂಸ್ಕರಣೆಗೆ ಹೋಗುವುದು ಬರೀ ಶೇ. 10 ಮಾತ್ರ. ಉಳಿದ ಪ್ಲಾಸ್ಟಿಕ್ ಭೂಮಿಯ ಒಡಲು ಇಲ್ಲವೇ ಕಡಲು ಸೇರಿ ನಿಶ್ಶಬ್ದವಾಗಿ ಮನುಷ್ಯ ಮತ್ತು ಇತರ ಜೀವಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್‌ನಿಂದಾಗುವ ಹಾನಿಯ ಬಗ್ಗೆ ಬಹಳಷ್ಟು ಹೇಳಲಾಗಿದೆ ಹಾಗೂ ಅರಿವು ಮೂಡಿಸುವ ಪ್ರಯತ್ನವನ್ನೂ ಸಾಕಷ್ಟು ಮಾಡಲಾಗಿದೆ. ಆದರೆ ಇಂದಿಗೂ ಕನಿಷ್ಠ ಬಳಸಿ ಎಸೆಯುವ ಪ್ಲಾಸ್ಟಿಕ್‌ನ್ನು ನಿಷೇಧಿಸುವುದಕ್ಕೂ ನಮ್ಮಿಂದ ಸಾಧ್ಯವಾಗಿಲ್ಲ ಎಂಬುದು ವಾಸ್ತವ. ಹಾಗೆಂದು, ಪ್ಲಾಸ್ಟಿಕ್‌ನಿಂದಾಗುವ ಹಾನಿಯ ಬಗ್ಗೆ ಅರಿವು ಮೂಡಿಲ್ಲ ಎಂದಲ್ಲ. ಚಿಕ್ಕ ಮಳೆಗೂ ನಗರಗಳ ಚರಂಡಿ ತುಂಬಿ ಪ್ರವಾಹ ಉಂಟಾಗಲು ಪ್ಲಾಸ್ಟಿಕ್‌ನ ಪಾಲು ದೊಡ್ಡದಿದೆ. ಈ ಮಾದರಿಯ ಪ್ಲಾಸ್ಟಿಕ್ ನಿಷೇಧಿಸುವ ಸಲುವಾಗಿ 2016ರಲ್ಲೇ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ರಚಿಸಲಾಗಿತ್ತು. 50 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಚೀಲಗಳನ್ನು ಉತ್ಪಾದಿಸುವವರ ಮೇಲೆ ದಂಡ ಹಾಕುವಂಥ ಕಠಿಣ ಅಂಶಗಳು ಇದರಲ್ಲಿ ಇದ್ದವು. ಇದಲ್ಲದೆ ರಾಜ್ಯ ಸರಕಾರಗಳು, ಸ್ಥಳೀಯಾಡಳಿತ ಪ್ಲಾಸ್ಟಿಕ್ ನಿಷೇಧಿಸುವ ಪ್ರಯತ್ನ ಮಾಡಿದ್ದುಂಟು. ಕಳೆದ ವರ್ಷ ಮಹಾರಾಷ್ಟ್ರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ, ಪ್ಲಾಸ್ಟಿಕ್ ಚೀಲಗಳನ್ನು ಹೊಂದಿದ್ದರೆ 5,000 ರೂ. ದಂಡ ಹಾಕುವ ನಿಯಮ ಜಾರಿಗೆ ತಂದಿತ್ತು. ಅದಾಗ್ಯೂ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ. ಪ್ಲಾಸ್ಟಿಕ್ ನಿಷೇಧ ವಿಫಲವಾಗಲು ಮುಖ್ಯ ಕಾರಣ ಪರ್ಯಾಯ ವ್ಯವಸ್ಥೆಯನ್ನು ಒದಗಿಸದೆ ಇರುವುದು. ಪ್ಲಾಸ್ಟಿಕ್ ಬದಲಿಗೆ ಅಷ್ಟೇ ಅನುಕೂಲಕರ ಪರ್ಯಾಯ ವ್ಯವಸ್ಥೆ ಏನು ಎಂಬುದಕ್ಕೆ ಸರಕಾರದ ಬಳಿ ಉತ್ತರವಿಲ್ಲ. ಬಟ್ಟೆಯ ಚೀಲ, ಪರಿಸರ ಸ್ನೇಹಿ ವಸ್ತುಗಳಿಂದ ಮಾಡಿದ ಚೀಲ ಎಂಬಿತ್ಯಾದಿ ಪರ್ಯಾಯಗಳಿದ್ದರೂ ಇದು ಎಲ್ಲಾ ಕಾಲದಲ್ಲೂ ಎಲ್ಲರಿಗೂ ಸುಲಭವಾಗಿ ದೊರಕದಿರುವುದರಿಂದ ಪ್ಲಾಸ್ಟಿಕ್ ಮೇಲಿನ ಅವಲಂಬನೆಯನ್ನು ಬಿಡಲು ಜನರು ತಯಾರಿಲ್ಲ.
ಕಿರಾಣಿ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳು ಹೆಚ್ಚು ತೆಳು ಪ್ಲಾಸ್ಟಿಕ್ ಬಳಸುತ್ತಾರೆ ಎನ್ನುವುದು ನಿಜ. ಇದು ಪರಿಹರಿಸಲಾಗದ ಸಮಸ್ಯೆಯೇನೋ ಅಲ್ಲ. ಇದಕ್ಕೂ ಹೆಚ್ಚಿನ ಏಕ ಬಳಕೆಯ ಪ್ಲಾಸ್ಟಿಕ್ ಉಪಯೋಗವಾಗುತ್ತಿರುವುದು ಪ್ಯಾಕೇಜಿಂಗ್ ಉದ್ಯಮದಲ್ಲಿ. ಚಾಕೋಲೇಟ್ನಿಂದ ಹಿಡಿದು ವಿಮಾನಗಳ ಬಿಡಿಭಾಗಗಳ ತನಕ ಪ್ರತಿಯೊಂದರ ಪ್ಯಾಕಿಂಗ್‌ಗೂ ಪ್ಲಾಸ್ಟಿಕ್ ಅನಿವಾರ್ಯ ಎಂಬ ಸ್ಥಿತಿಯಿದೆ. ಕನಿಷ್ಠ ಆಹಾರ ವಸ್ತುಗಳನ್ನು ಪ್ಲಾಸ್ಟಿಕ್‌ಗಳಲ್ಲಿ ಪ್ಯಾಕ್ ಮಾಡುವುದನ್ನು ನಿರ್ಬಂಧಿಸಿದರೂ ಪ್ಲಾಸ್ಟಿಕ್ ನಿಷೇಧದಲ್ಲಿ ಮಹತ್ತರ ಯಶಸ್ಸು ಸಾಧಿಸಬಹುದು. ಆದರೆ ಇದು ಬೆಕ್ಕಿಗೆ ಗಂಟೆ ಕಟ್ಟುವಷ್ಟೇ ತ್ರಾಸದಾಯಕವಾದ ಕೆಲಸ. ಸ್ಥಳೀಯ ವ್ಯಾಪಾರಿಗಳು ಕಟ್ಟಿಕೊಡುವ ತೆಳು ಪ್ಲಾಸ್ಟಿಕ್‌ನ್ನು ನಿಷೇಧಿಸಿದಾಗ ದೊಡ್ಡ ಕಾರ್ಪೊರೇಟ್ ಕಂಪೆನಿಗಳ ಪ್ಲಾಸ್ಟಿಕ್ ಪೊಟ್ಟಣಗಳಿಗೆ ಹೇಗೆ ಅನುಮತಿ ಸಿಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೇನು ಉತ್ತರ ಎಂದು ಮೊದಲು ಕಂಡುಕೊಳ್ಳಬೇಕು. ವಿಶ್ವ ಪರಿಸರ ದಿನಾಚರಣೆಯ ‘ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆ’ ಘೋಷಣೆಯಡಿಯಲ್ಲಿ ಭಾರತ 2022ಕ್ಕಾಗುವಾಗ ಬಳಸಿ ಎಸೆಯುವ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಿಸುವ ಪ್ರತಿಜ್ಞೆ ಮಾಡಿದೆ. ಇದು ಸಾಧ್ಯವಾಗಬೇಕಾದರೆ ಸಮರೋಪಾದಿಯ ಕಾರ್ಯಾಚರಣೆ ಅಗತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.