ದಯವಿಟ್ಟು ಬೆಂಕಿ ಹಾಕಬೇಡಿ
Team Udayavani, Jan 4, 2018, 8:19 AM IST
ಮಹಾರಾಷ್ಟ್ರದಲ್ಲಿ ಮತ್ತೂಮ್ಮೆ ಮರಾಠ-ದಲಿತ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದಿದೆ. ಪುಣೆಯಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಹುಟ್ಟಿಕೊಂಡ ಹಿಂಸಾಚಾರ ಮುಂಬಯಿ ಸೇರಿದಂತೆ ರಾಜ್ಯದ ಇತರೆಡೆಗಳಿಗೆ ಹರಡಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನ್ಯಾಯಾಂಗ ತನಿಖೆಗೆ ಆದೇಶಿಸಿದ ಬಳಿಕ ಹಿಂಸಾಚಾರ ತುಸು ತಣ್ಣಗಾಗಿರುವಂತೆ ಕಂಡಿದ್ದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮಹಾರಾಷ್ಟ್ರದಲ್ಲಿ ದಲಿತ-ಮರಾಠ ಸಂಘರ್ಷಕ್ಕೆ ಶತಮಾನಗಳ ಇತಿಹಾಸವೇ ಇದೆ.
ಅತಿ ಹೆಚ್ಚು ದಲಿತ ಜನಸಂಖ್ಯೆಯ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದಲ್ಲಿ ಈ ಮಾದರಿಯ ಹಿಂಸಾಚಾರಗಳಿಗೆ ರಾಜಕೀಯ ಬಣ್ಣ ಬಳಿಯಲು ಹೆಚ್ಚು ಸಮಯವೇನೂ ಹಿಡಿಯುವುದಿಲ್ಲ. ಇದೀಗ ಭೀಮಾ ಕೋರೆಗಾಂವ್ ವಿಚಾರದಲ್ಲೂ ನೈಜ ವಿಷಯಕ್ಕಿಂತ ಜಾತಿ ರಾಜಜಕೀಯವೇ ಮುನ್ನೆಲೆಗೆ ಬಂದು ವಿಜೃಂಭಿಸುತ್ತಿದೆ. 200 ವರ್ಷದ ಹಿಂದೆ ಬ್ರಿಟಿಶ್ ಸೇನೆ ಪೇಶ್ವೆಗಳ ಸೇನೆಯನ್ನು ಕೋರೆಗಾಂವ್ ಭೀಮಾದಲ್ಲಿ ಸೋಲಿಸಿದ ವಿಜಯೋತ್ಸವವನ್ನು ಪ್ರತಿ ವರ್ಷ ಪುಣೆಯಲ್ಲಿ ಆಚರಿಸಲಾಗುತ್ತದೆ. ಇಷ್ಟರ ತನಕ ಸದ್ದಿಲ್ಲದೆ ನಡೆಯುತ್ತಿದ್ದ ಈ ಕಾರ್ಯಕ್ರಮ ಈ ಸಲ ಹಿಂಸಾಚಾರಕ್ಕೆ ತಿರುಗಲು ರಾಜಕೀಯವೇ ಮುಖ್ಯ ಕಾರಣ. ಈ ಸಲದ ಆಚರಣೆಯಲ್ಲಿ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಮತ್ತು ಗುಜರಾತಿನ ದಲತಿ ಮುಖಂಡ ಹಾಗೂ ಶಾಸಕ ಜಿಗ್ನೇಶ್ ಮೇವಾನಿ ಭಾಗವಹಿಸಿದ್ದಾರೆ. ಇವರು ನೀಡಿದ ಪ್ರಚೋದನಕಾರಿ ಹೇಳಿಕೆ ಉಳಿದ ಸಮುದಾಯದವರನ್ನು ಕೆರಳಿಸಿದ್ದು ಹಿಂಸಾಚಾರಕ್ಕೆ ಇದು ಕಾರಣ ಎನ್ನಲಾಗುತ್ತಿದೆ.
ಇದೇ ವೇಳೆ ಇನ್ನೊಂದು ತರ್ಕದ ಪ್ರಕಾರ ದಲಿತರು ಇಲ್ಲಿ ಆಚರಿಸುತ್ತಿರುವುದು ನಿಜವಾಗಿ ಬ್ರಿಟಿಷರ ವಿಜಯೋತ್ಸವವನ್ನು. ಇದು ಮರಾಠರು ಮಾತ್ರವಲ್ಲದೆ ಕೆಲವು ಬಲಪಂಥೀಯ ಸಂಘಟನೆಗ ಸಿಟ್ಟಿಗೆ ಕಾರಣವಾಗಿದೆ. ಹೀಗಾಗಿ ಹಿಂಸಾಚಾರದ ಹಿಂದೆ ಆರ್‌ಎಸ್‌ಎಸ್ ಇದೆ ಎಂದು ಆರೋಪಿಸುತ್ತಿದ್ದಾರೆ. ಕಳೆದ ವರ್ಷ ಕೋಪರ್ಡಿಯಲ್ಲಿ ಮರಾಠ ಸಮುದಾಯದ ಯುವತಿಯನ್ನು ದಲಿತ ಸಮುದಾಯದ ಕೆಲ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಂದ ಘಟನೆ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಯುವತಿಗೆ ನ್ಯಾಯ ಕೊಡಿಸಲು ಮರಾಠರು ಪ್ರಾರಂಭಿಸಿದ ಪ್ರತಿಭಟನೆ ಕಡೆಗೆ ಮೀಸಲಾತಿ ಬೇಡಿಕೆ ತಿರುಗಿ ಸರಕಾರಕ್ಕೆ ತಲೆನೋವು ತಂದಿತ್ತು. ನಿರ್ದಿಷ್ಟವಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ರೀತಿಜಾತಿಗಳನ್ನು ಎತ್ತಿ ಕಟ್ಟಿ ಸಂಘರ್ಷ ಹುಟ್ಟು ಹಾಕುತ್ತಿರುವ ಪ್ರಯತ್ನಗಳು ವ್ಯವಸ್ಥಿತಾಗಿ ನಡೆಯುತ್ತಿರುವುದು ಎದ್ದು ಕಾಣುತ್ತಿರುವ ಅಂಶ. 2006ರಲ್ಲಿ ಕಾನ್‌ಪುರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಚಾರವಾದ ಘಟನೆಯ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿ ಸ್ಫೋಟಗೊಂಡ ಹಿಂಸಾಚಾರದಿಂದ ಹಲವು ದಿನಗಳ ಕಾಲ ನಗರ ಹೊತ್ತಿ ಉರಿದದ್ದು ರಾಜ್ಯದ ಜನರು ಇನ್ನೂ ಮರೆತಿಲ್ಲ. ಇದೀಗ ಭೀಮಾ ಕೋರೆಗಾಂವ್ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹಿಂಸಾಚಾರವೂ ಇದೇ ಮಾದರಿಯ ತಿರುವು ಪಡೆದುಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ ಮೇಲಿದೆ.
ಮರಾಠರು, ದಲಿತರು ಮಹಾರಾಷ್ಟ್ರದ ಎರಡು ಪ್ರಬಲ ಸಮುದಾಯ. ರಾಜಕೀಯವಾಗಿ ಎರಡೂ ಪಂಗಡಗಳು ಬಲಿಷ್ಠ ವಾಗಿದ್ದರೂ ಅಧಿಕಾರ ಅನುಭವಿಸುವ ಹೆಚ್ಚಿನ ಅವಕಾಶ ಮರಾಠರಿಗೆ ಸಿಕ್ಕಿದೆ. ಶತಮಾನಗಳಿಂದಲೂ ದಲಿತರು ತುಳಿತಕ್ಕೊಳಗಾಗಿದ್ದಾರೆ. ಇಂದಿಗೂ ಈ ಪ್ರಜ್ಞೆ ದಲಿತರಲ್ಲಿ ಜೀವಂತವಾಗಿದೆ. ಹೀಗಾಗಿ ಹಿಂಸಾಚಾರ ಸ್ಫೋಟಗೊಳ್ಳಲು ಚಿಕ್ಕಪುಟ್ಟ ಕಾರಣಗಳೇ ಸಾಕಾಗುತ್ತದೆ. ಆಳುವವರಿಗೆ ಈ ವಿಚಾರ ಗೊತ್ತಿಲ್ಲ ಎಂದಲ್ಲ. ಆದರೆ ಅಧಿಕಾರಶಾಹಿಯ ಜಡ ಧೋರಣೆ ಯಿಂದಾಗಿ ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಿರುತ್ತದೆ. ಪುಣೆಯಲ್ಲಿ ವಿಜಯೋತ್ಸವಕ್ಕೆ ಲಕ್ಷಕ್ಕೂ ಮಿಕ್ಕಿ ಜನರು ಸೇರುತ್ತಾರೆ ಎಂದು ಗೊತ್ತಿದ್ದರೂ ಸಮರ್ಪಕವಾದ ಬಂದೋಬಸ್ತಿನ ಏರ್ಪಾಡು ಮಾಡದೆ ಇದ್ದದ್ದು ಆಳುವ ವ್ಯವಸ್ಥೆಯ ಚಲ್ತಾ ಹೈ ಧೋರಣೆಗೊಂದು ನಿದರ್ಶನ. ಇದಕ್ಕೀಗ ರಾಜ್ಯ ಬೆಲೆ ತೆರುತ್ತಿದೆ. ಜಗತ್ತಿಡೀ ಆಧುನಿಕತೆಯ ಹೊಸ ಗಾಳಿಯನ್ನು ಉಸಿರಾಡುತ್ತಿರುವ ಈ ದಿನಗಳಲ್ಲೂ ನಮ್ಮಲ್ಲಿ ಜಾತಿ ಜಾತಿಗಳ ನಡುವೆ ಬೆಂಕಿ ಹಾಕಿ ಮತ ಹುಡುಕುವ ರಾಜಕೀಯ ನಾಯಕರು ಇದ್ದಾರೆ ಎನ್ನುವುದು ತಲೆತಗ್ಗಿಸಬೇಕಾದ ವಿಚಾರ. ಭೀಮಾ ಕೋರೆಗಾಂವ್ ಘಟನೆ ಸಂಭವಿಸಿದ ಬೆನ್ನಿಗೆ ರಾಜಕೀಯ ಮುಖಂಡರು ನೀಡಿದ ಹೇಳಿಕೆಗಳನ್ನು ಗಮನಿಸುವಾಗ ವೋಟಿಗಾಗಿ ಪಕ್ಷಗಳು ಯಾವ ಮಟ್ಟಕ್ಕೂ ಇಳಿಯಲು ತಯಾರಾಗಿವೆ ಎನ್ನುವುದು ಅರ್ಥವಾಗುತ್ತದೆ. ಜಾತ್ಯಾತೀತ ನಿಲುವನ್ನು ಅಪ್ಪಿಕೊಂಡ ಬಳಿಕ ನಿಧಾನವಾಗಿಯಾದರೂ ದೇಶದಿಂದ ಜಾತಿ ಸಂಘರ್ಷ ದೂರವಾಗಬೇಕಿತ್ತು. ಇದರ ಬದಲಾಗಿ ಈಗೀಗ ಜಾತೀಯ ಪ್ರಜ್ಞೆ ತೀವ್ರವಾಗುತ್ತಾ ಹೋಗುತ್ತಿರುವುದು ಅಪಾಯಕಾರಿ ಬೆಳವಣಿಗೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.